ಸಮಾಜದ ಹಿತ ಕಾಪಾಡಲು ಜೈನ್ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಶ್ರೀ ಕ್ಷೇತ್ರ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದ್ದಾರೆ.
ಪಾಣೆಮಂಗಳೂರು ಅನಂತ ಜಿನಚೈತ್ಯಾಲಯದಲ್ಲಿ ಭಾನುವಾರ ಚಾತುರ್ಮಾಸ ವೃತಾಚರಣೆ ಮಾಡುತ್ತಿರುವ ಮುನಿಶ್ರೀ ೧೦೮ ವೀರಸಾಗರ ಮಹಾರಾಜರ ಮಂಗಲ ಪ್ರವಚನ ಸಂದರ್ಭ ನಡೆದ ಸರ್ವಧರ್ಮ ಸಭೆಯಲ್ಲಿ ಮಾತನಾಡಿದ ಅವರು ಜೈನಮುನಿಗಳಿಂದ ದೇಶದ ಅಭ್ಯುದಯ ಸಾಧ್ಯ, ದೇವರನ್ನು ಭಕ್ತಿಯಿಂದ ಪೂಜಿಸುವುದರ ಜತೆಗೆ ಜೀವರಾಶಿಯನ್ನು ಪ್ರೀತಿಸಬೇಕು, ಧಾರ್ಮಿಕ ಸಭೆಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯೂ ಅಗತ್ಯ. ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ನೀಡಬೇಕು. ಭಗವಂತನ ಅನುಗ್ರಹವಿದ್ದಾಗ ವಿಕೃತ ಭಾವನೆಗಳು ಬರುವುದಿಲ್ಲ ಎಂದರು.
ದೇಶವನ್ನು ದುರ್ಬಲಗೊಳಿಸಲು, ಅಶಾಂತಿ ಸೃಷ್ಟಿಸಲು ವಿಕೃತ ಮನಸ್ಸುಗಳು ಯತ್ನಿಸುತ್ತಿದ್ದು, ಇದು ದೂರವಾಗಲು ಜೈನಮುನಿಗಳಂಥ ಸಂತರಿಂದ ಸಾಧ್ಯ ಎಂದು ಮಾಣಿಲ ಶ್ರೀಗಳು ಹೇಳಿದರು.
ಅಹಿಂಸಾ ಧರ್ಮ ಆಚರಣೆ ಎಲ್ಲರೂ ಪಾಲಿಸಬೇಕು. ಪ್ರತಿಯೊಬ್ಬರೂ ಮತ್ತೊಬ್ಬನಲ್ಲಿ ದ್ವೇಷಭಾವನೆ ಹೊಂದದೆ ಸಾತ್ವಿಕವಾಗಿರಲು ಸಾಧ್ಯ, ನಮ್ಮಲ್ಲಿರುವ ಆತ್ಮದಲ್ಲೇ ದೇವನಿದ್ದಾನೆ. ನಾವು ಸದಾಚಾರವನ್ನು ಪಾಲಿಸಿದರೆ, ಮೋಕ್ಷ ಸಾಧ್ಯ, ತ್ಯಾಗ ಇದರಲ್ಲಿ ಮುಖ್ಯವಾಗುತ್ತದೆ ಎಂದು ಚಾತುರ್ಮಾಸ ಆಚರಿಸುತ್ತಿರುವ ೧೦೮ ಮುನಿಶ್ರೀ ವೀರಸಾಗರ ಮಹಾರಾಜರು ನುಡಿದರು.
ಈ ಸಂದರ್ಭ ಶಂಕಾ ಸಮಾಧಾನ ಕಾರ್ಯಕ್ರಮ ನಡೆಯಿತು. ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಬಂಟ್ವಾಳ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ವಕೀಲ ಅಶ್ವನಿಕುಮಾರ್ ರೈ, ಬಿ.ಸಿ.ರೋಡ್, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಅಶೋಕ್ ಕುಮಾರ್, ಪರಮೇಶ್ವರ್, ಮೋಹನ್.ಪಿ.ಎಸ್, ಡಿ.ಎಂ.ಕುಲಾಲ್, ಸೀತಾರಾಮ ಶೆಟ್ಟಿ, ಭವಾನಿ ಶಂಕರ್ ವಸಂತ ಪ್ರಭು, ಚಾತುರ್ಮಾಸ ಸಮಿತಿ ಅಧ್ಯಕ್ಷ ರತ್ನಾಕರ ಜೈನ್, ಕಾರ್ಯಾಧ್ಯಕ್ಷ ಸುದರ್ಶನ ಜೈನ್, ಕಾರ್ಯದರ್ಶಿ ಧರಣೇಂದ್ರ ಜಐನ್, ಪ್ರಮುಖರಾದ ಸುಭಾಶ್ಚಂದ್ರ ಜೈನ್, ಪ್ರವೀಣ್ ಕುಮಾರ್, ಹರ್ಷರಾಜ ಬಲ್ಲಾಳ್, ಆದಿರಾಜ ಜೈನ್, ಭರತ್ ರಾಜ ಜೈನ್, ಯಶೋಧರ ಪೂವಣಿ ಮೊದಲಾದವರಿದ್ದರು.