ಬಂಟ್ವಾಳ

ವಿಶ್ವಕರ್ಮ ಪ್ರತಿಭಾವಂತ ಸಮುದಾಯ: ರಮಾನಾಥ ರೈ

ವಿಶ್ವಕರ್ಮ ಸಮುದಾಯದವರು ತಮ್ಮ ಕುಲಕಸುಬು ಮಾತ್ರವಲ್ಲ, ಯಾವುದೇ ಕಾರ್ಯ ಮಾಡಿದರು ಅದರಲ್ಲಿ ವಿಶೇಷ ಕೌಶಲ್ಯ ಅಡಗಿರುತ್ತದೆ, ಅದೊಂದು ಪ್ರತಿಭಾವಂತರ ಸಮುದಾಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ವಿಶ್ವಕರ್ಮ ಸಮಾಜ ಸೇವಾ ಸಂಘ ಜೋಡುಮಾರ್ಗ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ೨೪ ನೇ ವರ್ಷದ ಸಾಮೂಹಿಕ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿದೆ, ಆದರೆ ಸಮುದಾಯಗಳ ಸ್ವಯಂ ಪ್ರಯತ್ನ, ಹೋರಾಟದ ಮನೋಭಾವ ಇದ್ದಾಗ ಮಾತ್ರ ಸಾಮಾಜಿಕ, ರಾಜಕೀಯ ಅವಕಾಶಗಳು ತೆರೆದುಕೊಳ್ಳುತ್ತದೆ,  ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯೋನ್ಮುಖರಾಗುವಂತೆ ಅವರು ಕರೆನೀಡಿದರು. ನೂತನವಾಗಿ ನಿರ್ಮಾಣಗೊಳ್ಳಲಿರುವ ವಿಶ್ವಕರ್ಮ ಸಭಾ ಭವನಕ್ಕೆ  ಸರ್ಕಾರದಿಂದ ಗರಿಷ್ಠ ಮೊತ್ತದ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಮಾತನಾಡಿ,  ಹಿಂದುತ್ವದ ರಕ್ಷಣೆ ಕಾರ್ಯದಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೊಂದಿಗೆ ಬೆರೆಯುವ ವಿಶ್ವಕರ್ಮ ಸಮುದಾಯ ಎಲ್ಲಾ ಸಮುದಾಯಗಳಿಗೂ ಮಾದರಿ ಎಂದರು. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದರ ಜೊತೆಯಲ್ಲಿ ವಿಶ್ವಕರ್ಮ ಸಮುದಾಯದಲ್ಲಿ ಕೆಎಎಸ್, ಐಪಿಎಸ್ ಗಳನ್ನು ನಿರ್ಮಿಸುವ ಕಾರ್ಯ ಆಗಬೇಕು, ಅದರಿಂದ ದೇಶಕ್ಕೆ ಲಾಭವಿದೆ ಎಂದವರು ವಿವರಿಸಿದರು. ನೂತನ ಸಭಾಭವನಲ್ಲೆ ತಮ್ಮ ನಿಧಿಯಿಂದ ಎರಡು ಕಂತುಗಳಲ್ಲಿ ಒಟ್ಟು ೧೦ ಲಕ್ಷ ರೂ ನೆರವು ನೀಡುವುದಾಗಿ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನ ಬೈಲು ಅಧ್ಯಕ್ಷತೆ ವಹಿಸಿದ್ದರು.  ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಆಚಾರ್ಯ,  ಕಟ್ಟಡ ಸಮಿತಿ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ ಪೂಂಜಾಲಕಟ್ಟೆ, ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಡಿ.ಆಚಾರ್ಯ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಸದಸ್ಯರಾದ ಬಿ.ಜಿ.ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ  ದಾರು ಶಿಲ್ಪಿ ಉಪೇಂದ್ರ ಆಚಾರ್ಯ ಮಾರ್ನಬೈಲು, ನಾಟಿ ವೈದ್ಯ ಸುರೇಶ್ ಆಚಾರ್ಯ ಕುಪ್ಪೆಪದವು, ನಿವೃತ್ತ ಆರೋಗ್ಯಾಧಿಕಾರಿ ಮಾಲತಿ ರಾಘವ ಆಚಾರ್ಯರನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಸ್ವಾಗತಿಸಿ,ವಂದಿಸಿದರು.  ಸಂಘದ ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಅಶೋಕ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಜಯಚಂದ್ರ ಆಚಾರ್ಯ, ಜಯಪ್ರಕಾಶ್ ಆಚಾರ್ಯ ಭಂಡಾರಿಬೆಟ್ಟು  ಸಹಕರಿಸಿದರು.  ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ