ಈ ಮಣ್ಣಲ್ಲಿ ಆಡುವುದೆಂದರೆ ಅದು ತಾಯಿಯ ಮಡಿಲಲ್ಲಿ ಆಡಿದಂತೆ. ಆ ರೀತಿಯ ಸಂಬಂಧ ನಮಗೆ ಮತ್ತು ಭೂಮಿಗೆ ಇದೆ. ಈ ಮಣ್ಣಿಗೆ ನಮ್ಮ ಮೈ ಮನಸ್ಸಿನ ಕೊಳೆ ತೊಳೆಯುವ ಶಕ್ತಿ ಇದೆ ಎಂದು ಉದ್ಯಮಿ ಚಂದ್ರಹಾಸ ರೈ ಬಾಲಾಜಿ ಬೈಲು ಅಭಿಪ್ರಾಯ ಪಟ್ಟರು.
ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಭಾಸ ಕ್ರೀಡಾ ಸಂಘದ ಉದ್ಘಾಟನೆಯ ಅಂಗವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ನೆಲ, ಜಲ, ಸಂಸ್ಕೃತಿ ಹಾಗೂ ಆಚರಣೆಗಳು ಕೇವಲ ಆಚರಣೆಗಾಗಿ ಮಾತ್ರ ಇದೆ. ಅವುಗಳಲ್ಲಿ ವೈಜ್ಞಾನಿಕ ಹಿನ್ನೆಲೆಗಳಿವೆ ಎಂಬ ಸತ್ಯ ನಮಗೆ ತಿಳಿದಿರಬೇಕು. ಈ ನೆಲ ನಮಗೆ ಕೇವಲ ಮಣ್ಣಲ್ಲ ಇದನ್ನು ತಾಯಿ ಎಂದು ಕಂಡು ಆರಾಸಿದವರು ನಾವು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುಧಾಕರ ರೈ, ವಹಿಸಿ ಕೆಸರುಗದ್ದೆ ಪಂದ್ಯಾಟಕ್ಕೆ ಚಾಲನೆ ಇತ್ತರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೋಪಾಲ ಶೆಣೈ, ಆನಂದ ಶೆಟ್ಟಿ, ಸಂಯೋಜಕರಾದ ಅರವಿಂದ ಪ್ರಸಾದ್, ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್ ಕಟ್ಟೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ, ರಗ್ಬಿ, ಹಿಮ್ಮುಖ ಓಟ, ಕಾಲ್ನಡಿಗೆ, ರಿಲೆ, ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪ್ರಭೋಧ ವಾಣಿಜ್ಯ ಸಂಘ ಮತ್ತು ಕದಿಕೆ ತುಳು ಸಂಘದಿಂದ ವಿವಿಧ ಖಾದ್ಯಗಳ ಮಳಿಗೆಗಳನ್ನು ತೆರೆದಿದ್ದರು. ವಿದ್ಯಾರ್ಥಿ ವರದರಾಜ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು.