ಯೋಗದಿಂದ ಬೌದ್ಧಿಕ, ಆಧ್ಯಾತ್ಮಿಕ ವಿಕಾಸವಾಗುತ್ತದೆ ಎಂದು ಉದ್ಯಮಿ ಶ್ರೀಕರ ಪ್ರಭು ಹೇಳಿದರು. ಕಲ್ಲಡ್ಕದಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆಯ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ಅವರು ಯೋಗವನ್ನು ಕೇವಲ ಸ್ಪರ್ಧೆಗಾಗಿ ಉಪಯೋಗಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಶುಭ ಹಾರೈಸಿದರು. ನ್ಯಾಯವಾದಿ ಆಶಾ ಪ್ರಸಾದ್ ರೈ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ ಸಾಲ್ಯಾನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಸನ್ನ ಬಿ.ಕೆ, ಪದವಿ ಕಾಲೇಜು ಪ್ರಾಚಾರ್ಯ ಕೃಷ್ಣಪ್ರಸಾದ, ಪದವಿ ದೈಹಿಕ ಶಿಕ್ಷಣ ನಿರ್ದೇಶಕ ಅರವಿಂದ ಪ್ರಸಾದ್ ಉಪಸ್ಥಿತರಿದ್ದರು. ಯೋಗಾಸನ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದಿರೆ, ದ್ವಿತೀಯ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಕೊಣಾಜೆ, ತೃತೀಯ ಧವಳ ಕಾಲೇಜು ಮೂಡಬಿದಿರೆ ಹಾಗೂ ಚತುರ್ಥ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ದ್ವಿತೀಯ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಕೊಣಾಜೆ, ತೃತೀಯ ಎಸ್.ಆರ್.ಎಮ್.ಎನ್. ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು, ಚತುರ್ಥ ಸಂತ ಆಗ್ನೇಸ್ ಕಾಲೇಜು ಮಂಗಳೂರು ಪಡೆದುಕೊಂಡಿತು. ಕಾರ್ಯಕ್ರಮವನ್ನು ಉಪನ್ಯಾಸಕಿ ಸುಕನ್ಯಾ ನಿರೂಪಿಸಿ, ಗುರುಪ್ರಸಾದ್ ಸ್ವಾಗತಿಸಿ, ಹರೀಶ್ ವಂದಿಸಿದರು.