ಸಚಿವರು ಕ್ಷೇತ್ರದಲ್ಲಿ ಕೈಗೊಂಡ ಕೆಲಸ ಸಹಿಸದೆ ಬಿಜೆಪಿ ಪ್ರತಿಭಟನೆ ನಡೆಸಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಆದರೆ ವಾಸ್ತವವಾಗಿ ಕಾಂಗ್ರೆಸ್ ಗೆ ಅಭಿವೃದ್ಧಿ ಎಂದರೆ ಡಾಂಬರು ಹಾಕುವುದು ಮಾತ್ರ ಎಂದು ಭಾವಿಸಿದಂತಿದೆ. ಬಿಜೆಪಿ ಸರಕಾರ ಇದ್ದ ಸಂದರ್ಭ ಬಂಟ್ವಾಳದಲ್ಲಿ ಅಗ್ನಿಶಾಮಕ ಇಲಾಖೆ, ಕೋರ್ಟು ಕಟ್ಟಡ, ಪಾಲಿಟೆಕ್ನಿಕ್, ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, ಬಿ.ಮೂಡ ಸರಕಾರಿ ಪದವಿ ಕಾಲೇಜು ಹಾಗೂ ಪಿಯು ಕಾಲೇಜು ಅಸ್ತಿತ್ವಕ್ಕೆ ಬಂದಿದೆ .ಭ್ರಷ್ಟಾಚಾರದಲ್ಲಿ ನಂ.1 ಪುರಸಭೆ ಎಂಬ ಕುಖ್ಯಾತಿಗೆ ಬಂಟ್ವಾಳ ಪಾತ್ರವಾಗಿದೆ. ಕಸ ರಸ್ತೆ ಬದಿಯಲ್ಲೇ ಇರುವುದಕ್ಕೆ ನಿದರ್ಶನ ಇತ್ತೀಚೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪರಿಶೀಲನೆ ಸಂದರ್ಭ ಗಮನಿಸಿದ್ದಾರೆ. ಆಡಳಿತ ನಡೆಸುವವರು ಪ್ರಶ್ನಾತೀತರು ಎಂದುಕೊಂಡಂತಿದೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರಸಭೆ ಸಾಮಾನ್ಯ ಸಭೆಯಲ್ಲಿ ಹಿಂದೆ ನೀಡಿದ ಲಿಖಿತ ದೂರಿಗೆ ಸಂಬಂಧಿಸಿ ಒಂದು ತಿಂಗಳೊಳಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಾಧಿಕಾರಿ ತಿಳಿಸಿದ್ದು, ಅದರ ನಿರ್ಣಯವನ್ನು ದಾಖಲಿಸುವಂತೆ ಒತ್ತಾಯಿಸಿದ್ದೆ. ನಿರ್ಣಯದ ಪ್ರತಿಯಲ್ಲಿ ಈ ವಿಷಯ ದಾಖಲಿಸದೇ ಇರುವುದರಿಂದ ಧರಣಿ ನಡೆಸಿದ್ದೇನೆಯೇ ಹೊರತು, ಕಟ್ಟಡ ತೆರವುಗೊಳಿಸುವ ಪ್ರಸ್ತಾಪ ಇದರಲ್ಲಿರಲಿಲ್ಲ. ಆದರೆ ಪುರಸಭಾಧ್ಯಕ್ಷರು ಸಚಿವರ ಕಟ್ಟಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಡೆಸಿದ್ದಾಗಿ ಹೇಳಿದ್ದಾರೆ. ಅವರಿಗೆ ಅನುಭವದ ಕೊರತೆ ಇದೆ ಎಂದು ಅವರು ಆಪಾದಿಸಿದರು.
ಅವರಿಗೆ ಸೇರಿದ 5 ಸೆಂಟ್ಸ್ ಸ್ಥಳದಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದ್ದರೂ ಅಧಿಕ ಜಾಗವನ್ನು ಹೊಂದಿರುವ ಕುರಿತು ದಾಖಲೆ ಇದೆ ಪರವಾನಗಿ ಪಡೆಯಲು ಪುರಸಭೆಗೆ ನೀಡಿದ ಅಧಿಕೃತ ನಕಾಶೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣವಾಗಿದೆ ಎಂದು ಅವರು ಆಪಾದಿಸಿದರು.
ಬಿಜೆಪಿ ನಾಯಕರು ನಿಯಮಬಾಹಿರವಾಗಿ ಕಟ್ಟಡ ಹೊಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶೆಟ್ಟಿ, ಇದಕ್ಕೆ ಕಾನೂನು ಪ್ರಕ್ರಿಯೆ ಮೂಲಕವೇ ನಾಯಕರು ಉತ್ತರಿಸಲಿದ್ದಾರೆ ಎಂದರು.
ಪುರಸಭೆಯಲ್ಲಿ ವಿನೂತನ ಹೋರಾಟ:
ಪ್ರತಿಯೊಂದು ವಿಚಾರಕ್ಕೂ ಆಡಳಿತದ ನಕಾರಾತ್ಮಕ ಧೋರಣೆ ಹಿನ್ನೆಲೆಯಲ್ಲಿ ಪುರಸಭೆಯ ಪ್ರತಿ ಸಭೆಯಲ್ಲೂ ವಿನೂತನ ರೀತಿಯಲ್ಲಿ ಹೋರಾಟ ನಡೆಸಲು ಪಕ್ಷ ನಿರ್ಧರಿಸಿದೆ. ಈ ಕುರಿತು ಉನ್ನತ ನಾಯಕರೊಂದಿಗೆ ಸಮಾಲೋಚಿಸಿ ಹೋರಾಟ ನಡೆಸುವುದಾಗಿ ದೇವದಾಸ ಶೆಟ್ಟಿ ತಿಳಿಸಿದರು.
ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ರುಕ್ಮಯ ಪೂಜಾರಿ, ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ದಿನೇಶ್ ಭಂಡಾರಿ, ರಾಮದಾಸ ಬಂಟ್ವಾಳ, ಭಾಸ್ಕರ ಟೈಲರ್, ಸಂಧ್ಯಾ, ಸುಗುಣ ಕಿಣಿ, ರಾಜಾರಾಮ ನಾಯಕ್, ರೊನಾಲ್ಡ್ ಡಿಸೋಜ, ಮೋನಪ್ಪ ದೇವಸ್ಯ, ಸೀತಾರಾಮ ಪೂಜಾರಿ, ದೇವಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.