ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಆಗದೆ, ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ವೃಥಾ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಹೇಳಿದರು.
ಬಿ.ಸಿ.ರೋಡಿನ ಹೋಟೆಲ್ ಶ್ರೀನಿವಾಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಬಿಜೆಪಿ ಸದಸ್ಯರು ಧರಣಿ ಕುಳಿತು, ಸಚಿವರ ಹೆಸರಲ್ಲಿರುವ ಬುಡಾ ಮತ್ತು ಪುರಸಭೆ ಅನುಮತಿ ಹೊಂದಿರುವ ದಾಖಲೆಗಳಿರುವ ಕಟ್ಟಡವನ್ನು ಅಕ್ರಮ ಕಟ್ಟಡವೆಂದು ಆಪಾದಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ವಿಪಕ್ಷ ಬಿಜೆಪಿ ಸದಸ್ಯರು ಸಚಿವ ಬಿ.ರಮಾನಾಥ ರೈ ಅವರು ಸ್ವಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವೃಥಾ ಆರೋಪ ಮಾಡುತ್ತಿದ್ದಾರೆ. ಹತಾಶ ಮನೋಭಾವದಿಂದ ಸುಳ್ಳು ಆರೋಪಗಳ ಮೂಲಕ ಸಚಿವರ ಮಾನಹಾನಿಗೆ ಯತ್ನಿಸಿದರೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಈ ಕಟ್ಟಡ ವಾಣಿಜ್ಯ ಕಟ್ಟಡವಾಗಿದ್ದು, ವಿನ್ಯಾಸ ನಡಾವಳಿಯಲ್ಲಿ ಅನುಮೋದನೆ ದೊರಕಿದೆ. ಯೋಜನಾ ಪ್ರಾಧಿಕಾರದಿಂದಲೂ ಅನುಮೋದನೆ ದೊರಕಿದೆ. ಪುರಸಭೆಯಿಂದಲೂ ವಾಣಿಜ್ಯ ಕಟ್ಟಡ ಎಂಬ ಉದ್ದೇಶದಿಂದ ಲೈಸನ್ಸ್ ದೊರಕಿದೆ. ಬುಡಾ ಮತ್ತು ಬಂಟ್ವಾಳ ಪುರಸಭೆಯ ಅನುಮತಿ ಪಡೆದು ಕಟ್ಟಡ ನಿರ್ಮಿಸಲಾಗಿದೆ ಎಂದು ನಗರ ಪ್ರಾಧಿಕಾರ ಅನುಮತಿ ಸಂಖ್ಯೆ, ಪುರಸಭೆ ಪರವಾನಗಿ ಸಂಖ್ಯೆ ಹಾಗೂ ಕಟ್ಟಡ ನಂಬ್ರದ ದಾಖಲೆಗಳನ್ನು ಒದಗಿಸಿದರು.
ಎಲ್ಲ ಕಟ್ಟಡ ವಿರುದ್ಧ ತನಿಖೆ:
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲ 23 ವಾರ್ಡುಗಳಲ್ಲಿ ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೆಲ್ಲ ಕಟ್ಟಡ ನಿರ್ಮಿಸಲಾಗಿದೆಯೋ ಅಂಥವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭ ರಾಮಕೃಷ್ಣ ಆಳ್ವ ಮತ್ತು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ತಿಳಿಸಿದರು.
ಪುರಸಭೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಸಚಿವರ ಹೆಸರಲ್ಲಿರುವ ಕಟ್ಟಡವನ್ನು ಅಕ್ರಮ ಕಟ್ಟಡ ಎಂದು ಹೇಳಿ ಧರಣಿ ನಡೆಸುವ ಉದ್ದೇಶದ ಹಿಂದೆ ಸಚಿವರು ಕ್ಷೇತ್ರದಲ್ಲಿ ಕೈಗೊಂಡ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿರೋಧಿಸುವುದಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಹೇಳಿಕೆಗಳನ್ನು ನೀಡಲಾಗುತ್ತದೆ ಎಂದ ಅವರು, ಬಿಜೆಪಿ ಮುಖಂಡರೂ ಪುರಸಭೆ ಮತ್ತು ಬೂಡ ಅನುಮತಿ ಪಡೆಯದೆ ಕಟ್ಟಡ ಪರವಾನಗಿ ಪಡೆಯದಿರುವುದು, ಅಕ್ರಮ ಕಟ್ಟಡ ನಿರ್ಮಿಸಿರುವುದು ಕಂಡುಬಂದಿದೆ ಎಂದು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಮಹಮ್ಮದ್ ಶರೀಫ್, ಜಗದೀಶ ಕುಂದರ್, ಚಂಚಲಾಕ್ಷಿ, ವಸಂತಿ ಚಂದಪ್ಪ, ಪ್ರಭಾ, ಸಂಜೀವಿನಿ, ನಾಮನಿರ್ದೇಶಿತ ಸದಸ್ಯರಾದ ಲೋಕೇಶ ಸುವರ್ಣ, ಸಿದ್ದೀಕ್ ಗುಡ್ಡೆಯಂಗಡಿ, ನಾಬರ್ಟ್, ಮೆಸ್ಕಾಂ ಬಂಟ್ವಾಳ ಶಾಖಾ ಕಚೇರಿಯ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.