ವಿಶೇಷ ವರದಿ

ಶತಮಾನೋತ್ಸವ ಸಂಭ್ರಮದಲ್ಲಿ ಪೆರುವಾಯಿ ಕೊಲ್ಲತ್ತಡ್ಕ ಶಾಲೆ

ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಅನುಮತಿ ಪಡೆದು ಹಲವು ಸಾಧಕರನ್ನು ಸಮಾಜಕ್ಕೆ ಅರ್ಪಣೆ ಮಾಡಿರುವ ಪೆರುವಾಯಿ ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೂ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಅತ್ಯಂತ ಗ್ರಾಮೀಣ ಭಾಗವಾಗಿರುವ ವಿಟ್ಲಮಾಣಿಲ ರಸ್ತೆಯ ಪೆರುವಾಯಿ ಕೊಲ್ಲತ್ತಡ್ಕ ಎಂಬಲ್ಲಿ 1917ರಲ್ಲಿ ಶಾಲೆಯೂ ಸ್ಥಾಪನೆಗೊಂಡಿತ್ತು. ಮೊದಲಿಗೆ ಇಲ್ಲಿ 1ರಿಂದ 5ನೇ ತರಗತಿ ವರೆಗೆ ಭೋದನೆ ಮಾಡಲಾಗುತ್ತಿತ್ತು. ಬಳಿಕ 1ರಿಂದ 7ನೇ ತರಗತಿ ವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ನಾಲ್ವರು ಶಿಕ್ಷಕರು ಹಾಗೂ 124 ವಿದ್ಯಾರ್ಥಿಗಳು ಇದ್ದಾರೆ. ಪೆರುವಾಯಿ ಗ್ರಾಮದ 10 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿಯೇ ವಿದ್ಯಾರ್ಜನೆ ಮಾಡಿ ಇಂದು ಅಮೇರಿಕಾ, ಶಾರ್ಜಾ, ಸೌದಿ ಅರೇಬಿಯಾ ಮೊದಲಾದ ಕಡೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಇದೊಂದು ಗ್ರಾಮೀಣ ಭಾಗವಾಗಿದ್ದು, ಸ್ವಲ್ಪ ಅಂತರದಲ್ಲಿ ಕೇರಳಕರ್ನಾಟಕ ಗಡಿಭಾಗವಾಗಿದೆ

3 ಎಕರೆ ಜಾಗದಲ್ಲಿ ಶಾಲಾ ಮೈದಾನ, ಶಾಲೆಯ ಸುತ್ತಲೂ ವಿವಿಧ ತರಕಾರಿಗಳಾದ ತೊಂಡೆಕಾಯಿ, ಬಸಲೆ ಹಾಗೂ ತೆಂಗಿನ ಮರಗಳನ್ನು ಬೆಳೆಸಲಾಗುತ್ತಿದೆ. ಇದರಿಂದಲೇ ಮಧ್ಯಾಹ್ನ ಬಿಸಿಯೂಟಕ್ಕೆ ಉಪಯೋಗ ಮಾಡಲಾಗುತ್ತಿದೆ. ಪ್ರತಿವರ್ಷವೂ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತುಳು ನಾಡಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಟಿದ ಕೂಟ, ಕೆಸಡೊಂಜಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೀರು ಉಳಿಸುವ ಉದ್ದೇಶದಿಂದ ಶಾಲೆಯ ಸಮೀಪವೇ ಇಂಗುಗುಂಡಿ ಮಾಡಲಾಗಿದ್ದು, ಇದರಿಂದಲೇ ಶಾಲೆಗೆ ನೀರು ಸರಬರಾಜು ನಡೆಯುತ್ತಿದೆ. ಅದಲ್ಲದೇ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ಕೂಡ ನೀಡಲಾಗುತ್ತಿದೆ.

ಶತಮೋತ್ಸವ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಶಾಲೆಯ ಆಡಳಿತ ಸಮಿತಿ, ಹಳೆ ವಿದ್ಯಾರ್ಥಿಗಳು, ಮಕ್ಕಳ ಹೆತ್ತವರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಬಾರೀ ವಿಜೃಂಭಣೆಯಿಂದ ನಡೆಯಲಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಕುಂಞನಾಯ್ಕ ಅವರು ಹೇಳುತ್ತಾರೆ.

ಇಲ್ಲಿ ಅಕ್ಷರ ದಾಸೋಹ ಹಾಗೂ ಶೌಚಾಲಯ ಕಟ್ಟಡ ಹೊರತುಪಡಿಸಿ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಹಳೆಕಾಲದ ಹಂಚು ಹಾಗೂ ಗೋಡೆಯ ಮಧ್ಯೆದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರ ಜತೆಗೆ ಮತ್ತೊಂದು ಕೊಠಡಿಯಲ್ಲಿ ಕಂಪ್ಯೂಟರ್ ತರಬೇತಿ ಕೂಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಶಾಲೆಯ ಸುತ್ತಲೂ ಮುಂಜಾಗ್ರತಾ ಕ್ರಮವಾಗಿ ನಾಲ್ಕು ಸಿಸಿ ಕ್ಯಾಮಾರ ಅಳವಡಿಸಲಾಗಿದೆ. ಒತ್ತಡದ ನಡುವೆಯೂ ಶಾಲೆಯ ಅಭಿವೃದ್ಧಿ ಮಾತ್ರ ಶ್ಲಾಘನೀಯವಾಗಿದೆ.  

ಕಳೆದ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕುಂಞನಾಯ್ಕ ಮುಖ್ಯ ಶಿಕ್ಷಕರಾಗಿ ಹಾಗೂ ಸಚಿನ್ ಅಡ್ವಾಯಿ ಅವರು ಶಾಲಾ ಸಂಚಾಲಕರಾಗಿ ಹಾಗೂ ರಾಜೇಂದ್ರ ರೈ ಅವರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಈಗಾಗಲೇ ಶತಮಾನೋತ್ಸವ ಸಮಿತಿ ರಚಿಸಲಾಗಿದೆ. ಅನೇಕ ಮೂಲಸೌಕರ್ಯಗಳ ಬೇಡಿಕೆಯಿದೆ. ಎಲ್ಲರೂ ಜತೆಗೂಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತೇವೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ ಜಯರಾಮ ರೈ ಕಲ್ಲಡ್ಕ ಹೇಳುತ್ತಾರೆ.

ಶತಮಾನೋತ್ಸವ ಸಂಭ್ರಮವನ್ನು ಶಾಲೆಯ ಹಲವಾರು ಮೂಲಭೂತ ಸೌಲಭ್ಯಗಳನ್ನು ಪೂರೈಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಮಿತಿ ಸಂಕಲ್ಪ ಮಾಡಿಕೊಂಡಿದೆ. ರಂಗಮಂದಿರ, ಆಫೀಸ್ ಕೋಣೆ, ಗ್ರೀನ್ ರೂಂ, ವಾಚನಾಲಯ, ಪ್ರಯೋಗಾಲಯ, ತರಗತಿ ಕೋಣೆಗಳಿಗೆ ಟೈಲ್ಸ್, ಶೌಚಾಲಯ ನಿರ್ಮಾಣ, ಕಂಪ್ಯೂಟರ್ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಎಲ್.ಕೆ.ಜಿ ಹಾಗೂ ಯು.ಕೆ.ಜಿ ತೆರಗತಿ ಆರಂಭ, ಗೌರವ ಶಿಕ್ಷಕರಿಗೆ ಗೌರವಧನ ನೀಡುವ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ