ವಿದ್ಯಾರ್ಥಿಯ ಸದೃಢ ವಿಕಾಸಕ್ಕೆ ಕ್ರೀಡೆಯು ಅಗತ್ಯ ಎಂದು ಮಂಗಳೂರು-ಡೋಂಗ್ರಕೇರಿ ಕೆನರಾ ಪ್ರೌಢಶಾಲೆಯ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ ಹೇಳಿದರು.
ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಬಂಟ್ವಾಳ ತಾಲೂಕು ಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಎಸ್.ವಿ.ಎಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತನಾಡಿ, ಸೋಲು ಗೆಲುವಿನ ಮೆಟ್ಟಿಲು. ಕ್ರೀಡಾಸ್ಫೂರ್ತಿ ಗಮನದಲ್ಲಿ ಅರಿತುಕೊಂಡು ಆಡಬೇಕು ಎಂದು ಹೇಳಿದರು.
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿ, ದೇಶೀಯ ಆಟವಾದ ಕಬಡ್ಡಿ ಪುರಾತನ ಕಾಲದಿಂದ ಬಂದಂತಹ ಸಂಪ್ರದಾಯಿಕ ಮತ್ತು ಜನಪ್ರಿಯ ಕ್ರೀಡೆ. ಈ ಆಟ ವೀಕ್ಷಕನ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.
ತಾಲೂಕು ಮಟ್ಟದ ಪ.ಪೂ.ಕಾಲೇಜು ಕ್ರೀಡಾ ಸಂಯೋಜಕ ಮತ್ತು ವಿಠ್ಠಲ ಪ.ಪೂ.ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಬಾಲಕೃಷ್ಣ ಗೌಡ, ಅರ್ಥಶಾಸ್ತ್ರ ಉಪನ್ಯಾಸಕ ಹಾಗೂ ಕ್ರೀಡಾ ಸಲಹೆಗಾರ ಪ್ರದೀಪ್ ಪೂಜಾರಿ, ಕನ್ನಡ ಉಪನ್ಯಾಸಕ ಚೇತನ್ ಎಂ., ಗಣಿತಶಾಸ್ತ್ರ ಉಪನ್ಯಾಸಕಿ ಕವಿತಾ, ರಾಜ್ಯಶಾಸ್ತ್ರ ಉಪನ್ಯಾಸಕಿ ದೀಪಿಕಾಪ್ರಿಯಾ, ಹಿಂದಿ ಉಪನ್ಯಾಸಕಿ ದಿವ್ಯಲಕ್ಷ್ಮೀ, ಕಬಡ್ಡಿ ತರಬೇತುದಾರ ತಾರಾನಾಥ ಜಿ.ಎಸ್. ಮತ್ತಿತರರು ಸಹಕರಿಸಿದರು.
ಬಂಟ್ವಾಳ ತಾಲೂಕಿನ ವಿವಿಧ ಪ.ಪೂ. ಕಾಲೇಜುಗಳ ಹುಡುಗರ ೨೦ ತಂಡ ಮತ್ತು ಹುಡುಗಿಯರ ೦೪ ತಂಡಗಳು ತಾಲೂಕುಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದವು.
ವಿದ್ಯಾರ್ಥಿನಿ ಶ್ವೇತಾ ಕೆ.ಪಿ ಮತ್ತು ಮಾನಸ ಪ್ರಾರ್ಥಿಸಿದರು. ಎಸ್.ವಿ.ಎಸ್ ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಅಪರ್ಣ ಕಾರ್‍ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಲೆಪ್ಟಿನೆಂಟ್ ಸುಂದರ್ ವಂದಿಸಿದರು.