ಸಾಲೆತ್ತೂರು ಸಮೀಪ ಕೊಡಂಗೆ ಎಂಬಲ್ಲಿ ಪಂಚಾಯತ್ ಬಸ್ ನಿಲ್ದಾಣವೊಂದು ಶಿಥಿಲವಾಗಿದ್ದು, ದುರಸ್ತಿಯ ನಿರೀಕ್ಷೆಯಲ್ಲಿದೆ. ಮಂಗಳೂರು, ವಿಟ್ಲ ಸಹಿತ ನಾನಾ ಪ್ರದೇಶಗಳಿಗೆ ತೆರಳುವ ಬಸ್ಸುಗಳನ್ನು ಕಾಯುವ ಪ್ರಯಾಣಿಕರು ಇದೇ ಬಸ್ ನಿಲ್ದಾಣದಲ್ಲಿ ನಿಲ್ಲಬೇಕಿದೆ. ಕಳೆದ ಹಲವು ವರ್ಷಗಳಿಂದ ಹಂಚು ಹಾಸಿ ಗಟ್ಟಿಮುಟ್ಟಾಗಿದ್ದ ಬಸ್ ನಿಲ್ದಾಣ, ಕ್ರಮೇಣ ತನ್ನ ಸ್ವರೂಪವನ್ನು ಕಳೆದುಕೊಳ್ಳತೊಡಗಿತು. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಮನವಿ ಮಾಡಲಾಗಿದ್ದು, ಹಲವು ತಿಂಗಳುಗಳಿಂದ ದುರಸ್ತಿಯ ನಿರೀಕ್ಷೆಯಲ್ಲಿ ಚಾತಕಪಕ್ಷಿಗಳಂತೆ ಸ್ಥಳೀಯರು ಕಾಯುತ್ತಿದ್ದಾರೆ. ಪುಟ್ಟ ಮಕ್ಕಳ ಸಹಿತ ವೃದ್ಧರು, ಮಹಿಳೆಯರು ನಿಲ್ಲುವ ಈ ಬಸ್ ನಿಲ್ದಾಣದ ಸೂರು ಒಂದೊಂದಾಗಿಯೇ ಕಳಚಿಹೋಗಿ, ಈಗ ಬೋಳುಬೋಳಾಗಿ ನಿಂತಿದೆ. ಸ್ಥಳೀಯ ಗೆಳೆಯರ ಬಳಗ ಕೊಡುಗೆಯಾಗಿ ನೀಡಿರುವ ಬಸ್ ರೂಟ್ ಹಾಗೂ ವೇಳಾಪಟ್ಟಿಯ ನಾಮಫಲಕವೊಂದೇ ನಿಲ್ದಾಣದ ಗತವೈಭವಕ್ಕೆ ಸಾಕ್ಷಿಯಾಗಿ ಉಳಿದಿದೆ.