ವಿಟ್ಲ

ಒಡಿಯೂರಿನಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ, ಶ್ರೀ ಚಂಡಿಕಾಮಹಾಯಾಗ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪುಷ್ಕರಣಿಗೆ ಗುದ್ದಲಿ ಪೂಜೆ ಹಾಗೂ ಶ್ರೀಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ ಧಾರ್ಮಿಕ ಸಭೆ ಬಳಿಕ ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಮಹಾಸಂತರ್ಪಣೆ ಭಾನುವಾರ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ನಡೆಯಿತು.

ಜಾಹೀರಾತು

ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಇರಬೇಕಾಗಿದೆ. ಮನೋರಂಜನೆಗೆ ಅಂಟಿಕೊಳ್ಳದೆ ತತ್ವ ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಸ್ವಪರಿವರ್ತನೆ ಆದಾಗಲೇ ಸ್ವಚ್ಛ ಭಾರತಕ್ಕೆ ಅರ್ಥ ಬರುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಈ ಸಂದರ್ಭ ಸಂದೇಶ ನೀಡಿದರು.

ಧರ್ಮ ಹಾಗೂ ಸಂಸ್ಕೃತಿಯನ್ನು ವಿರೂಪಗೊಳಿಸುವ ಕಾರ್ಯವಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಪರಶುರಾಮ ಸೃಷ್ಠಿಯ ಕರಾವಳಿಗೆ ಯಾವುದೇ ಭಯಬೇಡ. ಇಂದು ಹುಲಿ ಸಂರಕ್ಷಣೆ ಕುರಿತು ನಾವು ಮಾತನಾಡುತ್ತೇವೆ, ಆದರೆ ಗೋಸಂರಕ್ಷಣೆ ಕುರಿತು ಪ್ರಯತ್ನ ಸಾಗಬೇಕಾಗಿದೆ ಎಂದು ಸ್ವಾಮೀಜಿ ನುಡಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ದೇವಿಯ ಉಪಾಸನೆ ಮಾಡಿದಾಗ ದೌರ್ಭಾಗ್ಯವನ್ನು ಸೌಭಾಗ್ಯವಾಗಿಸಬಹುದು. ಸಮಾಜದಲ್ಲಿನ ಅನಿಷ್ಠಗಳನ್ನು ತೊಲಗಿಸಲು ಮಹಾ ಶಕ್ತಿಯ ಆರಾಧನೆ ಅಗತ್ಯ. ಕಲೆ ಹಾಗೂ ಕಲಾವಿದರೆ ನಿರಂತರವಾಗಿ ಗೌರವ ಸಿಗುವಂತಾಗಬೇಕಾಗಿದೆ ಎಂದು ಹೇಳಿದರು.

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಮಾತನಾಡಿ ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕು ಎಂದು ತಿಳಿಸಿದರು.

ಸುಂಕದಕಟ್ಟೆ ಶ್ರೀ ಗುರುದೇವ ವಜ್ರಮಾತಾ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಪುಷ್ಪಾ ಪದ್ಮನಾಭ ಶೆಟ್ಟಿ ಮತ್ತು ಪದಾಧಿಕಾರಿಗಳು ಫಲಮಂತ್ರಾಕ್ಷತೆ ಪಡೆದರು. ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಕನ್ಯಾನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಿತ್ತಳಿಕೆ, ಬಂಟ್ವಾಳದ ಮಾರುತಿ ಸಾಮಿಲ್‌ನ ಮಾಲೀಕ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಸಾಫ್ಟ್ ವೇರ್ ಇಂಜಿನಿಯರ್ ಶರತ್ ಜಿ. ಭಟ್ ಸೇರಾಜೆ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿದರು. ಒಡಿಯೂರು ಜೈಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು, ವೀಕ್ಷಾ, ನಾಗವೇಣಿ, ಚೈತ್ರಾ ಸನ್ಮಾನ ಪತ್ರ ಓದಿದರು. ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ ವಂದಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಕೇಂದ್ರದ ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಸಹಕರಿಸಿದರು.

ಪ್ರಶಸ್ತಿ ಪ್ರಧಾನ –  ಪ್ರತಿಭಾಪುರಸ್ಕಾರ:

ಇದೇ ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ನಿವೃತ್ತ ಚಿತ್ರಕಲಾ ಸಹಾಯಕ ನಿರ್ದೇಶಕ ಜಿ.ಆರ್. ಉಪಾಧ್ಯಾಯ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೇಶ್ ಪ್ರಭು, ಕವಯಿತ್ರಿ, ಸಾಹಿತಿ, ಅಮೃತಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಸಮಾಜ ಸೇವಕ ಜನಾರ್ದನ ಮಂಗಳೂರು ಅವರು ’ಶ್ರೀ ಗುರುದೇವಾನುಗ್ರಹ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ನಿಧಿ ಟಿ. ರೈ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ, ಕುರ್ನಾಡು ಇದರ ಮಕ್ಕಳಿಂದ ’ಏಕಾದಶೀ ದೇವಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಂಜೆ ಸಾಮೂಹಿಕ ಸ್ವಯಂವರ ಪಾರ್ವತೀಪೂಜೆ, ಅಷ್ಟಾವಧಾನ ಸೇವೆ, ರಂಗಪೂಜೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಿತು.

VIDEO 1:

VIDEO 2:

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.