ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ 24ರಂದು ಶ್ರೀ ಲಲಿತಾ ಪಂಚಮಿ – ಶ್ರೀ ಚಂಡಿಕಾ ಮಹಾಯಾಗವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಪೂರ್ವಾಹ್ಣ ದೀಪಾರಾಧನೆ, ಶ್ರೀ ಗಣಪತಿ ಹವನ ಹಾಗೂ ಶ್ರೀ ಚಂಡಿಕಾ ಮಹಾಯಾಗ ಆರಂಭಗೊಂಡು, ಘಂಟೆ 10ರಿಂದ ಧರ್ಮಸಭೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ಪಡಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ್‌ಕುಮಾರ್ ನಡಕ್ಕರ, ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಕನ್ಯಾನ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಿತ್ತಳಿಕೆ, ಬಂಟ್ವಾಳದ ಮಾರುತಿ ಸಾಮಿಲ್‌ನ ಮಾಲೀಕ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಸಾಫ್ಟ್‌ವೇರ್ ಇಂಜಿನಿಯರ್ ಶರತ್ ಜಿ. ಭಟ್ ಸೇರಾಜೆ ಭಾಗವಹಿಸಲಿದ್ದಾರೆ.
ಈ ಸುಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ನಿವೃತ್ತ ಚಿತ್ರಕಲಾ ಸಹಾಯಕ ನಿರ್ದೇಶಕ ಜಿ.ಆರ್. ಉಪಾಧ್ಯಾಯ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೇಶ್ ಪ್ರಭು, ಕವಯಿತ್ರಿ, ಸಾಹಿತಿ, ಅಮೃತಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು, ಸಮಾಜ ಸೇವಕ ಜನಾರ್ದನ ಮಂಗಳೂರು ಇವರು ’ಶ್ರೀ ಗುರುದೇವಾನುಗ್ರಹ’ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ಕು| ಸನ್ನಿಧಿ ಟಿ. ರೈ ಪ್ರತಿಭಾ ಪುರಸ್ಕಾರ ಸ್ವೀಕರಿಸಲಿದ್ದಾರೆ.
ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಮಹಾಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ, ಕುರ್ನಾಡು ಇದರ ಮಕ್ಕಳಿಂದ ’ಏಕಾದಶೀ ದೇವಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಸಂಜೆ ಸಾಮೂಹಿಕ ಸ್ವಯಂವರ ಪಾರ್ವತೀಪೂಜೆ, ಅಷ್ಟಾವಧಾನ ಸೇವೆ, ರಂಗಪೂಜೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಲಿರುವುದು.