ನೂರು ವರ್ಷಕ್ಕೂ ಹಿಂದಿನ ಕಾಲದ ಕೃಷಿ, ಮನೆ ಸಾಮಾಗ್ರಿ, ತಾಮ್ರದ ಪಾತ್ರೆಗಳ ಪ್ರದರ್ಶನ, ವಿವಿಧ ಖಾದ್ಯಗಳ ತಯಾರಿಯ ಹಿನ್ನೆಲೆ ಮಾಹಿತಿ..
ಕೃಷಿ ಚಟುವಟಿಕೆಗಳನ್ನು ನಡೆಸುವ ಮೂಲಕ ಜಿಲ್ಲೆಯ ಗಮನ ಸೆಳೆದ ಬಂಟ್ವಾಳ ತಾಲೂಕಿನ ಮಜಿ ವೀರಕಂಭ ಶಾಲೆಯಲ್ಲಿ ಗುರುವಾರ ನಡೆದ ಆಟಿಡೊಂಜಿ ಕೂಟ, ವಸ್ತು ಪ್ರದರ್ಶನ, ತುಳುನಾಡಿನ ಖಾದ್ಯಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡುಬಂದ ಅಂಶಗಳು ಇವು.
ವೀರಕಂಬ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಡಿಯೂರು ಗ್ರಾಮವಿಕಾಸ ಯೋಜನೆ ವೀರಕಂಬ, ರೋಟರಿ ಕ್ಲಬ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಉಡುಪಿ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ಸಹಕಾರದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ಮಾವೆ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಸಂಜೀವ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ಚಂದ್ರಶೇಖರ್, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ರೇಮಂಡ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ನಾರಾಯಣ ಗೌಡ, ಒಡಿಯೂರು ಗ್ರಾಮವಿಕಾಸ ಯೋಜನೆಯ ವಿಸ್ತಣಾಕಾರಿ ಸದಾಶಿವ ಅಳಿಕೆ, ಪೋಟೋ ಗ್ರಾಫರ್ಸ್ ಅಸೋಶಿಯೇಶನ್ನ ಜಯರಾಮ ರೈ, ಬಂಟ್ವಾಳ ಒಕ್ಕೂಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಯಾಸೀರ್ ಕಲ್ಲಡ್ಕ ಅವರ ನೇತೃತ್ವದಲ್ಲಿ ನೂರು ವರ್ಷಗಳ ಹಿಂದಿನ ಹಳೆಕಾಲದ ಕೃಷಿ ಮತ್ತು ಮನೆ ಸಾಮಾಗ್ರಿಗಳಾದ ಮರದ, ಮಣ್ಣಿನ, ತಾಮ್ರದ ಪಾತ್ರೆಗಳ ಪ್ರದರ್ಶನ, ಹಾಗೂ ನೂತನ ನಾಣ್ಯಗಳ ಪ್ರದರ್ಶನವು ನಡೆಯಿತು. ಅದಲ್ಲದೇ ಮೊತ್ತ ಮೊದಲ ಹಂಚು ಗಮನ ಸೆಳೆಯಿತು.
ಶಾಲಾ ವಿದ್ಯಾರ್ಥಿಗಳಿಂದ ಆಟಿ ತಿಂಗಳ ಕೆಲವು ನೃತ್ಯಗಳು ನಡೆಯಿತು. ಊರಿನ ಹಿರಿಯ ಮಹಿಳೆಯರು ತುಳುನಾಡಿನ ಕವಿತೆಗಳನ್ನು ಹಾಡಿ ಮನರಂಜಿಸಿದರು. ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಸಂಗೀತ ಶರ್ಮ ನಿರೂಪಿಸಿದರು. ಸುನೀಲ್ ವಂದಿಸಿದರು.