ಬಂಟ್ವಾಳ

ಸರಕಾರದ ಯೋಜನೆಗಳ ಜನರ ಮನೆಬಾಗಿಲಿಗೆ ತಿಳಿಸಿ

ರಾಜ್ಯದೆಲ್ಲೆಡೆ  ಅಭಿಯಾನ ಆರಂಭ: ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್

ಬೂತ್ ಕಮಿಟಿಯನ್ನು ಬಲಪಡಿಸುವ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಏಕಕಾಲಕ್ಕೆ ಅಭಿಯಾನ ಆರಂಭಗೊಂಡಿದೆ. ಸಿದ್ಧರಾಮಯ್ಯ ನುಡಿದಂತೆ ನಡೆದ ಮುಖ್ಯಮಂತ್ರಿಯಾಗಿದ್ದು, ಅವರು ಕೈಗೊಂಡ ಎಲ್ಲ ಭಾಗ್ಯ ಯೋಜನೆಗಳ ಕುರಿತು ಜನರಿಗೆ ತಿಳಿಹೇಳಬೇಕು, ಸರಕಾರದಿಂದ ಕೆಲಸವಾಗಿಲ್ಲ ಎಂದು ಕಂಡುಬಂದರೆ ಕ್ಷಮೆ ಯಾಚಿಸಲೂ ಹಿಂಜರಿಯಬೇಡಿ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್ ಹೇಳಿದ್ದಾರೆ.

ಜಾಹೀರಾತು

ಬಿ.ಸಿ.ರೋಡಿನಲ್ಲಿ ಶನಿವಾರ ಸಂಜೆ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ವತಿಯಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಲವು ಭಾಗ್ಯಗಳನ್ನು ರಾಜ್ಯಕ್ಕೆ ಒದಗಿಸಿ ನುಡಿದಂತೆ ನಡೆದ ಸಿಎಂ ಎಂದೆನಸಿಕೊಂಡರೆ, ಸಚಿವ ರಮಾನಾಥ ರೈ ಜನರೊಂದಿಗೆ ಬೆರೆಯುವ ಮೂಲಕ ಜನಾನುರಾಗಿ ಮಂತ್ರಿ ಎನಿಸಿಕೊಂಡಿದ್ದಾರೆ. ಕಳಂಕರಹಿತ ಚಾರಿತ್ರ್ಯದ ಅವರ ಬೆನ್ನಿಗೆ ಕಾಂಗ್ರೆಸ್ ಪಕ್ಷ ಸದಾ ಇದೆ ಎಂದರು.

ಏಳನೇ ಬಾರಿ ವಿಧಾನಸಭೆಗೆ:

ಏಳನೇ ಬಾರಿ ವಿಧಾನಸಭೆಗೆ ಪ್ರವೇಶಿಸಲು ಪಕ್ಷ, ಕಾರ್ಯಕರ್ತರು, ಜನರ ಆಶೀರ್ವಾದ ಬೇಕು ಎಂದು ಹೇಳಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಇಂದು ಬಡವರ, ದುರ್ಬಲರ ಹತ್ಯೆಗಳು ಕೋಮುವಾದಿಗಳಿಂದ ಆಗುತ್ತಿದೆ. ಯಾವ ಕೊಲೆ ಆರೋಪಿಗಳೂ ಕಾಂಗ್ರೆಸ್ ನವರಲ್ಲ ಎಂದರು.

ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡುವ ಸಂಸದ ನಳಿನ್ ಕುಮಾರ್ ಕಟೀಲ್ ಕಳಪೆ ಸಾಧನೆ ಮಾಡಿದವರು. ಅವರನ್ನೇ ಬಿಜೆಪಿಯವರು ನಂ.1 ಸಂಸದ ಎನ್ನುತ್ತಾರೆ. ಹಾಗಾದರೆ ಉಳಿದವರ ಸ್ಥಿತಿ ಹೇಗಿದ್ದೀತು ಎಂದು ಯೋಚನೆ ಮಾಡಿ ಎಂದು ಲೇವಡಿ ಮಾಡಿದರು.

ನನ್ನ ರಾಜೀನಾಮೆಯನ್ನು ಬಿಜೆಪಿಯವರು ಕೇಳಿದರೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ ರೈ, ಪಕ್ಷ ಕಾರ್ಯಕರ್ತರು ನನ್ನ ರಾಜೀನಾಮೆ ಕೇಳಿದರಷ್ಟೇ ಕೊಡುತ್ತೇನೆ. ನನಗೆ ಕಾರ್ಯಕರ್ತರ, ಕ್ಷೇತ್ರದ ಜನರ ಆಶೀರ್ವಾದ ಇದೆ. ಯಾವುದೇ ಕಳಂಕ ನನಗಿಲ್ಲ. ಕೋಮುವಾದ ಮಾಡುವವರಿಗೆ ನೊಂದರವರ ಕಣ್ಣೀರು ತಪ್ಪುತ್ತದೆ. ಜನರ ಮಧ್ಯೆ ಸಂಘರ್ಷ ಹುಟ್ಟುಹಾಕುವುದು ಸಲ್ಲದು. ಮನುಷ್ಯ, ಮನುಷ್ಯನ ಮಧ್ಯೆ ಪ್ರೀತಿ ವಿಶ್ವಾಸ ಇರಬೇಕು ಎಂದು ರೈ ಹೇಳಿದರು.

ಅ.24ರಂದು ಸಾಮರಸ್ಯದ ನಡಿಗೆ:

ಅಕ್ಟೋಬರ್ ಮೊದಲು ಇಲ್ಲವೆ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರು ಬಂಟ್ವಾಳಕ್ಕಾಗಮಿಸಿ ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸುವರು ಎಂದ ರೈ, ಅ.24ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ ನಡೆಯಲಿದೆ, ಜಾತ್ಯತೀತ ಮನಸ್ಸುಗಳಿಗಷ್ಟೇ ಇಲ್ಲಿ ಅವಕಾಶ ಎಂದರು.

ಸಚಿವ ಯು.ಟಿ.ಖಾದರ್ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರ ಉತ್ಸಾಹ. ಶ್ರಮದಿಂದ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ  ಪಕ್ಷದ ಪಾಲಾಗಲಿದೆ ಎಂದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ಶಾಸಕ ಮೊಯಿದ್ದೀನ್ ಬಾವ, ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಯು.ಬಿ.ವೆಂಕಟೇಶ್ ಮತ್ತು ಕೆ.ಎಂ.ಇಬ್ರಾಹಿಂ, ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ರಾಜಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ನವೀನ್ ಡಿಸೋಜ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಗೇರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಚ್. ಖಾದರ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಕ್ಷ ಪ್ರಮುಖರಾದ ಕೋಡಿಜಾಲ್ ಇಬ್ರಾಹಿಂ, ಮಿಥುನ್ ರೈ, ಕರೀಂ, ಲುಕ್ಮಾನ್, ಜನಾರ್ದನ ಚಂಡ್ತಿಮಾರ್, ಹಾಜಿ ಮೋನು, ಪ್ರಶಾಂತ್ ಕುಲಾಲ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಧನಲಕ್ಷ್ಮೀ ಬಂಗೇರ, ಸುರೇಂದ್ರ ಕಂಬಳಿ, ಕುಂಞ ಮೋನು, ಮಲ್ಲಿಕಾ ಪಕ್ಕಳ, ಮಂಜುಳಾ ಮಾವೆ, ಲಾವಣ್ಯ ಬಲ್ಲಾಳ್, ಹಿತಲಕ್ಷ್ಮೀ, ಪಕ್ಷದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪುರಸಭೆ, ಗ್ರಾಪಂಗಳ ಸದಸ್ಯರು, ಅಧ್ಯಕ್ಷರು ಹಾಗೂ ವಿವಿಧ ಹಂತಗಳ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.