ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಕಾಯ್ದೆ ಮೊದಲಾದ ಕಾಂತ್ರಿಕಾರಿ ಯೋಜನೆಗಳ ಮೂಲಕ ಯುಪಿಎ ಸರಕಾರ ದೇಶದ ಜನರ ಹಿತ ರಕ್ಷಣೆಯ ಕಾರ್ಯ ನಡೆಸಿದೆ. ಕಾಂಗ್ರೆಸ್ ಸರಕಾರದಿಂದ ಮಾತ್ರ ಬಡವರಿಗೆ ಸ್ವಾಭಿಮಾನದ ಬದುಕು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿಯನ್ನು ವಿರೋಧಿಸಿ ಬಂಟ್ವಾಳ ಯುವ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇಂಧನ, ಗ್ಯಾಸ್ ಸಹಿತ ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ದೇಶದ ಪ್ರತೀಯೊಬ್ಬರೂ ಯುಪಿಎ ಮತ್ತು ಎನ್ಡಿಎ ಸರಕಾರದ ತುಲನೆ ಮಾಡುವ ದಿನ ಬಂದಿದೆ ಎಂದರು.
ನೂರು ದಿನದಲ್ಲಿ ಕಪ್ಪು ಹಣ ತರುತ್ತೇವೆ ಎಂದವರಿಗೆ ನಾಲ್ಕು ವರ್ಷ ಕಳೆದರೂ ಕಪ್ಪು ಹಣ ತರಲು ಸಾಧ್ಯವಾಗಿಲ್ಲ. ನೋಟು ಬಂದಿಯಿಂದ ಭ್ರಷ್ಟಾಚಾರ, ಕಪ್ಪು ಹಣ, ನಕ್ಸಲೈಟ್, ಭಯೋತ್ಪಾದನೆ ನಿರ್ಮೂಲನೆ ಆಗುತ್ತದೆ ಎಂದವರಿಗೆ 99 ಶೇಕಡ ಹಳೆ ನೋಟು ವಾಪಸ್ ಬಂದಿದೆ ಎನ್ನುವ ಮೂಲಕ ಆರ್ಬಿಐ ಶಾಕ್ ನೀಡಿದೆ. ನೋಟು ಬಂದಿ ಮಾಡುವ ಮೂಲಕ ಜನಸಾಮಾನ್ಯರಿಗೆ ಕೇಂದ್ರ ಸರಕಾರ ಅನ್ಯಾಯ ಮಾಡಿದೆ ಎಂದು ಅವರು ವಾಗ್ದಾಲಿ ನಡೆಸಿದರು.
ಪ್ರತಿಭಟನಾ ಸಭೆಯ ಬಳಿಕ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯೆ ವಸಂತಿ ಚಂದಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್, ಪದ್ಮಶೇಖರ್ ಜೈನ್, ಯುವ ಕಾಂಗ್ರೆಸ್ ದಕ್ಷಣ ಕನ್ನಡ ಉಪಾಧ್ಯಕ್ಷ ಲುಕ್ಮಾನ್ ಕೈಕಂಬ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪ್ರಶಾಂತ್ ಕುಲಾಲ್, ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ನಾಯಕರಾದ ಸಿದ್ದಿಕ್ ಬೋಗೋಡಿ, ರಶೀದ್ ಬಾಳ್ತಿಲ ಮೊದಲಾದವರು ಉಪಸ್ಥಿತರಿದ್ದರು.