ಮಾನವ ತನ್ನ ಅಪೇಕ್ಷೆಗಳನ್ನು ಪೂರೈಸಲು ಪ್ರಕೃತಿಯನ್ನು ನಿರ್ಲಕ್ಷಿಸಿದ್ದು ದುರಂತ ಎಂದು ಪ್ರಗತಿಪರ ಕೃಷಿಕ ರಾಮ್ ಕಿಶೋರ್ ಮಂಚಿ ಹೇಳಿದರು.
ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಮತ್ತು ಕೋಟಿ ವೃಕ್ಷ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕರಾವಳಿಯಲ್ಲಿ ಸರಾಸರಿ ೧೧೦ಸೆ.ಮೀ ಮಳೆ ಬೀಳಬೇಕಾದ ಸ್ಥಾನದಲ್ಲಿ ಇನ್ನೂ ೪೦ಸೆ.ಮೀ ಕೂಡ ಬಂದಿಲ್ಲ. ನೀರು ಸಂಗ್ರಹಣೆಯ ಅಣೆಕಟ್ಟು ತುಂಬಿಲ್ಲ. ಕೆರೆಗಳನ್ನು ಮುಚ್ಚಿ ಬರಿದಾಗಿಸಿದ್ದೇವೆ. ಪ್ರಕೃತಿಯೇ ಮುಖ್ಯ. ಮನುಷ್ಯ ಪ್ರಕೃತಿಯ ಅಂಗ ಮಾತ್ರ. ಆದರೆ ಮನುಷ್ಯರು ಅವರ ಸುಖವೇ ಮುಖ್ಯವೆಂದು ಭಾವಿಸುತ್ತಿದ್ದೇವೆ. ಪ್ರಕೃತಿಯನ್ನು ಹಾಳುಗೆಡವದೆ ಮಾನವನ ಬಯಕೆಗಳನ್ನು ತೀರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಾವು ನಮಗೋಸ್ಕರ ಬದುಕುವುದಕ್ಕಿಂತ ಪರರಿಗೋಸ್ಕರ ಬಾಳುವುದು ಉತ್ತಮ. ಇದೇ ವೃಕ್ಷವು ಸಾರುವ ಸಂದೇಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವಹಿಸಿ ಜಾಗೃತಿಯೇ ಸ್ವಾತಂತ್ರ್ಯದ ನಿಜವಾದ ರಕ್ಷಕ. ಸ್ವಾತಂತ್ರ್ಯವೆಂದರೆ ಧ್ವಜ ಹಾರಿಸುವುದು, ಗೀತೆ ಹಾಡುವುದು, ಹೋರಾಟಗಾರರ ಸ್ಮರಣೆ ಮತ್ತು ಪತ್ರಿಕೆಗಳಲ್ಲಿ ವರದಿ, ಶುಭಾಶಯ ಕೋರುವುದು ಅಷ್ಟೇ ಅಲ್ಲ. ಅದಕ್ಕೆ ತೆತ್ತ ಬೆಲೆ, ಕೊಟ್ಟ ಪ್ರಾಣ, ಕಳಕೊಂಡ ಭೂಮಿ ಎಷ್ಟು ಎಂಬ ಪರಿಜ್ಞಾನವನ್ನು ನೆನಪಿಸುವ ಸಂದರ್ಭವಾಗಿದೆ. ಸ್ವಾತಂತ್ರ್ಯ ಎಂಬ ಸಂಪತ್ತಿನ ರಕ್ಷಣೆಯೊಂದಿಗೆ ವನ, ಪ್ರಕೃತಿಯ ಸಂರಕ್ಷಣೆಯೂ ಅಷ್ಟೇ ಪ್ರಮುಖ ಎಂದರು.
ಶ್ರೀರಾಮ ಪದವಿ ಕಾಲೇಜಿನ ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರ್‌ಕಟ್ಟೆ, ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಸುಖೇಶ್ ಸ್ವಾಗತಿಸಿ, ಶರಣ್ಯ ನಿರೂಪಿಸಿ ವಾತ್ಸಲ್ಯ ವಂದಿಸಿದರು,