ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಇಲ್ಲಿಂದ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಹೈಕೋರ್ಟ್ ನಿರ್ದೇಶನದಂತೆ ಘಟಕದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಹೇಳಿದ್ದಾರೆ.
ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಭೇಟಿ ನೀಡಿದ ಅವರು, ಘಟಕದ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಘಟಕದ ಮುಂದುವರಿದ ಕಾಮಗಾರಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಒಟ್ಟು ಸೇರಿಕೊಂಡು ಚರ್ಚೆ ನಡೆಸಿ ಕಾಮಗಾರಿಗೆ ಸಂಬಂಧಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಇತ್ಯರ್ಥ ಪಡಿಸಲು ಸಾಧ್ಯವಾಗದೆ ಇರುವ ಸಮಸ್ಯೆಗಳಿದ್ದರೆ ತಕ್ಷಣ ತನ್ನ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸಜೀಪ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ಘನ ತ್ಯಾಜ್ಯ ಘಟಕದ ಕಾಮಗಾರಿ ಆರಂಭಿಸುವ ಮೊದಲು ಘಟಕದ ಸುತ್ತ ಮುತ್ತಲಿರುವ ೧೪೦ರಷ್ಟು ಮನೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮನೆಗಳನ್ನು ಸ್ಥಳಾಂತರ ಮಾಡಿದ ಪ್ರದೇಶದಲ್ಲೇ ಶಾಲೆ, ಅಂಗನವಾಡಿ, ಮದರಸವನ್ನು ನಿರ್ಮಾಣ ಮಾಡಬೇಕು. ಘಟಕದ ನಿರ್ವಹಣೆಯು ಜಿಲ್ಲಾಧಿಕಾರಿಯ ಉಸ್ತುವಾರಿಯಲ್ಲಿರಬೇಕು. ಪರಿಸರ ಇಲಾಖೆಯ ನಿಯಮಗಳು ಮತ್ತು ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಏನು ಹೇಳಿದರು?
ಜಿಪಂ ಮಾಜಿ ಸದಸ್ಯ ಎಸ್.ಅಬ್ಬಾಸ್, ನಗರ ಕೋಶಾ ಯೋಜನಾ ನಿರ್ದೇಶಕ ಪ್ರಸನ್ನ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯಾಧಿಕಾರಿ ರತ್ನ ಪ್ರಸಾದ್, ಪಿಡಿಒ ವೀರಪ್ಪ ಗೌಡ ಉಪಸ್ಥಿತರಿದ್ದರು.