ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಪೂರೈಕೆ ಕೊರತೆಯಾಗದಂತೆ ಸಾರ್ವಜನಿಕರಿಗೆ ಮರಳು ಸುಗಮವಾಗಿ ಲಭ್ಯವಾಗಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಅಕ್ರಮವಾಗಿ ಮರಳು ಎತ್ತುವುದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈಲ್ಲೆಯಲ್ಲಿ ಉತ್ತಮ ಗುಣಮಟ್ಟದ ಮರಳು ಲಭ್ಯವಿರುವುದರಿಂದ ನಿಯಮಾನುಸಾರ ಸಾರ್ವಜನಿಕರಿಗೆ ಮರಳು ಲಭ್ಯವಾಗುವಂತೆ ಗಮನಹರಿಸಲು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಮಾತನಾಡಿ, ಕರಾವಳಿ ನಿಯಂತ್ರಣ ವಲಯದಲ್ಲಿ(ಸಿಆರ್‍ಝಡ್) ಈಗಾಗಲೇ ಮರಳು ಎತ್ತಲು 41 ಪರ್ಮಿಟ್ ನೀಡಲಾಗಿದೆ. ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಮರಳುಗಾರಿಕೆಯಲ್ಲಿ ತೊಡಗಿದ್ದ ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ತೊಡಗಿದ್ದವರಿಗೆ ದಾಖಲೆಗಳನ್ನು ಪರಿಶೀಲಿಸಿ ಪರವಾನಿಗೆ ನೀಡಲಾಗುತ್ತದೆ. ಆದರೆ, ಮರಳನ್ನು ಸ್ಥಳೀಯವಾಗಿ ಮಾರಾಟ ಮಾಡಬೇಕಾಗಿದೆ ಎಂದು ಹೇಳಿದರು.
ನಾನ್ ಸಿಆರ್‍ಝಡ್ ಪ್ರದೇಶಗಳಲ್ಲಿ ಮರಳು ಬ್ಲಾಕ್‍ಗಳನ್ನು ಗುರುತಿಸಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನೂತನ ತಾಲೂಕು ವ್ಯಾಪ್ತಿ: ಶೀಘ್ರ ಪೂರ್ಣಗೊಳಿಸಲು ಸೂಚನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಮೂಡಬಿದ್ರೆ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯನ್ನು ಅಂತಿಮಗೊಳಿಸಲು ಶಾಸಕರು ಸೇರಿದಂತೆ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮಗೊಳಿಸುವಂತೆ ಸಚಿವ ಬಿ.ರಮಾನಾಥ ರೈ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನ ತಾಲೂಕು ರಚನೆಗಳ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೂತನ ತಾಲೂಕು ವ್ಯಾಪ್ತಿಯ ಬಗ್ಗೆ ಕೆಲವು ಗೊಂದಲಗಳು ಸಾರ್ವಜನಿಕರಲ್ಲಿವೆ. ಮೂಡಬಿದ್ರೆ ತಾಲೂಕಿಗೆ ಗುರುಪುರ ಹೋಬಳಿಯ ಸೇರ್ಪಡೆಗೂ ವಿರೋಧ ಕಂಡುಬಂದಿದೆ. ಮಂಗಳೂರು ಉತ್ತರ ಶಾಸಕರೂ ಗುರುಪುರ ಹೋಬಳಿಯನ್ನು ಮೂಡಬಿದ್ರೆಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮೂಡಬಿದ್ರೆಗೆ ಹತ್ತಿರದಲ್ಲಿರುವ ಗುರುಪುರ ಹೋಬಳಿಯ ಗ್ರಾಮಗಳನ್ನು ಮೂಡಬಿದ್ರೆ ತಾಲೂಕಿಗೆ ಸೇರಿಸುವ ಬಗ್ಗೆ ಪರಿಶೀಲಿಸುವುದು ಸಮಂಜಸವಾಗಿದೆ ಎಂದು ಸಚಿವರು ಹೇಳಿದರು.
ತಾಲೂಕು ರಚನೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಪ್ರಸ್ತುತ ಮೂಡಬಿದ್ರೆ ಹೋಬಳಿಯನ್ನು ಮಾತ್ರ ತಾಲೂಕಿಗೆ ಸೀಮಿತಗೊಳಿಸಿ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದ ಸಚಿವರು, ಗುರುಪುರ ಹೋಬಳಿ, ಮೂಲ್ಕಿ ಹಾಗೂ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಸೇರ್ಪಡೆ ಸಂಬಂಧ ಆ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಸೂಚಿಸಿದರು.
ಕಡಬ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಹಾಗೂ ಕೊಕ್ಕಡ ಹೋಬಳಿಯ ಗ್ರಾಮಗಳನ್ನು ಸೇರಿಸುವ ಕುರಿತೂ ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲು ಸಚಿವ ರಮಾನಾಥ ರೈ ತಿಳಿಸಿದರು.ಮೂಡಬಿದ್ರೆ ಹಾಗೂ ಕಡಬ ತಾಲೂಕು ಕಚೇರಿಗಳಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸೂಕ್ತ ಜಮೀನು ಕೂಡಲೇ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಯೋಜನೆ ತಯಾರಿಸಿ ಸಲ್ಲಿಸಲು ಸಚಿವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಕಡಬ ಮತ್ತಿತರರು ಇದ್ದರು.