ಅನಧಿಕೃತ ಕಟ್ಟಡಗಳು ಯಾವುದೇ ಇದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಹೇಳಿದ್ದಾರೆ.
ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯರು ಬಂಟ್ವಾಳ ಕಸ್ಬಾದ ಕಟ್ಟಡವೊಂದರ ರಚನೆ ನಿಯಮ ಬಾಹಿರವಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಪಟ್ಟು ಹಿಡಿದರು. ವಿಪಕ್ಷ ನಾಯಕ ಎ.ಗೋವಿಂದ ಪ್ರಭು ಮತ್ತು ಬಿ.ದೇವದಾಸ ಶೆಟ್ಟಿ ವಿಷಯ ಪ್ರಸ್ತಾಪಿಸಿ, ಈ ಕುರಿತು ಲಿಖಿತ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು. ಸದಸ್ಯ ಮುನೀಶ್ ಅಲಿ ಅವರು ಮಧ್ಯಪ್ರವೇಶಿಸಿ, ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಅನಧಿಕೃತ ಕಟ್ಟಡಗಳ ಬಗ್ಗೆ ಮಾತನಾಡುವವರು ಸತ್ಯ ಹರಿಶ್ಚಂದ್ರರೇನಲ್ಲ ಎಂದು ಟೀಕಿಸಿದರೆ, ಪ್ರತೀ ಸಭೆಯಲ್ಲಿ ಇದೇ ವಿಚಾರ ಚರ್ಚಿಸುವುದು ಸೂಕ್ತವಲ್ಲ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಇದಕ್ಕೆ ಧ್ವನಿಗೂಡಿಸಿದರು. ಈ ಹಂತದಲ್ಲಿ ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರಿಗೆ ಮಾತಿನ ಚಕಮಕಿ ನಡೆಯಿತು. ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮುಖ್ಯಾಧಿಕಾರಿ ಪ್ರಕಟಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.
ತ್ಯಾಜ್ಯ ವ್ಯಾಜ್ಯ:
ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯವಿಲೇವಾರಿಗೆ ಸಂಬಂಧಿಸಿ ಈಗಾಗಲೇ ಮೂರು ಬಾರಿ ಟೆಂಡರ್ ಕರೆಯಲಾಗಿದ್ದರೂ ಗುತ್ತಿಗೆ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಹಿಂದಿನ ಗುತ್ತಿಗೆದಾರರನ್ನೇ ಮುಂದುವರಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ಈ ಕುರಿತು ಮತ್ತೆ ಚರ್ಚೆಗಳು ನಡೆದವು. ಈಗಾಗಲೇ ಕಂಚಿನಡ್ಕ ಪದವಿಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದ್ದು ಅವರು ಈ ವಿಚಾರದಲ್ಲಿ ಪುರಸಭೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಘಟಕದ ಮುಂದಿನ ಪ್ರಕ್ರಿಯೆಗೆ ತಕ್ಷಣ ಮುಂದಾಗಬೇಕು ಎಂದು ದೇವದಾಸ ಶೆಟ್ಟಿ ಗಮನ ಸೆಳೆದಾಗ ಈ ವಿಚಾರದಲ್ಲಿ ಯೋಜನಾ ನಿರ್ದೇಶಕರು, ತಹಶೀಲ್ದಾರ್ ಜೊತೆಗೂಡಿ ವಿಶೇಷ ಸಭೆ ನಡೆಸುವ ಕುರಿತು ಮುಖ್ಯಾಧಿಕಾರಿ ತಿಳಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಬಯಲು ಮುಕ್ತ ಶೌಚಾಲಯ ಘೋಷಣೆಗೆ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡುವಂತೆ ಸದಸ್ಯ ವಾಸು ಪೂಜಾರಿ ಅವರು ಒತ್ತಾಯಿಸಿದರು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಜಗದೀಶ್ ಕುಂದರ್, ಗಂಗಾಧರ್, ವಸಂತಿ ಚಂದಪ್ಪ, ಬಿ. ಮೋಹನ್, ಇಕ್ಬಾಲ್ ಗೂಡಿನಬಳಿ, ಚಂಚಲಾಕ್ಷಿ ಚರ್ಚೆಯಲ್ಲಿ ಪಾಲ್ಗೊಂಡರು.