ಅನಿಕತೆ

ಗಡಿಯಾರ ಮತ್ತು 90 ಡಿಗ್ರಿ..

  • ಅನಿತಾ ನರೇಶ್ ಮಂಚಿ
  • ಅಂಕಣ: ಅನಿಕತೆ

www.bantwalnews.com

ಎಲ್ಲಿದ್ದೀಯಾ? ಕೇಳಿತಾ? ಬಾ ಇಲ್ಲಿ ಒಮ್ಮೆ.. ಸ್ವಲ್ಪ ಹೆಲ್ಪ್ ಮಾಡು ನೋಡುವಾ..

ಅದೆಂತದದು ? ಏನಾಗ್ಬೇಕೊ ಹೇಳಿ.. ಭಾರಿ ಹೆಲ್ಪ್ ಅಂತೆಲ್ಲ ಮಸ್ಕಾ ಹೊಡೆಯುವುದು ಯಾಕೆ?

ಏನಿಲ್ಲ ಈ ಗಡಿಯಾರ ಗೋಡೆಗೆ ನೇತು ಹಾಕ್ಬೇಕು.ಸ್ವಲ್ಪ ಸರ್ತ ಉಂಟಾ ನೋಡಿ ಹೇಳ್ಬೇಕು ಆಯ್ತಾ.. ಒಟ್ಟಿಗೆ ಸ್ಟೂಲ್ ಸಹ ಗಟ್ಟಿ ಹಿಡ್ಕೊ.. ಇದರ ಮೇಲೆ ಹತ್ತಿಯೇ ಇಡ್ಬೇಕಷ್ಟೆ.ಆ ಆಣಿ ಎತ್ತರದಲ್ಲಿ ಉಂಟಲ್ಲ.

ಸರಿ ಆಯ್ತು ಹಿಡ್ಕೊಳ್ತೇನೆ.

ನಾನು ಸ್ಟೂಲ್ ಗೆ ಹತ್ತಿದ ಮೇಲೆ ಆ ಗಡಿಯಾರ ಒಮ್ಮೆ ಎತ್ತಿ ಕೊಡ್ಬೇಕು ಆಯ್ತಾ..

ಹುಂ ಆಯ್ತು.. ಒಮ್ಮೆ ಸ್ಟೂಲ್ ಮೇಲೆ ಹತ್ತಿ.. ಹಿಡ್ಕೊಂಡಿದ್ದೇನೆ.

ಸರಿ ಗಟ್ಟಿ ಹಿಡ್ಕೋ .. ಅದರ ಕಾಲು ಸರಿ ಇಲ್ಲ. ಸ್ವಲ್ಪ ವಾಲಾಡ್ತದೆ.

ಆಯ್ತು.. ಮಾರಾಯ್ರೆ..

ಹುಂ ಈಗ ಆ ಗಡಿಯಾರ ಕೊಡು.

ಗಟ್ಟಿ ಸ್ವಲ್ಪ ಗೋಡೆ ಹಿಡ್ಕೊಂಡು ನಿಂತ್ಕೊಳ್ಳಿ. ಅಲ್ಲಾಡಬೇಡಿ. ಗಡಿಯಾರ ಕೆಳಗೆ ಇಟ್ಟಿದೆ ಅಲ್ವಾ.. ಬಗ್ಗಿ ತೆಗೆದುಕೊಡ್ಬೇಕಷ್ಟೆ..

ಹಾಂ.. ಇಕೊಳ್ಳಿ..

ಪುನಃ ಸ್ಟೂಲ್ ಗಟ್ಟಿ ಹಿಡ್ಕೋ ಆಯ್ತಾ.. ಸ್ವಲ್ಪ ಮೇಲೆ ನೋಡು. ಗಡಿಯಾರ ಸರ್ತ ನಿಂತಿತಾ..

 ಎಷ್ಟು ಸರ್ತಿ ಹೇಳಿದ್ದನ್ನೇ ಹೇಳುವುದು ನಂಗೆಂತ ಕಿವಿ ಮಂದವಾ.. ಗಟ್ಟಿ ಹಿಡ್ಕೊಂಡೇ ಇದ್ದೇನೆ.. ಮತ್ತೆ ಗಡಿಯಾರ ಸರ್ತ ಇಲ್ಲದೆ ಏನು? ಸರೀ ನಡೀತಾ ಉಂಟು..

ಹಾಗಲ್ಲ ಮಾರಾಯ್ತಿ. 12 ಅಂತ ಬರ್ದದ್ದು ನೆಲಕ್ಕೆ 90 ಡಿಗ್ರಿಯಲ್ಲಿ ನಿಲ್ಬೇಕು. ಹಾಗೆ ಉಂಟಾ ನೋಡು.

ನೀವು 90 ಡಿಗ್ರಿ ಅಂದ್ರೆ ನಾನು ಹೇಗೆ ಕಣ್ಣಂದಾಜಿನಲ್ಲಿ ಹೇಳುವುದು.. ಅಲ್ಲಿ ಮಗನ ಕೋನಮಾಪಕ ಉಂಟು ತರ್ಬೇಕಾ..

ಬೇಡ.. ಹಾಗೇ ಹೇಳು.. ಅಷ್ಟು ಅಂದಾಜು ಆದದ್ದು ಸಾಕು..

ನಿಲ್ಲಿ ಮಾರಾಯ್ರೆ .. ಹಾಗೆಂತ .. ಒಂದು ನಿಮಿಷ ಇಲ್ಲಿಯೇ ಉಂಟು ತಂದು ಬಿಡ್ತೇನೆ. ಇಟ್ಟ ಮೇಲೆ ಸರಿ ಆಗ್ಬೇಕು. ಇನ್ನೊಮ್ಮೆ ಯಾರು ಹತ್ತುವುದು ಅಲ್ಲಿಗೆ.

ಬೇಡ.. ಸ್ಟೂಲ್ ಸರಿ ಇಲ್ಲ ಮಾರಾಯ್ತಿ. ಸಾಕದು..

ಆಯ್ತಪ್ಪಾ.. ಈಗ ಬಂದೆ. ನಿಂತುಕೊಳ್ಳಿ. ನೋಡುವಾ..

******

ದಡ್.. ಎಂಬ ಶಬ್ಧ ಕೇಳಿಸಿತು.

ಮಗನ ಬ್ಯಾಗಲ್ಲಿ ಸಿಕ್ಕಿದ ಕೋನಮಾಪಕ ಹಿಡಿದು ಬಂದವಳಿಗೆ ಗಂಡ ನೆಲದ ಮೇಲೆ 180 ಡಿಗ್ರಿಯಲ್ಲಿ ಬಿದ್ದಿದ್ದು ಕಾಣಿಸಿತು. ಕಣ್ಣೆತ್ತಿ ಗಡಿಯಾರ ನೋಡಿದಳು. ಗಡಿಯಾರದ ಮುಳ್ಳು 12.30 ರಲ್ಲಿ ಸರಿಯಾಗಿ  ನೆಲಕ್ಕೆ ಲಂಭಕೋನದಲ್ಲಿತ್ತು.

******

Anitha Naresh Manchi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Share
Published by
Anitha Naresh Manchi

Recent Posts