ಜುಲೈ 4ರಂದು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಬಿ.ಸಿ.ರೋಡಿನ ತನ್ನ ಉದಯ ಲಾಂಡ್ರಿಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದರೆ, ಜುಲೈ 7 ಅವರು ಮೃತಪಟ್ಟಿರುವುದಾಗಿ ಘೋಷಣೆಯಾದ ದಿನ. ಇದೀಗ ಆಗಷ್ಟ್ 15ರಂದು ಈ ಹತ್ಯೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿರುವುದಾಗಿ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ಬಂಧನ ಪ್ರಕಟಿಸುವವರೆಗೆ ತೆಗೆದುಕೊಂಡ ಅವಧಿ ಭರ್ತಿ 42 ದಿನಗಳು.
ಅಷ್ಟರಾಗಲೇ, ಈ ಘಟನೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಕಲ್ಲಡ್ಕದಲ್ಲಿ ಮೇ 26, ಜೂನ್ 13ರಂದು ನಡೆದ ಅಹಿತಕರ ಘಟನೆಗಳು, ಇದರ ಜೊತೆಗೆ ತುಂಬೆ, ಮೇಲ್ಕಾರ್ ನಲ್ಲಿ ನಡೆದ ಹಲ್ಲೆ ಪ್ರಕರಣಗಳು ಸುತ್ತಮುತ್ತಲಿನ ಪರಿಸರದಲ್ಲಿ ಆತಂಕ ಮೂಡಿಸಿದರೆ, ಜೂನ್ 21ರಂದು ಎಸ್.ಡಿ.ಪಿ.ಐ. ಮುಖಂಡ ಅಶ್ರಫ್ ಕಲಾಯಿ ಅವರನ್ನು ಹಾಡಹಗಲೇ ಬರ್ಬರ ಹತ್ಯೆ ಮಾಡಿದ ಘಟನೆ ಇಡೀ ಬಂಟ್ವಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿತ್ತು. ತೀವ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಅಶ್ರಫ್ ಹತ್ಯೆ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರೆ, ಕೆಲವೇ ದಿನಗಳಲ್ಲಿ ಶರತ್ ಮಡಿವಾಳ ಅವರ ಮೇಲೆ ಮಾರಣಾಂತಿಕ ದಾಳಿ ನಡೆದದ್ದು ಹಾಗೂ ಆರೋಪಿಗಳು ಮಿಂಚಿನಂತೆ ಪರಾರಿಯಾಗಿ ಪೊಲೀಸರ ಬೆವರಿಸಿಳಿಸಿದ್ದರು.
ಹಲ್ಲೆ ನಂತರ ಏನಾಯಿತು:
ಜುಲೈ ೪ರಂದು ಶರತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಮಧ್ಯೆ ಹಿಂದು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಘ ಪರಿವಾರ ಸಂಘಟನೆಗಳು ಜುಲೈ 7ರಂದು ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತು. ಅದೇ ದಿನ ಶರತ್ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಮರುದಿನ ಶರತ್ ಶವವನ್ನು ಮಂಗಳೂರಿನಿಂದ ಅವರ ಕಂದೂರಿನಲ್ಲಿರುವ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು. ಬಿ.ಸಿ.ರೋಡಿನಲ್ಲಿ ಈ ಸಂದರ್ಭ ಕಲ್ಲು ತೂರಾಟ ಘಟನೆಗಳು ನಡೆದವು. ಅದೇ ದಿನ ಸಂಜೆ ಶರತ್ ಶವಸಂಸ್ಕಾರ ನಡೆಸಲಾಯಿತು. ಸಂಘಟನೆಗಳ ವತಿಯಿಂದ ಶರತ್ ಕುಟುಂಬಕ್ಕೆ ೧೦ ಲಕ್ಷ ರೂ ನೆರವು ಘೋಷಿಸಲಾಯಿತು.
ರಾಜಕಾರಣಿಗಳ ಭೇಟಿ:
ತನಿಯಪ್ಪ ಮಡಿವಾಳ ಅವರ ಏಕೈಕ ಪುತ್ರ ಶರತ್. ಇಬ್ಬರು ಪುತ್ರಿಯರು. ಇವರಿಗೆ ಸಾಂತ್ವನ ಹೇಳಲೆಂದು ರಾಜಕಾರಣಿಗಳು ತನಿಯಪ್ಪ ಮಡಿವಾಳ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಶಕುಂತಳಾ ಶೆಟ್ಟಿ ಸಹಿತ ಪ್ರಮುಖರು ಭೇಟಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರೂ ಭೇಟಿ ನೀಡಿ, ತನಿಯಪ್ಪ ಮಡಿವಾಳ ಅವರಿಗೆ ಸಾಂತ್ವನ ಹೇಳಿದರು.
ಒಂಭತ್ತು ಬಾರಿ ಸೆಕ್ಷನ್:
ಮೇ 26ರಂದು ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆ ಬಳಿಕ ಮೇ 27ರಂದು ತಾಲೂಕಿನಾದ್ಯಂತ ಜೂನ್ 2ರವರೆಗೆ ನಿಷೇಧಾಜ್ಞೆ ಹೊರಡಿಸಲಾಯಿತು. ಮುಂಜಾಗರೂಕತಾ ಕ್ರಮವಾಗಿ ಜೂನ್ 3ರಿಂದ 9ರವರೆಗೆ ಎರಡನೇ ಬಾರಿ ವಿಸ್ತರಿಸಲಾಯಿತು. ಮತ್ತೆ ಜೂನ್ 10ರಿಂದ 16ರವರೆಗೆ ಮೂರನೇ ಬಾರಿ ವಿಸ್ತರಣೆ ನಡೆಯಿತು. ಜೂನ್17ರಿಂದ ಜೂನ್ 23ರವರೆಗೆ ನಾಲ್ಕನೇ ಬಾರಿ, ಐದನೇ ಬಾರಿ ಜೂನ್ 23ರಿಂದ 29ರವರೆಗೆ, ಆರನೇ ಬಾರಿ ಜುಲೈ 4ರವರೆಗೆ ವಿಸ್ತರಿಸಲಾಗಿತ್ತು. ಆದರೆ ಶರತ್ ಹತ್ಯೆ ನಡೆದ ಬಳಿಕ ಮತ್ತಷ್ಟು ಉದ್ವಿಗ್ನ ಸ್ಥಿತಿ ತಲೆದೋರಿದ ಕಾರಣ,7ನೇ ಬಾರಿ ಜುಲೈ 11ರವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಯಿತು. ಬಳಿಕ ಎಂಟನೇ ಬಾರಿ ಜುಲೈ 21ರವರೆಗೆ ವಿಸ್ತರಣೆ ನಡೆದರೆ, ಒಂಭತ್ತನೇ ಬಾರಿ 26ವರೆಗೆ ವಿಸ್ತರಣೆಗೊಂಡಿತ್ತು. ಜಿಲ್ಲಾಡಳಿತವೊಂದು ಸುದೀರ್ಘ 61 ದಿನಗಳ ಕಾಲ ನಿರಂತರವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ತಾಲೂಕಿನ ಇತಿಹಾಸಕ್ಕೊಂದು ಕಪ್ಪು ಚುಕ್ಕೆಯಾಗಿ ದಾಖಲಾಯಿತು. ಒಟ್ಟು 9 ಬಾರಿ ಸೆ.144ರನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಕಾರಿ ಡಾ.ಕೆ.ಜಿ.ಜಗದೀಶ್ ವಿಧಿಸಿದರು.
ಪೊಲೀಸ್ ಕಾವಲು
ನಿಷೇಧಾಜ್ಞೆ ಮುಗಿದರೂ ಪೊಲೀಸರ ಪಹರೆ ಮುಂದುವರಿಯಿತು. ಹಗಲು ರಾತ್ರಿ ಭದ್ರತೆಯಲ್ಲಿರುವ ಪೊಲೀಸರು ಮಳೆ, ಚಳಿಯೆನ್ನದೆ ಕಾವಲು ಕಾಯುತ್ತಿರುವ ದೃಶ್ಯ ಕಂಡುಬಂದಿತ್ತು. ಈ ನಡುವೆ ರಾಜ್ಯ ಪೊಲೀಸ್ ಮಹಾನಿರ್ದೆಶಕ ದತ್ತಾ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
ಪ್ರತಿಭಟನೆಗಳು:
ಶರತ್ ಮೃತಪಟ್ಟ ಸಮಯವನ್ನು ಪ್ರಕಟಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಲಾಯಿತು. ಈ ಕುರಿತು ಸುದ್ದಿಗೋಷ್ಠಿಯಲ್ಲೂ ಆರೋಪಿಸಲಾಯಿತು. ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿ.ಸಿ.ರೋಡಿನಲ್ಲಿ ಎರಡು ಪ್ರತಿಭಟನೆಗಳು ನಡೆದವು. ಮೊದಲನೆಯ ಪ್ರತಿಭಟನೆ ಶರತ್ ಅವರ ಸಾವಿನ ಸುದ್ದಿ ಪ್ರಕಟಗೊಳ್ಳುವ ಮೊದಲು ಜುಲೈ 7ರಂದು ನಡೆದರೆ, ಮತ್ತೊಂದು ಪ್ರತಿಭಟನೆ ಆಗಸ್ಟ್ 8ರಂದು ನಡೆಯಿತು.
ರಾಷ್ಟ್ರದ ಗಮನ ಸೆಳೆದ ಪ್ರಕರಣ:
ಶರತ್ ಮಡಿವಾಳ ಹತ್ಯೆಯನ್ನು ಬಿಜೆಪಿ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಿತು. ಕೇಂದ್ರ ಗೃಹಸಚಿವರಿಗೆ ಬಿಜೆಪಿ ಸಂಸದರು ಶರತ್ ಮಡಿವಾಳ ಹತ್ಯೆಯನ್ನು ಉಲ್ಲೇಖಿಸಿ ರಾಜ್ಯದಲ್ಲಿ ಈವರೆಗೆ ನಡೆದ ಹತ್ಯೆಗಳ ಪಟ್ಟಿಯನ್ನೂ ನೀಡಿ ಎನ್.ಐ.ಎ. ತನಿಖೆಗೆ ಒತ್ತಾಯಿಸಿದರು.
ದೇವರ ಮೊರೆ ಹೋದ ಸಚಿವ:
ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ದೇವರ ಮೊರೆ ಹೋದರು. ಪೊಳಲಿ ದೇವಸ್ಥಾನ, ಸಮೀಪದ ಮಸೀದಿ, ಚರ್ಚ್‌ಗಳಿಗೆ ತೆರಳಿದ ಸಚಿವರು ಕೋಮುಶಕ್ತಿಗಳ ವಿರುದ್ಧ ಅಂತರ ಕಾಯ್ದುಕೊಂಡಿದ್ದಾಗಿ ಹೇಳಿದರು.
ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ:
ಶರತ್ ಹತ್ಯೆ ತನಿಖಾಧಿಕಾರಿಗಳಿಗೆ ಸವಾಲಾದರೆ ರಾಜಕಾರಣಿಗಳಿಗೆ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿತು. ಇದೇ ಸಂದರ್ಭ ಕಲ್ಲಡ್ಕ ಘಟನೆ ತಣ್ಣಗಾಗತೊಡಗಿತು. ವಾಟ್ಸಾಪ್, ಫೇಸ್ ಬುಕ್ ಗಳಂಥ ಸಾಮಾಜಿಕ ಜಾಲತಾಣಗಳಲ್ಲಿ ಅನಿಯಂತ್ರಿತವಾಗಿ ಸಂದೇಶಗಳು ಹರಿದಾಡತೊಡಗಿ, ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಬಂದು ನಿಂತಿತು.