ಕಲಾ ಕ್ಷೇತ್ರದಲ್ಲಿ ನಿಪುಣತೆಯನ್ನು ಪಡೆದ ವಿಶ್ವಕರ್ಮ ಬಾಂಧವರು ಈ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಭಾನುವಾರ ನಡೆದ ವಿಶ್ವಕರ್ಮ ದಿನಾಚರಣೆ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಕಲ್ಯಾಣಕ್ಕಾಗಿ ವಿಶ್ವಕರ್ಮ ಸಮಾಜ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು. ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಸದಸ್ಯ ಬಿ.ಜಿ. ರಮೇಶ್ ಆಚಾರ್ಯ ಪ್ರಧಾನ ಭಾಷಣಗೈದರು. ವಿಶ್ವಕರ್ಮ ರ ಶಿಲ್ಪ ಶಾಸ್ತ್ರ ಮತ್ತು ಇಂದಿನ ಪಾಶ್ಚಿಮಾತ್ಯ ತಂತ್ರಜ್ಞಾನ ಜೊತೆಯಾದಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು ಎಂದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ, ಅಧ್ಯಕ್ಷ ಕೋಶಾಕಾರಿ ಜಯಚಂದ್ರ ಆಚಾರ್ಯ ಸರಪಾಡಿ, ಉಪ ತಹಶೀಲ್ದಾರ್ ಸೀತಾರಾಮ, ಕಂದಾಯ ನಿರೀಕ್ಷಕ ನವೀನ್, ಆಹಾರ ನಿರೀಕ್ಷಕ ಶ್ರೀನಿವಾಸ್, ರಾಷ್ಟ್ರೀಯ ಹಬ್ಬಗಳ ಸಮಿತಿಯ ವಿಷಯ ನಿರ್ವಹಕ ವಿಶು ಕುಮಾರ್, ರಂಗ ಕಲಾವಿದ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮೊದಲಾದವರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ದಿವಾಕರ್ ಸ್ವಾಗತಿಸಿದರು. ಉಪ ತಹಶೀಲ್ದಾರ್ ಗೋಪಾಲ ವಂದಿಸಿದರು. ಕಾಷ್ಠಶಿಲ್ಪಿ ರಾಜೇಶ್ ಆಚಾರ್ಯ ವಾಮದಪದವು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.