ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಜಾನಪದ, ಸಾಹಿತ್ಯಸಂಘಟಕ, ಹಿರಿಯ ಕಾಂಗ್ರೆಸ್ ಮುಖಂಡ 74ರ ಹರೆಯದ ಎ.ಸಿ.ಭಂಡಾರಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ, ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೊ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ, ಸಾಹಿತ್ಯ ಸಂಘಟಕ ಎ.ಸಿ.ಭಂಡಾರಿ ಜಾನಪದ, ರಾಜಕೀಯ, ಧಾರ್ಮಿಕ, ಸಾಹಿತ್ಯಸಂಘಟನೆ ಸಹಿತ ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ಕಳೆದ ೫೦ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
ಮಂಗಳೂರು ತುಳುಕೂಟ (ಕುಡ್ಲ)ದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ತುಳುಕೂಟದ ಅಧ್ಯಕ್ಷರಾಗಿ, ವಿಶ್ವ ತುಳುವೆರೆ ಪರ್ಬದ ಸಂಯೋಜಕರಾಗಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯ ಸೇರ್ಪಡೆ ಕುರಿತು ಸರಕಾರಕ್ಕೆ ಒತ್ತಡ ಹೇರಲು ವಿಶ್ವ ತುಳುವೆರೆ ಪರ್ಬದ ವತಿಯಿಂದ ನೇಮಿಸಲಾದ ಸಮಿತಿ ಸಂಚಾಲಕರಾಗಿದ್ದ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗೆಸ್ ಅಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಿಸಾನ್ ವಿಭಾಗ ಸಹ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ನಾನಾ ಹುದ್ದೆಗಳಲ್ಲಿ ದುಡಿದ ಅವರು ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು. ಧಾರ್ಮಿಕ ಕ್ಷೇತ್ರದಲ್ಲಿ ಬಹುಕಾಲ ತೊಡಗಿಸಿಕೊಂಡ ಅವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯರ ಸಂಖ್ಯೆ 12ಕ್ಕೆ ಏರಿಕೆ
ತುಳು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಂಟ್ವಾಳ ತಾಲೂಕಿನ ಹಿರಿಯ ಸಾಮಾಜಿಕ ಕಾರ್ಯಕರ್ತ ಎ.ಸಿ.ಭಂಡಾರಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ 12 ಸದಸ್ಯರ ಪಟ್ಟಿಯನ್ನೂ ಸರಕಾರ ಬಿಡುಗಡೆಗೊಳಿಸಿದೆ. ಈ ಬಾರಿ 10 ಸದಸ್ಯರ ಸಂಖ್ಯೆಯನ್ನು 12ಕ್ಕೆ ಏರಿಸಲಾಗಿದ್ದು ವಿಶೇಷ.
ನೂತನ ಸದಸ್ಯರು ಇವರು: ಸುಧಾ ನಾಗೇಶ್, ವಿಜಯ ಶೆಟ್ಟಿ, ತಾರಾನಾಥ ಗಟ್ಟಿ ಕಾಪಿಕಾಡು, ಎ.ಗೋಪಾಲ ಅಂಚನ್, ವಿದ್ಯಾಶ್ರೀ ಎನ್, ದುರ್ಗಾ ಮೆನನ್, ಶಿವಾನಂದ ಕರ್ಕೇರ, ಬೆನೆಟ್ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ಡಾ.ವಾಸುದೇವ ಬೆಳ್ಳೆ, ನಿರಂಜನ ರೈ ಮಠಂದಬೆಟ್ಟು, ಡಾ.ವೈ.ಎನ್. ಶೆಟ್ಟಿ.
ಇವರಲ್ಲಿ ಡಾ. ವೈ.ಎನ್. ಶೆಟ್ಟಿ ಉಡುಪಿ ಜಿಲ್ಲೆಗೆ ಸೇರಿದರೆ ಉಳಿದವರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯವರು.