ಗುರುವಾರ ಗೌರಿಪೂಜೆಯಾದರೆ, ಶುಕ್ರವಾರ ಗಣಪನ ಹಬ್ಬ. ಬೆಳಗ್ಗಿನಿಂದಲೇ ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಆರಂಭಗೊಂಡರೆ, ಮಾರುಕಟ್ಟೆಯಲ್ಲಿ ಕಬ್ಬು ಸಹಿತ ನಾನಾ ಪೂಜೆಯ ವಸ್ತುಗಳಿಗೆ ಬೇಡಿಕೆ ಇದ್ದವು.
ಬಿ.ಸಿ.ರೋಡಿನಲ್ಲಿ ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ರಕ್ತೇಶ್ವರಿ ದೇವಿ ದೇವಸ್ಥಾನ ವಠಾರದಲ್ಲಿ 38ನೇ ವರ್ಷದ ಗಣೇಶೋತ್ಸವಕ್ಕೆ ಊರ, ಪರವೂರ ಭಕ್ತರು ಆಗಮಿಸಿ ಸಂಭ್ರಮಿಸಿದರೆ, ಬಂಟ್ವಾಳ ಜಕ್ರಿಬೆಟ್ಟಿನಲ್ಲಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಸಾರ್ವಜನಿಕ ಗಣೇಶೋತ್ಸವವೂ ಆರಂಭಗೊಂಡವು.
ಸಜೀಪ ಮೂನ್ನೂರು ಯುವಕ ಸಂಘದ ವತಿಯಿಂದ 44ನೇ ವರ್ಷದ ಗಣೇಶೋತ್ಸವ, ನರಿಕೊಂಬು ನವಜೀವನ ವ್ಯಾಯಾಮ ಶಾಲೆ ವತಿಯಿಂದ ಸತ್ಯದೇವತಾ ಮಂದಿರದಲ್ಲಿ 35ನೇ ವರ್ಷದ ಗಣೇಶೋತ್ಸವ, ಶಂಭೂರು ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ 4ನೇ ವರ್ಷದ ಗಣೇಶೋತ್ಸವ, ಯುವ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಯುವ ಸಂಗಮ ಸಮುದಾಯ ಭವನದಲ್ಲಿ 24ನೇ ವರ್ಷದ ಗಣೇಶೋತ್ಸವ, ಬಿ.ಸಿ.ರೋಡಿನಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿಸಿರೋಡು ಇದರ ಆಶ್ರಯದಲ್ಲಿ ಬಿಸಿರೋಡು ರಕ್ತೇಶ್ವರೀ ದೇವಿ ದೇಸ್ಥಾನದ ವಠಾರದಲ್ಲಿ 38ನೇ ವರ್ಷದ ಗಣೇಶೋತ್ಸವ ಹಾಗೂ ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ 14ನೇ ವರ್ಷದ ಗಣೇಶೋತ್ಸವ, ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿಯ ಗಣೇಶೋತ್ಸವಕ್ಕೆ ಭಕ್ತರು ಆಗಮಿಸಿದರು.