ಬೇಸಗೆಯಲ್ಲಿ ಸುಮ್ಮನಿರ್ತಾರೆ, ಮಳೆ ಬಂದಾಗ ರಸ್ತೆ ಅಗೀತಾರೆ!
ಇದನ್ನು ನೀವು ಪರಂಪರೆ ಎನ್ನುತ್ತೀರೋ, ಪದ್ಧತಿ ಎನ್ನುತ್ತೀರೋ ನಿಮಗೇ ಬಿಟ್ಟದ್ದು. ಪ್ರಕೃತಿ ಎಲ್ಲ ಅನುಕೂಲ ಮಾಡಿಕೊಡುವಾಗ ಯಾರೂ ಏನೂ ಮಾಡೋದಿಲ್ಲ. ಸಮಸ್ಯೆ ಶುರುವಾದಾಗ ನಮ್ಮದೂ ಒಂದಿರಲಿ ಎಂದು ಅವರೂ ಬರ್ತಾರೆ. ಎಲ್ಲ ಊರೂಗಳಲ್ಲೂ ಇಂಥದ್ದೊಂದು ಸಂದರ್ಭ ಎದುರಾಗಿರಬಹುದು. ನಾನೀಗ ಹೇಳಹೊರಟಿರುವುದು ಬಿ.ಸಿ.ರೋಡಿನ ಕತೆ. ಇದು ಎಲ್ಲರಿಗೂ ಗೊತ್ತಿರುವ ವ್ಯಥೆ. ಏನು ಹಾಗಾದರೆ ಅಭಿವೃದ್ಧಿ ಆಗಬಾರದು ಎಂಬುದು ನಿಮ್ಮ ಮಾತೋ, ಎಲ್ಲದಕ್ಕೂ ಕೊಂಕು ನುಡೀಬೇಡಿ ಎಂದು ಗಪ್ ಚುಪ್ ಆಗಿರುವಂತೆ ರಾಜಕಾರಣಿಗಳು ಸೂಚಿಸುತ್ತಾರೆ! ಯಾವತ್ತು ಫ್ಲೈಓವರ್ ಎಂಬ ದೈತ್ಯ ಬಿ.ಸಿ.ರೋಡಿಗೆ ವಕ್ಕರಿಸಿತೋ ಅಂದಿನಿಂದಲೇ ಬಂಟ್ವಾಳ ತಾಲೂಕಿನ ಕೇಂದ್ರಪ್ರದೇಶ ಬದಲಾವಣೆಗಳಿಗೆ ಪ್ರಯೋಗಪಶುವಾಯಿತು!
ಅಂದಾಜು ಆರು ತಿಂಗಳಿಂದಲೂ ಇಡೀ ಬಂಟ್ವಾಳದ ರಸ್ತೆಗಳನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ತೇಪೆ ಹಾಕಿ ಈಗ ಪಾಯಸದಂಥ ಕೆಸರು ತುಂಬುವ ಪರಿಸ್ಥಿತಿ ನಿರ್ಮಾಣಗೊಂಡದ್ದು ಎಲ್ಲರಿಗೂ ಗೊತ್ತೇ ಇದೆ. ಅದೊಂದು ಇಲಾಖೆಯಾದರೆ, ಪ್ರತಿ ವರ್ಷವೂ ರಸ್ತೆಗಳನ್ನು ಅಗೆದು ಕೇಬಲ್ ಹಾಕುವುದು ಮತ್ತೊಂದು ಇಲಾಖೆ. ಎಲ್ಲ ಮುಗಿಯಿತು ಎನ್ನುವಾಗ ಇನ್ನೊಂದು ಯಾವುದೋ ಇಲಾಖೆ ಜೆಸಿಬಿಯನ್ನು ತೆಗೆದುಕೊಂಡು ಹಾಜರಾಗುತ್ತದೆ.
ಬಿ.ಸಿ.ರೋಡ್ ನಲ್ಲಿ ದಶಕದ ಹಿಂದೆ ರಾಷ್ಟ್ರೀಯ ಹೆದ್ದಾರಿಯಷ್ಟೇ ಇದ್ದಾಗ ಅಂಥದ್ದೊಂದು ಗಂಭೀರ ಸಮಸ್ಯೆಯೂ ಇರಲಿಲ್ಲ. ಯಾವಾಗ ಫ್ಲೈಓವರ್ ನಿರ್ಮಾಣವಾಯಿತೋ ಅಲ್ಲಿಂದ ಸಮಸ್ಯೆಗಳು ಆರಂಭವಾಯಿತು. ಫ್ಲೈ ಓವರ್ ಬೇಕೋ ಬೇಡವೋ ಎರಡನೇ ಮಾತು, ಸಮಸ್ಯೆ ಆರಂಭವಾದದ್ದಂತೂ ಸೂರ್ಯ ಬೆಳಕು ಕೊಡುವಷ್ಟೇ ಸತ್ಯ.
(ಗಮನಿಸಿ: ಇಲ್ಲಿ ಫ್ಲೈಓವರ್ ನಿಂದ ಲಾಭವಾಯಿತೋ ಹಾಳಾಯಿತೋ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಸ್ವಾತಂತ್ರ್ಯ ನಿಮಗೇ ಇರುವುದು)
ಯಾವಾಗ ಫ್ಲೈಓವರ್ ಆರಂಭವಾಯಿತೋ ದೊಡ್ಡ ರಸ್ತೆ ಎರಡು ಕವಲಾಯಿತು. ಮಂಗಳೂರಿಗೆ ತೆರಳುವ ಭಾಗವನ್ನು ಸರ್ವೀಸ್ ರಸ್ತೆ ಎಂದು ಕರೆಯಲಾಯಿತು. ಅದು ಜನ್ಮ ತಾಳಿದ ಬಳಿಕ ಒಂದಲ್ಲ ಒಂದು ಸಮಸ್ಯೆ ಹುಟ್ಟಿದವು.
ಸರ್ವೀಸ್ ರಸ್ತೆ ಆರಂಭಗೊಳ್ಳುವ ಮತ್ತು ಕೊನೆಗೊಳ್ಳುವ ಜಾಗ ಯಾವುದೋ ಒಂದು ಬಡಾವಣೆಗೆ ಪ್ರವೇಶ ಮಾಡುವ ಇಕ್ಕಟ್ಟಾದ ರಸ್ತೆಯಂತೆಯೇ ಎಲ್ಲರಿಗೂ ಕಾಣಿಸತೊಡಗಿದವು. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡಗಳಿಗೆ ವ್ಯಾಪಾರಕ್ಕೆ ಬರುವವರು ಸಮಸ್ಯೆ ಅನುಭವಿಸಿದರೆ, ಇಲ್ಲಿ ನಡೆದಾಡುವುದು ಪ್ರಾಣಕ್ಕೆ ಅಪಾಯ ಎಂಬಲ್ಲಿವರೆಗೆ ಹೋಯಿತು. ಆಗಲೇ ಹುಟ್ಟಿಕೊಂಡ ಪ್ರಶ್ನೆ ಇದರ ನಿರ್ವಹಣೆ ಯಾರದ್ದು?
ಅಸಲಿಗೆ ಸರ್ವೀಸ್ ರಸ್ತೆಯ ನಿರ್ವಹಣೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದು. ಅವರೋ ಈ ರಸ್ತೆಯ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಆದರೆ ಜನಸಾಮಾನ್ಯರಿಗೆ ಇಂಥದ್ದು ಗೊತ್ತೂ ಆಗುವುದಿಲ್ಲ. ಇದು ಮುನ್ಸಿಪಾಲಿಟಿಗೆ ಸೇರಿದ್ದಲ್ವೇ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾರೆ. ಮುನ್ಸಿಪಾಲಿಟಿಯೂ ಇದು ಎನ್.ಎಚ್.ಎ.ಐ.ಗೆ ಸೇರಿದ ಕಾರಣ ನಮಗೆ ಸಂಬಂಧವೇ ಇಲ್ಲ ಎಂದು ಹೇಳಿ ಸುಮ್ಮನಾಗುತ್ತದೆ. ಆದರೆ ಸಮಸ್ಯೆ ಅನುಭವಿಸುವವರು ಯಾವ ಇಲಾಖೆಗೆ ಸೇರಿದವರೂ ಅಲ್ಲ, ಜನಸಾಮಾನ್ಯರಷ್ಟೇ .
ರಸ್ತೆ ಅಭಿವೃದ್ಧಿ ಎನ್ನುವುದು ಬಳಿಕ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತದೆ. ಹೋರಾಟ ಸಮಿತಿ ಹುಟ್ಟಿಗೂ ಕಾರಣವಾಗುತ್ತದೆ. ಆದರೆ ರಸ್ತೆ ಹಾಗೇ ಉಳಿದುಕೊಂಡುಬಿಟ್ಟದ್ದು ವಿಪರ್ಯಾಸ.
ಈಗ ಏನಾಗಿದೆ:
ಶುಕ್ರವಾರ ರಾತ್ರಿಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ ಹೊತ್ತಿನಲ್ಲಿ ಪ್ರಖರ ಬಿಸಿಲೂ ಇತ್ತು. ಆದರೆ ಮಳೆಯ ಪ್ರಮಾಣ ಕಡಿಮೆಯಂತೂ ಅಲ್ಲ. ಕೆಸರು ರಾಡಿಯಾಗಲು ಅಷ್ಟೇ ಸಾಕು.
ಬಿ.ಸಿ.ರೋಡ್ ಸರ್ವೀಸ್ ರಸ್ತೆಯಿಂದ ಕೈಕುಂಜೆ ಕಡೆಗೆ ತಿರುಗುವ ಜಾಗದಲ್ಲಿ ಗುರುವಾರ ಬೆಳಗ್ಗಿನಿಂದಲೇ ಜೆಸಿಬಿ ಆಗಮಿಸಿ ರಸ್ತೆ ಮಧ್ಯೆ ಚರಂಡಿಯನ್ನು ಅಗೆಯಿತು. ಇದರಿಂದ ಮಂಗಳೂರಿಗೆ ತೆರಳುವ ವಾಹನಗಳ ಸಹಿತ ನೂರಾರು ವಾಹನ ಸವಾರರು, ಸಾರ್ವಜನಿಕರು ತೊಂದರೆ ಅನುಭವಿಸಿದರು.
ಯಾರಿಗೆಲ್ಲ ಪ್ರಾಬ್ಲಂ
ಬಂಟ್ವಾಳ ನಗರ ಠಾಣೆ, ತಾಲೂಕು ಕಚೇರಿ, ತಾಲೂಕು ಪಂಚಾಯತ್ ಕಚೇರಿ, ನ್ಯಾಯಾಲಯ ಸಂಕೀರ್ಣ, ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ, ಎಪಿಎಂಸಿ ಸಹಿತ ಹಲವು ಕಚೇರಿಗಳಿಗೆ ಇದೇ ಮಾರ್ಗವಾಗಿ ನೂರಾರು ಮಂದಿ ಪ್ರತಿನಿತ್ಯ ಆಗಮಿಸುತ್ತಾರೆ. ಈ ರಸ್ತೆ ಕೈಕುಂಜೆ ಕಡೆಗೆ ಸಾಗುತ್ತಿದ್ದು, ಇಲ್ಲಿ ಸುಮಾರು ಐನೂರಕ್ಕೂ ಅಕ ಮನೆಗಳಿವೆ. ಬಿ.ಸಿ.ರೋಡಿನ ಪ್ರಮುಖ ವಾಣಿಜ್ಯ ಸಂಕೀರ್ಣಗಳೂ ಇದೇ ರಸ್ತೆಯನ್ನು ಹಾದು ಹೋಗಬೇಕು. ರಸ್ತೆ ಒಂದು, ಸಮಸ್ಯೆ ಸಾವಿರದ ಒಂದು ಎಂಬಂತಾಯಿತು.
ಯಾವುದು ತುರ್ತಾಗಿ ಆಗಬೇಕಾದದ್ದೋ ಅದನ್ನು ಇಲಾಖೆ ಮಾಡೋದೇ ಇಲ್ಲ ಎಂಬುದು ಮತ್ತೊಂದು ದೂರು. ಸರ್ವೀಸ್ ರಸ್ತೆ ಅಗಲಗೊಂಡು ಕಾಂಕ್ರೀಟಿಕರಣಗೊಳ್ಳಲಿದೆ ಎಂಬುದು ಈಗ ಕೇಳಿಬರುತ್ತಿರುವ ಮಾತು. ಆದರೆ ಅದು ಮಳೆಗಾಲ ಮುಗಿದ ಬಳಿಕ ಎಂಬುದೂ ಖಚಿತವಾದ ವಿಚಾರ. ಹೀಗಿದ್ದ ಮೇಲೆ ತಾತ್ಕಾಲಿಕವಾಗಿಯಾದರೂ ದುರಸ್ತಿಗೊಳಿಸಲು ಏನು ತೊಂದರೆ ಎಂಬುದು ಸಾರ್ವಜನಿಕರ ಪ್ರಶ್ನೆ. ಒಂದು ವೇಳೆ ದುರಸ್ತಿಗೊಳಿಸಲು ಆಗದೇ ಇದ್ದ ಮೇಲೆ ಅಲ್ಲಿ ವಾಹನ ಸಂಚಾರಕ್ಕೆ ಬಿಡೋದು ಯಾಕೆ ಎಂಬುದನ್ನು ಕೇಳುತ್ತಿದ್ದಾರೆ ಸಾರ್ವಜನಿಕರು.
ಧರ್ಮಸ್ಥಳ, ಪುತ್ತೂರು ಕಡೆಗಳಿಂದ ಬರುವ ಎಲ್ಲ ಬಸ್ಸುಗಳು ಈಗ ರಸ್ತೆ ಅಗೆಯುವ ಸ್ಥಳದ ಬದಿಯಲ್ಲೇ ಆಗಮಿಸುತ್ತದೆ. ಇವುಗಳಿಗೆ ನಿಲ್ಲಲೂ ಜಾಗವಿಲ್ಲ. ರಸ್ತೆಯನ್ನು ಏಕಾಏಕಿ ಅಗೆಯುವ ಸಂದರ್ಭ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಸಂದರ್ಭ ಬಸ್ಸುಗಳನ್ನು ಓಡಾಡಲು ಬಿಟ್ಟರೆ ಸಮಸ್ಯೆ ಬಿಗಡಾಯಿಸುತ್ತದೆಯೇ ಹೊರತು ಪರಿಹಾರವೆಲ್ಲಿಂದ?
ರಸ್ತೆ ಅಭಿವೃದ್ಧಿಯಾಗಬೇಕು, ಊರು ಉದ್ಧಾರವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾವುದೇ ಪ್ಲ್ಯಾನ್ ಇಲ್ಲದೆ, ಸಾರ್ವಜನಿಕರನ್ನು ಟೇಕನ್ ಫಾರ್ ಗ್ರಾಂಟೆಡ್ ಎಂದು ಪರಿಗಣಿಸಿ, ಕಾಮಗಾರಿ ನಡೆಯುವ ಸಂದರ್ಭ,
ಅದು ಕೇಂದ್ರ ಸರಕಾರಕ್ಕೆ ಸೇರಿದ್ದು, ನಮಗಲ್ಲ ಎಂದು ಇವರೂ, ಅದು ರಾಜ್ಯ ಸರಕಾರಕ್ಕೆ ಸೇರಿದ್ದು ಎಂದು ಅವರೂ ವಾದ, ಪ್ರತಿವಾದ ಮಾಡಿಕೊಂಡರೆ, ಅದು ಆ ಇಲಾಖೆಗೆ ಸೇರಿದ್ದು ಎಂದು ಇಲ್ಲಿ, ಈ ಇಲಾಖೆಗೆ ಸೇರಿದ್ದೆಂದು ಅಲ್ಲಿ ಹೇಳಿಕೊಂಡರೆ, ಅಮಾಯಕ ನಾಗರಿಕರ ಪಾಡೇನು?
ಏನು ಸ್ವಾಮೀ ಯಾಕಿಂಥ ಹಿಂಸೆ?