ಮೇಲ್ಕಾರ್‌ನಿಂದ ಕಲ್ಲಡ್ಕಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಹಾದಿಯಲ್ಲಿ ಲಾರಿಯೊಂದು ಕೆಟ್ಟು ನಿಂತು ಶನಿವಾರ ರಾತ್ರಿ ಸುದೀರ್ಘ ಟ್ರಾಫಿಕ್ ಜಾಮ್ ಕಂಡುಬಂತು.
ಕೆ.ಸಿ.ರೋಡ್ ತಿರುವಿನ ಮುಂಭಾಗದಿಂದ ಪಾಣೆಮಂಗಳೂರಿನವರೆಗೂ ಸರತಿ ಸಾಲಿನಲ್ಲಿ ವಾಹನಗಳು ನಿಂತವು. ಎರಡೂ ಕಡೆಯಿಂದ ಬರುವ ವಾಹನಗಳಲ್ಲಿ ಕೆಲವರು ಓವರ್‌ಟೇಕ್ ಮಾಡುವುದು ಹಾಗೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದನ್ನು ನಡೆಸಿದ ಕಾರಣ ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇದೇ ಸಂದರ್ಭ ಮಳೆಯೂ ಆಗಮಿಸಿದ್ದು, ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಯಿತು. ಕೊನೆಗೂ ಲಾರಿಯನ್ನು ಪಕ್ಕಕ್ಕೆ ಸರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದೇ ವೇಳೆ ವಿಟ್ಲ ಸಹಿತ ಹಲವು ಪ್ರದೇಶಗಳಿಂದ ಬಿ.ಸಿ.ರೋಡಿನ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು.