ವಿದ್ಯಾರ್ಥಿಗಳು ಕರಾವಳಿಯ ತುಳು ಸಂಸ್ಕೃತಿಯ ಶ್ರೀಮಂತಿಕೆಯನ್ನು ಅರಿತುಕೊಳ್ಳಬೇಕು ಎಂದು ಹಿರಿಯ ಸಾಹಿತಿ, ಚಿಂತಕ ಡಾ. ಏರ್ಯ ಲಕ್ಮೀನಾರಾಯಣ ಆಳ್ವ ಹೇಳಿದರು.
ಬಂಟ್ವಾಳ ಕಾಮಾಜೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಸಂಘದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ವತಿಯಿಂದ ನಡೆದ ತುಳು ಜಾನಪದ ಜಗತ್ತು ಎಂಬ ಒಂದು ದಿನದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪೊಳಲಿ ಕ್ಷೇತ್ರದಲ್ಲಿ ಪೂಜೆಗೊಳ್ಳುವ ಮೂರ್ತಿಗಳ ವೈವಿಧ್ಯವನ್ನು ಗಮನಿಸಿದರೆ, ಇಡೀ ತುಳುನಾಡಿನ ಬಹುಸಂಸ್ಕೃತಿಗಳ ಸಮೃದ್ಧಿ ಅರ್ಥವಾಗುತ್ತದೆ. ಜಗತ್ತಿನ ಜ್ಞಾನದೊಂದಿಗೆ ಸ್ಥಳೀಯ ವಿಚಾರಗಳ ಅರಿವು ಕೂಡ ಅಗತ್ಯ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಭಟ್ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಂಸ್ಕೃತಿಕ ದ್ರವ್ಯಗಳು ಮುಂದಿನ ತಲೆಮಾರಿಗೆ ಹಸ್ತಾಂತರಗೊಳ್ಳಲು ಇಂಥ ವಿಚಾರಸಂಕಿರಣಗಳು ಅಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತುಳುಪೀಠದ ಸಂಯೋಜಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಅಭಯಕುಮಾರ್ ಅವರು ಪೀಠವು ತುಳು ಭಾಷೆ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸಗಳನ್ನು ತಿಳಿಸಿದರು.
ವಿಚಾರಸಂಕಿರಣದಲ್ಲಿ ಡಾ. ಸುಂದರ ಕೇನಾಜೆಯವರು ಕರಾವಳಿಯ ಕೃಷಿ ಪಲ್ಲಟ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರ, ಅರುಣ್ ಉಳ್ಳಾಲ್ ಅವರು ಭಗವತಿ ಆರಾಧನೆಯಲ್ಲಿ ಫಲವಂತಿಕೆಯ ಆಚರಣೆಗಳು, ಡಾ. ದಿವಕೊಕ್ಕಡ ಅವರು ತುಳು ಸಂಸ್ಕೃತಿ ಮತ್ತು ಆವರ್ತನದ ಆಚರಣೆಗಳು ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಇಡೀ ಗೋಷ್ಠಿಯಲ್ಲಿ ಕಾರ್ಯಕ್ರಮ ನಿರೂಪಣೆ ಹಾಗೂ ಅತಿಥಿಗಳ ಮಾತು ತುಳುವಿನಲ್ಲೇ ಇದ್ದುದು ವಿಶೇಷವಾಗಿತ್ತು.