ಯಾವುದೇ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಕಾರ ತತ್ವ ಅಗತ್ಯವಾಗಿದ್ದು, ಸಹಕಾರಿ ನಿಯಮಗಳಡಿ ಪ್ರತಿಯೊಬ್ಬರು ಸ್ವ-ಉದ್ಯೋಗ, ಗುಡಿ ಕೈಗಾರಿಕೆಯ ಮೂಲಕ ಸ್ವಾವಂಭಿಗಳಾಗಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಬಿ.ಸಿ.ರೋಡ್ ಸಿವಿಲ್ ನ್ಯಾಯಾಲಯ ಮುಂಭಾಗದ ಶುಭ ಲಕ್ಷ್ಮೀ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಬೆಳೆಸಲು ಸಾರ್ವಜನಿಕರ ವಿಶ್ವಾಸ-ನಂಬಿಕೆಯನ್ನು ಸಂಪಾದನೆ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಸವಿತಾ ಸೌಹಾರ್ದ ಸಹಕಾರಿ ಸಂಸ್ಥೆ ಗ್ರಾಹಕ ಸ್ನೇಹಿಯಾಗಿ, ಗ್ರಾಹಕ ವಿಶ್ವಾಸಾರ್ಹವಾಗಿ ಬೆಳೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಾಡಿನ ಹಿರಿಯ ಸಾಹಿತಿ, ಸಹಕಾರಿ ಮುತ್ಸದ್ಧಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ, ಜನರ ಕಷ್ಟ, ನೋವು, ಸಂಕಷ್ಟಕ್ಕೆ ಸ್ಪಂದಿಸುವುದೇ ಸಹಕಾರ ತತ್ವವಾಗಿದ್ದು, ಸವಿತಾ ಸೌಹಾರ್ದ ಸಹಕಾರಿ ನಡೆದುಕೊಂಡು ಬಂದ ದಾರಿ ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿ ಎಂದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸವಿತಾ ಸೌಹಾರ್ದ ಸಹಕಾರಿ (ನಿ.) ಇದರ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಸಮಾಜದಲ್ಲಿ ಬೇರೆ ಬೇರೆ ಹಂತದಲ್ಲಿರುವ ಗ್ರಾಹಕರಿಗೆ ಗುಣಮಟ್ಟ ಸೇವೆ ನೀಡುವುದು ನಮ್ಮ ಉದ್ದೇಶವಾಗಿದ್ದು, ಈಗಾಗಲೇ ವ್ಯವಹಾರ ಹಾಗೂ ಸೇವೆಯಲ್ಲಿ ಯಶಸ್ವಿಯಾಗಿದೆ.
ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ವಿಸ್ತಾರ ಗೊಳಿಸುವ ಚಿಂತನೆ ನಡೆಸಲಾಗಿದೆ ಎಂದರು. ಹಿರಿಯ ನ್ಯಾಯವಾದಿ ಎ.ಅಶ್ವಿನಿ ಕುಮಾರ್ ರೈ ಅವರು ಶುಭ ಹಾರೈಸಿದರು.
ನಿರ್ದೇಶಕರಾದ ರವೀಂದ್ರ ಭಂಡಾರಿ ಕೃಷ್ಣಾಪುರ, ಭುಜಂಗ ಸಾಲ್ಯಾನ್, ಸುರೇಂದ್ರ ಭಂಡಾರಿ ಪುತ್ತೂರು, ಪದ್ಮನಾಭ ಭಂಡಾರಿ ಸುಳ್ಯ, ಆಶಾ ಕೇಶವ ಭಂಡಾರಿ, ಪ್ರಮೀಳಾ ಶಶಿಧರ ಸಾಲ್ಯಾನ್, ಎಸ್.ರವಿ ಮಡಂತ್ಯಾರು ಮೋಹನ್, ಗೌರವ ಸಲಹೆಗಾರ, ಎಸ್‌ಸಿಡಿಸಿಸಿ ಮಂಗಳೂರು ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ, ಕಾನೂನು ಸಲಹೆಗಾರ ನ್ಯಾಯವಾದಿ ಹೇಮಚಂದ್ರ ಉಪಸ್ಥಿತರಿದ್ದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಗುಂಡದಡೆ ಅವರು ಮೀಟಿಂಗ್ ಹಾಲ್ ಉದ್ಘಾಟಿಸಿದರು. ನಿರ್ದೇಶಕ ದಿನೇಶ್ ಎಲ್ ಬಂಗೇರ ಸ್ವಾಗತಿಸಿ, ವಸಂತ್ ಎಂ. ಬೆಳ್ಳೂರು ವಂದಿಸಿದರು. ಉಪಾಧ್ಯಕ್ಷ ಸುರೇಶ್ ನಂದೊಟ್ಟು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಶ್ ಬಿ, ಸಿಬ್ಬಂದಿ ಕಿಶಾನ್ ಸರಪಾಡಿ ಸಹಕರಿಸಿದರು.