ಕೊಲ್ಲೂರು ಮುಕಾಂಬಿಕ ದೇವಾಲಯದಿಂದ ದತ್ತು ಯೋಜನೆಯಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕಳೆದ ಹತ್ತು ವರ್ಷದಿಂದ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿದ ಸರಕಾರದ ಕ್ರಮದ ವಿರುದ್ದ ವಿದ್ಯಾರ್ಥಿಗಳ ಪೋಷಕರು ಶುಕ್ರವಾರ ಬೆಳಿಗ್ಗೆ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಅನುದಾನ ರದ್ದುಗೊಂಡ ಎರಡು ಶಾಲೆಗಳ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪ್ರತಿಭಟನೆ ನಡೆಸಲಿದ್ದೆವೆ ಎಂದು ಪೋಷಕರಾದ ಶೋಭಾ, ನಳಿನಿ, ರಾಜೀವಿ, ಅಬ್ದುಲ್ ಹಕೀಂ ಗುರುವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ವಿದ್ಯಾ ಸಂಸ್ಥೆಗಳಲ್ಲಿ ಶೇ94 ರಷ್ಟು ವಿದ್ಯಾರ್ಥಿಗಳು ಬಡ,ಹಿಂದುಳಿದ,ಪ.ಜಾ.ಪಂ.ಕ್ಕೆ ಸೇರಿದ ಅಹಿಂದ ವಿದ್ಯಾರ್ಥಿಗಳೇ ವಿದ್ಯಾರ್ಜನೆ ಮಾಡುತ್ತಿದ್ದಾರೆ. ರಾಜ್ಯದ 52 ಶಾಲೆಗಳಿಗೆ ಈ ರೀತಿಯಾಗಿ ಅನುದಾನ ನೀಡಲಾಗುತ್ತದ್ದು ಇದೀಗ ರಾಜಕೀಯ ದ್ವೇಷಕ್ಕಾಗಿ ಈ ಎರಡು ಶಾಲೆಗೆ ಬರುತ್ತಿದ್ದ ಅನುದಾನವನ್ನು ಮಾತ್ರ ರದ್ದುಗೊಳಿಸಿರುವುದು ಕನ್ನಡ ಶಾಲೆಯ ಮೇಲಿನ ದೌರ್ಜಜನ್ಯವಾಗಿದೆಯಲ್ಲದೆ ಸರಕಾರದ ಈ ಅಮಾನವೀಯ ಕ್ರಮ ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿಗಳಾದ ಅಖಿಲಾ, ಭವ್ಯಶ್ರೀ ಮೊದಲಾದವರಿದ್ದರು.