ಕವರ್ ಸ್ಟೋರಿ

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ

ಡೊಕ್ಲಮ್ ಸದ್ದು, ಚೀನಾ ದರ್ದು: ಭಾರತ-ಚೀನ ಪ್ರಚಲಿತ ಕಥನ

ಕವರ್ ಸ್ಟೋರಿ: ಶ್ರೇಯಾಂಕ ಎಸ್. ರಾನಡೆ

ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು. ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ-ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್”. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ ದೇಶಗಳು. ಅದೇ ಹೊತ್ತಿಗೆ ಇಬ್ಬರೂ ನ್ಯೂಕ್ಲಿಯರ್ ಶಸ್ತ್ರಗಳ “ಮೊದಲ ಬಳಕೆ ಇಲ್ಲ”(ನೋ ಫಸ್ಟ್ ಯೂಸ್) ಎಂಬ ತತ್ವ ಪಾಲಿಸುವ ಜವಾಬ್ದಾರಿ ಹೊತ್ತಿವೆ. ಅಂದಿಗೆ “ಹುಲ್ಲುಕಡ್ಡಿಯೂ ಬೆಳೆಯದ ಬರಡು ಭೂಮಿ”(1962, ಅಂದಿನ ಪ್ರಧಾನ ಮಂತ್ರಿ, ನೆಹರೂ ಜವಾಹರ್ ಲಾಲ್ ಮಾತುಗಳು, ಚೀನಾದ ಅತಿಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿನ ಹೇಳಿಕೆ) ಎಂದು ನಿರ್ಲಕ್ಷಿಸಲಾಗಿದ್ದ, ಆದರೆ ಇಂದಿಗೆ ಚೀನಾದ ಸಾರ್ವಭೌಮತೆಯ ಪ್ರತಿಷ್ಟೆ ಹಾಗೂ ಭಾರತದ ಆಂತರಿಕ ಭದ್ರತೆಯ ಅನಿವಾರ್ಯತೆಯ ದೃಷ್ಟಿಯಿಂದ ಅಸ್ಪಷ್ಟ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳು ಈವರೆಗಿನ ಭಾರತ-ಚೀನಾ ಗಡಿ ವಿವಾದದ ಜ್ವಲಂತತೆಗೆ ಮೂಲ. ಅದೀಗ “ಡೊಕ್ಲಮ್” ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ಸರ್ವಋತು ಸಮಸ್ಯೆ 52 ದಿನಗಳ ಬಿಗಿ ಸಂಘರ್ಷಾತ್ಮಕ ವಾತಾವರಣದಿಂದ ಬದಲಾವಣೆಯ ಮುಂದಿನ ದಾರಿಕಾಣದೆ ವಿಚಲಿತವಾಗಿದೆ.

courtesy: google

  • ವಿಸ್ತಾರವಾದಿ ಚೀನಾದ ನಂಬಲರ್ಹವಲ್ಲದ(ನಯವಂಚಕ) ಕಥನ:

ನವೆಂಬರ್ 6, 2016: ಭಾರತೀಯ ಸೇನೆ ಪೂರ್ವ ಲಡಾಕ್‍ನ ಡೆಮ್ಚೊಕ್ ಪ್ರದೇಶದ ಹಳ್ಳಿಗಳ ಜನರಿಗಾಗಿ ನೀರಾವರಿ ಪೈಪ್‍ಲೈನ್‍ಗಳನ್ನು ಯಶಸ್ವಿಯಾಗಿ ಅಳವಡಿಸಿತ್ತು. ಈ ಯಶಸ್ಸು ಭಾರತಕ್ಕೆ ಮುಖ್ಯವಾಗಿತ್ತು. ಯಾಕೆಂದರೆ 2014ರ ನಂತರ ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಎರಡನೇ ಬಾರಿಗೆ ಭಾರತದ ಭೂಪ್ರದೇಶದೊಳಗೆ ದೀರ್ಘವಾಗಿ ಪ್ರವೇಶಿಸಿ ನಮ್ಮದೇ ನೀರಾವರಿ ಯೋಜನೆಯನ್ನು ತೀವ್ರವಾಗಿ ಪ್ರತಿಭಟಿಸಿತ್ತು. ಇದಾಗಿ 17 ದಿನಗಳ ಮುಂಚೆ ಅಂದರೆ ಅಕ್ಟೋಬರ್ 19, 2016ರಂದು ಶಕ್ತಿಶಾಲಿ ಏಷ್ಯಾವನ್ನು ಕಟ್ಟುವ ಉದ್ದೇಶದೊಂದಿಗೆ ಮೊತ್ತ ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಒಟ್ಟಾಗಿ ಜಮ್ಮು ಕಾಶ್ಮೀರದಲ್ಲಿ ಕವಾಯತು – “ಲಡಾಕ್ ಡ್ರಿಲ್” ನಡೆಸಿದ್ದವು.

ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಭಾರತ ಮತ್ತು ಚೀನಾದ ಸಂಬಂಧ ಸ್ನೇಹ-ಜಗಳಗಳ ಸಂಬಂಧ. ಅದನ್ನೇ ಇತ್ತೀಚೆಗೆ ದಲೈ ಲಾಮಾ, ನೆಹರೂ ಕಾಲದ 1950ರ ದಶಕದ ಪ್ರಸಿದ್ಧ ಉಕ್ತಿ “ಹಿಂದಿ-ಚೀನೀ ಭಾಯಿ ಭಾಯಿ”ಯನ್ನು ಪುನರುಚ್ಛರಿಸಿ, ಈ ದೇಶಗಳ ನಡುವೆ ಯುದ್ಧವಾಗುವುದಿಲ್ಲ ಎಂದು ಹೇಳಿದ್ದು. 1962ರ ನೇರ ಯುದ್ಧವನ್ನು ಹೊರತುಪಡಿಸಿ 1965ರಲ್ಲೊಮ್ಮೆ ಬಿಟ್ಟರೆ ಈ ವರೆಗೂ ಗಡಿ ವಿಚಾರವಾಗಿ ಭಾರತ ಮತ್ತು ಚೀನಾದ ನಡುವೆ ಒಂದೇ ಒಂದು ಗುಂಡುಹಾರಿಲ್ಲವೆಂಬುದೇ ಇದಕ್ಕೆ ಸಾಕ್ಷಿ. ಚೀನಾ ತನ್ನ ನೆರೆಹೊರೆಯ ಯಾರನ್ನೂ ನೆಮ್ಮದಿಯಿಂದರಲು ಬಿಡುವುದಿಲ್ಲ. ತನ್ನ ಸುತ್ತಮುತ್ತಲಿನ ಪ್ರತಿಯೊಬ್ಬರೂ ಚೀನಾ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕೆಂಬುದು ಅದರ ಮಹತ್ವಾಕಾಂಕ್ಷೆ. ಬುದ್ಧರ ಟಿಬೆಟ್ ಮೇಲೆ ಸಾರ್ವಭೌಮತ್ವ ಸಾಧಿಸಿದಂತೆ ಜಪಾನ್, ತೈವಾನ್, ತೈಪೆ, ವಿಯೆಟ್ನಾಂ, ಭೂತಾನ್, ಭಾರತದ ಪ್ರದೇಶಗಳ ಮೇಲೆ.. ಅಷ್ಟೇ ಏಕೆ ಯಾವುದೇ ಕಾರಣ ಸಿಗದಿದ್ದಾಗ ಚೀನಾವನ್ನು ಆಳಿದ್ದ ಚೆಂಗೀಸ್‍ಖಾನ್ ಅಲ್ಲಿಯವನೆಂಬ ಕಾರಣದಿಂದ ಮಂಗೋಲಿಯಾದಂತಹ ಬಡ ದೇಶವನ್ನೂ ಬಿಡುತ್ತಿಲ್ಲ ಈ ಚೀನಾ.
ಅನಘ್ರ್ಯ ಮಿಲಿಟರಿ ಶಕ್ತಿ ಹಾಗೂ ಮಾರುಕಟ್ಟೆಗಳನ್ನು ನಾಶಗೊಳಿಸುವ ಆರ್ಥಿಕ ಏಕಸ್ವಾಮ್ಯದ ಮೂಲಕ ಸಾರ್ವಭೌಮತೆಯನ್ನೇ ತನ್ನ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳತ್ತಲೂ ಸ್ಥಾಪಿಸಿ, ತನ್ನ ದೇಶದ ಭೂಭಾಗವನ್ನು ಇತರೆಡೆಗೂ ವಿಸ್ತರಿಸಿ, ವಿಶಾಲ ಚೀನಾ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ತೀವ್ರಗಾಮಿ, ವೈಪರಿತ್ಯದ ಹಂಬಲದಿಂದ ಕೂಡಿರುವ ಚೀನಾದ ನಡೆಗಳು ರಾಜಕಾರಣ ಹಾಗೂ ಮಹತ್ವಾಕಾಂಕ್ಷೆ 1930ರ ದಶಕದ ನಾಜಿ ಜರ್ಮನಿ ಹಾಗೂ ಜಪಾನ್‍ಗಳ ಸರ್ವಾಧಿಕಾರಿ, ಸಾಮ್ರಾಜ್ಯಶಾಹಿ ನಡೆಗಳಷ್ಟೇ ಅಪಾಯಕಾರಿ.
ಭಾರತದ ಉತ್ತರಕ್ಕೆ ಹಿಮಾಲಯದ ಆ ಭಾಗದಲ್ಲಿರುವ ಚೀನಾ ಶಾಂತವಾಗಿ ಕಾದುಕುಳಿತ ಡ್ರ್ಯಾಗನ್. ಈ ಸತ್ಯ ವಿಶ್ವದ ಪ್ರತಿಯೊಬ್ಬರಿಗೂ ಗೊತ್ತಿದೆ. ಕೆಲವರಿಗೆ ಇದು ಗೊತ್ತಿದ್ದರೂ ಒಪ್ಪುವುದು ಕಷ್ಟ. ಅಂಥವರಿಗೆಲ್ಲಾ ಚೀನಾ ಸಾಕುತಂದೆ. ಪಾರಂಪರಿಕವಾಗಿದ್ದಂತೆ ಈಗ  ಯಾವುದೇ ದೇಶವನ್ನು ಗೆಲ್ಲುವುದಕ್ಕೆ ಯುದ್ಧವನ್ನೇ ಮಾಡಬೇಕಿಲ್ಲ. ಆರ್ಥಿಕತೆ, ಬೌದ್ಧಿಕ ನಿಗ್ರಹಣ, ಮಾಹಿತಿ ಹಾಗೂ ಸಂಪರ್ಕ ಸೇವೆ, ನದಿಗಳ ನಿಯಂತ್ರಣದ ಮೂಲಕ, ತಂತ್ರಜ್ಞಾನದ ಏಕಸ್ವಾಮ್ಯತೆ, ವ್ಯಾಪಾರ-ವಹಿವಾಟಿನ ಮೂಲಕ (ಕಳಪೆಗುಣಮಟ್ಟದ ಅಗ್ಗದ ಪದಾರ್ಥಗಳ ರಫ್ತು), ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿ ಸ್ಥಾನದಿಂದ ದಬ್ಬಾಳಿಕೆ ನಡೆಸುವ ಮೂಲಕ(ಪರಮಾಣು ಪೂರೈಕೆದಾರರ ಗುಂಪು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸೇರಬಾರದೆಂದು ನಡೆಸುವ ಹುನ್ನಾರ), ಇನ್ನೂ ಕೆಳಗಿಳಿದು, ಭಾರತದೊಂದಿಗೆ ಕಳ್ಳಯುದ್ಧದಲ್ಲಿ ತೊಡಗಿರುವ ಪಾಕಿಸ್ತಾನದ ಕ್ರಮಗಳನ್ನು ಪೋಷಿಸುತ್ತಾ ಭಾರತದ ವಿರುದ್ಧ ಅದು ನಡೆಸುತ್ತಿರುವ ವಿನಾಶಕಾರಿ ಯುದ್ಧಕ್ಕೆ ಪರೋಕ್ಷ ಬೆಂಬಲ ನೀಡುವ ಚಾಣಾಕ್ಯನ “ಶತ್ರುವಿನ ಶತ್ರು ಮಿತ್ರ” ಎಂಬ ನೀತಿ… ಚೀನಾ-ಪಾಕಿಸ್ತಾನ ಕಾರಿಡಾರ್, ಒಂದು ರಸ್ತೆ ಒಂದು ಬೆಲ್ಟ್, ಮಿಲಿಟರಿ ಹಣಕಾಸು ನೆರವು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಇತ್ಯಾದಿ ನೆರವು ನೀಡುವ ಮುಖವಾಡದ ಮೂಲಕ ಚೀನಾ ಪಾಕಿಸ್ತಾನದ ಪರಮಮಿತ್ರವಾಗಿದೆ. ಒಮ್ಮೆ ಚರಿತ್ರೆಯ ಪುಟವನ್ನು ತೆಗೆದು ನೋಡಿ. ಕಾರ್ಗಿಲ್ ಕದನ ಆರಂಭವಾಗುವ ಹೊತ್ತಿಗೆ ಪಾಕಿಸ್ತಾನದ ಜನರಲ್ ಪರ್ವೆಜ್ ಮುಷರಫ್ ಎಲ್ಲಿದ್ದರು? ಚೀನಾದಲ್ಲಿ!
ಚೀನಾದ ಈ ಗತಿಶೀಲ ನಡೆಗಳನೆಲ್ಲ ವಿರೋಧಿಸುತ್ತಿರುವ ಏಕೈಕ ದೇಶ ಭಾರತ. ಒಂದು ರಸ್ತೆ ಒಂದು ಬೆಲ್ಟ್ ಯೋಜನೆಯ ಕುರಿತು ಮೊದಲಿಗೆ ಸಂಶಯದ ಧ್ವನಿಯೆತ್ತಿದ್ದು ಭಾರತ. ಭಾರತ ಮತ್ತು ಭೂತಾನ್ ಈ ಯೋಜನೆಯಿಂದ ದೂರ ಉಳಿದವು. ಶ್ರೀಲಂಕಾದ  ಹಂಬಂಟೋಟ ಬಂದರಿನ ಮೂಲಕ ಭಾರತವನ್ನೂ, ಹಿಂದೂ ಮಹಾಸಾಗರವನ್ನು ಎಲ್ಲ ರೀತಿಯಿಂದಲೂ ನಿಯಂತ್ರಿಸಬೇಕೆಂಬ ಹಂಬಲಕ್ಕೆ ತಣ್ಣೀರೆರೆಚುತ್ತಿರುವುದು ಭಾರತ. ಶ್ರೀಲಂಕಾದ ಹಿಂದಿನ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಚೀನಾದೆಡೆ ವಾಲಿದಾಗ ಮೈತ್ರಿಪಾಲ ಶಿರಿಸೇನಾ ಶ್ರೀಲಂಕಾದ ರಾಷ್ಟ್ರಪತಿಯಾಗುವಂತೆ ಮಾಡಿದ್ದು ಭಾರತ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮಾಲ್ಡೀವ್ಸ್‍ಗೆ ತೆರಳಿ ಅಸಂಖ್ಯ ಪ್ರಮಾಣದಲ್ಲಿ ನೀರನ್ನು ಒದಗಿಸಿದರೂ ಮಾಲ್ಡಿವ್ಸ್ ದೇಶಕ್ಕೆ ಭಾರತವೇ ಮೊದಲ ಗೆಳೆಯ ಎಂಬಂತಹ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಚೀನಾದ ಯೋಜನೆಗಳನ್ನು ಸ್ವಾಗತಿಸುತ್ತಿದ್ದ ಮಾಲ್ಡಿವ್ಸ್‍ನಲ್ಲಿ ಅಧಿಕಾರ ಬದಲಾಗಲು ಭಾರತ ಕಾರಣ. ಬಾಂಗ್ಲಾದೇಶದ ಅವಾಮಿ ಲೀಗ್‍ನ ಶೇಖ್‍ಹಸೀನ ಸರಕಾರ ಚೀನಾದಿಂದ ಸಮಾನ ಅಂತರ ಕಾಯ್ದುಕೊಳ್ಳುವಲ್ಲಿ ಭಾರತದ ಪಾಲು ಅಪಾರ. ಇಂತಹ ಅನೇಕ ಕಡೆಗಳಲ್ಲಿ ಭಾರತದ ಮಧ್ಯಸ್ಥಿಕೆಯಿಂದಲೋ, ಪ್ರತ್ಯಕ್ಷ ಅಥವಾ ಪರೋಕ್ಷ ಪಾಲ್ಗೊಳ್ಳುವಿಕೆಯಿಂದಲೋ ಚೀನಾದ ಮಹತ್ವಾಕಾಂಕ್ಷೆಗಳಿಗೆ ಭಾರತ ತಡೆಯೊಡ್ಡುತ್ತಿದೆ. ಇಲ್ಲೆಲ್ಲ ಭಾರತ ದೊಡ್ಡಣ್ಣನ ನೀತಿಯನ್ನು ಪಾಲಿಸುತ್ತಿಲ್ಲ. ಬದಲಾಗಿ ಪ್ರಾದೇಶಿಕ ಸಹಕಾರ, ಒಗ್ಗಟ್ಟು ಹಾಗೂ ಪರಸ್ಪರ ಮೈತ್ರಿಯ ನಂಬಿಕೆಯ ಮೇಲೆ ಭಾರತ ದಕ್ಷಿಣ ಏಷ್ಯಾದಲ್ಲಿ ಮಾರ್ಗದರ್ಶಕ ದೇಶವಾಗಿ ಬೆಳೆದಿದೆ. ಪಾಕಿಸ್ತಾನವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ದೇಶಗಳು ಭಾರತವನ್ನೇ ಅನುಸರಿಸುತ್ತವೆ. ಈ ಎಲ್ಲಾ ಕಾರಣಗಳಿಂದ, ಚೀನಾ ಏಷ್ಯಾದ ಏಕಮೇವಾದ್ವಿತಿಯ ಸೂಪರ್ ಪವರ್ ಆಗುವ ಮುನ್ನ ಭಾರತ ಶಕ್ತಿಯುತವಾಗಿರುವುದು ಅದಕ್ಕೆ ಸಹಿಸಲಸಾಧ್ಯ.
ಆದರೆ ಭಾರತ ಎಲ್ಲ ವಿಧವಾದ ಸವಾಲುಗಳಿಗೂ ತೆರೆದುಕೊಳ್ಳುವ ಆದರೆ ಅಷ್ಟೇ ಕಠಿಣ ಸಾಧನೆಯಿಂದ ಆ ಸಮಸ್ಯೆಗಳಿಂದ ಹೊರಬರುವ ದೇಶ ಎಂಬುದು ಚೀನಾದ ಅರಿವಿಗೆ ಬಂದಿದೆ. ಹಾಗಾಗಿಯೇ ಭಾರತದ ಮೇಲೆ ಅಂದರೆ ಆಯಕಟ್ಟಿನ ಪ್ರದೇಶದಿಂದಲೇ ಭಾರತದ ಶಕ್ತಿಯ ಮೂಲಗಳನ್ನು ನಿಯಂತ್ರಿಸುವ ಹುನ್ನಾರ ಅದರದ್ದು. ಇದಕ್ಕೆ ಬ್ರಹ್ಮಪುತ್ರ ನದಿಗೆ ಕಟ್ಟುತ್ತಿರುವ ಸಾಲು ಸಾಲು ಅಣೆಕಟ್ಟೆಗಳು ಒಂದು ಸಣ್ಣ ಉದಾಹರಣೆ ಅಷ್ಟೇ. ಅದೇ ರೀತಿ ಭಾರತಕ್ಕೆ ಅತ್ಯಂತ ಪ್ರಮುಖವಾಗಿರುವ ಚುಂಬಿ ಕಣಿವೆಯನ್ನು ಕತ್ತರಿಸುವುದು. ಡೊಕ್ಲಮ್ ಪ್ರಸ್ಥಭೂಮಿಯಲ್ಲಿ ಸರ್ವಋತು ರಸ್ತೆ ನಿರ್ಮಿಸಿ ಅದರ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಅಂದರೆ ಸ್ವತಃ ಭೂತಾನ್ ಹಾಗೂ ನೇರವಾಗಿ ನಮ್ಮ ದೇಶದ ಮುಖ್ಯಭೂಮಿ ಹಾಗೂ ಸಪ್ತ ಸೋದರಿ ಈಶಾನ್ಯ ರಾಜ್ಯಗಳನ್ನು ಬೆಸೆಯುವ “ಕೋಳಿಯ ಕತ್ತಿನಂತಿರುವ (ಚಿಕನ್ ನೆಕ್) ಸಿಲಿಗುರಿ ಕಾರಿಡಾರ್” ರಸ್ತೆ ಸಂಪರ್ಕದ ಮೇಲೆ ಪ್ರತ್ಯಕ್ಷ ಹಿಡಿತ ಸಾಧಿಸುವುದು ಅದರ ಮೂಲ ಉದ್ದೇಶ. ಇದರಿಂದ ಯಾವುದೇ ಕ್ಷಣದಲ್ಲಾದರೂ ಭಾರತವನ್ನು ಆರ್ಥಿಕ ಹಾಗೂ ಮಿಲಿಟರಿ ನೆಲೆಯಲ್ಲಿ ನಿಯಂತ್ರಣದಲ್ಲಿಡಬಹುದೆಂಬ ದುರಾಲೋಚನೆ ಅದರದ್ದು. ಅಸಲಿಗೆ ಡೊಕ್ಲಮ್ ಅದಕ್ಕೊಂದು ಕಾರಣವಷ್ಟೇ. ಭಾರತಕ್ಕೆ ಬಹುಮುಖ್ಯವಾದ ಟಿಬೆಟ್‍ನಿಂದ ಸಿಕ್ಕಿಂನೊಳಗೆ ಇಳಿದಿರುವ “ಚುಂಬಿ ಕಣಿವೆ”ಯ ಮೇಲಿನ ಹಿಡಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಅದರ ಮತ್ತೊಂದು ಉದ್ದೇಶ. ಹಾಗಾಗಿಯೇ ಅದು ಡೊಕ್ಲಮ್ ನೆಪದಲ್ಲಿ ಮಾನಸ ಸರೋವರಕ್ಕೆ ತೆರಳಲು ಇದ್ದ ಸರಳ ರಸ್ತೆ ಮಾರ್ಗ ಸಿಕ್ಕಿಂನಿಂದ ಹಾದು ಹೋಗುವ “ನಾಥುಲಾ” ಕಣಿವೆಯನ್ನು ಮುಚ್ಚಿದ್ದು.
ಇವೆಲ್ಲವೂ ಚೀನಾ ದೇಶವನ್ನು ಅದರ ಉತ್ಪನ್ನಗಳಂತೆಯೇ ಎಂದಿಗೂ ನಂಬಲರ್ಹವಲ್ಲದ ಮಿತ್ರನನ್ನಾಗಿಸಿದೆ. “ಮೈಟ್ ಈಸ್ ರೈಟ್” ಅಂದರೆ ನಾನು ಮಾಡಿದ್ದೆಲ್ಲವೂ ಸರಿ ಅಥವಾ ನಾನಷ್ಟೇ ಸರಿ ಎಂಬ ಚೀನಾದ ಅಹಂಕಾರದ ಧೋರಣೆಯ ಬಗ್ಗೆ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾದ ಎಲ್ಲಾ ದೇಶಗಳಿಗೂ ತಿಳಿದಿದೆ. ಜಪಾನ್, ಫಿಲಿಪೈನ್ಸ್, ವಿಯೆಟ್ನಾಂ ದೇಶಗಳು ಫೆಸಿಫಿಕ್ ಮಹಾಸಾಗರದ ಪೂರ್ವ ಚೀನಾ ಸಮುದ್ರ ಹಾಗೂ ದಕ್ಷಿಣ ಚೀನಾ ಸಮುದ್ರದೊಳಗಿನ ಅಂತರಾಷ್ಟ್ರೀಯ ಜಲ( ಅಥವಾ ಸಾಗರದಲ್ಲಿನ ಅಂತರಾಷ್ಟ್ರೀಯ “ಮೀಸಲು ಆರ್ಥಿಕ ವಲಯ”. ಇದು ದೇಶದ ಭೂಪ್ರದೇಶದಿಂದ 200 ನಾಟಿಕಲ್ ಮೈಲುಗಳನ್ನು ದಾಟಿದ ಜಲಭಾಗ.) ಹಾಗೂ ತಮ್ಮದೇ ದೇಶದ ಜಲಭಾಗದ ಹಕ್ಕಿಗಾಗಿ (12 ನಾಟಿಕಲ್ ಮೈಲುಗಳು) ನ್ಯಾಯಯುತ ಹೋರಾಟ ಮಾಡುತ್ತಿವೆ. ಕಳೆದ ವರ್ಷ ಅಂತರಾಷ್ಟ್ರೀಯ ನ್ಯಾಯಾಲಯ “10 ಡ್ಯಾಶ್ ಗೆರೆಯ” ಸಾಗರ ಪ್ರದೇಶ ಹಾಗೂ ಅಲ್ಲಿನ ದ್ವೀಪ ಪ್ರದೇಶಗಳು ಚೀನಾ ದೇಶಕ್ಕೆ ಸೇರಿಲ್ಲ ಎಂಬ ಆದೇಶ ನೀಡಿದೆ. ಆ ಆದೇಶವನ್ನೂ ಚೀನಾ ಒಪ್ಪುತ್ತಿಲ್ಲ. ಯಾಕೆಂದರೆ ಯಾವಾಗಲೂ ಚೀನಾ ಹೇಳುವುದು ಮತ್ತು ಮಾಡಿದ್ದೆಲ್ಲವೂ ಸರಿ ಎಂಬ ಹುಂಬ ಧೋರಣೆ.
ಭೂತಾನ, ನೇಪಾಳ, ಮಂಗೋಲಿಯಾ, ಲಾವೊಸ್, ತಜಕಿಸ್ತಾನ, ವಿಯೆಟ್ನಾಂನಂತಹ, ಸ್ವಾಯತ್ತತೆ, ಭದ್ರತೆ ಮತ್ತು ಪ್ರಾದೇಶಿಕ ಸದೃಢತೆಗಾಗಿ ತವಕಿಸುತ್ತಿರುವ ಸಣ್ಣ ಸಾರ್ವಭೌಮ ದೇಶಗಳಿಗೂ ಈ ಬಗ್ಗೆ ಅಪಾರ ಆತಂಕವಿದೆ. ಪೋರ್ಚುಗೀಸರ ವಸಾಹತು “ಮಕಾವೊ” ಮತ್ತು ಬ್ರಿಟೀಷರ ವಸಾಹತುವಾಗಿದ್ದ “ಹಾಂಗ್‍ಕಾಂಗ್”ನ ಜನತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಇಡದ ಸಂದರ್ಭವೇ ಇಲ್ಲ. ಅಲ್ಲಿ ಚೀನಾ ಸ್ವಾಯತ್ತ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ, ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯದ ಭಿನ್ನ ಕೂಗುಗಳನ್ನು ನಿರಂತರವಾಗಿ ಹತ್ತಿಕ್ಕುತ್ತಾ ಬಂದಿದೆ. ಈ ಎರಡೂ ಪ್ರಾಂತ್ರ್ಯಗಳಲ್ಲಿ ವಸಾಹತು ಪೋಷಕ ದೇಶಗಳೊಂದಿಗೆ ಚೀನಾ ಮಾಡಿಕೊಂಡಿರುವ ಒಪ್ಪಂದ 2047ರಲ್ಲಿ ಕೊನೆಯಾಗಲಿದೆ. ಒಪ್ಪಂದದ ಅವಧಿಯ ತುವಾಯವೂ ಎರಡೂ ಭೂಭಾಗಗಳ ಸ್ವತಂತ್ರ ಅಸ್ಮಿತೆ ಎಂಬ ಮರಿಚಿಕೆ ಮುರುಟಿಹೋಗಲಿದೆ. ಯಾಕೆಂದರೆ ಒಪ್ಪಂದದ ಅವಧಿಯ ನಂತರ ಅವುಗಳ ಭವಿಷ್ಯದ ಬಗೆಗೆ ಯಾವುದೇ ಸ್ಪಷ್ಟ ಚಿತ್ರಣವನ್ನು ಎಲ್ಲೂ ನೀಡಲಾಗಿಲ್ಲ. ಮಕಾವೊ, ಹಾಂಗ್‍ಕಾಂಗ್‍ಗಳನ್ನು ಚೀನಾದ ಸಾರ್ವಭೌಮತೆಯಡಿಯಲ್ಲಿ ಶಾಶ್ವತವಾಗಿ ತರಬೇಕೆನ್ನುವುದು ಚೀನಾದ ದೂರದೃಷ್ಟಿ ಯೋಜನೆ. ಅಂತರಾಷ್ಟ್ರೀಯ ಮಟ್ಟದ ಇಂತಹ ಅನೇಕ ದೌರ್ಜನ್ಯ, ದಬ್ಬಾಳಿಕೆಗಳನ್ನು ಸಹಿಸಿಕೊಂಡು ಬರುತ್ತಿರುವ ಯಾವ ದೇಶಗಳೂ ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಬಹುದೊಡ್ಡ ಶಕ್ತಿಯಾದ ಚೀನಾದ ನಡೆಗಳನ್ನು ಅಲ್ಲಲ್ಲಿ ರಾಜತಾಂತ್ರಿಕ ಮಾಧ್ಯಮಗಳ ಮುಖೇನ ಪ್ರತಿಭಟಿಸಿರುವುದು ಬಿಟ್ಟರೆ, ದೈತ್ಯ ದೇಶವನ್ನು ಎದುರಿಸಿ ನಿಲ್ಲುವ ಸಾಹಸಿಕ ಪ್ರಯತ್ನವನ್ನು ಮಾಡಲಾಗಲಿಲ್ಲ. ಇದು ನಯವಂಚಕ ಚೀನಾ ರಾಜತಾಂತ್ರಿಕತೆ.
ಅಷ್ಟೇ ಏಕೆ 1962ರಲ್ಲಿ ಜವಹರಲಾಲ್ ನೆಹರೂ ಚೀನಾವನ್ನು ಸೋದರ ದೇಶವೆಂದು ಹಾಡಿಹೊಗಳಿ ಕುಣಿಯುತ್ತಿದ್ದಾಗ ಅದು ಅವರನ್ನು ಅಚಾನಕ್ಕಾಗಿ ಶಿರ್ಷಾಸನ ಹಾಕುವಂತೆ ಮಾಡಿತ್ತು. ರಾತ್ರೋ ರಾತ್ರಿ ಯಾರೂ ನಂಬಲು ಸಾಧ್ಯವಿಲ್ಲದಂತೆ ಅರುಣಾಚಲ ಪ್ರದೇಶವನ್ನು ಹೊಕ್ಕಿತ್ತು. ಇದು ನೆಹರೂ ಕಾಲದ ಭ್ರಮನಿರಸನದಲ್ಲೊಂದಾದ, ಅವರೂ ಇನ್ನಿಲ್ಲದಂತೆ ನಂಬಿ ಮೋಸ ಹೋಗಿದ್ದ ನೆರೆಯ ಚೀನಾದ ಕಥೆ. ಪ್ರಾಯಶಃ ಆ “ನಂಬಿಕೆ ದ್ರೋಹದ?” ಖಿನ್ನತೆಯೇ ಅವರ ಸಾವಿಗೆ ಪರೋಕ್ಷ ಕಾರಣವಾಯಿತು.
ಭಾರತ-ಚೀನಾದ ಗಡಿ ಸಮಸ್ಯೆ ಇಂದು-ನೆನ್ನೆಯ ಕಥೆಯಲ್ಲ. ಆದ್ದರಿಂದಲೇ ಪ್ರಾರಂಭದಿಂದಲೂ ವಿದೇಶಿ ರಾಜತಾಂತ್ರಿಕ ತಜ್ಞರಿಗೆ ಚೀನಾದ “ಡೊಕ್ಲಮ್ ಸವಾಲು” ಗಂಭೀರವಾದ ಸಮಸ್ಯೆಯಾಗಿ ತೋರಲಿಲ್ಲ. ನಿರಂತರವಾಗಿ ಚೀನಾ ಭಾರತದ ಗಡಿಯೊಳಕ್ಕೆ ಬರುವುದು, ಚಳಿಗಾಲದ ಹೊತ್ತಿಗೆ ಭಾರತ ಅವರ ಗಡಿಯನ್ನು ಹೊಕ್ಕುವ ವರದಿಗಳು ಸದ್ದುಮಾಡುತ್ತಿರುತ್ತವೆ. ಉದಾಹರಣೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತ ಪ್ರವಾಸದಲ್ಲಿದ್ದ ಸಮಯದಲ್ಲೂ ಚೀನಾ ಸೇನೆ ಭಾರತದ ಭೂಭಾಗವನ್ನು ಹೊಕ್ಕಿತ್ತು. ಆಗೆಲ್ಲ ರಾಜತಾಂತ್ರಿಕ ಮಾರ್ಗದ ಮೂಲಕ ಶಾಂತವಾಗಿಯೇ ಆದರೆ ಕಠಿಣ ಪದಗಳಲ್ಲಿ ಪ್ರತಿಭಟಿಸುತ್ತಿತ್ತು. ಆದರೆ ಈ ಬಾರಿ ದೇಶದ ಆಂತರಿಕ ಭದ್ರತೆ, ಸ್ವಾಯತ್ತತೆ ಹಾಗೂ ತನ್ನನ್ನು ನೆಚ್ಚಿರುವ ಭೂತಾನ್ ಅಸ್ಮಿತೆಯ ಮತ್ತು ಸಿಕ್ಕಿಂನ ಅಸ್ತಿತ್ವಕ್ಕೆ ಮುಂಬರಬಹುದಾದ ಕುತ್ತನ್ನು ಗುರುತಿಸಿದ ಭಾರತ, ಡೊಕ್ಲಮ್‍ನಲ್ಲಿ ಭುತಾನದೊಂದಿಗಿನ ದ್ವಿಪಕ್ಷೀಯ ರಕ್ಷಣಾ ಒಪ್ಪಂದದಂತೆ ತನ್ನ ಸ್ಥಾನದಲ್ಲಿ ಅಚಲವಾಗಿ ನಿಂತಿತು. ಚೀನಾದ ಪೀಪಲ್ ಲಿಬರೇಶನ್ ಆರ್ಮಿ(ಪಿ.ಎಲ್.ಎ) ರಸ್ತೆಯ ನಿರ್ಮಾಣಕ್ಕೆ ಡೊಕ್ಲಮ್ ಹೊಕ್ಕಾಗ ಅದನ್ನು ಮೊದಲಿಗೆ ವಿರೋಧಿಸಿದ್ದು ಅಲ್ಲಿದ್ದ ಭೂತಾನ್ ಸೇನೆ. ಆದರೆ ಚೀನಾ ಅವರನ್ನು ಹಿಮ್ಮೆಟ್ಟಿಸಿ ನಿಂತಾಗ, ಭೂತಾನ್ ಬೆಂಬಲಕ್ಕೆ ಬಂದಿದ್ದು ಭಾರತೀಯ ಸೇನೆ. ಆಗಲೇ ನೋಡಿ ಡೊಕ್ಲಮ್‍ನಲ್ಲಿ ಚೀನಾದ ಮಹತ್ವಾಕಾಂಕ್ಷೆಯ ಗಡಿವಿಸ್ತರಣಾ ಯೋಜನೆಗೆ ತಣ್ಣೀರು ಬಿದ್ದಂತಾಗಿದ್ದು
ಪ್ರಾರಂಭದ ವರ್ಷಗಳಲ್ಲಿ ಬ್ರಿಟಿಷರು ಗುರುತಿಸಿದ್ದ ಭಾರತ-ಚೀನಾ ನಡುವಿನ “ಮ್ಯಾಕ್ ಮೋಹನ್” ಗಡಿಯನ್ನು ಒಪ್ಪಿದ್ದ ಚೀನಾ, ನಂತರದ ವರ್ಷಗಳಲ್ಲಿ ಅದಕ್ಕೆ ತನ್ನ ಒಪ್ಪಿಗೆಯಿಲ್ಲ ಎಂಬ ವರಸೆಯನ್ನು ಮುಂದಿಡುತ್ತಾ ಬಂದಿದೆ. 1890ರ ಬ್ರಿಟಿಶ್ ಆಳ್ವಿಕೆಯ ಭಾರತ-ಚೀನಾ ನಡುವಿನ “ಟಿಬೆಟ್-ಸಿಕ್ಕಿಂ” ಒಪ್ಪಂದ ಭೂತಾನ್‍ಗೂ ವಿಸ್ತರಣೆಯಾಗುತ್ತದೆ ಎಂಬ ಹೊಸ ಹುರುಳಿಲ್ಲದ ವಾದವನ್ನು ಮುಂದಿಟ್ಟಿದೆ. ವಾಸ್ತವದಲ್ಲಿ 1890ರ ಈ ಗಡಿ ಒಪ್ಪಂದದಲ್ಲಿ ಸಿಕ್ಕಿಂ ಹಾಗೂ ಭೂತಾನ್‍ಗಳು ಈ ಒಪ್ಪಂದದಲ್ಲಿ ಪಾಲುದಾರರೇ ಅಲ್ಲ! ಚೀನಾ ಬಹಳ ಪ್ರಜ್ಞಾಪೂರ್ವಕವಾಗಿ ಈ ಸತ್ಯ ಸಂಗತಿಗಳನ್ನು ತಿರುಚುವ ಕೆಲಸ ಮಾಡುತ್ತಿದೆ. ಇದಕ್ಕೊಂದು ಸಾಕ್ಷಿ, 1959ರಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ “ಸೋದರ ಸಂಬಂಧಿ ದೇಶ!” ಪೀಪಲ್ ರಿಪಬ್ಲಿಕ್ ಆಫ್ ಚೀನಾದ ಮೊದಲ ಪ್ರಧಾನಿ ಚೌಎನ್‍ಲೆ ಗೆ ಆಪ್ತವಾಗಿ ಬರೆದಿರುವ ಪತ್ರದ ದಾಖಲೆ. ಇದರಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರುವಂತೆ, “ಸಿಕ್ಕಿಂ ಮತ್ತು ಟಿಬೆಟ್ ಗಡಿಗಳ ಸಮಸ್ಯೆ ಪರಿಹಾರವಾಗಿರುದನ್ನು ಒಪ್ಪಲಾಗಿದೆ. ಮತ್ತು ಭಾರತ-ಭೂತಾನ್-ಚೀನಾ ಈ ಮೂರು ದೇಶಗಳ ತ್ರಿಕೋನ ಪ್ರದೇಶದ ಆಯಕಟ್ಟಿನ ಗಡಿ ಗೊಂದಲವನ್ನು ಮಾತುಕತೆಯ ಮೂಲಕ ಬಗೆಹರಿಸಲು ತೀರ್ಮಾನಿಸಲಾಗಿದೆ ಹಾಗೂ ಅಲ್ಲಿಯವರೆಗೂ ಈಗಿನ ತಟಸ್ಥ ನಿಲುವನ್ನೇ ಕಾದಿರಿಸಲು ಎರಡೂ ದೇಶಗಳು ಒಪ್ಪಿವೆ”.
ಇಷ್ಟೇ ಅಲ್ಲದೆ ಚೀನಾ ಬಹಳ ಬುದ್ಧಿವಂತರಂತೆ 2006ರ ಎರಡೂ ದೇಶಗಳ “ಸ್ಪೆಶಲ್ ರೆಪ್ರಸಂಟೇಟಿವ್” (ಗಡಿ ಗೊಂದಲವನ್ನು ಮಾತುಕತೆಯ ಮೂಲಕ ಪರಿಹರಿಸಲು ಎರಡೂ ದೇಶಗಳಿಂದ ನೇಮಕಗೊಂಡ ವಿಶೇಷ ಪ್ರತಿನಿಧಿಗಳು) ಮಾತುಕತೆಯನ್ನೇ ಮುನ್ನೆಲೆಗೆ ತಂದು ಡೊಕ್ಲಮ್ ಮೇಲಿನ ತನ್ನ ಅನಧಿಕೃತ, ಕಾನೂನುಬಾಹಿರ ಅಧಿಕಾರದ ಹಕ್ಕನ್ನು ಸಮರ್ಥಿಸುತ್ತಿದೆ. ಆದರೆ ಈ ನಡೆಯಲ್ಲಿ ಚೀನಾ 2012ರ ಎರಡೂ ದೇಶಗಳ “ಸ್ಪೆಶಲ್ ರೆಪ್ರಸಂಟೇಟಿವ್”ಗಳ ಒಪ್ಪಂದವನ್ನು ಮರೆತಿರುವಂತೆ ಸುಳ್ಳನ್ನು ಸಾರುತ್ತಿದೆ. 2012ರಲ್ಲಿ ಎರಡೂ ದೇಶದ ಅಧಿಕೃತ ಪ್ರತಿನಿಧಿಗಳು ಒಪ್ಪಿರುವಂತೆ “ತ್ರಿವಳಿ ದೇಶಗಳ ನಡುವಿನ ಸಂಗಮ ಸ್ಥಾನ (ಜಂಕ್ಷನ್)ನಲ್ಲಿನ ಗಡಿಯ ಗೊಂದಲವನ್ನು ಮಾತುಕತೆಯ ಮೂಲಕವೇ ಪರಿಹರಿಸಲಾಗುವುದು. ಈ ಮಾತುಕತೆಯ ಸಂಧಾನ ಪ್ರಕ್ರಿಯೆಯಲ್ಲಿ ಮೂರನೇ ಕಕ್ಷಿದಾರ ರಾಷ್ಟ್ರ ಭೂತಾನವನ್ನೂ ಸೇರಿಸಿಕೊಳ್ಳಲಾಗುವುದು. ಅಲ್ಲಿಯವರೆಗೂ ಕಡ್ಡಾಯವಾಗಿ ಈ ಮೊದಲು ಜಾರಿಯಲ್ಲಿರುವ ತಟಸ್ಥತೆಯನ್ನೇ ಕಾಯ್ದಿರಿಸಿಕೊಳ್ಳಬೇಕು” ಎಂಬುದಾಗಿ ದಾಖಲಿಸಲಾಗಿದೆ. ಅಂದರೆ ಸರಳ ಭಾಷೆಯಲ್ಲಿ ತನಗೆ ಮಾತ್ರ ಲಾಭವಾಗುವ ಏಕಮುಖಿಯಾದ “ಸೆಲೆಕ್ಟಿವ್ ಸತ್ಯ”ದ ಮೂಲಕ ವಾದಕಟ್ಟುವ ಪ್ರತಿಭೆಯನ್ನು ಕಮ್ಯುನಿಷ್ಟ್ ಚೀನಾದ ಮೂಲಕ ಮಾತ್ರ ಕಲಿಯಲು ಸಾಧ್ಯ. ಇತಿಹಾಸದ ದಾಖಲೆಗಳನ್ನೇ ದಾರಿತಪ್ಪಿಸುವಂತೆ ಸುಳ್ಳುಗಳ ಕಟ್ಟುಕತೆಯನ್ನು ಅದೇ ಪರಮ ಸತ್ಯವೆಂದು ಸಾರುತ್ತಿದೆ. ಒಂದು ಕಡೆಯಿಂದ ವಿಶೇಷ ಪ್ರತಿನಿಧಿಗಳ ಮೂಲಕ ಶಾಂತಿಯ ಮಾತುಕತೆ. ಇನ್ನೊಂದೆಡೆ ತ್ರಿವಳಿ ದೇಶಗಳ ಸಂಕೀರ್ಣ ಗಡಿಪ್ರದೇಶ ತನ್ನದೇ ಹಿಡಿತದಲ್ಲಿರಬೇಕು ಎಂಬ ಆಶಯದಿಂದ “ಡೊಕ್ಲಮ್” ತನಗೆ ಸೇರಿದ್ದು, ಇದನ್ನು ಭೂತಾನ್ ಒಪ್ಪಬೇಕು ಎಂದು ಚೀನಾ-ಭೂತನ್ ನಡುವೆ ನಡೆದಿರುವ 24 ಸುತ್ತುಗಳ ದ್ವಿಪಕ್ಷೀಯ ಮಾತುಕತೆಗಳಲ್ಲಿ ಅನೇಕ ಬಾರಿ ಪ್ರಸ್ತಾಪಿಸುತ್ತಲೇ ಇದೆ. ಪ್ರತೀ ಬಾರಿ ಭಾರತದೊಂದಿಗಿನ ತನ್ನ ಮೈತ್ರಿಯ ಹಿತಾಸಕ್ತಿಯ ಕಾರಣದಿಂದ ಭೂತನ್, ಚೀನಾದ ಹಿತಾಸಕ್ತಿಯನ್ನು ನಿರಾಕರಿಸುತ್ತಲೇ ಬಂದಿದೆ. ಇದರಿಂದ ಹತಾಶಗೊಂಡ ಚೀನಾ, “ಡೊಕ್ಲಮ್ ಚೀನಾದ ಪ್ರದೇಶ ಎಂಬುದನ್ನು ಭೂತಾನ್ ಒಪ್ಪಿಕೊಂಡಿದೆ” ಎಂಬ ಹಸಿ ಸುಳ್ಳನ್ನು  ಹೇಳುತ್ತಿದೆ. ಆದರೆ ಇದೇ ಮೊದಲಬಾರಿ ಭೂತಾನ್ ಅಂತಹ ಯಾವುದೇ ಒಪ್ಪಿಗೆಯನ್ನು ಚೀನಾಕ್ಕೆ ನೀಡಿಲ್ಲ ಎಂಬ ಸತ್ಯವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ.
ಇಂದಿನ ಚಿಂತೆಯ ವಿಷಯವಾಗಿರುವ “ಡೊಕ್ಲಮ್” ಭೂತಾನದ ಭೂಭಾಗವೆಂದು ಗೊತ್ತಿದ್ದರೂ ಅದು ತನ್ನದೇ ಭೂಭಾಗವೆಂದು ಅಲ್ಲಿ ರಸ್ತೆ ನಿರ್ಮಿಸಿ, ರೈಲ್ವೆ ಸಂಪರ್ಕವನ್ನು ಸ್ಥಾಪಿಸಿ, 21ನೇ ಶತಮಾನದ “ಒಂದು ರಸ್ತೆ-ಒಂದು ಬೆಲ್ಟ್ ಯೋಜನೆ”ಗೆ ಪೂರಕವಾಗುವಂತೆ ತನ್ನ ಸಾರ್ವಭೌಮತೆಯನ್ನು ಮೆರೆಯಲು ಹೊರಟಿದೆ. ಹಿಂದೆ ಟಿಬೆಟ್ ಅನ್ನು ಹೇಗೆ ಕಬಳಿಸಿತ್ತೋ ಅದೇ ರೀತಿ ಡೊಕ್ಲಮ್ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಳ್ಳುವ ಸರಳ ಹುನ್ನಾರ ನೀತಿಯಿದು. ನಂಬಿಕೆ ಎನ್ನುವುದು ಚೀನಾಕ್ಕೆ ತನ್ನ ಗುರಿಸಾಧನೆಯ ಮಾರ್ಗವಷ್ಟೇ. ಅಪನಂಬಿಕೆ ಅದರ ಮೂಲ ಧರ್ಮ. ಕರಗುತ್ತಿರುವ ಆರ್ಥಿಕತೆ ಹಾಗೂ ಹೊಸ ಚಿಂತನೆಯ ಸಾಮಾಜಿಕ ಪಲ್ಲಟದ ಜೊತೆಗೆ ಈ ಸಾಮ್ರಾಜ್ಯಶಾಹಿ ಅಹಂಕಾರವೇ ಅದನ್ನು ಅಧಃಪತನದತ್ತ ಕೊಂಡೊಯ್ಯಲಿದೆ. ಇದನ್ನು ಮಣಿಸಲು ಚೀನಾದೊಳಗೆ ಮತ್ತೊಂದು ಕ್ರಾಂತಿಕಾರಕ ಸಾಂಸ್ಕøತಿಕ ಚಳುವಳಿಯಾಗಬೇಕಿದೆ. ಇದಕ್ಕೆ ಪೂರಕವೆಂಬಂತೆ ಚೀನಾದಲ್ಲಿ ಈಗ ಮತ್ತೊಮ್ಮೆ ಕನ್‍ಫ್ಯೂಶಿಯಸ್ ಪ್ರಜ್ಞೆ ಪ್ರಬಲವಾಗಿ ಜಾಗೃತವಾಗತೊಡಗಿದೆ.
  • ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?

ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ-ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ ಇಲ್ಲದ ದೇಶಭಕ್ತರು ಅದಾಗಲೇ ಯುದ್ಧಕ್ಕೆ ರಣಕಹಳೆಯನ್ನು ಮೊಳಗಿಸಿಯಾಗಿದೆ. ಇನ್ನು ಬಾಕಿಯಿರುವುದು ಕೇವಲ ಸೇನೆಗಳ ಗುಂಡಿನ ದಾಳಿಯಷ್ಟೇ! ಮತ್ತು ಭಾರತದ ಗೆಲುವಷ್ಟೇ. ಹೀಗೆ ಆಗಬೇಕೆನ್ನುವುದು ಎಲ್ಲಾ ಬಾರತೀಯರ ಆಸೆಯೂ ಕೂಡ.

ಆದರೆ ಈ ಗೆಲುವು ಸುಲಭವಲ್ಲ ಎಂಬುದೂ ಅಷ್ಟೇ ಸತ್ಯ. ನಮ್ಮ ಹೆಚ್ಚಿನ ಪ್ರಮಾಣದ ಸೇನೆಯನ್ನು ನಾವು ಭಾರತ-ಚೀನಾ ಗಡಿ ಪ್ರದೇಶದಲ್ಲಿ ಐಕ್ಯಗೊಳಿಸಿರಬಹುದು. ಆದರೆ ಇಂದಿಗೂ ಚೀನಾ ಗಡಿಯುದ್ಧಕ್ಕೂ ಯಾವುದೇ ಅಡೆತಡೆಯಿಲ್ಲದ ರಸ್ತೆ ಸಂಪರ್ಕ ಸರಿಯಾಗಿಲ್ಲ. ಅಂದರೆ ಎಲ್ಲಾ ಭೂಗಡಿ ಪ್ರದೇಶಗಳನ್ನು ಉತ್ತಮ ಗುಣಮಟ್ಟದ ರಸ್ತೆಯ ಮೂಲಕ ಬೆಸೆಯುವ “ಭಾರತ್‍ಮಾಲಾ” ಯೋಜನೆ ಇನ್ನೂ ನಿರ್ಮಾಣವಾಗಿಲ್ಲ. ಅದೇ ಕಳೆದ ಹತ್ತು ವರ್ಷಗಳಿಂದ ಚೀನಾ ತನ್ನಗಡಿಯಲ್ಲಿ ಟಿಬೆಟ್-ಅರುಣಾಚಲ ಪ್ರದೇಶದುದ್ದಕ್ಕೂ ಸುಲಭವಾಗಿ ಸಂಚರಿಸಬಹುದಾದ ರಸ್ತೆ ಮಾರ್ಗವನ್ನು ಅದಾಗಲೇ ನಿರ್ಮಿಸಿದೆ.

ನಮ್ಮ ಸೈನಿಕರಿಗೆ ಸಿಗಲಿರುವ ಗುಂಡುನಿರೋಧಕ ಜಾಕೆಟ್‍ಗಳು ಇನ್ನಷ್ಟೇ ಬರಬೇಕಾಗಿವೆ. ಸೆಪ್ಟೆಂಬರ್ 2016ಕ್ಕೆ ಅನ್ವಯವಾಗುವಂತೆ, ಭಾರತೀಯ ಸೇನೆಯ ‘ಯುದ್ಧ ಸನ್ನದ್ಧತೆ’ಯ ಕುರಿತು ದೇಶದ “ಮಹಾಲೆಕ್ಕಪರಿಶೋಧಕರು (ಸಿ.ಎ.ಜಿ.)” ಇತ್ತೀಚೆಗೆ ನೀಡಿರುವ ವರದಿಯಲ್ಲಿ “ಭಾರತ ಕೇವಲ ಹತ್ತು ದಿನಗಳ ಯುದ್ಧಕ್ಕಷ್ಟೇ ಸನ್ನದ್ಧವಾಗಿದೆ” ಎಂಬುದಾಗಿ ಉಲ್ಲೇಖಿಸಲಾಗಿದೆ. ಇದು ಆಂತಕಕಾರಿ ವಸ್ತುಸ್ಥಿತಿ. ಇಸ್ರೇಲ್ ದೇಶಕ್ಕೆ ಭಾರತದಷ್ಟೇ ಚೀನಾ ಕೂಡ ಮಿತ್ರ ಎಂಬುದನ್ನೂ ಗಮನಿಸಬೇಕು. ಭಾರತಕ್ಕಿಂತಲೂ ಎತ್ತರದ ಆಯಕಟ್ಟಿನ ಸ್ಥಾನದಲ್ಲಿರುವ ಚೀನಾಕ್ಕೆ ಈ ಯುದ್ಧ ಸುಲಭ. ಆದರೆ ಭಾರತ ಕನಿಷ್ಟವೆಂದರೂ 3-5:1 ಪ್ರಮಾಣದ ಜೀವಹಾನಿಯನ್ನು ಎದುರಿಸಬೇಕಾಗಬಹುದು. ಅಂದರೆ ಅವರ ಒಬ್ಬ ಸೈನಿಕರಿಗೆ ಪ್ರತಿಯಾಗಿ ಕನಿಷ್ಟವೆಂದರೂ ಮೂರರಿಂದ ಐದು ಭಾರತೀಯ ಸೈನಿಕರ ಬಲಿದಾನವಾಗಬಹುದು. ಡೊಕ್ಲಮ್ ಪ್ರದೇಶದಲ್ಲಿ ಭಾರತ ಭದ್ರವಾದ ಸ್ಥಾನದಲ್ಲಿದೆ. ಸಿಕ್ಕಿಂ ಮತ್ತು ಭೂತಾನ್ ಎರಡೂ ಕಡೆಗಳಿಂದ ಡೊಕ್ಲಮ್‍ನಲ್ಲಿ ಚೀನಾಕ್ಕೆ ಮಣ್ಣುಮುಕ್ಕಿಸುವುದು ಭಾರತಕ್ಕೆ ಸುಲಭ. ಆದರೆ ಉಭಯ ದೇಶಗಳ ನಡುವೆ ಯುದ್ಧವೆಂದ ಮೇಲೆ ಅದು ಒಂದೇ ಪ್ರದೇಶದಲ್ಲಿ ಅದು ನಡೆಯಬೇಕೆಂದಿಲ್ಲವಲ್ಲ. ಅದೇ ಹೊತ್ತಿಗೆ ಭಾರತ-ಚೀನಾ ಗಡಿಯ 4,000 ಕಿಮೀ ವಿಸ್ತೀರ್ಣದ ಅನೇಕ ಕಡೆಗಳಲ್ಲಿ ಎತ್ತರದಲ್ಲಿರುವ ನಿರ್ಣಾಯಕ ಸ್ಥಾನಗಳು ಚೀನಾ ಪ್ರದೇಶದಲ್ಲಿವೆ.

Picture Courtesy: Google Maps.

ಇದು ಮೆಲ್ಪದರದ ಚಿತ್ರಣ. ಅಪಾರ ಸಾವು-ನೋವುಗಳಿಗೂ ಮೀರಿದ್ದು ಭಾರತದ ಆರ್ಥಿಕತೆ ಇದಕ್ಕೆ ತಯಾರಾಗಿದೆಯೇ? ಎಂಬ ಬಹುದೊಡ್ಡ ಪ್ರಶ್ನೆ. ಜಾಗತಿಕ ಆರ್ಥಿಕತೆಯ ಮಂದಗತಿಯ ಚಲನೆಯಲ್ಲಿ ಭರವಸೆ ಮೂಡಿಸಿರುವುದು ಭಾರತದ ಆರ್ಥಿಕತೆ. ಆದರೆ ವಿಮುದ್ರಿಕರಣ, ಸರಕು ಮತ್ತು ಸೇವಾ ತೆರಿಗೆ, ಅನಾಮತ್ತು ಸಾಲದ ಹೊರೆಯಿಂದ ಬೇಸತ್ತ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ.. ಇಂತಹ ಅನೇಕ ಆಂತರಿಕ ಸುಧಾರಣೆಗಳು ಭಾರತದಲ್ಲಿ ಸಾಗುತ್ತಿವೆ. ಭಾರತ ಅವನ್ನೆಲ್ಲ ತನ್ನೊಳಗೆ ಜತನಗೊಳಿಸಿಕೊಂಡು ಶಕ್ತವಾಗಿ ಸಮರ್ಥವಾಗಲು ಒಂದಷ್ಟು ಸಮಯ ಅನಿವಾರ್ಯ.
ಇನ್ನು ಚೀನಾದ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಕಳೆದ ದಶಕದಲ್ಲಿ ಏರುಗತಿಯಲ್ಲಿ ಸಾಗಿದ್ದ ಚೀನಾ ಆರ್ಥಿಕತೆ ಇತ್ತೀಚಿನ 3-4 ವರ್ಷಗಳಿಂದ ಇಳಿಮುಖವಾಗಿದೆ. ಈ ನಷ್ಟವನ್ನು ತುಂಬಲು ಚೀನಾದ ಕರೆನ್ಸಿ “ರೆನ್ಮಿಂಬಿಯ” ಮೌಲ್ಯವನ್ನು ಡಾಲರ್‍ಗೆ ಪ್ರತಿಯಾಗಿ ಇನ್ನಿಲ್ಲದಂತೆ ಇಳಿಸಲಾಗುತ್ತಿದೆ. ಅದೇ ಹೊತ್ತಿಗೆ ಕಮ್ಯುನಿಷ್ಟ್ ಚೀನಾ 19ನೇ ಪಕ್ಷ ಕಾಂಗ್ರೆಸ್‍ಗೆ ಅಣಿಯಾಗುತ್ತಿದೆ. ಹಿಂದೆಂದಿಗಿಂತಲೂ ತೀವ್ರವಾಗಿ ಚೀನಾದ ಅಧ್ಯಕ್ಷ, ಕ್ಸಿ ಜಿನ್‍ಪಿಂಗ್‍ಗೆ ಪೂರ್ಣ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುವ ಅನಿವಾರ್ಯತೆಯಿದೆ. ಹಾಗಾಗಿ ಡೊಕ್ಲಮ್ ಕ್ಸಿ ಜಿನ್‍ಪಿಂಗ್‍ಗೆ ವೈಯ್ಯಕ್ತಿಕ ಪ್ರತಿಷ್ಟೆ ಹಾಗೂ ಸವಾಲಿನ ವಿಷಯ. ಇಲ್ಲಿ ಪ್ರಾಬಲ್ಯ ಸಾಧಿಸಿ ಬಲಿಷ್ಟ ನಾಯಕತ್ವವನ್ನು ದೃಢಪಡಿಸಬೇಕಿದೆ. ಅದೇ ಹೊತ್ತಿಗೆ ಯುದ್ಧಕ್ಕೆ ತೆರಳಿದರೆ ಗೆಲುವಿನ ಖಾತ್ರಿಯಿಲ್ಲ ಹಾಗೂ ತನ್ನದೇ ನಾಯಕತ್ವದ ಅತಂತ್ರತೆಗೆ ಬೇರೆ ಕಾರಣ ಬೇಕಿಲ್ಲ.
ಹಾಗಿದ್ದೂ ಭಾರತವನ್ನು ಸದಾಕಾಲ ವಿರೋಧಿಸುವ ಪಾಕಿಸ್ತಾನ ಮೊದಲೇ ಚೀನಾ ಮಿತ್ರ. ಮೇಲಾಗಿ ನವಾಜ್ ಷರೀಪ್ ಪದಚ್ಯುತಿಯಿಂದ ಪಾಕಿಸ್ತಾನದ ನಿಜವಾದ ಅಧಿಕಾರ ಪಾಕಿಸ್ತಾನ ಸೇನೆಯ ಹಿಡಿತದಲ್ಲಿದೆ. ಅಂದರೆ ಚೋರ ಯುದ್ಧತಂತ್ರಗಳಿಗೆ ಅದೀಗ ಸಮಯ ಕಾಯುತ್ತಿದೆ. ಅಮೆರಿಕ, ಉತ್ತರ ಕೊರಿಯಾ ಸಮಸ್ಯೆಯಿಂದ ದೂರಬಂದು ಭಾರತದ ಜೊತೆಯಲ್ಲಿ ನಿಲ್ಲಲಿದೆಯೇ? ಹಾಗೊಂದು ವೇಳೆ ನಿಂತರೂ ಅದರ ಷರತ್ತುಗಳು ಏನಿರಬಹುದು? ಇಂತಹ ನೂರಾರು ಪ್ರಶ್ನೆಗಳು ಒಂದೆಡೆ.
ಈತನ್ಮಧ್ಯೆ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಿದರೆ ಯುದ್ಧದಿಂದ ಬೆನ್ನು ತೋರಿಸಿ ಹಿಂದೆ ಸರಿಯಬೇಕೆ? ಅದು ಸಾಧ್ಯವಿಲ್ಲದ ಮಾತು. ಆದರೆ ಯುದ್ಧವನ್ನು ಬಯಸುವುದೂ ಅತ್ಯಂತ ಮೂರ್ಖತನದ ನಡೆ. ಯಾಕೆಂದರೆ ಪ್ರತಿಯೊಂದು ಸಮಸ್ಯೆಗೂ ಯುದ್ಧವೇ ಪರಿಹಾರವಾದರೆ ಜಗತ್ತು ಆಧುನಿಕ ಕಾಲದಿಂದ ಪ್ರಾಚೀನ ಕಾಲಕ್ಕೆ ಹಿಂತಿರುಗುವ ಅಪಾಯವಿದೆ. ಅದಕ್ಕಾಗಿಯೇ ಇರುವ ಪರಿಹಾರ “ರಾಜತಾಂತ್ರಿಕತೆ”. ಮಾತುಕತೆಯ ಮೂಲಕ ಸಮಸ್ಯೆಯ ಪರಿಹಾರ ಸುಲಭ. ಸಮಯ ಹಿಡಿಯಬಹುದು ಆದರೆ ಉತ್ತಮ ಫಲಿತಾಂಶ ಅದರ ಗುರಿ. ಅದನ್ನೇ ಭಾರತ ಹಾಗೂ ಚೀನಾ ಮಾಡುತ್ತಿರುವುದು. ಅನವಶ್ಯಕ ಯುದ್ಧ ಇಬ್ಬರಿಗೂ ಬೇಕಿಲ್ಲ.
ಯಾವುದೇ ದೇಶ ಬೆಳೆಯುವ, ಅಭಿವೃದ್ಧಿ ಹೊಂದುವ ಹಂತದಲ್ಲಿ ತನ್ನ ಏಳಿಗೆಯ ಕುರಿತು ಯೋಚಿಸಬೇಕೇ ಹೊರತು, ಚೀನಾದಂತಹ ಬಲಿಷ್ಟ ದೇಶದೊಂದಿಗೆ ಸಮರಕ್ಕಿಳಿಯುವುದರಲ್ಲಿ ಅರ್ಥವಿಲ್ಲ. ಇದರಿಂದ ಚೀನಾಕ್ಕೇನು ನಷ್ಟ ಎಂಬುದಕ್ಕಿಂತ ಭಾರತಕ್ಕೂ ಲಾಭವಿಲ್ಲ. ಯಾಕೆಂದರೆ ಯುದ್ಧ ದೇಶವೊಂದನ್ನು ಕನಿಷ್ಟ ಕೆಲವು ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಇದರಿಂದ ಜನರ ಮೇಲಿನ ಹೊರೆಯೇ ಹೆಚ್ಚಾಗುತ್ತದೆ. ಇಂತಹ ಅನೇಕ ಸಮಸ್ಯೆ-ಸವಾಲುಗಳು ಯುದ್ಧವನ್ನರಸಿ ಜೊತೆಗೇ ಬರುತ್ತವೆ. ಈಗ ಹೇಳಿ ನಮಗೆ ನಿಜಕ್ಕೂ ಯುದ್ಧ ಬೇಕೆ? ಆದ್ದರಿಂದಲೇ ನೇರ ಯುದ್ಧಕ್ಕಿಂತ ಸುಲಭವಾಗಿ ಚೀನಾವನ್ನು ಆರ್ಥಿಕವಾಗಿ ಮಣಿಸಬೇಕಿದೆ. ಇದನ್ನು ಜನರಷ್ಟೇ ಮಾಡಲು ಸಾಧ್ಯವಿಲ್ಲ. ಸರಕಾರದ ಅನೇಕ ನೀತಿಗಳು, ಕಾನೂನುಗಳು ಈ ನಿಟ್ಟಿನಲ್ಲಿ ಕಠಿಣವಾಗಿ ಜಾರಿಯಾಗಬೇಕಿವೆ. ಹೇಗೆ? ಇದಕ್ಕೊಂದು ಸಣ್ಣ ಉದಾಹರಣೆ: ಭಾರತದ ಕೈಗಾರಿಕೆಗಳು ತಾವು ತಯಾರಿಸುವ ಉತ್ಪನ್ನಗಳ ತಯಾರಿಕೆಗೆ ಆಮದುಮಾಡಿಕೊಳ್ಳುವ ಕಚ್ಚಾ ಹಾಗೂ ಅಗತ್ಯ ವಸ್ತುಗಳ ಬೆಲೆಗಿಂತ, ಸಿದ್ಧವಸ್ತುಗಳನ್ನು ಆಮದು ಬೆಲೆ ತುಂಬಾ ಕಡಿಮೆ. ಇದಕ್ಕೆ “ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್”(ತಲೆಕೆಳಗಾದ ತೆರಿಗೆ ಪದ್ಧತಿ) ಎನ್ನಲಾಗುತ್ತದೆ. ವಾಸ್ತವವಾಗಿ ಹೆಸರಿಗೆ ತಕ್ಕಂತೆ ಯಾವುದರ ಬೆಲೆ ಕಡಿಮೆಯಾಗಬೇಕೋ ಅದರ ಬೆಲೆ ಹೆಚ್ಚು. ಯಾವುದು ಹೆಚ್ಚಾಗಬೇಕು ಅದರ ಬೆಲೆ ಕಡಿಮೆ. ಇದು ಇಂಗ್ಲೀಷರು ಭಾರತದ ಗುಡಿಕೈಗಾರಿಕೆಯನ್ನು ನಾಶಪಡಿಸಿದ ಯೋಜನೆಯ ಮುಂದುವರೆದ ಭಾಗ. ಬ್ರಿಟೀಷರು ಇಂತಹ ಪದ್ಧತಿಯ ಮೂಲಕ ಭಾರತವನ್ನು ಕೇವಲ ಕಚ್ಚಾವಸ್ತುಗಳ ರಫ್ತುದಾರ ದೇಶವಾಗಿಯೂ ಹಾಗೂ ಸಿದ್ಧವಸ್ತುಗಳ ಆಮದು ದೇಶವನ್ನಾಗಿ ಮಾಡಿತು. ಸ್ವಾತಂತ್ರ್ಯ ಬಂದ ತರುವಾಯವೂ ಅಂತರಾಷ್ಟ್ರೀಯ ಒಪ್ಪಂದಗಳ ಮೂಲಕ ಹೊಸರೀತಿಯಲ್ಲಿ ಹಳೆಯ ವಿನಾಶಕಾರಿ ಯೋಜನೆಯನ್ನೇ ಮುಂದುವರೆಸಲಾಗುತ್ತಿದೆ. ಇದು ಸೊರಗುತ್ತಿರುವ ಕೈಗಾರಿಕೆಗಳನ್ನು ಲಾಭತರುವ ಮಾರಾಟಗಾರರನ್ನಾಗಿ ಪರಿವರ್ತಿಸುತ್ತದೆ. ಕಳೆದ ಹತ್ತು ವರ್ಷಗಳ ಭಾರತದ ಅನೇಕ ಉತ್ಪಾದಕರು ಮಾರಾಟಗಾರರಾಗಿ ಪರಿವರ್ತನೆ ಹೊಂದಿದ್ದು ಇದಕ್ಕೆ ಜ್ವಲಂತ ವಾಸ್ತವ. ಇಂತಹ ಯೋಜನೆಯಲ್ಲಿನ ಕಂದಕದ ನೇರ ಲಾಭವನ್ನು ಚೀನಾ ಪಡೆಯುತ್ತಿದೆ.
ಈಗಿನ ಕೇಂದ್ರ ಸರಕಾರವೂ 2015ರಲ್ಲಿ ತಿಳಿದೋ, ತಿಳಿಯದೆಯೋ ಅಥವಾ ಕಾರ್ಯಕ್ರಮದ ವೆಚ್ಚ ತಗ್ಗಿಸುವ ಉದ್ದೇಶದಿಂದಲೋ ಪ್ರಮಾದವೊಂದನ್ನು ಮಾಡಿತ್ತು. ಪ್ರಾಯಶಃ ಸರಕಾರಿ ಮಟ್ಟದಲ್ಲಿ ಜನರ ಅರಿವಿಗೆ ಬಾರದೆ ಇಂತಹ ಅದೆಷ್ಟೋ ಘಟನೆಗಳು ಮುಚ್ಚಿಹೋಗುತ್ತವೆ ಅಥವಾ ಅನಿವಾರ್ಯವಾಗುತ್ತವೆ?. ಸರಕಾರದ ಯೋಗ ದಿನಾಚರಣೆಗೆ 37,500ಕ್ಕೂ ಅಧಿಕ “ಮೇಡ್ ಇನ್ ಚೈನಾ” ಚಾಪೆಗಳನ್ನು ಖರೀದಿಸಿತ್ತು.(ವರದಿ: ಜೂನ್ 20, 2015, ದಿ ಇಂಡಿಯನ್ ಎಕ್ಸ್‍ಪ್ರೆಸ್, ದೆಹಲಿಯಲ್ಲಿ ಕೇಂದ್ರ ಸರಕಾರ ಆಯೋಜಿಸಿದ್ದ ಯೋಗದಿನಾಚರಣೆಗೆ “ಮೇಡ್ ಇನ್ ಚೈನಾ” ಯೋಗಾ ಕಾರ್ಪೆಟ್‍ಗಳು.) ಜಾಗೃತೆ ವಹಿಸಬೇಕು. ಆದ ಪ್ರಮಾದವನ್ನು ತಿದ್ದಿಕೊಂಡ ಕೇಂದ್ರ ಸರಕಾರ 2016ರ ವಿಶ್ವ ಯೋಗ ದಿನಾಚರಣೆಗೆ “ಸ್ವದೇಶಿ” ಚಾಪೆಗಳನ್ನೇ ಬಳಸಲು ಆದೇಶಿಸಿತ್ತು. ಇಂತಹ ಅನೇಕ ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೇವಲ ಕಡಿಮೆ ದರಕ್ಕೆ ದೊರೆಯುತ್ತವೆ ಎಂಬ ಕಾರಣಕ್ಕೆ ಗುಣಮಟ್ಟದ ಪರೀಕ್ಷೆಗಳಿಲ್ಲದೆ, ಅವು ಉಗಮವಾಗುವ ಸ್ಥಳ, ಪರಿಸರ, ಬಳಸುವ ಸಾಮಾಗ್ರಿ, ಮಾನವಹಕ್ಕು, ಅಗತ್ಯತೆ ಇತ್ಯಾದಿ ಯಾವುದರ ಬಗ್ಗೆಯೂ ಕಾಳಜಿ ವಹಿಸದೆ, ಯಾವ ಷರತ್ತೂ ಹಾಕದೆ ನಮ್ಮ ದೇಶೀಯ ಮಾರುಕಟ್ಟೆಗಳು, ಗುಡಿ ಕೈಗಾರಿಕೆಗಳು ನಾಶವಾಗುವಷ್ಟರ ಮಟ್ಟಿಗೆ ಚೀನಾ ಉತ್ಪನ್ನಗಳನ್ನು ದೇಶದೊಳಗೆ ಬಿಟ್ಟುಕೊಂಡು ಕೇವಲ ಜನರಲ್ಲಿ ಚೀನಾ ಸಾಮಾಗ್ರಿಗಳನ್ನು ತಿರಸ್ಕರಿಸಿ ಎಂದು ವಿನಂತಿಸುವುದು ಇಬ್ಬಗೆ ನೀತಿಯ ಪ್ರಸನ್ನ ಭ್ರಷ್ಟಾಚಾರವಲ್ಲದೆ ಇನ್ನೇನು?
ಹೀಗೆ ಸರಕಾರಿ ಮಟ್ಟದಲ್ಲಿ ಸಾಂಸ್ಥಿಕವಾಗಿ ಹಾಗೂ ಸಾಮಾಜಿಕ ವಲಯದಲ್ಲಿ ವೈಯ್ಯಕ್ತಿಕ ನೆಲೆಯಲ್ಲಿ ಚೀನಾಕ್ಕೆ ಆರ್ಥಿಕ ಪೆಟ್ಟನ್ನು ನೀಡಲೇಬೇಕು. ಇದು ನಿಜಕ್ಕೂ “ಮೇಕ್ ಫಾರ್ ಇಂಡಿಯಾ”(ಭಾರತದ ಬಳಕೆಗಾಗಿ ಉತ್ಪನ್ನಗಳನ್ನು ತಯಾರಿಸಬೇಕಾದ) ಕಾಲವಾಗಬೇಕಿದೆ. ಅದೇ ಚೀನಾದ ಆಕ್ರಮಣಕಾರಿ ಅಹಂಕಾರ ಮತ್ತು ದಬ್ಬಾಳಿಕೆಯ ಪ್ರಭುತ್ವಕ್ಕೆ ನೀಡಬಹುದಾದ ನಿಜವಾದ ಪೆಟ್ಟು. ಒಮ್ಮೆ ನಮ್ಮ ದೇಶ ಆರ್ಥಿಕವಾಗಿ ಸದೃಢವಾದರೆ ಚೀನಾವನ್ನೇನು, ಪಾಕಿಸ್ತಾನ ಸೇರಿದಂತೆ ಭಾರತಕ್ಕೆ ಹಾನಿಯುಂಟುಮಾಡುವ ಯಾರನ್ನು ಬೇಕಾದರೂ ಮಣಿಸಬಹುದು. ಈಗ ಹೇಳಿ ಭಾರತಕ್ಕೆ ಯುದ್ಧ ಬೇಕೆ?
  • ಭಾರತದ ಮುಂದಿರುವ ಡೊಕ್ಲಮ್ ಸವಾಲು; ಚೀನಕ್ಕೆ ಡೊಕ್ಲಮ್‍ನಲ್ಲಿ ಹೋದ ಮಾನ ಕಾಲಾಪಾನಿಯಲ್ಲಿ ದೊರೆತೀತೆ?
ಡೊಕ್ಲಮ್, ಭಾರತ-ಭೂತಾನ್-ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್‍ನ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಈ ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ.

ಮೂರೂ ದೇಶಗಳ ಗಡಿಗಳ ಜಂಕ್ಷನ್ ಕೇಂದ್ರ ಎಲ್ಲಿ ಎಂಬ ಬಗೆಗೆ ಗೊಂದಲಗಳಿವೆ. ಭಾರತದ ಪ್ರಕಾರ ಅದು “ಬಾತಂಗ್ ಲಾ”ದಲ್ಲಿದೆ. ಚೀನಾ ಪ್ರಕಾರ ಬಾತಂಗ್ ಲಾಕ್ಕಿಂತಲೂ  ದಕ್ಷಿಣಕ್ಕಿರುವ ಗಿಪ್ ಮೋಚಿ ಪರ್ವತ ಶ್ರೇಣಿ. ಭೂತಾನ್ ಕೂಡ ಭಾರತ ಹೇಳುವ ವಾಸ್ತವಿಕ ಗಡಿಯನ್ನೇ ಒಪ್ಪುತ್ತದೆ. ಅದರ ಪ್ರಕಾರ ಟಿಬೆಟಿನ ಸಾಕುಪ್ರಾಣಿಗಳಿಗೆ ಹಾಗೂ ಬುಡಕಟ್ಟು ಜನರಿಗೆ ಡೊಕ್ಲಮ್ ತಪ್ಪಲು ಮತ್ತು ದೊರ್ಸ ನಾಲಾ ಪ್ರದೇಶಗಳಿಗೆ ಪ್ರವೇಶವಿದ್ದರೂ ನಿಜವಾದ ತ್ರಿವಳಿ ದೇಶಗಳ ಜಂಕ್ಷನ್ ಕೇಂದ್ರ ಬಾತಂಗ್ ಲಾ ಪ್ರದೇಶವೇ ಆಗಿದೆ. ಇದರಲ್ಲಿ ಚೀನಾ ಮಾತ್ರ ಭಿನ್ನ ರಾಗ ಹಾಡುತ್ತಿದೆ. ಅದೇ ವಾದವನ್ನು ಮುಂದುವರೆಸಿ ಚೀನಾ ತನ್ನ ಗಡಿಯನ್ನು ದಾಟಿ ಮುಂದೆ ಬಂದಿದ್ದರೂ, ಭಾರತವೇ ತಮ್ಮ ಗಡಿ ದಾಟಿಬಂದು ತಮ್ಮ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಸಾರುತ್ತಿರುವುದು.

ಇದು ತಾನು ಮಾಡುವುದು ಮಾತ್ರವೇ ಸರಿ, ಉಳಿದವರವು ಏನು ಮಾಡಿದರೂ ತಪ್ಪು ಎಂಬ ಅಹಂಕಾರದ ವಿಸ್ತರಣೆ. ಸಾಮಾನ್ಯವಾಗಿ ಚೀನಾ ಎಲ್ಲಾ ಪ್ರದೇಶಗಳೊಂದಿಗೆ ಹಾಗೂ ಭಾರತದ ಸಂದರ್ಭದಲ್ಲಿ ವಿಶೇಷವಾಗಿ ಹೀಗೆ ವರ್ತಿಸುವುದು ಅದರ ಚಾಳಿಯಾಗಿದೆ. ಭೌಗೋಳಿಕ ಹಾಗೂ ಭೂಪಟದ ತಿರುಚುವಿಕೆಯ ಅಹಂಕಾರ ಮತ್ತು ಭೂಪಟ ಬದಲಾವಣೆಯ ದಾಳಿ. ಈ ಎರಡು ಸಂಗತಿಗಳು ಚೀನಾದ ಸಾಮ್ರಾಜ್ಯಶಾಲಿ ಮನೋಧರ್ಮ ಮತ್ತು ಅದರ ಸಾರ್ವಭೌಮತ್ವ ಹೇರಿಕೆಯ ನ್ಯಾಯಸಮ್ಮತಿಯನ್ನು ತಿಳಿಸುತ್ತವೆ.

1890ರ ದಶಕದಿಂದಲೂ ಚೀನಾ ಈ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಒನ್ ರೋಡ್- ಒನ್ ಬೆಲ್ಟ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಈ ಭಾಗದತ್ತ ವಿಶೇಷ ಗಮನ ಕೇಂದ್ರೀಕೃತವಾಗಿದೆ. ಚೀನಾದ ಬೀಜಿಂಗ್‍ಗೆ ಸಂಪರ್ಕ ಕಲ್ಪಿಸಲು ಟಿಬೆಟ್ ಭಾಗದಲ್ಲಿ ರಸ್ತೆ, ರೈಲ್ವೆ ಸಂಪರ್ಕಗಳ ಬೆಳವಣಿಗೆ, ಮೂಲಸೌಕರ್ಯಗಳ ಅಭಿವೃದ್ಧಿಯಾಗತೊಡಗಿದೆ. ಟಿಬೆಟ್‍ನ ಲ್ಹಾಸದಿಂದ ಯುಡೊಂಗ್ ಪ್ರಾಂತ್ಯಕ್ಕೆ ನಿರ್ಮಿಸಲಾಗಿರುವ 500 ಕಿಮೀ ದೂರದ ರಸ್ತೆಯನ್ನು ಕೇವಲ 8 ಘಂಟೆಯಲ್ಲಿ ಕ್ರಮಿಸಲು ಸಾಧ್ಯವಿದೆ. ಲ್ಹಾಸ-ಶಿಗಟ್ಸೆ ರೈಲ್ವೆ ಸಂಪರ್ಕ ಅಭಿವೃದ್ಧಿಯಾದ ಮೇಲೆ ಅದರ ಮುಂದಿನ ಪ್ರದೇಶ ಡೊಕ್ಲಮ್‍ನತ್ತ ಚೀನಾ ಗುರಿ ನೆಟ್ಟಿದೆ.

ಪ್ರಾದೇಶಿಕ ಹಾಗೂ ಜಾಗತಿಕ ಅಧಿಕಾರ ರಾಜಕಾರಣ, ಸಾಮ್ರಾಜ್ಯ ವಿಸ್ತರಣೆಯ ಸೂಕ್ಷ್ಮತೆಗಳನ್ನು ಚೆನ್ನಾಗಿ ಅರಿತಿರುವ ಚೀನಾ ತನ್ನದಲ್ಲದ ಡೊಕ್ಲಮ್ ಹಿಂದೆ ಬಿದ್ದಿರುವುದು. ಚೀನಾಕ್ಕೆ ಡೊಕ್ಲಮ್ ಪ್ರದೇಶವನ್ನು ಹೇಗಾದರೂ ಪಡೆಯಲೇಬೇಕೆಂಬ ತವಕ ತೀವ್ರವಾಗಿದ್ದು 1984ರಿಂದ. ಆದ್ದರಿಂದಲೇ 1984ರಿಂದ ಇಂದಿನವರೆಗೂ ಚೀನಾ, ಭೂತಾನ್‍ದೊಂದಿಗೆ 24 ಸುತ್ತುಗಳ ಸಮಾಲೋಚನಾ ಮಾತುಕತೆಗಳನ್ನು ಮುಂದುವರೆಸಿಕೊಂಡು ಬಂದಿದೆ. ಆ ಮಾತುಕತೆಗಳ ಕೇಂದ್ರ ಡೊಕ್ಲಮ್ ಎಂಬುದೂ ವಿಶೇಷ. ಎಷ್ಟರ ಮಟ್ಟಿಗೆಂದರೆ 269 ಚದರ ಕಿಲೋಮೀಟರ್ ವಿಸ್ತೀರ್ಣದ ಅವಿಭಜಿತ ಡೋಕ್ಲಮ್ ಪ್ರಸ್ಥಭೂಮಿಯನ್ನು ಪಡೆಯುವುದಕ್ಕಾಗಿ ಭೂತಾನ್‍ನ ಉತ್ತರಕ್ಕಿರುವ ಚೀನಿ ಹಿಡಿತದಲ್ಲಿರುವ ಸುಮಾರು 495 ಚದರ ಕಿಲೋಮೀಟರ್ ವ್ಯಾಪ್ತಿಯ ಪಸಂಲಗ್ ಮತ್ತು ಜಾಕರ್ಲಂಗ್ ಕಣಿವೆ ಬಿಟ್ಟುಕೊಡುವ ಪ್ರಸ್ತಾಪವನ್ನಿಟ್ಟಿತ್ತು. ಚೀನಾ ಅದೇ ಅವಕಾಶವನ್ನು ಮುಂದಿನ ಎಲ್ಲಾ ಸುತ್ತುಗಳಲ್ಲಿಯೂ ಭೂತಾನ್‍ಗೆ ನೀಡಿದೆ. ಭಾರತದ ಮಧ್ಯಪ್ರವೇಶ ಹಾಗೂ ಭೂತಾನ್‍ಗೆ ತನ್ನ ನಿರ್ಣಯವನ್ನು ಬದಲಾಯಿಸುವಂತೆ ನೀಡಿದ ಮಾರ್ಗದರ್ಶನದ ಫಲವಾಗಿ ಚೀನಾದ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲಿಲ್ಲ. ಈ ವಿಚಾರದಲ್ಲಿ ಭಾರತದ ಸಮಯಪ್ರಜ್ಞೆ, ದೂರದೃಷ್ಟಿ ಹಾಗೂ ಭೂತಾನ್ ಮೈತ್ರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು.

ಪ್ರಾರಂಭದಿಂದಲೂ ಭಾರತ ಹಾಗೂ ಭೂತಾನ್ ಪರಮ ಮಿತ್ರ ರಾಷ್ಟ್ರಗಳು. ಭೂತಾನ್ ಅಭಿವೃದ್ಧಿಗಾಗಿ ಭಾರತದ “ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಾರ್ಡರ್ ರೋಡ್ ಆರ್ಗನೈಜೆಶನ್)” ‘ಆಪರೇಶನ್ ದಂತಕ್’ ಹೆಸರಿನಲ್ಲಿ 1,500ಕ್ಕೂ ಅಧಿಕ ಕಿಲೋಮೀಟರ್‍ಗಳ ರಸ್ತೆಯನ್ನು ನಿರ್ಮಿಸಿದೆ. ಆ ರಸ್ತೆಯ ಮಾರ್ಗಗಳು ಭಾರತದತ್ತ ಭೂತಾನವನ್ನು ಇನ್ನಷ್ಟು ಹತ್ತಿರಗೊಳಿಸಿದೆ. ಇಂಧನ, ವಿದ್ಯುತ್, ಶಿಕ್ಷಣ, ಆರೋಗ್ಯ ಇಂತಹ ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತ ಭೂತಾನ್‍ಗೆ ಸಹಾಯಹಸ್ತ ಚಾಚಿಕೊಂಡು ಬಂದಿದೆ. ಹಾಗಾಗಿಯೇ ಈ ಎರಡೂ ದೇಶಗಳ ಸ್ನೇಹ ಅಗಾಧವಾಗಿ ಗಾಢವಾಗಿರುವುದು.

ಸಿಕ್ಕಿಂನ ದಿವಾನರಾಗಿದ್ದ ನಾರಿ ರುಸ್ತುಂಜಿ ತಮ್ಮ ಪುಸ್ತಕ “ಡ್ರ್ಯಾಗನ್ ಕಿಂಗ್ಡಮ್ ಇನ್ ಕ್ರೈಸಿಸ್”ನಲ್ಲಿ ಹೇಳಿರುವಂತೆ “ಚೀನಾ ಭೂತಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ ಆ ದೇಶವನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳಬೇಕೆಂಬ ಪ್ರಬಲ ಪ್ರಯತ್ನದಲ್ಲಿದೆ. ಆದರೆ ಚೀನಾದ ಅಂತಹ ಎಲ್ಲ ಪ್ರಯತ್ನಗಳನ್ನು ಭೂತಾನ್ ನಿರಾಕರಿಸಿದೆ. ಮೇಲಾಗಿ ಭೂತಾನದಿಂದ ಹೊರಡುವ ಎಲ್ಲಾ ರಸ್ತೆಗಳು ಭಾರತದತ್ತ ತೆರಳುತ್ತವೆ ಹೊರತು, ಟಿಬೆಟ್‍ನತ್ತ ಯಾವೊಂದು ರಸ್ತೆಯ ಕುರುಹೂ ಕಾಣಿಸುವುದಿಲ್ಲ”.

2007ರಲ್ಲಿ ಪುರ್ನರಚಿತಗೊಂಡ ಭಾರತ-ಭೂತಾನ್ ಸ್ನೇಹ ಒಪ್ಪಂದ ಎರಡೂ ದೇಶಗಳನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಹೊಸ ಒಪ್ಪಂದವು ಭೂತಾನ್‍ನ ವಿದೇಶಾಂಗ ನೀತಿಗಳನ್ನು ನಿರ್ಧರಿಸುವ ಅಧಿಕಾರವನ್ನು ಭಾರತಕ್ಕೆ ನೀಡಿತು. ಆದರೆ 2008ರ ತರುವಾಯ ಭೂತಾನ್ ಮೊತ್ತ ಮೊದಲ ಬಾರಿ ಜನರಿಂದ ಆಯ್ಕೆಯಾದ ಪ್ರಧಾನಿಯನ್ನು ಪಡೆದಿತ್ತು. ಜಿಗ್ಮೆ ತಿನ್ಲೆ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೇ ಭೂತಾನ್ ದೇಶವನ್ನು ಭಾರತದ ಛಾಯೆಯಡಿಯಿಂದ ಸ್ವತಂತ್ರವಾಗಬೇಕೆಂದು ಸ್ವತಂತ್ರ ವಿದೇಶಿ ನೀತಿಗಳನ್ನು ನಿರೂಪಿಸಲು ಆರಂಭಿಸಿದ್ದರು. ಈ ಕಾಲದಲ್ಲಿ ಭಾರತ-ಭೂತಾನ್ ದೂರವಾಗುತ್ತಿರುವಂತೆ ತೋರಿತ್ತು. ಭೂತಾನ್ ತನಗೆ ಬೇಕಾದ್ದನ್ನೇ ಆರಿಸಕೊಳ್ಳಲಿ ಎಂದು ಅದರಷ್ಟಕ್ಕೇ ಬಿಟ್ಟಿದ್ದ ಭಾರತವೂ ಈ ಸಮಯದಲ್ಲಿ ಈಶಾನ್ಯ ಏಷ್ಯಾ ಹಾಗೂ ಪಶ್ಚಿಮ ದೇಶಗಳತ್ತ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿತ್ತು.

ಮುಂದಿನ ಐದು ವರ್ಷಗಳ ಜಿಗ್ಮೆ ತಿನ್ಲೆ ಅಧಿಕಾರವಧಿಯಲ್ಲಿ ಭೂತಾನ್ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪ್ರಾರಂಭಿಸಲು ಹೊರಟಿತ್ತು. ಅದೇ ರೀತಿ ಡೊಕ್ಲಮ್ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಡುವ ವಿಫಲ ಯೋಚನೆಯನ್ನು ಮಾಡಲಾಗಿತ್ತು. ಅದೇ ಸಮಯಕ್ಕಾಗಿ ಕಾಯುತ್ತಿದ್ದ ಚೀನಾ, ಡೊಕ್ಲಮ್ ಪ್ರದೇಶದಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಿತು. ಅನಧಿಕೃತ ರಸ್ತೆ ನಿರ್ಮಾಣದ ಕುರಿತು ಅಂದಿನ ರಾಯಲ್ ಭೂತಾನ್ ಸೇನೆಯಾಗಲಿ, ಜನರಿಂದ ಆಯ್ಕೆಯಾಗಿದ್ದ ಭೂತಾನ್ ಸರಕಾರವಾಗಲಿ ಯಾವುದೇ ಚಕಾರ ಎತ್ತಲಿಲ್ಲ. ಪರಿಣಾಮ ಡೊಕ್ಲಮ್ ಇಂದು ಭಾರತ-ಚೀನಾ ನಡುವೆ ದೊಡ್ಡ ಮಟ್ಟದ ಸಮಸ್ಯೆಯಾಗಿ ಉಲ್ಬಣಿಸಿದೆ ಹಾಗೂ ಈಗಿನ ಉಭಯ ದೇಶಗಳ ನಡುವಿನ ಪರಸ್ಪರ ಕಚ್ಚಾಟಕ್ಕೆ ಕೇಂದ್ರಬಿಂದು.
2013ರ ಹೊತ್ತಿಗೆ ಭಾರತಕ್ಕೆ ಭೂತಾನ್‍ನಲ್ಲಿ ಪರಿಸ್ಥಿತಿ ಕೈತಪ್ಪುತ್ತಿರುವುದರ ಮನವರಿಕೆಯಾಯಿತು. ಆದ್ದರಿಂದಲೇ ಭೂತಾನ್ ಸಾರ್ವಜನಿಕ ಚುನಾವಣೆಯ ಹೊತ್ತಿಗೆ ಸರಿಯಾಗಿ, ಮನಮೋಹನ್ ಸಿಂಗ್ ನೇತೃತ್ವದ ಭಾರತ ಸರಕಾರ ಭೂತನ್‍ಗೆ ನೀಡುತ್ತಿದ್ದ ಇಂಧನ ಸಹಾಯಧನ(ಸಬ್ಸಿಡಿ)ವನ್ನು ತಕ್ಷಣ ನಿಲ್ಲಿಸಿತು. ಪರಿಣಾಮ ಅಂದುಕೊಂಡಂತೆ ಜಗ್ಮೆ ತಿನ್ಲೆಗೆ ಚುನಾವಣೆಯಲ್ಲಿ ಸೋಲುಂಟಾಯಿತು. ಭೂತಾನ್‍ನಲ್ಲಿ ನೂತನವಾಗಿ ಆಯ್ಕೆಯಾದ ಶೆರಿಂಗ್ ತೊಬ್ಗೆ ಸರಕಾರದೊಂದಿಗೆ ಸಂಬಂಧ ಗಟ್ಟಿಗೊಳಿಸುವ ಯಾವ ಅವಕಾಶವನ್ನೂ ನವದೆಹಲಿ ಬಿಡಲಿಲ್ಲ. ಭೂತಾನ್ ಕೂಡ ಭಾರತದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿತು. ಭೂತಾನ್ ಮೇಲಿನ ಭಾರತದ ಪ್ರಭಾವಳಿಯನ್ನು ಅರ್ಥಮಾಡಿಕೊಂಡ ಚೀನಾ, ಭೂತಾನ್‍ನೊಂದಿಗಿನ ಸಮಾಲೋಚನೆಯಿಂದ ಡೊಕ್ಲಮ್ ವಿಷಯವನ್ನು ಹಿನ್ನೆಲೆಗೆ ಸರಿಸಿತು. 2014ರ ಸಾರ್ವಜನಿಕ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದ ನರೇಂದ್ರ ಮೋದಿ ನೇತೃತ್ವದ ನೂತನ ಸರಕಾರ ಭಾರತದಲ್ಲಿ ರಚನೆಯಾಯಿತು. ಅದಾಲೇ ಭಾರತ-ಭೂತಾನ್ ಸಾಂಪ್ರದಾಯಿಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಕಾಲ ಪಕ್ವವಾಗಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ಕಾಣ್ಕೆಯಿಂದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕೆ ಮೊದಲು ಭೇಟಿ ಕೊಟ್ಟ ದೇಶ ಭೂತಾನ್. ಅನೇಕ ಹೊಸ ಒಪ್ಪಂದಗಳ ಜೊತೆಗೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ವಿವಿಧ ಮಜಲುಗಳಲ್ಲಿ ವಿಸ್ತರಿಸಲಾಯಿತು. ಅದಾಗಿ ಒಂದು ವರ್ಷದೊಳಗೆ ಚೀನಾ ದೇಶ ಮಾನಸ ಸರೋವರ ಯಾತ್ರೆಗೆ ಪೂರಕವಾದ ಸಿಕ್ಕಿಂ ಮೂಲಕ ಹಾದುಹೋಗುವ “ನಾಥುಲಾ” ಕಣಿವೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿತು.(ಡೊಕ್ಲಮ್ ನೆಪದಲ್ಲಿ ಅದನ್ನು ಈಗ ಚೀನಾ ಮತ್ತೆ ಮುಚ್ಚಿದೆ.)

ಅದೇ ಕಾರಣದಿಂದ ಇಂದಿನ ಈ ಬಿಗಿ ಸಮಯದಲ್ಲೂ ಚೀನಾದ ಯಾವ ಒತ್ತಡಕ್ಕೂ ಮಣಿಯದೆ ಭೂತಾನ್ ತನ್ನ ಪರಂಪರಾಗತ ನಂಬಿಕೆಯಂತೆ ಭಾರತದ ಜೊತೆಗೆ ಭದ್ರವಾಗಿ ನಿಂತಿರುವುದು. ಅಸಲಿಗೆ ಡೊಕ್ಲಾಮ್ ಭೂತಾನ್‍ನ ಆಂತರಿಕ ಸಮಸ್ಯೆ. ಆದರೂ 2007ರ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ವರ್ಧನೆಯ ಒಪ್ಪಂದದ ಫಲವಾಗಿ ಮತ್ತು ತನ್ನ ಹಿತಾಸಕ್ತಿಯನ್ನೂ ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಭೂತಾನ್‍ನ ಸಮಸ್ಯೆಗೆ ಹೆಗಲು ಕೊಟ್ಟು ನಿಂತಿದೆ.

ಆದರೆ ಭಾರತದ ಈ ನಿರೀಕ್ಷಿತ ನಡೆಗೆ ಚೀನಾ ಮತ್ತೊಂದು ತಂತ್ರ ರೂಪಿಸಿದಂತಿದೆ. ತನ್ನದಲ್ಲದ ನೆಲದಲ್ಲಿ ಭಾರತೀಯ ಸೇನೆ ಬೀಡುಬಿಟ್ಟಿರುವುದನ್ನು ಚೀನಾ ಮಾಧ್ಯಮ ಬೇರೆಯದೇ ರೀತಿಯಲ್ಲಿ ಭೂತಾನ್ ಜನತೆಗೆ ತಲುಪಿಸುತ್ತಿವೆ. ಭೂತಾನ್ ಜನತೆಯಲ್ಲಿ ಭಾರತವೆಂದರೆ ತನ್ನ ನೆರೆಯ ರಾಷ್ಟ್ರಗಳ ವಿಚಾರದಲ್ಲಿ ಅನಗತ್ಯವಾಗಿ ಮೂಗುತೂರಿಸುವ ದೊಡ್ಡಣ್ಣ ಹಾಗೂ ಅದರ ಸ್ವಾರ್ಥಕ್ಕಾಗಿ ಭೂತಾನ್ ನೆಲವನ್ನು ಬಳಸಿಕೊಳ್ಳುತ್ತಿದೆ ಎಂಬ “ಭಾರತ ವಿರೋಧಿ” ಭಾವನೆಯನ್ನು ಭೂತಾನ್ ಜನತೆಯಲ್ಲಿ ಉದ್ದೇಶಪೂರ್ವಕವಾಗಿ ಮೂಡಿಸುವ ಪ್ರಯತನ್ಛಿನಾ ಮಾಡುತ್ತಿದೆ. ಇದು ಇತ್ತೀಚೆಗೆ ನೇಪಾಳದ ಜನತೆಯಲ್ಲಿ ಭಾರತ ವಿರೋಧಿ ಭಾವನೆಯನ್ನು ಮೂಡಿಸುವ ಪ್ರಯತ್ನದ ಮುಂದುವರೆದ ಭಾಗ. ಆ ಮೂಲಕ ಭಾರತ-ಭೂತಾನ್ ಸಂಬಂಧವನ್ನು ಸಡಿಲಗೊಳಿಸುವುದು. ನಂತರ ಭಾರತದಿಂದ ದೂರಾದ ದುರ್ಬಲ ಭೂತಾನ್ ದೇಶವನ್ನು ತನ್ನ ಹಿಡಿತಕ್ಕೆ ತಂದುಕೊಂಡು ಡೊಕ್ಲಾಮ್ ಪ್ರದೇಶವನ್ನು ಸುಪರ್ದಿಗೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆ ಚೀನಾದ್ದು. ಒಂದು ವೇಳೆ ನೇರ ಯುದ್ಧವಾಗದಿದ್ದರೂ ಈ (ಕು)ತಂತ್ರದಿಂದ ತನ್ನ ಗುರಿಯನ್ನು ಸಾಧಿಸುವ ಕುಟಿಲ ನೀತಿ ಇದರಲ್ಲಿ ಗೋಚರವಾಗುತ್ತಿದೆ. ಅದಕ್ಕೆ 55ದಿನಗಳ ಕಾಲ ಈ ಸಮಸ್ಯೆಯನ್ನು ವಿಸ್ತರಿಸಿದ್ದು. ಹಾಗೂ ಇನ್ನಷ್ಟು ದಿನಗಳ ಕಾಲ ಇದನ್ನು ಮುಂದುವರೆಸುವಂತೆ ತೋರುತ್ತಿದೆ.

ಈ ಹೊತ್ತಿನಲ್ಲಿ ಭಾರತದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಭಾರತವನ್ನು, ಇಲ್ಲಿನ ನಾಯಕತ್ವವನ್ನು ವಿಜೃಂಭಿಸಿಕೊಳ್ಳುವ ಭರಾಟೆಯಲ್ಲಿ ಭೂತಾನದ ಅಸ್ಮಿತೆ, ಸ್ವಾಭಿಮಾನಕ್ಕೆ ಕುಂದುಂಟಾಗದಂತೆ ಎಚ್ಚರವಹಿಸಬೇಕು. ಕನಿಷ್ಟ ಸರಕಾರ, ಜನಪ್ರತಿನಿಧಿಗಳು ಯಾವುದೇ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬಾರದು. ಇತ್ತೀಚೆಗೆ ವಿದೇಶಾಂಗ ಇಲಾಖೆಗೆ ಸಂಬಂಧಿಸಿದ ಪ್ರತಿನಿಧಿಯೊಬ್ಬರು ಮಾತಿನ ಭರಾಟೆಯಲ್ಲಿ “ಚೆಂಡು ಮೊದಲು ಬಂದದ್ದೋ ಅಥವಾ ಚೆಂಡು ಬರುವ ಮುನ್ನವೇ ದಾಂಡಿಗ ಹೊಡೆಯುವುದಕ್ಕೆ ತಯಾರಾಗಿ ನಿಂತಿದ್ದನೋ” ಎಂಬ ಮಾತುಗಳನ್ನಾಡಿದ್ದರು. ನೇರವಾಗಿ ಈ ಹೇಳಿಕೆಯಲ್ಲಿ ಯಾವುದೇ ಸಮಸ್ಯೆ ಗೋಚರಿಸುವುದಿಲ್ಲ. ಆದರೆ ಇದರಾಳದಲ್ಲಿ ಭೂತಾನ್‍ನ ಸಾರ್ವಭೌಮತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಮನಸ್ಥಿತಿಯಿದೆ. ಇಂತಹ ಹೇಳಿಕೆಗಳು ಗಡಿಯ ಆ ಕಡೆಗಿರುವ ಭೂತಾನ್ ಜನರ ಮೇಲೆ ಭಾರತದ ಕುರಿತು ಬೇರೆಯದೆ ರೀತಿಯ ಪರಿಣಾಮವನ್ನು ಬೀರಬಹುದೆಂಬ ಸೂಕ್ಷ್ಮ ನಮಗಿರಬೇಕು.

  • ಚೀನಾದ ಸಾಮ್ರಾಜ್ಯಶಾಹಿ ಅಹಂಕಾರದ ಹೆಡೆಮುರಿ ಕಟ್ಟಿದ ಭಾರತ:
ಈಗ ಡೊಕ್ಲಮ್‍ನಲ್ಲಿ ಚೀನಾದ ರಸ್ತೆ ನಿರ್ಮಾಣ ನಿಂತಿದೆ. ಉತ್ತರಖಂಡದ ಕಾಲಾಪಾನಿಗೆ ಹೊಕ್ಕುತೇವೆಂದರೂ ಅಷ್ಟೇ, ಯುದ್ಧಕ್ಕೆ ಸನ್ನದ್ಧರಾಗಿ ಎಂದರೂ ಅಷ್ಟೇ, ಭಾರತ ತಮ್ಮ ನ್ಯಾಯಯುತ ನೆಲೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸಮಸ್ಯೆ ನಿವಾರಣೆಗೆ ಮಾತುಕತೆಯ ಪರಿಹಾರ ಸಿಗಬೇಕಾದರೆ ಭಾರತ ಅಲ್ಲಿಂದ ಜಾಗ ಖಾಲಿಮಾಡಬೇಕೆಂಬ ಚೀನಾದ ಬೇಡಿಕೆ ಸೋತಿದೆ. ಪ್ರತಿಯೊಂದು ಸಂದರ್ಭದಲ್ಲಿ ಟಿಪಾಯಿ ಮೇಲೆ ಏನಿರಬೇಕೆಂದು ನಿರ್ಧರಿಸುವ ಚೀನಾದ ಷರತ್ತು ಈ ಬಾರಿ ಚಲಾವಣೆಯಾಗಿಲ್ಲ. ಭರತ-ಚೀನಾ ಗಡಿಯ ಲಡಾಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ, “ಮ್ಯಾಕ್ ಮೋಹನ್” ಗಡಿ ಅಸ್ಪಷ್ಟ ಕಾಲ್ಪನಿಕ ರೇಖೆಯೆಂಬ ಕಾರಣನೀಡಿ ಆಗಾಗ ಸೇನೆಗಳ ನಡುವೆ ಸಣ್ಣ ಮಟ್ಟಿನ ಗಡಿದಾಟುವಿಕೆ ಸಹಜವೆಂಬಂತೆ ನಿರಂತರವಾಗಿ ನಡೆದಿತ್ತು. ಆದರೆ ಡೊಕ್ಲಮ್ ಬಿಕ್ಕಟ್ಟನ್ನು ಅವುಗಳಿಗೆ ಹೋಲಿಸಲಾಗುವುದಿಲ್ಲ. ಇದೊಂದು ವಿಶೇಷ ಸಂದರ್ಭ.

ಇಲ್ಲಿ ಬಹುಮುಖ್ಯ ಸಂಗತಿಯೊಂದಿದೆ, ಅದೆಂದರೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಸೊಕ್ಕು ಮುರಿಯುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಅದು ಅಮೆರಿಕದ ಸ್ನೇಹದಿಂದ ಹಿಡಿದು, ದಲೈ ಲಾಮಾ, ಅಮೆರಿಕದ ರಾಯಭಾರಿ ರಿಚರ್ಡ್ ವರ್ಮಾರ ತವಾಂಗ್ ಭೇಟಿ, ಒಬಿಒಆರ್ ಪಾಕ್ ಆಕ್ರಮಿತ ಕಾಶ್ಮೀರದಿಂದ ಹೋಗುತ್ತದೆ ಎಂದು ಪ್ರತಿಭಟಿಸಿ ಅದರಿಂದ ಹೊರಗುಳಿದ ರೀತಿ.. ಇಂತಹ ಅನೇಕ ಕಾರಣಗಳು ಚೀನಾ ಮಾತಿಗೆ ಮುಂಚೆ ಹಾಕುತ್ತಿದ್ದ ಷರತ್ತುಗಳನ್ನು ಹೆಡೆಮುರಿಕಟ್ಟಿದೆ. ಕಾಲಪಾನಿಗೆ ಹೊಕ್ಕರೂ, ಡೊಕ್ಲಮ್‍ನಲ್ಲಿ ಹೋದ ಮಾನ ಹಿಂತಿರುಗದು ಎಂಬ ಸತ್ಯ ಚೀನಾ ಇನ್ನಷ್ಟೇ ಅರಿಯಬೇಕಿದೆ.

ಯಾವುದೇ ರಾಜಕಾರಣಕ್ಕೆ ಲವಲೇಶವೂ ಇಲ್ಲದಂತೆ ಒಂದು ಗುರುತರ ವಾಸ್ತವ ಸತ್ಯವನ್ನು ಭಾರತೀಯರೆಲ್ಲರೂ ಗಮನಿಸಬೇಕು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತ ದೇಶ, ಭಾರತ ಸೇನೆ, ಸಾಮ್ರಾಜ್ಯಶಾಹಿ ಚೀನಾದ ಸವಾಲಿಗೆ ಅಷ್ಟೇ ಧೈರ್ಯದಿಂದ ಪ್ರತ್ಯುತ್ತರ ಕೊಡುವುದಕ್ಕೆ ಎದೆಕೊಟ್ಟು ನಿಂತಿವೆ. ಇದು ಭಾರತದ ಶಕ್ತವರ್ಧನೆ, ಭರವಸೆ, ಹಾಗೂ ಸ್ವ ಸಾಮಥ್ರ್ಯ ಸ್ಥಾಪನೆಗೆ 21ನೇ ಶತಮಾನದಲ್ಲಿ ಹಾಕುತ್ತಿರುವ ಅಡಿಗಲ್ಲು ಎಂದೇ ಭಾವಿಸಬೇಕು. ನಾವು ಕೇವಲ ಪಾಕಿಸ್ತಾನದ ಮುಂದಷ್ಟೇ ಪರಾಕ್ರಮಿಗಳಲ್ಲ, ಅಗತ್ಯಬಿದ್ದರೆ ಚೀನಾವನ್ನು ಹಿಮ್ಮೆಟ್ಟಿಸಬಲ್ಲೆವು ಎಂಬುದನ್ನು ಈ 55ದಿನಗಳ ಅವಧಿಯಲ್ಲಿ ಚೀನಾ ಹಾಗೂ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದೆ.
  • ಮುಂದಿನ ಹಾದಿ:

ಜುಲೈ ತಿಂಗಳಿನಲ್ಲಿ ನಡೆದಿದ್ದ ಗ20 ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ. ಮುಂಬರುವ ಬ್ರಿಕ್ಸ್ ಸಮಾವೇಶದಲ್ಲೂ ಇದು ನಡೆಯುವುದು ಅನುಮಾನ. ಇದರಿಂದ ಚೀನಾ ಕಡೆಯಿಂದ ಬರುತ್ತಿರುವ ಸಂದೇಶ ಸ್ಪಷ್ಟವಾಗಿದೆ. ಚೀನಾದ ಪೂರ್ವ ಷರತ್ತನ್ನು ಒಪ್ಪದ ಹೊರತು ಚೀನಾ, ನಾಯಕ ಮಟ್ಟದ ಮಾತುಕತೆಗೆ ಸಿದ್ಧವಿಲ್ಲ. ಯಾವುದೇ ಪೂರ್ವ ಷರತ್ತುಗಳನ್ನು ವಿಧಿಸದಿದ್ದರೆ ಭಾರತ ಮಾತುಕತೆಗೆ ಸದಾ ಸಿದ್ಧ. ಈ ವ್ಯತ್ಯಾಸ ಎರಡೂ ದೇಶಗಳ ಪ್ರತಿಕ್ರಿಯೆಗಳಲ್ಲೂ ವ್ಯಕ್ತವಾಗಿದೆ. ತನ್ನ ಷರತ್ತನ್ನು ಇತರರು ಒಪ್ಪಬೇಕೆಂಬ ಚೀನಾದ ತೀವ್ರಗಾಮಿ ನಡೆ ಬಹಳ ಹಿಂದಿನದ್ದು. ಮೊದಲಿನಿಂದಲೂ ಸಮಯದ ಅನಿವಾರ್ಯತೆಗೆ ತಕ್ಕಂತೆ ತೂಕದ ಪ್ರತಿಕ್ರಿಯೆ; ಹಿತಮಿತವಾಗಿ ಉತ್ತರಿಸುವ ಭಾರತದ ಧೋರಣೆಯೂ ಇಲ್ಲಿ ಸ್ಪಷ್ಟ.

ರಾಜತಾಂತ್ರಿಕ ಮಾತುಕತೆಗಳಲ್ಲಿ ಬಗೆಹರಿಯದ ಸಮಸ್ಯೆಯೇ ಇಲ್ಲ. ಅದಕ್ಕೆ ಬೇಕಿರುವುದು ಕಕ್ಷಿದಾರರ ಇಚ್ಛಾಶಕ್ತಿ. ಸಧ್ಯದ ಪರಿಸ್ಥಿತಿಯಲ್ಲಿ ಡೊಕ್ಲಮ್ ಸಮಸ್ಯೆಯ ಪರಿಹಾರಕ್ಕೂ ಉಭಯ ದೇಶಗಳ “ವಿಶೇಷ ಪ್ರತಿನಿಧಿಗಳ ಸಭೆ”ಯ ಮೊರೆ ಹೋಗುವುದು ಒಂದು ಉತ್ತಮ ಆಯ್ಕೆಯಾಗಿ ತೋರುತ್ತದೆ. ಇದರಲ್ಲಿ ಚೀನಾ-ಭೂತಾನ-ಭಾರತ ಮೂರೂ ದೇಶಗಳಿಗೂ ಲಾಭವಾಗದಿದ್ದರೂ, ಮೂರೂ ದೇಶಗಳು ಈ ಆಯ್ಕೆಯ ಸಾಧ್ಯತೆಗಳನ್ನು ಬಳಸಿಕೊಳ್ಳುವುದರಿಂದ ಯಾವುದೇ ನಷ್ಟವಾಗುವುದಿಲ್ಲ. ಯಾವುದೇ ದೇಶದ ಅಭಿವೃದ್ಧಿಗೆ ಯುದ್ಧ ಮಾರ್ಗಕ್ಕಿಂತ ಪೂರ್ವ ಷರತ್ತುಗಳಿಲ್ಲದ ಮುಕ್ತ ಮಾತಿನ ಮಾರ್ಗವೇ ಉತ್ತಮ.
  • ದ್ವಿಪಕ್ಷೀಯವಾಗಿ ಚೀನದಷ್ಟೇ ಆಕ್ರಮಣಕಾರಿ ಹಾಗೂ ಬಹುಪಕ್ಷೀಯ ಸಂಬಂಧದಲ್ಲಿ ಚೀನಾರಹಿತ ವ್ಯವಹಾರ:

ಪರಿಸ್ಥಿತಿಗಳು ಬದಲಾದ ಕಾಲದಲ್ಲಿ ಭಾರತ ಚೀನಾದೊಂದಿಗೆ ವ್ಯವಹರಿಸುವಾಗ ಮಹತ್ವದ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ದ್ವಿಪಕ್ಷೀಯ ವ್ಯವಹಾರದ ನೆಲೆಯಲ್ಲಿ ಭಾರತ ಚೀನಾದ ಆಕ್ರಮಣಶೀಲತೆಗೆ ಸರಿಸಾಟಿಯಿಲ್ಲದಂತೆ ಆಕ್ರಮಣಶೀಲವಾಗಬೇಕಿದೆ. ಅಂದರೆ ಚೀನಾ ಪ್ರತೀ ನಡೆಗೂ ಭಾರತದ ಪ್ರತಿ ನಡೆಯನ್ನು ಇಡಬೇಕು. ಇದನ್ನು ಸರಳವಾಗಿ ಅಥೈಸಿಕೊಳ್ಳಲು ಪ್ರಾಯಶಃ ಚದುರಂಗ ಆಟದ ಸೂತ್ರಗಳು ನಮ್ಮ ಸಹಾಯಕ್ಕೆ ಬರಬಹುದು.

ಇನ್ನು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕವಾಗಿ ಚೀನಾವನ್ನು ಎದುರಿಸುವಾಗ, ಚೀನಾವನ್ನು ಮೀರಿಸುವ ಯಾವುದೇ ಅವಕಾಶವನ್ನು ಭಾರತ ಬಿಡಬಾರದು. ಆದರೆ ಅದೇ ಹೊತ್ತಿಗೆ ದ್ವಿಪಕ್ಷೀಯ ಸಂಬಂಧದಲ್ಲಿ ತೋರಬೇಕಾದ ವರ್ತನೆ ಭಿನ್ನವಾಗಿ ಸರಳ ನಾಯತ್ವದ ತಂತ್ರವನ್ನು ಅಳವಡಿಸಿಕೊಳ್ಳಬೇಕು. 21ನೇ ಶತಮಾನದಲ್ಲಿ ಚೀನಾವನ್ನು ಆರ್ಥಿಕವಾಗಿ ಮಣಿಸಲು ಚೀನಾ ಸಾಮಾಗ್ರಿಗಳನ್ನು ಬಹಿಷ್ಕರಿಸುವ ಅನಿವಾರ್ಯವಿರುವಂತೆ, ಭಾರತದ(ಹಾಗೂ ದಕ್ಷಿಣ ಏಷ್ಯಾ ದೇಶಗಳ) ಆಂತರಿಕ ಭದ್ರತೆ, ಸಾರ್ವಭೌಮತೆ ಮತ್ತು ಆರ್ಥಿಕತೆಯ ರಕ್ಷಣೆಯಾಗಬೇಕಾದರೆ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಚೀನಾದ ಮಹತ್ವವನ್ನು ಶೂನ್ಯಕ್ಕಿಳಿಸಬೇಕು. ಸಾರ್ಕ್, ಸಾಸೆಕ್, ಬಿಬಿಐಎನ್, ಸಾಗರ್ ಮೊದಲಾದ ಬಹುಪಕ್ಷೀಯ ಪ್ರಾದೇಶಿಕ ಸಂಘಟನೆಗಳನ್ನು ಗಟ್ಟಿಗೊಳಿಸಿ, ಅಲ್ಲಿ ಭಾರತ ತನ್ನ ನಾಯಕತ್ವವನ್ನೂ, ಮಾರ್ಗದರ್ಶಕ ಸ್ಥಾನವನ್ನೂ ಮತ್ತು ಪ್ರಾದೇಶಿಕವಾಗಿ ಚೀನಾರಹಿತವಾಗಿ ಉಳಿದವರೆಲ್ಲರ ಜೊತೆಯಾಗಿ, ಒಗ್ಗಟ್ಟಿನಲ್ಲಿ ಬೆಳೆಯಬೇಕಾದ ಮಾರ್ಗವನ್ನು ಪುನರ್ ಸಂಘಟಿಸಬೇಕಾದ ತುರ್ತು ಅನಿವಾರ್ಯತೆಯಿದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts