• ಪಾಣೆಮಂಗಳೂರಿನಲ್ಲಿ ಸ್ವಿಮ್ಮಿಂಗ್ ಪೂಲ್
  • ಟ್ರಾಫಿಕ್ ಠಾಣೆ ಪಕ್ಕವೇ ಮರಣಗುಂಡಿ
  • ದಾಸಕೋಡಿಯಲ್ಲಿ ಏರುದಿಣ್ಣೆಗಳ ನೋಟ
  • ಇದು ಮಂಗಳೂರು-ಬೆಂಗಳೂರು ಹೆದ್ದಾರಿ

ಹರೀಶ ಮಾಂಬಾಡಿ

ಚಿತ್ರ: ಯಶವಂತ್

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವವರು ಇಲ್ಲಿ ಗಮನಿಸಿ. ಬಿ.ಸಿ.ರೋಡಿನಿಂದ ಮಾಣಿವರೆಗಿನ ರಸ್ತೆ ಸರಿ ಇಲ್ಲ. ಭವಿಷ್ಯದಲ್ಲಿ ರಸ್ತೆ ಸಂಪೂರ್ಣ ಅಭಿವೃದ್ಧಿ, ಅಗಲಗೊಳ್ಳುವ ಚತುಷ್ಪಥ ಕಾಮಗಾರಿ ಯೋಜನೆ ಆರಂಭಗೊಂಡು ಮುಗಿಯುವವರೆಗೂ ಇದೇ ಪರಿಸ್ಥಿತಿ. ತಾತ್ಕಾಲಿಕವಾಗಿಯಾದರೂ ರಿಪೇರಿ ಮಾಡಲು ಯಾರೂ ದೊಡ್ಡ ಮನಸ್ಸು ಮಾಡುತ್ತಿಲ್ಲ!

ಬಿ.ಸಿ.ರೋಡ್ ನಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಾಣೆಮಂಗಳೂರು, ಮೇಲ್ಕಾರ್, ದಾಸಕೋಡಿ ಈಗ ಅಪಾಯದ ಸ್ಪಾಟ್ ಗಳಾಗಿವೆ.

ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಸನ್ನಿಧಿಯ ಎದುರು ನರಿಕೊಂಬು – ಶಂಭೂರು ಕಡೆಗೆ ತೆರಳುವ ರಸ್ತೆಯ ಪಕ್ಕ ಇಡೀ ಜಾಗ ಕೆರೆಯಂತೆ ಮಾರ್ಪಾಟಾಗಿದೆ.  ಕಳೆದ ಮೂರು ನಾಲ್ಕು ದಿನಗಳಿಂದ ಪೀಕ್ ಅವರ್ ನಲ್ಲಿ ವಾಹನಗಳ ಸಾಲು ಇಲ್ಲಿ ಕಾಣಸಿಗುತ್ತದೆ. ಪಾಣೆಮಂಗಳೂರು ಸ್ಟಾಪ್ ನೀಡುವ ಬಸ್ಸುಗಳು ಅನ್ಯಮಾರ್ಗವಿಲ್ಲದೆ ಹೈವೇಯಲ್ಲೇ ನಿಲ್ಲಿಸಬೇಕು. ಇಲ್ಲವಾದರೆ ಕೆಸರುಗುಂಡಿಯೊಳಗೆ ಬೀಳಬೇಕು. ಇಲ್ಲಿ ಕಾಂಕ್ರೀಟ್ ಮಿಶ್ರಿತ ಜಲ್ಲಿ ಹಾಕಿದರೆ ತಾತ್ಕಾಲಿಕವಾಗಿ ಪರಿಹಾರ ದೊರಕಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.


ಮೇಲ್ಕಾರಿನಲ್ಲಿರುವ ಬಂಟ್ವಾಳ ಟ್ರಾಫಿಕ್ ಠಾಣೆ ಪಕ್ಕವೇ ಬೃಹತ್ ಮರಣಗುಂಡಿ ಕಂಡುಬಂದಿದೆ. ಕಲ್ಲಡ್ಕ ಪಕ್ಕದ ದಾಸಕೋಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಂಡಗಳ ದರ್ಬಾರು ಎದ್ದು ಕಾಣುತ್ತಿದೆ.

ಒಂದೋ ಆರೋಪ, ಪ್ರತ್ಯಾರೋಪ ಇಲ್ಲವೇ ಜನರ ತೆರಿಗೆ ದುಡ್ಡಿನಲ್ಲಿ ಸಂಗ್ರಹವಾದದ್ದನ್ನೇ ಮತ್ತೆ ಅವರಿಗೆ ಸೌಲಭ್ಯರೂಪದಲ್ಲಿ ಒದಗಿಸಿ, ತಮ್ಮಿಂದಲೇ ಆದದ್ದು ಎಂದು ಹೇಳುತ್ತಾ ಮುಂದಿನ ಚುನಾವಣೆಯ ಲಾಭ, ನಷ್ಟದ ಲೆಕ್ಕಾಚಾರ ನಡೆಸುವುದರಲ್ಲೇ ಮುಳುಗಿಹೋಗಿರುವ ರಾಜಕಾರಣಿಗಳು ತಾತ್ಕಾಲಿಕ ಪರಿಹಾರ ಒದಗಿಸಲು ಒಮ್ಮತ ಮೂಡಿಸಿಕೊಳ್ಳಬೇಕಾಗಿದೆ.

VIDEO:

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.