ದೇಶದಲ್ಲಿರುವ ಕ್ರೂರ ಜನರನ್ನು ಸೌಮ್ಯವಾಧಿಗಳಾಗಿಸುವ ಕಾರ್ಯ ನಡೆಯಬೇಕಾಗಿದೆ. ಗೋವಿಗೆ ಕಷ್ಟ ಬಂದ ಸಮಯದಲ್ಲಿ ನಾವು – ಮಠ ಎಲ್ಲಾ ಸೇರಿ ಗೋವಿನ ಜತೆಗೆ ನಾವಿದ್ದೇವೆ ಎಂದು ಹೇಳುವ ಸಂದರ್ಭ ಬಂದಿದೆ. ಅಭಯಾಕ್ಷರದ ಚಾಟಿ ಏಟು ನೀಡಿ ಸರ್ಕಾರವನ್ನು ಎಬ್ಬಿಸುವ ಕಾರ್ಯವಾಗಬೇಕಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಗಳು ಹೇಳಿದರು.
ಮಂಗಳೂರಿನ ಗಂಜಿಮಠದಲ್ಲಿರುವ ಒಡ್ಡೂರು ಫಾರ್ಮ್ಸ್‌ನಲ್ಲಿ ಶ್ರೀರಾಮಚಂದ್ರಾಪುರಮಠದ ಯತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಗಳ ದಿವ್ಯ ಸಂಕಲ್ಪದಂತೆ ದೇಶಾದ್ಯಂತ ಆರಂಭಗೊಂಡ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಒತ್ತಾಯಿಸುವ ಪತ್ರಕ್ಕೆ ಸಹಿ ಸಂಗ್ರಹಿಸುವ ಅಭಿಯಾನ ‘ಅಭಯಾಕ್ಷರ’ಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಆಶೀರ್ವಚನ ಮಾಡಿ ಆಸಕ್ತಿಯಿಂದ ನಡೆಸುವ ಗೋ ಸಂರಕ್ಷಣೆಯ ಕಾರ್ಯ ಯಶಸನ್ನು ಪಡೆಯುತ್ತದೆ. ಗೋಸಂರಕ್ಷಣಾ ಕಾಯ್ದೆ ಆದಷ್ಟು ಬೇಗ ಜಾರಿ ಬರಲೆಂದು ಹೇಳಿದರು.
ಭಾರತೀಯ ಗೋಪರಿವಾರ ರಾಜ್ಯ ಅಧ್ಯಕ್ಷ ಶ್ರೀತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀ ಮಠದ ಶ್ರೀ ಪಾಂಡುರಂಗ ಮಹಾರಾಜ್ ಮಾತನಾಡಿ ಅತೀ ಹೆಚ್ಚು ಸಂಘಟನೆಗಳಿರುವ ಶಿಸ್ತಿನ ಜಿಲ್ಲೆಯ ಅಭಯಾಕ್ಷರ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಭಾರತೀಯ ಗೋಪರಿವಾರದ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು ಮಾತನಾಡಿ ಕಾನೂನು ತಪ್ಪಿ ಮಾಡುವ ಕಾರ್ಯ ಬಹಳಷ್ಟಿರುವುದರಿಂದ ಗೋವಿನ ವಿಚಾರದಲ್ಲಿ ಜನರ ಮನ ಪರಿವರ್ತನೆಯಾಗಬೇಕಾಗಿದೆ. ಸಾವಯವ ಕೃಷಿಯನ್ನು ಮುಂದುವರಿಸಿಕೊಂಡು ನಾವು ಬರುತ್ತಿದ್ದರೆ, ಈರೀತಿಯ ಹೋರಾಟಗಳ ಅಗತ್ಯವಿರುತ್ತಿರಲಿಲ್ಲ. ರಾಸಾಯನಿಕ ಹಾಗೂ ಹಾಲಿಗೆ ನೀಡುವ ಸಬ್ಸಿಡಿಯನ್ನು ಗೋ ಆಧಾರಿತ ಗೊಬ್ಬರಕ್ಕೆ ನೀಡುವ ಕಾರ್ಯವಾಗಬೇಕು. ಗೋಮಾಳಗಳನ್ನು ಸರ್ಕಾರ ತೆಗೆದುಕೊಂಡು ದಕ್ಷಿಣ ಕನ್ನಡದ ದೇವಾಲಯಗಳಿಗೆ ನೀಡಿ ಗೋಶಾಲೆ ನಿರ್ವಹಣೆಗೆ ಬಿಡಬೇಕಾಗಿದೆ ಎಂದರು.
ಶ್ರಾವ್ಯ ಎನ್ ಭಟ್ ಗೋಗೀತೆ ಹಾಡಿದರು. ದ. ಕ. ಗೋಪರಿವಾರ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಗೋಪರಿವಾರ ಕಾರ್ಯದರ್ಶಿ ಡಾ. ವೈ ವಿ ಕೃಷ್ಣ ಮೂರ್ತಿ ಪ್ರಸ್ತಾವನೆಗೈದರು. ಮುರಳಿಕೃಷ್ಣ ಹಸಂತಡ್ಕ ಅಭಿಯಾನದ ಸ್ವಾರೂಪದ ಬಗ್ಗೆ ಮಾತಾಡಿದರು. ಶೈಲಜಾ ಕೆ. ಟಿ. ಭಟ್ ವಂದಿಸಿದರು. ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಮೆಲ್ಕಾರ್, ಬುಜಂಗ ಕುಲಾಲ್ ಸಹಕರಿಸಿದರು.