ಬಿಜೆಪಿ ಸೆ.7ರಂದು ಆಯೋಜಿಸಿರುವ ಮಂಗಳೂರು ಚಲೋ ಗೆ ಪೊಲೀಸರು ನಿರ್ಬಂಧಕಾಜ್ಞೆ ಮೂಲಕ ಕಡಿವಾಣ ಹಾಕುವ ಕೆಲಸ ಆರಂಭಿಸಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿ ಆಗಮಿಸುವ ವಾಹನಗಳ ಮೇಲೆ ಕಣ್ಣಿಟ್ಟಿದ್ದರೆ, ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ವಾಹನಗಳ ರ್ಯಾಲಿ, ಮೆರವಣಿಗೆ, ಪಾದಯಾತ್ರೆ, ಜಾಥಾ ನಡೆಸುವುದನ್ನು ನಿಷೇಧಿಸಿ ಮಂಗಳೂರು ಕಮೀಷನರ್ ಟಿ.ಆರ್. ಸುರೇಶ್ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35(3)ರನ್ವಯ ಆದೇಶ ಹೊರಡಿಸಿದ್ದಾರೆ.
ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಸೆಪ್ಟೆಂಬರ್ 6 ಬೆಳಿಗ್ಗೆ 6 ಗಂಟೆಯಿಂದ ಸೆ. 8 ಬೆಳಿಗ್ಗೆ 6 ಗಂಟೆಯವರೆಗೆ ಕನಾ೯ಟಕ ಪೊಲೀಸ್ ಕಾಯ್ದೆ ಕಲಂ 35(3) ರ ಅನ್ವಯ ಯಾವುದೇ ರೀತಿಯ ಬೈಕ್ ರ‌್ಯಾಲಿ ನಡೆಸುವುದನ್ನು ಮತ್ತು ಯಾವುದೇ ಸಂಘಟನೆ/ ಕಾಯ೯ಕತ೯ರು ಬೈಕ್ ಗಳಲ್ಲಿ ಅಥವಾ ಬೈಕ್ ರ‌್ಯಾಲಿ ಮುಖಾಂತರ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸದಂತೆ ನಿಬ೯ಂಧಕಾಜ್ಞೆಯನ್ನು ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.
ಈತನ್ಮಧ್ಯೆ ಬಿಜೆಪಿ ಮಂಗಳೂರು ಚಲೋ ನಡೆಸಿಯೇ ಸಿದ್ಧ ಎಂದು ಹೇಳಿದ್ದು, ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದಿದೆ. ಸೆ.5ರಿಂದ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮೈಸೂರಿನಿಂದ ಬೈಕುಗಳಲ್ಲಿ ಕಾರ್ಯಕರ್ತರು ಆಗಮಿಸಲಿರುವರು ಎಂದು ಬಿಜೆಪಿ ನಾನಾ ಕಡೆ ಸುದ್ದಿಗೋಷ್ಠಿಗಳನ್ನು ಮಾಡಿ ಹೇಳಿಕೆ ನೀಡಿತ್ತು. ಆದರೆ ಆರಂಭದಿಂದಲೇ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ರ್ಯಾಲಿಯನ್ನು ಹತ್ತಿಕ್ಕಲು ಸರಕಾರ ಕಾರ್ಯಪ್ರವೃತ್ತವಾಗಿದ್ದು ರಾಜಕೀಯ ಸಮರಕ್ಕೆ ಕಾರಣವಾಗಿದೆ.