ಸಂಯುಕ್ತ ಕರ್ನಾಟಕದ ಬೆಂಗಳೂರು ಮುದ್ರಣದ ಪ್ರಾರಂಭಿಕ ಸಿದ್ಧತೆಗಳು ಕೊನೆಯ ಹಂತಕ್ಕೆ ಬಂದಿದ್ದಾಗ –
ಹುಬ್ಬಳ್ಳಿಯ ಭಾಷಾ ಪ್ರಯೋಗಗಳು ಪತ್ರಿಕೆಯ ಬೆಂಗಳೂರಿನ ಓದುಗರಿಗೆ ಪಥ್ಯವಾಗಲಾರವೆಂಬ ಮಾಹಿತಿಯ ಮುಖ್ಯ ಕಾರಣದಿಂದಾಗಿ, ರಂಗನಾಥ ರಾಮಚಂದ್ರ ದಿವಾಕರರ ಹಿರಿತನದ ಸಂ.ಕ. ಆಡಳಿತವರ್ಗ, ಕೆಳಸ್ತರದ ಸಂಪಾದಕೀಯ ಸಿಬ್ಬಂದಿ ಸದಸ್ಯರನ್ನು ಬೆಂಗಳೂರಿನಿಂದಲೇ ಸಂಪಾದಿಸಿಕೊಂಡಿತ್ತು. ಆ ಸಂಪಾದನೆಯಲ್ಲಿ ತಾಯಿನಾಡುವಿನ ಕೆಲವರು ಪತ್ರಕರ್ತರೂ ಸೇರಿದ್ದರು.
ಅವರ ನೇಮಕದ ಸುದ್ದಿ ಅಲ್ಲಿಗೆ ಪ್ರವೇಶಿಸುವ ಪ್ರಯತ್ನವನ್ನೂ ತೀವ್ರಗೊಳಿಸಲು ನನಗೂ ಸೂಚನೆ ಕೊಟ್ಟಂತಾಯಿತು.
ಆ ಮೊದಲೇ ಪರಿಚಯ ಮಾಡಿಕೊಂಡಿದ್ದ ಮುಖ್ಯ ವರದಿಗಾರ ಕೆ.ಶಾಮರಾವ್ ಮತ್ತು ಪುರವಣಿ ವಿಭಾಗ ಪ್ರಮುಖ ಮಾ.ನಾ.ಚೌಡಪ್ಪ ಇವರಿಂದ ತೊಡಗಿ, ಅವರೆಗೂ ಪರಿಚಯ ಇರದಿದ್ದ ಸುದ್ದಿ ಸಂಪಾದಕ ಸುರೇಂದ್ರ ದಾನಿ ಸಹಾಯಕ ಸಂಪಾದಕ ರಾವ್ ಬಹಾದ್ದೂರ್, ಪ್ರಮುಖ ಆಡಳಿತಾಧಿಕಾರಿ ಕೌಜಲಗಿ ಇವ್ರೆಲ್ಲರ ದರ್ಶನವನ್ನೂ ಹಂತಹಂತವಾಗಿ ನೆರವೇರಿಸಿದೆ. ‘ದಾರ್ಶನಿಕರ’ ಹಂತವು ಏರುತ್ತಿದ್ದ ಹಾಗೆ, ನೌಕರಿಯ ಸಾಧ್ಯತೆ ಇಳಿಯತೊಡಗಿದಂತೆ ಭಾಸವಾಯಿತು.
ನನಗೆ ಉದ್ಯೋಗ ಕೊಡಲು ಮೇಲಿನವರು ಹಿಂದೇಟು ಹೊಡೆಯುತ್ತಿರುವುದರ ಹಿನ್ನೆಲೆ–ಕಾರಣ ಬಹಳ ಕ್ಷುಲ್ಲಕವಾದುದು. ಅದನ್ನು ಒತ್ತಟ್ಟಿಗೆ ಸರಿಸಿ, ಪ್ರಭಾವದ ಮೂಲಕವಾದರೂ ನೌಕರಿ ದೊರಕಿಸಿಕೊಳ್ಳಲು ಪ್ರಯತ್ನಿಸುತ್ತೇನೆಂದು ಹೊರಟೆ, ಪತ್ರಿಕೆಗೆ ಆರ್ಥಿಕ ಸವಲತ್ತು ಒದಗಿಸುತ್ತಿದೆ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕ ಭಂಡಾರಿಯವರಿಂದ ‘ಒಂದು ಮಾತು’ ಹೇಳಿಸಿದೆ. ಅದು ಭಾಗಶಃ ಸಾರ್ಥಕವಾಯಿತು.
ಹಾಗಾಗಿ ರೆಸಿಡೆನ್ಸಿ ರಸ್ತೆಗೆ ನಿತ್ಯ–ನಿರಂತರ ಭೇಟಿಗಳು ನಡೆಯುತ್ತಲೇ ಇದ್ದ ಯಾವುದೋ ಒಂದು ‘ಘಳಿಗೆ’ಯಲ್ಲಿ.
“ಬೇಕಾದರೆ” ಚಲನಚಿತ್ರಗಳ ವಿಮರ್ಶೆಯನ್ನು ಪ್ರತಿವಾರವೂ ಒದಗಿಸುವ ಕೆಲಸ ಮಾಡಬಹುದು; ಆದರೆ, ವಿಮರ್ಶೆಗಳು ಎಷ್ಟೇ ಇದ್ದರೂ ಮಾಸಿಕ ಸಂಭಾವನೆಯಾಗಿ 110ರೂ. ಮಾತ್ರವೇ ಕೊಡಲಾಗುವುದೆಂಬ ಮೌಖಿಕಾದೇಶ ಮೇಲಿನಿಂದ ಬಂದಿತು. “ಅದಾದರೂ ಸಾಕು. ಮುಂದಿನ ವಾರದಿಂದಲೇ ಚಿತ್ರವಿಮರ್ಶೆಗಳನ್ನು ಒಪ್ಪಿಸುತ್ತೇನೆ” ಎಂದು ಆದೇಶವನ್ನು ಮುಟ್ಟಿಸಿದವರಿಗೆ ತಿಳಿಸಿದೆ. ಪಂಚಾವತ ಸ್ವೀಕಾರಕ್ಕೆ ಮಾನಸಿಕ ಸಿದ್ಧತೆ ಮಾಡಿಕೊಳ್ಳತೊಡಗಿದೆ.ಅದರಿಂದಾಗಿ ಕಾಂಗ್ರೆಸ್ ಭವನದಲ್ಲಿ ‘ಕಾಣ್ಕೆಯ ಹಾಜರಿ’ ಕಡಿಮೆ ಮಾಡಿ, ಸಂದೇಶವನ್ನು ಮುದ್ರಿಸುತ್ತಿದ್ದ (ಸಂ.ಕ. ಕಚೇರಿಗೂ ಸಮೀಪವಾಗಿದ್ದ) ಓರಿಯೆಂಟಲ್ ಪ್ರೆಸ್ಸಿನಲ್ಲೇ ಪತ್ರಿಕೆಯ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ.
ಆಗೊಂದು ದಿನ ಮುದ್ರಣಾಲಯಕ್ಕೆ ಬಂದಿದ್ದ ಸಂಪಾದಕ ಹೆಗಡೆ “ಅರೆ! ನೀವು ಇಲ್ಲಿದ್ದೀರಾ ? ಕಾಣದೆ ಕೆಲವು ದಿನ ಆಯಿತು“ಎಂದವರೇ ಒಂದೆರಡು ಔಪಚಾರಿಕ ಮಾತುಗಳನ್ನಾಡಿ ನನ್ನನ್ನು ಹೊರಗೆ ಕರೆದರು. ನನ್ನ ಹಾಜರಿ ಲೋಪದ ಹಿನ್ನೆಲೆಯನ್ನು(ನಯವಾದ ಮಾತುಗಳ ಮೂಲಕ) ನನ್ನಿಂದಲೇ ಹೊರಡಿಸಿದರು. ಅದರೊಂದಿಗೇ – ಮಾಸಪತ್ರಿಕೆಗಿಂತಲೂ ದೈನಿಕ ಪತ್ರಿಕೆಯ ಕೆಲಸವೇ ನನಗೆ ಹೆಚ್ಚಿನ ಆಸಕ್ತಿಯದು – ಎಂದು ಬಾಯ್ಬಿಡುವಂತೆಯೂ ಮಾಡಿದರು.
“ಸರಿ, ಹಾಗಾದ್ರೆ, ನಿಮ್ಮಿಷ್ಟ, ನಾನೇನೋ ನಿಮ್ಮನ್ನು ನಾಗಪುರ( ಕಾಂಗ್ರೆಸ್) ಸೆಶ್ಶನಿಗೆ ಕಾಂಗ್ರೆಸ್ ಸಂದೇಶದ ಪ್ರತಿನಿಧಿಯಾಗಿ ಕರಕೊಂಡು ಹೋಗೋಣ ಅಂತಿದ್ದೆ” ಎಂಬ ಅವರ ‘ಕೊನೆಯ’ ಆಮಿಷವೂ ನನ್ನ ಮೊಂಡುತನದೆದುರು ನಿರರ್ಥಕವಾಯಿತು.
ಸಂಯುಕ್ತ ಕರ್ನಾಟಕದಲ್ಲಿ ತಲೆತೂರಿಸಿದ ಮೊದಲನೆ ತಿಂಗಳಿನಲ್ಲಂತೂ ನನ್ನದು ಆರಂಭಶೂರನ ಸಂಭ್ರಮವಾಗಿತ್ತು. ಹಣದ ಬದಲಿಗೆ ಸ್ಥಾನಗೌರವವನ್ನಷ್ಟೇ ಒದಗಿಸುತ್ತಿದ್ದ ಶಕ್ತಿಗೆ ದಿನಕ್ಕೆ ಒಂದು ಸಣ್ಣ ವರದಿಯ ಟೆಲಿಗ್ರಾಂ ಕಳುಹಿಸಿ, ಸಂ.ಕ.ಕ್ಕೆ ಬಂದು ವಿಮರ್ಶಿಸಬೇಕಾದ ಚಿತ್ರದ ‘ಪಾನ್’ನ ಬಗ್ಗೆ ಮೊದಲು ವಿಚಾರಿಸಿ, ಸಾಧ್ಯ ಇದ್ದಷ್ಟೂ ಹೊತ್ತು (ಕೇಳಿ ಪಡೆದ (ಸಾಪ್ತಾಹಿಕ ಪುರವಣಿಯ‘ಸುತ್ತುಕೆಲಸ’ ಮಾಡಿ ಮುಗಿಸಿದ ಮೇಲೆ, –ಇದ್ದರೆ – ವಿಮರ್ಶಿಸಬೇಕಾದ ಚಿತ್ರವನ್ನು ನೋಡಲು ಹೋಗಿ ಮನೆಗೆ ಬರುವಾಗ (ವಾರದಲ್ಲಿ ಮೂರು ದಿನವಾದರೂ) ಸರಿರಾತ್ರಿಯಾಗುತ್ತಿತ್ತು. ತೂಕಡಿಕೆ ತುಂಬಿದ ಭಾರ್ಯಾದರ್ಶನವನ್ನೂ ಗಣನೆಗೆ ತಾರದಷ್ಟು‘ಕರ್ತವ್ಯನಿಷ್ಠೆ’ ನನ್ನಲ್ಲಿ ತುಂಬಿತ್ತು ಎನ್ನುವುದೇ ಆಗಿನ ಬಗೆಗೆ (ಈಗಿರುವ) ಸಮಾಧಾನ.
ತಿಳಿದುಕೊಳ್ಳಲೇಬೇಕಾದ ಹಲವು ಹೊಸ ವಿಷಯಗಳು ಸಂ.ಕ.ದಲ್ಲಿ ಇದ್ದವು. ‘ಹೇಳಿ ಕೊಡುವವರು ಯಾರೂ ಇಲ್ಲ,ಮಾಡುವವರನ್ನು ನೋಡಿಯೇ ಕಲಿಯಬೇಕಷ್ಟೆ. ಆದ್ದರಿಂದ ಹೊಸದೇನಿದ್ದರೂ ನೋಡಿ ತಿಳಿದುಕೊ. ಸಂಗ್ರಹಿಸಿದ ಮಾಹಿತಿಯನ್ನು ತಲೆಯಲ್ಲಿ ಉಳಿಸಿಕೊ” ಎಂಬ ಸಿದ್ಧಾಂತವನ್ನು ಅದಾಗಲೆ ರೂಪಿಸಿಕೊಂಡು ಜಾರಿಗೆ ತಂದಿದ್ದೆ.
ಅದರಿಂದಾಗಿ, ಪತ್ರಿಕಾರಂಗದ ಮೂರು ವಿಭಾಗಗಳಲ್ಲಿ ಹೆಚ್ಚಿನ ಕಲಿಕೆ ಸಾಧ್ಯವಾಯಿತು.
ಮೊದಲನೆಯದು, ವರದಿಗಾರಿಕೆಯಲ್ಲಿನ ಓರಣಕ್ಕೆ ಸಂಬಂಧಿಸಿದುದು. ಶಕ್ತಿಯ ಪ್ರತಿನಿಧಿಯ ನೆಲೆಯಲ್ಲಿ ಇತರ ಅನುಭವಿಗಳೊಂದಿಗೆ ಬೆರೆತು, ಅವರ ಕಾರ್ಯವಿಧಾನಗಳನ್ನು ಹತ್ತಿರದಿಂದ ನೋಡುವ ಅವಕಾಶ ಇದ್ದ ಕಾರಣ, ಮುಖ್ಯವಾಗಿ ಅಧಿಕೃತ ವಲಯ ಮತ್ತು ವಿಧಾನಮಂಡಲಗಳ ಚಟುವಟಿಕೆಗಳ ವರದಿಗಳಲ್ಲಿ ಅಗತ್ಯವಾಗಿ ವಹಿಸಬೇಕಾದ ಎಚ್ಚರಿಕೆಯ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.
ಎರಡನೆಯದಾಗಿ ಟೆಲಿಪ್ರಿಂಟರ್ ನಲ್ಲಿ ರೋಮನ್ (ಇಂಗ್ಲಿಷ್) ಲಿಪಿ ಉಪಯೋಗಿಸಿ ಕನ್ನಡದಲ್ಲಿ ವರದಿ ಕಳುಹಿಸುವ ಕ್ರಮ.
ಸಂಯುಕ್ತ ಕರ್ನಾಟಕದಲ್ಲಿ ಹುಬ್ಬಳ್ಳಿ – ಬೆಂಗಳೂರುಗಳ ಮಧ್ಯೆ ಸ್ವಂತದ ಟೆಲಿಪ್ರಿಂಟರ್ ಸಂಪರ್ಕದ ವ್ಯವಸ್ಥೆ ಆಗಿತ್ತು. ಕಚೇರಿಗಳ ಪರಸ್ಪರ ಸಂದೇಶ ವಿನಿಮಯಕ್ಕೆ ಕನ್ನಡದ ಉಪಯೋಗವಾಗುತ್ತಿದ್ದುದನ್ನು ಒಮ್ಮೆ ನೋಡಿದೆ. ಅನಂತರ, ಟೆಲಿಪ್ರಿಂಟರ್ ಆಪರೇಟರ್ ಪ್ರಹ್ಲಾದ ಕುಳಲಿಯವರ ‘ದೋಸ್ತಿ’ ಬೆಳೆಸಿ, ಕನ್ನಡ ವಾಕ್ಯಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಮೂಡಿಸುವುದನ್ನು ಕಲಿತುಕೊಂಡೆ.
ಕನ್ನಡದ ವಿಶಿಷ್ಟ ಅಕ್ಷರಗಳಿಗೆ (ಉದಾಹರಣೆಗೆ: ನ–ಣ, ಲ–ಳ ಇತ್ಯಾದಿ) ಇಂಗ್ಲಿಷ್ ಲಿಪಿಯ ಬಳಕೆ ಕಷ್ಟಕರವಾಗಿತ್ತು. ಉಚ್ಚಾರದ ಧ್ವನಿಭೇದಗಳನ್ನೂ ಮೂಡಿಸಲು ತೊಡಕಾಗುತ್ತಿತ್ತು. ಅವುಗಳಿಗೆ ಸಂ.ಕ.ದಲ್ಲೇ ಕಲ್ಪಿಸಲಾಗಿದ್ದ ಪರಿಹಾರ ವಿಧಾನಗಳನ್ನು ತಿಳಿದುಕೊಂಡರೂ, ಬಳಕೆಗೆ ತರಲಾಗದ ಕಾರಣ –
“ಹೇಗಿದ್ದರೂ ಕನ್ನಡ ಬಲ್ಲವರೇ ಇಂಗ್ಲಿಷ್ ಲಿಪಿಯನ್ನು ಓದುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಅರ್ಥವಿಸುತ್ತಾರೆ. ಆದ್ದರಿಂದ, ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವಿಲ್ಲ“ವೆಂಬ ತೀರ್ಮಾನಕ್ಕೆ ಬಂದೆ.
ಮೂರನೆಯದು, ಪತ್ರಿಕೆಯ ಪುಟಗಳ ವಿನ್ಯಾಸಕ್ಕೆ ಸಂಬಂಧಿಸಿದುದು. ಹಿಂದೆ ಕಲಿತಿದ್ದ ವಿನ್ಯಾಸಕ್ರಮಗಳು ದಿನಪತ್ರಿಕೆಯ ಪುಟಗಳವು. ಸಾಪ್ತಾಹಿಕ ಪುರವಣಿಗೆ ಉಪಯುಕ್ತವೆನಿಸುವ ವಿನ್ಯಾಸಗಳ ಶಿಕ್ಷಣ ಅಗತ್ಯವಿತ್ತು. ಬರಹಗಳ ಗಾತ್ರವನ್ನು ಅವಶ್ಯಕತೆಗೆ ಅನುಸಾರವಾಗಿ ಕುಗ್ಗಿಸುವ (ಅಥವಾ ಹಿಗ್ಗಿಸುವ) ಕ್ರಮಗಳನ್ನೂ ತಿಳಿಯಬೇಕಿತ್ತು. ಅವುಗಳನ್ನು ‘ನೋಡಿ–ಕಲಿಯಲು’ ಸಂ.ಕ.ದಲ್ಲಿ ಸಾಧ್ಯವಾಯಿತು.
ಕೆಲಸದ ಹೆಚ್ಚಿನ ಹೊರೆ ಇರಲಿಲ್ಲ. ಒಳಗೆ–ಹೊರಗೆಲ್ಲ ಸುತ್ತಾಡುವ ಸ್ವಾತಂತ್ರ್ಯವೂ ಇತ್ತು. ಆಕರ– ಆಧಾರಗಳನ್ನು ಹೊಂದಿಸಿಕೊಂಡಿದ್ದ ‘ಗ್ರಂಥಾಲಯ’ಗಳ ಒಳಗೂ ಪ್ರವೇಶಿಸುತ್ತಿದ್ದೆ. ಅಲ್ಲಿನ ವ್ಯವಸ್ಥೆಯನ್ನೂ ತಿಳಿದುಕೊಳ್ಳುತ್ತಿದ್ದೆ.
ಪಡೆಯುತ್ತಿದ್ದ ಸ್ವಯಂಶಿಕ್ಷಣದ ಬೆಳವಣಿಗೆ, ಆಕಾಂಕ್ಷೆಗಳನ್ನೂ ಹೆಚ್ಚಿಸತೊಡಗಿತು. ಮುಂದಿನ ಕಾರ್ಯಾಚರಣೆಯತ್ತ ನನ್ನನ್ನು ನೂಕಿತು.
(ಮುಂದಿನ ಭಾಗದಲ್ಲಿ)
ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ. ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 14ನೇ ಕಂತು . ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕ ಪ.ಗೋ. ಅವರದ್ದು.. ಇದು ಹೊಸ ದಿಗಂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಬಳಿಕ 2005ರಲ್ಲಿ ಪುಸ್ತಕರೂಪದಲ್ಲಿ ಹೊರಬಂದ ಲೇಖನಮಾಲೆಯ ಮರುಪ್ರಕಟಣೆ.
click the link
https://bantwalnews.com/2017/07/27/pa-go-series-12/