ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಾದರೆ ಸಾಮರಸ್ಯದ ಬಾಳ್ವೆ ಅಗತ್ಯ. ಇದಕ್ಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಬದುಕಬೇಕಾಗಿದೆ ಎಂದು ಎಸ್.ವಿ.ಎಸ್. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ನಾಗವೇಣಿ ಮಂಚಿ ಹೇಳಿದರು.
ಬಂಟ್ವಾಳದ ಬಿ.ಸಿ.ರೋಡಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಸಾಮರಸ್ಯದ ಬದುಕು ಇಂದಿನ ಅಗತ್ಯ. ವಿದ್ಯಾರ್ಥಿಗಳು ತಂದೆ, ತಾಯಿ, ಶಿಕ್ಷಕರು ಹೇಳಿದ್ದನ್ನು ಅನುಸರಿಸಬೇಕೇ ಹೊರತು ಯಾರದ್ದೇ ಕೈಗೊಂಬೆಗಳಾಗಬಾರದು ಎಂದು ಕಿವಿಮಾತು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ನಡೆದು ಬಂದ ಹಾದಿಯನ್ನು ವಿವರಿಸಿದರು. ದ್ವೇಷ ಕಟ್ಟುವುದಲ್ಲ, ದೇಶ ಕಟ್ಟಬೇಕು. ಆದರೆ ದೇಶ ಕಟ್ಟುವುದು ಎಂದರೆ ಏನು, ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು. ರಾಷ್ಟ್ರ, ಸರಕಾರಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಪುರಂದರ ಹೆಗ್ಡೆ ಹೇಳಿದರು.
ಯುವ ಜನತೆ ದೇಶದ ಭವಿಷ್ಯ, ಯುವಕರು ತಂದೆ ತಾಯಿ ಗುರುಹಿರಿಯರು ಮತ್ತು ದೇಶವನ್ನು ಪ್ರೀತಿಸಬೇಕು, ಗೌರವಿಸಿಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಶ್ಯಾಮ್ ರಾವ್ ಹೇಳಿದರು ,
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ತಾಪಂ ಇಒ ಸಿಪ್ರಿಯಾನ್ ಮಿರಾಂದ, ಭಾರತ ಸೇವಾದಳ ಸದಸ್ಯ ವೆಂಕಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಸಹಿತ ತಾಲೂಕಿನ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಹಾಜರಿದ್ದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್:
ಇದೇ ಸಂದರ್ಭ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಸರಕಾರಿ ಶಾಲೆಯಲ್ಲಿ ಕಲಿತು ಅತಿ ಹೆಚ್ಚು ಅಂಕ ಗಳಿಸಿದ ಅಭಯಕೃಷ್ಣ, ನಿಶ್ಮಿತಾ ಡಿಸೋಜ ಮತ್ತು ಉಮಾಶ್ರೀ ಅವರಿಗೆ ಲ್ಯಾಪ್‌ಟಾಪ್ ಅನ್ನು ವಿತರಿಸಲಾಯಿತು.
ಪಥಸಂಚಲನ:
ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್, ಗೃಹರಕ್ಷಕ ದಳ, ಎನ್.ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಗೈಡ್ಸ್, ಕಬ್, ಬುಲ್‌ಬುಲ್ ಹಾಗೂ ನಾನಾ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಈ ಸಂದರ್ಭ ಎಎಸ್ಪಿ ಡಾ.ಅರುಣ್, ಪುರಸಭೆ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.