ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಹುಟ್ಟುಹಾಕಿ, ಅದೆಷ್ಟೋ ಜನರಿಗೆ ಉದ್ಯೋಗ ಕಲ್ಪಿಸಿದ ಅಪೂರ್ವ ಸಾಮಾಜಿಕ ಸೇವೆಯ ಅನನ್ಯ ಸಾಧಕ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ಮಂಗಳೂರು ಬಾವುಟಗುಡ್ಡೆ ರಸ್ತೆಗೆ ನಾಮಕರಣ ಮಾಡಿ ಸರಕಾರ ಆದೇಶಿಸಿದ್ದು ಅತ್ಯಂತ ಔಚಿತ್ಯಪೂರ್ಣ, ಶಾಶ್ವತ ಗೌರವ. ಆದರೆ ಈ ಆದೇಶಕ್ಕೆ ಸರಕಾರವೇ ತಡೆಯಾಜ್ಞೆ ನೀಡಿ ಗೊಂದಲ ಸೃಷ್ಟಿಸಿದ್ದು ಬೇಸರದ ಸಂಗತಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಾಮಕರಣದ ಮುನ್ನ ಮಂಗಳೂರು ಪೋಲೀಸ್ ಆಯುಕ್ತರು ಮತ್ತು ದ.ಕ. ಜಿಲ್ಲಾಧಿಕಾರಿಗಳು ’ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ’ ಎಂದು ನಾಮರಕಣಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಹಾಗೂ ಇದರಿಂದ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವುದಿಲ್ಲ ಎಂದು 03-07-2009ರಲ್ಲಿ ಶಿಫಾರಸ್ಸು ಮಾಡಿರುವುದು ಗಮನಾರ್ಹ. ಈ ಹಿನ್ನಲೆಯಲ್ಲಿ 24-05-2017ರಂದು ನಗರಾಭಿವೃದ್ಧಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿಯವರು ಈ ನಾಮಕರಣಕ್ಕೆ ಸರಕಾರದ ಅಧಿಕೃತ ಅನುಮೋದನೆ ಆದೇಶ ನೀಡಿದ್ದರು. ಇದೇ ಅಧಿಕಾರಿ 01-07-2017ರಲ್ಲಿ ಹಿಂದಿನ ಆದೇಶಕ್ಕೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿರುವುದು ಖೇದಕರ.
ಜಿಲ್ಲೆಗೆ ಕೀರ್ತಿ ತಂದ ಉನ್ನತ ವ್ಯಕ್ತಿತ್ವದ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಬಗ್ಗೆ ಜನಪ್ರತಿನಿಧಿಗಳು ಮತ್ತೊಮ್ಮೆ ಚಿಂತನೆ ಮಾಡಿ ತಡೆಯಾಜ್ಞೆಯನ್ನು ತೆರವುಗೊಳಿಸಿ, ಜಿಲ್ಲೆಯ ಸಾಮರಸ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಒಡಿಯೂರು ಶ್ರೀಗಳವರು ಕರೆನೀಡಿದ್ದಾರೆ.