ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕನಸಿನಂತೆ ಉಳುವವನೇ ಹೊಲದೊಡೆಯ ಯೋಜನೆ ಮಾದರಿಯಲ್ಲಿ ಪ್ರಸಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದೆಲ್ಲೆಡೆ ಗರಿಷ್ಟ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳನ್ನು ಹುಡುಕಿ ಅವರಿಗೆ ಮನೆ ನಿವೇಶನ ಮತ್ತು ವಸತಿ ಹಾಗೂ ಆಹಾರ ಭದ್ರತೆ ಒದಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ನರಿಕೊಂಬು ನಿವಾಸಿ ಆಲ್ಫೋನ್ಸ್ ಮಿನೇಜಸ್ ಎಂಬವರ ಮನೆ ಬಳಿ ಶನಿವಾರ ಏರ್ಪಡಿಸಿದ್ದ ’ಮನೆ ಮನೆಗೆ ಕಾಂಗ್ರೆಸ್ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಪಿಸಿಸಿ ಕಾರ್ಯದರ್ಶಿ ರಾಜ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಹಕ್ಕುಪತ್ರ ವಿತರಣೆಯಲ್ಲಿ ಕೂಡಾ ಇತರ ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಆಲಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಸದಸ್ಯ ಮಾಧವ ಕರ್ಬೆಟ್ಟು ಮತ್ತಿತರರು ಶುಭ ಹಾರೈಸಿದರು.
ಪ್ರಮುಖರಾದ ಆಲ್ಫೋನ್ಸ್ ಮಿನೇಜಸ್, ಆಲ್ಬರ್ಟ್ ಮಿನೇಜಸ್, ಕೃಷ್ಣಪ್ಪ ಪೂಜಾರಿ ನಾಟಿ, ನವೀನ್ ಮಿನೇಜಸ್, ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಮಾಧ್ಯಮ ಸಲಹೆಗಾರ ವಿಠಲ ಶೆಟ್ಟಿ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು. ಇದೇ ವೇಳೆ ಸ್ಥಳೀಯ ಮನೆಗಗಳಿಗೆ ತೆರಳಿ ರಾಜ್ಯ ಸರ್ಕಾರದ ಸಾಧನೆ ಬಿಂಬಿಸುವ ಕೈಪಿಡಿ ವಿತರಿಸಲಾಯಿತು. ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸ್ವಾಗತಿಸಿ, ವಂದಿಸಿದರು.