” ಆಟಿ ಆಡೊಂದು ಪೋಪುಂಡು ;
ಸೋಣ ಸೋಡೋಣ್ತ್ ಪೋಪುಂಡು”
ಇದೊಂದು ಜನಪದರಲ್ಲಿರುವ ಗಾದೆ. ಈ ತಿಳಿವಳಿಕೆ ಸಹಜವಾಗಿತ್ತು , ಆದರೆ ಈಗ ಮರೆತು ಹೋಗಿದೆ. ಕಾಲ ಬದಲಾಗಿದೆ . ಪ್ರಕೃತಿಯೊಂದಿಗಿನ ಸಹಬಾಳ್ವೆ ಅರ್ಥ ಕಳಕೊಂಡಿದೆ. ಮಳೆ ಆಧರಿಸಿ ಸಿದ್ದಗೊಂಡು ಲಾಗಾಯ್ತಿನಿಂದ ರೂಢಿಯಲ್ಲಿದ್ದ “ಕೃಷಿ ಸಂವಿಧಾನ”ಮರೆತು ಹೋಗಿದೆ , ಈ ಸಂಬಂಧದ ಸಾಂಸ್ಕೃತಿಕ ಆವರಣವೊಂದು ಕಳಚಿಹೋಗಿದೆ. ಕೃಷಿ ಅವಲಂಬಿತ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿವೆ.
ಕೃಷಿ – ಬೇಸಾಯದ ಅವಗಣನೆ , ಕೃಷಿ
ಭೂಮಿಯ ಪರಿವರ್ತನೆ , ಕೃಷಿ ಲಾಭದಾಯಕವಾಗದೆ ಇರುವುದು , ಕೃಷಿ – ಬೇಸಾಯದಿಂದಲೇ ಸರ್ವ ಸಮೃದ್ದಿ ಎಂಬ ಚೆಂತನೆ – ಸ್ವೀಕಾರದ ನಂಬಿಕೆ ಹುಸಿಯಾಯಿತು . ಕೃಷಿ – ಬೇಸಾಯ ಅಪ್ರಸ್ತುತ ವಾಗುತ್ತಾ ಕೃಷಿ ಪ್ರಧಾನವಾಗಿ ರೂಪುಗೊಂಡ ಸಾಂಸ್ಕೃತಿಕ ಜೀವನಶೈಲಿ ಬದಲಾಯಿತು , ನಮ್ಮದ್ದಲ್ಲದ ಎಷ್ಟೋ ಆಚಾರ – ವಿಚಾರಗಳನ್ನು ಒಪ್ಪುವಂತಾಗುತ್ತದೆ.ಈಕಾರಣಗಳಿಂದ ಕೃಷಿ ಸಂಸ್ಕೃತಿಯಿಂದ ಪಡಿಮೂಡಿದ್ದ ಆಚರಣೆಗಳು ಅವಗಣಿಸಲ್ಪಟ್ಟುವು , ಒಂದು ಹಂತಕ್ಕೆ ಮರೆತೇ ಹೋಯಿತು . ಇಂತಹ ಸಾಂಸ್ಕೃತಿಕ ಮರೆವುಗೆ ಆಟಿ , ಸೋಣ ತಿಂಗಳುಗಳ ಆಚರಣೆಗಳೂ ಸೇರಿಹೋದುವು.ಜಾಣ ಮರೆವು ?
ಆಟಿ ತಿಂಗಳ ಅಮಾವಾಸ್ಯೆಯಂದು “ಆಟಿಯಮದ್ದು”(ಹಾಳೆ ಮರದ ಕೆತ್ತೆಯಿಂದ ತಯಾರಿಸಿದ ಕಷಾಯ ಕುಡಿಯುವ – ಮೆತ್ತೆ ಗಂಜಿ ಊಟಮಾಡುವ) ಕುಡಿಯುವ ಸಂಪ್ರದಾಯ ಇವತ್ತಿಗೂ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಉತ್ಸಾಹಿ ಸಂಘಟನೆಗಳು , ಆಚರಣೆ – ಸಂಸ್ಕೃತಿ ಪ್ರೀತಿಯ ಮಂದಿ ‘ಕಷಾಯ’ ತಯಾರಿಸಿ ಮನೆ,ಮನೆಗಳಿಗೆ ಹಂಚುವ , ಆಮೂಲಕ ‘ಆಟಿಯ ಮದ್ದು’ ಕುಡಿಯುವ ಸಂಪ್ರದಾಯವೊಂದನ್ನು ನೆನಪಿಸುತ್ತಾ , ಆಚರಿಸುವಂತೆ ಪ್ರೇರೇಪಿಸುವ ಕೆಲಸ ನಡೆಯುತ್ತಿದೆ ,ಇದು ಸಂತೋಷದ ಸಂಗತಿ. ಯಾವ ಮರದ ಕೆತ್ತೆ , ಯಾವ ಕ್ರಮದಲ್ಲಿ ಯಾವ ವೇಳೆಯಲ್ಲಿ ತೆಗೆಯಬೇಕು ಮತ್ತು ಕಷಾಯ ತಯಾರಿಯ ಕ್ರಮ ,ಕಷಾಯ ಕುಡಿಯುವವರಿಗೆ ತಿಳಿದರೆ ಈ ಸಂಪ್ರದಾಯ ಉಳಿಯಬಹುದು . ಮುಂದೊಂದು ದಿನ ಮೆಡಿಕಲ್ ಶಾಪ್ ಗಳಲ್ಲಿ’ ಸಿದ್ದ ಕಷಾಯ’ ದೊರೆಯುವ ದಿನವೂ ಬಂದೀತು. ಆಗ ಮಾತ್ರ ಈ ಸಂದರ್ಭದ ಆಚರಣೆಯಲ್ಲಿ ಪಾವಿತ್ರ್ಯ ಇಲ್ಲವಾಗಬಹುದು ಅಲ್ಲವೇ ?ಗದ್ದೆಗಳಲ್ಲಿ ಬೆಳೆಯುತ್ತಿರುವ ಬೆಳೆಯರಕ್ಷಣೆಗೆ ಕಾಸರ್ಕದ ಮರದ ಗೆಲ್ಲುಗಳನ್ನು ಕಡಿದು ಹಾಕುವ ಕ್ರಮವೂ ಇತ್ತು ಎಂಬುದು ಮರೆಯಾಗುತ್ತಿರುವ ವಿಷಯ.ಬೇಸಾಯ ಜೀವನಾಧಾರವಾಗಿದ್ದರೆ ಮಾತ್ರ ನಮ್ಮ ಆರೋಗ್ಯದೊಂದಿಗೆ ನಮ್ಮ ಬೆಳೆಯ ರಕ್ಷಣೆಯ ಕಾಳಜಿತಾನೇ ?
ಬಲಿಯೇಂದ್ರೆ ಸಂದಿ
” …….ಆಟಿದ ಅಮಾಸೆಗ್ ಆಳ್ ಕಡಪುಡುದು ಪಿನ್ಲ . ಸೋಣ ಸಂಕ್ರಾಂದಿಗ್ ಅಪ್ಪೆನ್ ಕಡಪುಡ್ದು ಕೊರ್ಲ . ಬೊಂತೆಲ್ದ ಅಮಾಸೆಗ್ ಆಜಿ ದಿನತ ಬಲಿ , ಮೂಜಿ ದಿನತ ಪೊಲಿ , ದೀಪೊಲಿದ ಪರ್ಬೊಗು ಈ ಬತ್ತ್ ದ್ ನಿನ್ನ ರಾಜ್ಯ ಬುಲೆ ಸಲೆ , ಬದ್ ಕ್ ಬಾಗ್ಯೊಲೆನ್ ತೂದು ಪೋಲಂದೆರ್ ಗೆ ನಾಲ್ ಕಯಿತ ನಾರಾಯಿಣ ದೇವೆರ್ ಗೆ.” ಇದು ಪೊಳಲಿ ಶೀನಪ್ಪ ಹೆಗ್ಗಡೆ ಅವರು ಸಂಪಾದಿಸಿರುವ ‘ ತುಳುವಾಲ ಬಲಿಯೇಂದ್ರೆ’ ಸಂದಿಯ ಒಂದು ಒಂದು ಸನ್ನಿವೇಶ.
‘ಬಲಿಯೇಂದ್ರೆ’ ದೀಪಾವಳಿ (ಪರ್ಬ , ಕೊಡಿ ಪರ್ಬ , ತುಡರ ಪರ್ಬ) ಯ ಸಂದರ್ಭಕ್ಕೆ ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ, ಒಂದುಕಾಲದ ಪ್ರಜಾವತ್ಸಲನಾದ ಜನಪ್ರಿಯ ಅರಸ . ಪ್ರತಿವರ್ಷ ಆಗಮಿಸಿ ತನ್ನ ರಾಜ್ಯದ ” ಬುಲೆ ಸಲೆ ಬದ್ಕ್ ಬಾಗ್ಯೊಲೆನ್ ” (ಬೆಳೆಯ ಸಮೃದ್ದಿ , ಬದುಕು – ಭಾಗ್ಯ) ನೋಡಿ ಹೋಗುವ ಅವಕಾಶವನ್ನು ನಾಲ್ಕು ಕೈಯ ನಾರಾಯಣ ದೇವರಿಂದ ವರವಾಗಿ ಪಡೆದಿರುತ್ತಾನೆ.
ಸಂದಿ ಹೇಳುವಂತೆ ಬಲಿಯೇಂದ್ರೆ ನೇರವಾಗಿ ‘ಬೊಂತೆಲ್'(ತುಲಾ ಮಾಸ) ತಿಂಗಳ ಅಮಾವಾಸ್ಯೆಯಂದು ಬರುವುದಲ್ಲ , ಬದಲಿಗೆ ಆಟಿ (ಕರ್ಕಾಟಕ ಮಾಸ) ಅಮಾವಾಸ್ಯೆಯಂದು ತನ್ನ ಆಳುಗಳನ್ನು ಕಳುಹಿಸಿ ತನ್ನ ರಾಜ್ಯದಲ್ಲಿ ಕೃಷಿ ಚಟುವಟಿಕೆ ಹೇಗೆ ಆರಂಭವಾಗಿದೆ ಎಂದು ತಿಳಿದುಕೊಳ್ಳುತ್ತಾನೆ (ಪಿನ್ಲ – ಪಿನ್ನೊನ್ಲ). ಆಟಿ ತಿಂಗಳ ಈ ಅಮಾವಾಸ್ಯೆಯಂದು ನಾವು ‘ಆಟಿ ಮದ್ದು’ ಕುಡಿಯುತ್ತೇವೆ , ಬೆಳೆ ರಕ್ಷಣೆಗೂ ಕ್ರಮಕೈಗೊಳ್ಳುತ್ತೇವೆ.
ತುಳುನಾಡಿನ ಬ್ರಾಹ್ಮಣರಲ್ಲಿ ರೂಢಿಯಲ್ಲಿರುವ”ಆಟಿಯ ಹುಣ್ಣುಮೆ” ಯ ಆಚರಣೆಯೊಂದು ಗಮನಸೆಳೆಯುತ್ತದೆ ( ಬ್ರಾಹ್ಮಣ ಮಹಿಳೆಯರು ಪ್ರತಿ ನಿತ್ಯ ಹೊಸ್ತಿಲಿಗೆ ನಮಸ್ಕರಿಸುತ್ತಾರೆ – ಆಟಿಯ ಹುಣ್ಣುಮೆಯಂದು ಮನೆಯ ಎಲ್ಲಾ ಹೊಸ್ತಿಲುಗಳನ್ನೂ ಬರೆಯುತ್ತಾರೆ . ಪ್ರತಿ ದಿನ ಸಂಜೆ ದೇವರ ಪೂಜೆಯ ಬಳಿಕ ಆರತಿ ಹಾಗೂ ಲೋಟದಲ್ಲಿ ಹಾಲನ್ನು ಇರಿಸಿ ” ತಡ್ಯ ಪುಡಾಡುನು” ಎಂಬ ಸಂಪ್ರದಾಯ ಇಂದಿಗೂ ಉಳಿದು ಕೊಂಡಿದೆ. ).
ಹುಣ್ಣುಮೆಯನಾಲ್ಕೈದುದಿನ ಮೊದಲು ನೆನೆಹಾಕಿದ ಹುರುಳಿ (ಕುಡು)ಯನ್ನು ಬಿತ್ತಿ ಮಡಕೆ ಅಥವಾ ಪಾತ್ರೆಯನ್ನು ಮುಚ್ಚಿ ಇಡುತ್ತಾರೆ . ಹುಣ್ಣುಮೆಯಂದು ಹೆಂಗಸರು,ಹೆಣ್ಣುಮಕ್ಕಳು ಬೆಳಗ್ಗೆ ಎದ್ದು ಸ್ನಾನಮಾಡಿ ಮಳೆಗಾಲದಲ್ಲಿ ಗದ್ದೆ ಬದಿಯಲ್ಲಿ ,ಮನೆಯ ಪಾಗಾರದಲ್ಲಿ , ಬಾವಿಕಟ್ಟೆಯ ಗೋಡೆಯಲ್ಲಿ , ಅಂಗಳದಬದಿ ,ತೋಟದಲ್ಲಿ ವಿಫುಲವಾಗಿ ಸಿಗುವ ನೀರುಕಡ್ಡಿ ಮುಂತಾದ ನಿರ್ದಿಷ್ಟ ಹುಲ್ಲುಕಡ್ಡಿಗಳನ್ನುಸಂಗ್ರಹಿಸಿ ತರುತ್ತಾರೆ . ಬೇಯಿಸಿ ಇಟ್ಟುಕೊಂಡಿರುವ ಮಳೆಗಾಲದ ಸಂಗ್ರಹದಲ್ಲಿದ್ದ ಹಲಸಿನ ಬೀಜ( ಬೋಲೆ) ವನ್ನು ಹರಿವಾಣದಲ್ಲಿ ಹಾಕಿಕೊಳ್ಳುತ್ತಾರೆ.
ಬಿತ್ತಿದ್ದ ಹರುಳಿಯು ಈಗ ಸಣ್ಣ ಗಿಡವಾಗಿ ಬೆಳೆದಿರುತ್ತದೆ , ಬಿಳಿದಾದ ಹೂವಿನಂತಿರತ್ತದೆ (ಕುಡುತ ಪೂ). ಬೆಳಕು ಬೀಳದಂತೆ ಮುಚ್ಚಿಟ್ಟಿದ್ದುದರಿಂದ ಹುರುಳಿಯ ಗಿಡ ಬಿಳಿಯಾಗಿರುತ್ತದೆ.ಈ ಹೂವನ್ನು ಹರಿದು ತಂದು ಹರಿವಾಣದಲ್ಲಿ ಇರಿಸಿಕೊಳ್ಳುತ್ತಾರೆ. ಬಳಿಕ ಮನೆಯ ಪಡಸಾಲೆಯ – ಪ್ರಧಾನ ದ್ವಾರದ ಹೊಸ್ತಿಲನ್ನು (ತಡ್ಯ) ತೊಳೆದು ಅದಕ್ಕೆ ನೀರಿನಲ್ಲಿ ಕಲಸಿಟ್ಟ ಜೇಡಿ ಮಣ್ಣಿನ ಹುಡಿಯಿಂದ ಮನೆಗೆ ಒಳ ಮುಖವಾಗಿ ಇರುವಂತೆ ಗೆರೆಗಳನ್ನು ಎಳೆದು(ತಡ್ಯ ಬರೆವುನಿ – ರಂಗೋಲಿ ) ಹೊಸ್ತಿಲಿನ ಇಕ್ಕೆಲಗಳಲ್ಲಿ ಹುರುಳಿಹೂ,ಸಂಗ್ರಹಿಸಿಟ್ಟುಕೊಂಡಿರುವ ನೀರುಕಡ್ಡಿ, ಮುಟ್ಟುಕತ್ತಿ – ಹೆರಮಣೆ( ಮುಟ್ಟತ್ತಿ – ಪೆರದನೆ) ಮುಂತಾದ ಹುಲ್ಲುಗಳನ್ನು , ಬೇಯಿಸಿದ ಹಲಸಿನ ಬೀಜವನ್ನು (ಎಡೆರಡು),ನೀರು ತುಂಬಿದ ಚೊಂಬನ್ನು ಇರಿಸಿ ಸಾಂಪ್ರದಾಯಿಕ ಕ್ರಮದಂತೆ ನಮಸ್ಕರಿಸುತ್ತಾರೆ (ಪುಡಾಡುನು – ಪುಡ್ಯಾಡುನು) . ಹೊಸ್ತಿಲಬಳಿ ಮನೆ ಒಳಬದಿಯಲ್ಲಿ ನಮಸ್ಕರಿಸುವುದು ಸ್ವಾಗತದಂತೆ (ಎದುಕೊನ್ನು) ಭಾಸವಾಗುವುದಿಲ್ಲವೇ ? ಬರೆಯುವ ಗೆರೆಗಳೂ( ರಂಗೋಲಿ) ಹೊರಗಿನಿಂದ ಒಳಗೆ ಅಭಿಮುಖವಾಗಿ ಎಳೆದಂತಿರುತ್ತದೆ. ಇದೂ ಸಹಾ ಹೊರಗಿನಿಂದ ಏನೊ ಬರುವುದಕ್ಕಿದೆ , ಅದನ್ನು ತಲೆಬಾಗಿ ಸ್ವಾಗತಿಸುವ ಸಿದ್ದತೆಯಾಗಿ ಈ ಆಚರಣೆಯನ್ನು ಒಪ್ಪಬಹುದು .
ಹಾಗಿದ್ದರೆ ಬರುವುದಕ್ಕಿರುವುದೇನು ?ಆಟಿ ತಿಂಗಳ ಅಪಶಕುನವನ್ನು ಆಟಿ ಕಳಂಜ ಓಡಿಸಿದ್ದಾನೆ ಶುಭವನ್ನು ಹಾರೈಸಿದ್ದಾನೆ ,
ಹಾಗಾಗಿ ಕೃಷಿ ಸಮೃದ್ಧಿಯಾಗಿರುವ ‘ಬೆಳೆ’ ಎಂಬ ‘ಭಾಗ್ಯ'(ಬುಲೆ ಸಲೆ) ವೇ ಇರಬೇಕು.ಏಕೆಂದರೆ ನಮ್ಮದು ಕೃಷಿ ಆಧರಿತ ಬದುಕು ಅಲ್ಲವೇ( ಈಗ ಅಲ್ಲದಿರ ಬಹುದು).ಈ ಕಲ್ಪನೆಗೆ ಪೂರಕವಾಗಿದೆ ‘ ಬಲೀಂದ್ರನ ಆಳು ಬರುತ್ತಾನೆ ‘ಎಂಬ ಜನಪದರ ನಂಬಿಕೆ .
ಸೋಣದ ಆಚರಣ
ಸೋಣ ತಿಂಗಳು( ಸಿಂಹ ಮಾಸ) ಸನ್ನಿಹಿತವಾಯಿತೆಂದರೆ ಏನೋ ಸಂಭ್ರಮ , ಆಟಿ ತಿಂಗಳಲ್ಲಿ ಸ್ತಬ್ದಗೊಂಡಿದ್ದ ಜೀವನೋತ್ಸಾಹ ಮತ್ತೆ ಪುಟಿದೇಳುವ ಸಂದರ್ಭ, ಹಬ್ಬಗಳು ಒಂದರ ಅನಂತರ ಇನ್ನೊಂದುಬರಲಾರಂಭಿಸುತ್ತವೆ.ಶುಭಮಾಸ ಎನ್ನುವುದು ಮತ್ತೊಂದು ಉತ್ಸಾಹ.
ಸೋಣ ಸಂಕ್ರಮಣದಂದು , ತಿಂಗಳು ಪೂರ್ತಿ ,ಹಲವೆಡೆ ಹತ್ತು ಹದಿನೈದು ದಿನಗಳಲ್ಲಿ ಹೊಸ್ತಿಲು ಬರೆಯುವ (ತಡ್ಯ ಪುಡಾಡುನು – ತಡ್ಯ ಪುಡ್ಯಾಡುನು) ಕ್ರಮ ಉಭಯ ಜಿಲ್ಲೆಗಳಲ್ಲಿದೆ ,ಆಶ್ಚರ್ಯವೆಂದರೆ ಹೆಚ್ಚಿನೆಡೆ ಮರೆತೇ ಹೋಗಿದೆ,ಮಾಹಿತಿ ಸಂಗ್ರಹಿಸುತ್ತಿದ್ದಂತೆ ‘ ಗೊತ್ತಿಲ್ಲ’ಎಂದವರು ಬಳಿಕ ಪೋನ್ ಮಾಡಿ ‘ಹಿರಿಯರು ನೆನಪಿಸಿಕೊಳ್ಳುತ್ತಾರೆ , ಈಗ ಆಚರಣೆ ಇಲ್ಲ’ ಎಂಬ ವಿವರಣೆ ನೀಡುತ್ತಾರೆ.ಅಂದರೆ ಆಚರಣೆ ಇತ್ತೆಂಬುದಕ್ಕೆ ದೃಢೀಕರಣ ದೊರೆಯುತ್ತದೆ
ಹುರುಳಿ ಹೂ , ಸೋಣೆಕೊಡಿ , ಹೊದ್ದಳು(ಅರಳು) ಕೊಡಿ , ನೀರುಕಡ್ಡಿ ಮುಂತಾದವುಗಳನ್ನುಸಿದ್ದಪಡಿಸಿಟ್ಟುಕೊಂಡು ಸ್ನಾನ ಮಾಡಿ ಮಡಿ ಉಡುವಮುತ್ತೈದೆಯರು ಹೊಸ್ತಿಲನ್ನು ತೊಳೆದು ,ರಂಗೋಲಿ ಹಾಕುತ್ತಾರೆ( ಜೇಡಿಮಣ್ಣು ಅಥವಾ ಚೋಕ್ ಪೀಸ್ ನಿಂದ)ಬಳಿಕ ಸಂಗ್ರಹಿಸಿ ಕೊಂಡಿರುವ ಹೂ , ಗಿಡಗಳಿಂದ ಅಲಂಕರಿಸಿ ಎಡಕೈಯಲ್ಲಿ ಘಂಟಾಮಣಿ ಹಿಡಿದು ಬಲಕೈಯಲ್ಲಿ ಧೂಪ ತೋರಿಸಿ ಪೂಜೆ ಮಾಡುತ್ತಾರೆ.ಕುಂದಾಪುರ ಭಾಗದಲ್ಲಿ ಹೊಸ್ತಿಲನ್ನು ಹೀಗೆ ಪೂಜಿಸುತ್ತಾರೆ ಎನ್ನುತ್ತಾರೆ ಪ್ರೊ.ಉದಯಕುಮಾರ ಶೆಟ್ಟಿ ಅವರು. ವಿಧಿ ನಿರ್ವಹಣೆಯಲ್ಲಿ ವ್ಯತ್ಯಾಸ ಇರಬಹುದು.ಇದು ಒಂದು ಪಾಠ ಮಾತ್ರ.ಉದ್ದಿನ ದೋಸೆಯನ್ನು ತಯಾರಿಸಿ ಹೊಸ್ತಿಲಿನಲ್ಲಿಟ್ಟು ಸೋಣದ ಅಜ್ಜಿ ಓಡಿಸುವ ಕ್ರಮವನ್ನು ಹೊಸ್ತಿಲನ್ನು ಪ್ರಧಾನವಾಗಿ ಬಳಸಿಕೊಂಡು ಆಚರಿಸಲಾಗುತ್ತದೆ ಮತ್ತು
‘ಕೇನೆ ಗೆಡ್ಡೆ’ಮತ್ತು ಕುಚ್ಚಲು ಅಕ್ಕಿ , ಅಮಟೆಕಾಯಿಯನ್ನು ಉಪಯೋಗಿಸಿ ಉಂಡೆಯಂತಹ ಅಡುಗೆ ಮಾಡಿ ಅಕ್ಕಿಮುಡಿಯ ಮೇಲಿಟ್ಟು ಪೂಜೆ ಮಾಡುವ ಸಂಪ್ರದಾಯವಿದೆ ಎನ್ನುತ್ತಾರೆ ಶೆಟ್ಟಿ ಅವರು.
ಸೋಣ ಸಂಕ್ರಮಣದಂದು ಮನೆಯ ಪ್ರಧಾನ ಹೊಸ್ತಿಲು(ಆನೆ ಬಾಕಿಲ್) , ಹಿಂಬದಿಯ ಬಾಗಿಲಿಗೆ (ಕುರು ಬಾಕಿಲ್) ಮಾತ್ರ ಹೊಸ್ತಿಲು ಪೂಜೆ ಮಾಡಲಾಗುತ್ತದೆ.ಹೊಸ್ತಿಲು ತೊಳೆದು ರಂಗವಲ್ಲಿ(ತಡ್ಯ ಬರೆದ್)ಇಟ್ಟು ಹೂವಿನಿಂದ ಅಲಂಕರಿಸಿ ದೀಪ ಇರಿಸಿ ನೀರು ತುಂಬಿದ ತಂಬಿಗೆ ಇಟ್ಟು ನಮಸ್ಕರಿಸುತ್ತಾರೆ. ವಿಟ್ಲ ಪರಿಸರದಲ್ಲಿ ಹೀಗೆ ” ತಡ್ಯ ಪುಡ್ಯಾಡುವೆರ್ ” ಎನ್ನುತ್ತಾರೆ ಯಶುವಿಟ್ಲ ಅವರು.
ಸುಳ್ಯ ಪರಿಸರದಲ್ಲಿ ಸೋಣ ಸಂಕ್ರಮಣ ದಂದು ಹೊಸ್ತಿಲನ್ನು ತೊಳೆದು,ಬರೆದು ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವ ನ ಹೂವುಗಳಿಂದ ಅಲಂಕರಿಸಿ ಇಕ್ಕೆಲಗಳಲ್ಲಿ ದೀಪ ಹಚ್ಚಿಟ್ಟು ‘ ತಡ್ಯ ಪುಡ್ಯಾಡುವೆರ್ “.
ಬಳಿಕ ಸೋಣ ತಿಂಗಳ ಕೊನೆಗೆ ಒಂದು ದಿನ , ಹೀಗೆ ಎರಡು ಬಾರಿ ಮಾತ್ರ ಈ ಆಚರಣೆ ನೆರವೇರುತ್ತದೆ. ಬಂಟ್ವಾಳ ಸುತ್ತುಮುತ್ತ ; ಹೊಸ್ತಿಲನ್ನು ತೊಳೆದು, ಮಳೆಗಾಲದಲ್ಲಿ ಮಾತ್ರ ಇದ್ದಕ್ಕಿದ್ದಹಾಗೆ ನೆಲದಲ್ಲಿ ಬೆಳೆದು ನಿಲ್ಲುವ ‘ಚಿಟಿಕಿ ಹೂ’ ,ನೀರ್ ಕಡ್ಡಿ ಮುಂತಾದುವುಗಳಿಂದ ಅಲಂಕರಿಸಿ ‘ ತಡ್ಯ ಪುಡ್ಯಾಡುವೆರ್’ ಎಂಬ ವಿಷಯ ತಿಳಿಸುತ್ತಾರೆ ಮಹೇಂದ್ರನಾಥ ಸಾಲೆತ್ತೂರು ಅವರು .
ಸೋಣ ಸಂಕ್ರಮಣದಂದು ಬಲಿಯೇಂದ್ರನ ತಾಯಿ ಬರುತ್ತಾಳೆ (ಸೋಣ ಸಂಕ್ರಾಂದಿಗ್ ಅಪ್ಪೆನ್ ಕಡಪುಡ್ಲ) ಎಂಬ ಬಲಿಯೇಂದ್ರ ಸಂದಿಯ ಉಲ್ಲೇಖವನ್ನು ನೆನಪಿಸಿಕೊಳ್ಳೋಣ. ಬಹುಶಃ ಬಲಿಯೇಂದ್ರನ ಆಗಮನಕ್ಕೆ ಪೂರ್ವಭಾವಿ ಯಾಗಿ ಆತನ ತಾಯಿಯ ಬರೋಣವೇ ಈ ಸಂಭ್ರಮಾಚರಣೆಯ ಉದ್ದೇಶವಿರಬಹುದು. ತಡ್ಯದಜ್ಜಿ ಎಂದರೆ ಬಲೀಂದ್ರನ ತಾಯಿ ಎಂದೂ ಹೇಳಲಾಗುತ್ತದೆ.
ಆಟಿ – ಸೋಣ ತಿಂಗಳ ಆಚರಣೆಗಳಿಗೆ ಮುಂದಿನ ಎಲ್ಲಾ ಹಬ್ಬಗಳೊಂದಿಗೆ ಸಂಬಂಧ ಇದೆ . ನಮ್ಮೆಲ್ಲ ಹಬ್ಬಗಳು ಕೃಷಿ – ಬೇಸಾಯ ಆಧರಿತ ವಾಗಿದೆ . ಕೃಷಿ ರಹಿತವಾದ ಹಬ್ಬ – ಆಚರಣೆಗಳು ಅಸಂಬದ್ದ ಎಂದನಿಸುವುದಿಲ್ಲವೇ ?
ಸೋಣದ ಜೋಗಿ , ದೀಪ
* ದೇವಾಲಯಗಳಲ್ಲಿ ಸೋಣ ತಿಂಗಳಲ್ಲಿ ನಡೆಯುವ ಆರತಿ.
* ಜೋಗಿ ಧರಿಸಿ ಮನೆಮನೆಗೆ ಬರುವ ಜಾನಪದ ನೃತ್ಯ ವಿಶೇಷ, ಇದರಿಂದ ದುಷ್ಟ ಶಕ್ತಿಗಳ ನಿವಾರಣೆ ಎಂದು ನಂಬಲಾಗುತ್ತದೆ.
* ಸೋಣ ತಿಂಗಳಲ್ಲಿ ಬೂತ ಸ್ಥಾನಗಳಲ್ಲಿ ದೀಪ ಹಚ್ಚಿಟ್ಟು ನಡೆಸುವ ಆರಾಧನೆ ‘ಸೋಣ ದೀಪ’ .
* ಸೋಣದಲ್ಲಿ ಅರಳುವ ಹೂ ‘ ಸೋಣಪೂ’.
* ಸೋಣ ನಡಾವರಿ : ಸಿಂಹಮಾಸದಲ್ಲಿ ಬೂತಗಳಿಗೆ ನಡೆಯುವ ಒಂದು ಆರಾಧನೆ.
ತಡ್ಯ
ತಡ್ಯ = ಹೊಸ್ತಿಲು
ತಡ್ಯದಜ್ಜಿ ಎಂದರೆ ಹೊಸ್ತಿಲಮ್ಮ, ಹೊಸ್ತಿಲಿನ ದೇವತೆ, ಬಲೀಂದ್ರನ ತಾಯಿ.
ತಡ್ಯದ ಕಡಿ , ತಡ್ಯ ಗ್ ದೀಪುನು , ತಡ್ಯ ಬರೆಪುನಿ ಇತ್ಯಾದಿ ಶಬ್ದಗಳು ನೆನಪಾಗುತ್ತದೆ.
ತೆನೆ ಕಟ್ಟವ ವೇಳೆ ‘ತಡ್ಯ ಪುಡಾಡುನು
ತೆನೆ ಕಟ್ಟುವ ಆಚರಣೆ ಸಂದರ್ಭದಲ್ಲಿ ಮನೆಯನ್ನು ಅಲಂಕರಿಸಿ ,ಹೊಸ್ತಿಲನ್ನು ತೊಳೆದು ‘ತಡ್ಯ ಬರೇದ್’ ಹೂವಿನಿಂದ ಶೃಂಗರಿಸಿ ತಡ್ಯ ಪೂಜೆ ಮಾಡುವ ಕ್ರಮವು ಹಲವೆಡೆ ಇದೆ. ಬೆಳೆದ ಬೆಳೆಯನ್ನು ಅಂಗಳಕ್ಕೆ ತರುವ ಮೊದಲು ನಿರ್ದಿಷ್ಟ ದಿನದಂದು ‘ತೆನೆ ಕಟ್ಟುವ’ವಾಗ ನೆರವೇರುವ ಹೊಸ್ತಿಲ ಪೂಜೆ ಅರ್ಥಪೂರ್ಣ ಅನ್ನಿಸುತ್ತದೆ. ” ಕೃಷಿ ಸಮೃದ್ದಿ”ಯನ್ನು ಮನೆ ತುಂಬಿಸಿಕೊಳ್ಳುವಾಗ ಪೂರ್ವ ಭಾವಿಯಾಗಿ ಹೊಸ್ತಿಲಲ್ಲಿ ತಲೆಬಾಗಿ ನಮಿಸಿ ಸ್ವಾಗತಿಸುವ ಸಂಪ್ರದಾಯ ಹಲವೆಡೆ ಗಮನಿಸಲಾಗಿದೆ. ಚೌತಿಯಂದು ಹೊಸ್ತಿಲನ್ನು ಪೂಜಿಸುವ ( ತಡ್ಯ ಪುಡ್ಯಾಡುನು) ರೂಢಿಯೂ ಇದೆ.
* ದೈವ ಸ್ಥಾನಗಳಲ್ಲೂ ‘ತಡ್ಯ ಬರೆಯುವ’ , ತಡ್ಯ ಪುಡ್ಯಾಡುನು ಕ್ರಮ ಇದೆ.
(ಈ ವಿವರಣೆ ಪರಿಪೂರ್ಣವಲ್ಲ ಇನ್ನಷ್ಟು ವೈವಿಧ್ಯಗಳಿವೆ . ನಾಲ್ಕು ಉದಾಹರಣೆಗಳನ್ನು ಆಧಾರವಾಗಿಟ್ಟುಕೊಂಡು ಮರೆತು ಹೋಗುತ್ತಿರುವ ಆಚರಣೆ ಯೊಂದನ್ನು ನೆನಪಿಸುವ ಪ್ರಯತ್ನವಾಗಿ ಈ ಬರೆಹ.)