ಬಂಟ್ವಾಳ

ಹಾಡಹಗಲೇ ಬಿ.ಸಿ.ರೋಡ್ ಪೇಟೆಯ ಮನೆಯಲ್ಲಿ ಕಳ್ಳತನ

ಮನೆಯ ಬೀಗ ಮುರಿದು ಲಕ್ಷಾಂತರ ರೂ ಚಿನ್ನ, ನಗದು ಕದ್ದೊಯ್ದ ಕಳ್ಳರು

 ಹಲವು ಘಟನೆಗಳು ಇಲ್ಲಿ ನಡೆದ ಬಳಿಕ ಅಪರಿಚಿತರ ಸಂಚಾರ ಬಿ.ಸಿ.ರೋಡಿನಲ್ಲಿ ಅಧಿಕವಾಗಿದ್ದು, ಮತ್ತೆ ವೃತ್ತಿಪರ ಕಳ್ಳರು ಬಾಲ ಬಿಚ್ಚಿದ್ದಾರೆ. ಬೆರಳೆಣಿಕೆಯ ದಿನಗಳಲ್ಲಿಯೇ ನಾಲ್ಕುಕಳವು ಪ್ರಕರಣಗಳ ದಾಖಲಾಗಿರುವುದರಿಂದ ಮತ್ತೆ ವೃತ್ತಿಪರ ಕಳ್ಳರು ಸಕ್ರಿಯವಾಗಿರುವ ಗುಮಾನಿ ವ್ಯಕ್ತವಾಗಿದ್ದು, ಪೊಲೀಸರಿಗೂ ಇದು ಈಗ ಸವಾಲಾಗಿ ಪರಿಣಮಿಸಿದೆ. ಇತ್ತೀಚಿಗಿನ ದಿನಗಳಲ್ಲಿ ಗಲಭೆಯಿಂದ ಅತಂಕದಲ್ಲಿ ಬದುಕು ಸಾಗಿಸುತ್ತಿದ್ದ ನಾಗರಿಕರಲ್ಲಿ ಇದೀಗ ಕಳ್ಳರು ತಲೆನೋವಾಗಿ ಕಾಡಲಾರಂಭಿಸಿದ್ದಾರೆ.

ಬುಧವಾರ ಹಾಡಹಗಲೇ ಬಿ.ಸಿ.ರೋಡಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಆಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಬುಧವಾರ ಮಧ್ಯಾಹ್ನದ ಬಳಿಕ ಈ ಘಟನೆ ನಡೆದಿದ್ದು, ಬಿ.ಸಿ.ರೋಡಿನ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬಿ.ಸಿ.ರೋಡ್ ಬಸ್ ನಿಲ್ದಾಣದ ಹಿಂಭಾಗ ಇರುವ ಸರ್ವೇ ಆಫೀಸ್ ನ ಕೂಗಳತೆ ದೂರದಲ್ಲಿರುವ ದಸ್ತಾವೇಜು ಬರಹಗಾರ ಕೆ.ಪಿ.ಬನ್ನಿಂತಾಯ ಅವರ ಮನೆಗೆ ಯಾರೂ ಇಲ್ಲದ ವೇಳೆ ಸುಮಾರು 2.30ರಿಂದ 3.30ರ ಮಧ್ಯೆ ನುಗ್ಗಿದ ಕಳ್ಳರು, ಮನೆಯ ಮುಂಬಾಗಿಲ ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ಬೆಡ್ ರೂಮ್ ನಲ್ಲಿದ್ದ ಮೂರು ಕಪಾಟುಗಳನ್ನು ಒಡೆದು, ಅದರಲ್ಲಿದ್ದ 15 ಪವನ್ ಚಿನ್ನಾಭರಣ, ಒಂದು ಜತೆ ವಜ್ರದ ಬೆಂಡೋಲೆ ಮತ್ತು 40 ಸಾವಿರ ರೂ ನಗದನ್ನು ದೋಚಿ ಕಂಪೌಂಡ್ ಹತ್ತಿ ಬಸ್ ನಿಲ್ದಾಣದ ಮಾರ್ಗವಾಗಿ ಪರಾರಿಯಾಗಿದ್ದಾರೆ. ಈ ವೇಳೆ ಸಮೀಪದ ಮನೆಯ ಗೃಹಿಣಿಯೋರ್ವರು ಗಮನಿಸಿದ್ದು, ಸಮೀಪದಲ್ಲೇ ಇರುವ ಬನ್ನಿಂತಾಯರ ಕಚೇರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಕೆ.ಪಿ.ಬನ್ನಿಂತಾಯ ಮತ್ತವರ ಮಗ ವಕೀಲ ರಾಘವೇಂದ್ರ ಬನ್ನಿಂತಾಯ ಸಮೀಪದಲ್ಲೇ ಇರುವ ತಮ್ಮ ಕಚೇರಿಯಲ್ಲಿದ್ದ ಸಂದರ್ಭ ಘಟನೆ ನಡೆದಿದೆ. ಸೊಸೆ ಕೆಲಸಕ್ಕೆ ಹೋಗಿದ್ದರೆ , ಮಕ್ಕಳು ಶಾಲೆಗೆ ತೆರಳಿದ್ದರು. ಮನೆ ಕಚೇರಿಯ ಅನತಿ ದೂರದಲ್ಲಿದೆ . ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ