ನದಿಯ ಉಗಮ ಸ್ಥಾನ ಇರುವುದೇ ಅರಣ್ಯದಲ್ಲಿ ಆದ್ದರಿಂದ ಕಾಡು ಉಳಿದರೆ ಮಾತ್ರ ಜೀವಜಲ ಉಳಿಯಲು ಸಾಧ್ಯವಿದೆ ಎಂದು ಅರಣ್ಯ ಸಚಿವ ಬಿ .ರಮಾನಾಥ ರೈ ಹೇಳಿದರು.
ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ, ರಾಜ್ಯ ಅರಣ್ಯ ಇಲಾಖೆ ಮಂಗಳೂರು ವೃತ್ತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಲಯನ್ಸ್ ಕ್ಲಬ್ ಲೊರೆಟ್ಟೋ ಅಗ್ರಾರ್, ಕೆಥೋಲಿಕ್ ಸಭಾ ಲೊರೆಟ್ಟೋ ಮತ್ತು ಅಗ್ರಾರ್ ಘಟಕ ಹಾಗೂ ಲೊರೆಟ್ಟೋ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶನಿವಾರ ಲೊರೆಟ್ಟೊ ಮಾತಾ ಸಭಾ ಭವನದಲ್ಲಿ ನಡೆದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ವೃತ್ತಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ. ೨೨ ರಷ್ಟು ಅರಣ್ಯ ಇದೆ. ಇವುಗಳನ್ನು ಹೆಚ್ಚು ಮಾಡುವುದರ ಜೊತೆಗೆ ಇರುವ ಅರಣ್ಯವನ್ನು ಉಳಿಸುವ ಕಾರ್ಯವು ಆಗಬೇಕಿದೆ ಎಂದರು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜನಜಾಗೃತಿಯ ಕಾರ್ಯಕ್ರಮ. ಅರಣ್ಯವನ್ನು ಉಳಿಸಬೇಕು ಎನ್ನುವ ಪ್ರೋತ್ಸಾಹದ ಜೊತೆಗೆ ಜನರಲ್ಲಿ ಅರಣ್ಯ ನಾಶದಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃಇ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರ ಅವರು ಗಿಡನೆಟ್ಟು ಬೆಳೆಸಿ, ಉಳಿಸಿ ಪಾಪದಿಂದ ಮುಕ್ತರಾಗಬೇಕು ಎಂದರು. ಬಳಿಕ ಅವರು ಅರ್ಹ ಫಲಾನುಭವುಗಳಿಗೆ ಸಾಂಕೇತಿಕವಾಗಿ ಶ್ರೀಗಂಧದ ಗಿಡಗಳನ್ನು ವಿತರಿಸಿದರು.
ರಾಜ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ರೊಡ್ರಿಗಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅರಣ್ಯ ನಾಶದಿಂದ ಈಗಾಗಲೇ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಗಾಳಿಯೂ ಸಿಗದ ಸ್ಥಿತಿ ನಿರ್ಮಾಣ ವಾಗಲಿದೆ ಎಂದರು. ಬಂಟ್ವಾಳ ವಲಯ ಧರ್ಮಗುರು ಮ್ಯಾಕ್ಸಿಂ ಎಲ್ ನೊರೊನ್ಹ ಅಧ್ಯಕ್ಷತೆ ವಹಿಸಿದ್ದರು.
ಲೊರೆಟ್ಟೋ ಚರ್ಚ್‌ನ ಧರ್ಮಗುರುಗಳಾದ ಎಲಿಯಾಸ್ ಡಿಸೋಜಾ, ಅಗ್ರಾರ್ ಚರ್ಚ್‌ನ ಧರ್ಮಗುರುಗಳಾದ ಗ್ರೆಗರಿ ಡಿಸೋಜಾ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಉಫಾಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಸದಸ್ಯೆ ಮಲ್ಲಿಕ ಶೆಟ್ಟಿ, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್ ವಿ., ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಲೊರೆಟ್ಟೋ ಚರ್ಚ್ ಪಾಲನಾ ಪರಿಷತ್ ರಿಚರ್ಡ್ ಮಿನೇಜಸ್, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪುರಸಭಾ ಸದಸ್ಯ ಜಗದೀಶ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾಥೋಲಿಕ್ ಸಭಾ ವಲಯದ ಅಧ್ಯಕ್ಷ ಸ್ಟ್ಯಾನಿ ಲೋಬೋ ಸ್ವಾಗತಿಸಿದರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜ್ಜೂರು ಪ್ರಾಸ್ತವಿಕವಾಗಿ ಮಾತನಾಡಿದರು. ಸ್ವಾತಿ ಕಾರ್ಲೊ ವಂದಿಸಿದರು.