ಗಿರಿಲಹರಿ

ವಿಮರ್ಶಕರ ದೌರ್ಬಲ್ಯಕ್ಕೆ ಭೈರಪ್ಪನವರ ಅನುಯಾಯಿಗಳು ಹೊಣೆಯೇ?

  • ಅಜಕ್ಕಳ ಗಿರೀಶ ಭಟ್

ದಿನಾಂಕ ೨೧-೦೫-೨೦೧೭ ರವಿವಾರದ ಹೊಸದಿಗಂತದಲ್ಲಿ ಭೈರಪ್ಪನವರ ಕಾದಂಬರಿ ಪ್ರಪಂಚ ಎನ್ನುವ ಕೃತಿಯನ್ನು ವಿಮರ್ಶೆ ಮಾಡುತ್ತ ಅರವಿಂದ ಚೊಕ್ಕಾಡಿಯವರು ಬರೆದ ಮಾತುಗಳ ಹಿನ್ನೆಲೆಯಲ್ಲಿ ಈ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

ಭೈರಪ್ಪನವರ ಕಾದಂಬರಿಗಳಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಎಂದು ಬಹಳಷ್ಟು ಮಂದಿ ಹೇಳುವ ಮಾತು. ಆದರೆ ಈ ಮಾತು ಅರ್ಧಸತ್ಯ. ಅಥವಾ ಅರ್ಧ ಕೂಡ ಸತ್ಯವಲ್ಲ. ಭೈರಪ್ಪನವರ ಕೃತಿಗಳ ಬಗ್ಗೆ ಅಕಡೆಮಿಕ್ ವಿಮರ್ಶಕರು ಅಂದರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿಮರ್ಶಕರು ಕೊಡಬೇಕಾದಷ್ಟು ಗಮನವನ್ನು ನೀಡಲಿಲ್ಲ ಎನ್ನುವುದು ನಿಜ. ವಿಶ್ವವಿದ್ಯಾನಿಲಯಗಳ, ಕಾಲೇಜುಗಳ ಕನ್ನಡ ಸಾಹಿತ್ಯದ ಪಠ್ಯಕ್ರಮದಲ್ಲಿ ಅವರ ಕಾದಂಬರಿಗಳಿಗೆ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ ಅನ್ನುವುದು ಕೂಡ ನಿಜ. ಹಾಗಂತ ಅವರ ಕೃತಿಗಳಿಗೆ ವಿಮರ್ಶಾನ್ಯಾಯ ಸಿಕ್ಕಿಲ್ಲ್ಲ ಎಂದರೆ ಅದು ತಪ್ಪಾಗುತ್ತದೆ. ಅವರ ಕಾದಂಬರಿಗಳ ಬಗ್ಗೆಯೇ ಸುಮಾರು ೪೦ರಷ್ಟು ಪುಸ್ತಕಗಳು ಬಂದಿವೆ. ಈ ಪುಸ್ತಕಗಳನ್ನು ಅಥವಾ ಅವುಗಳಲ್ಲಿರುವ ಲೇಖನಗಳನ್ನು ಬರೆದವರಲ್ಲಿ ಸಾಕಷ್ಟು ಹೆಸರು ಮಾಡಿರುವ ವಿಮರ್ಶಕರೂ ಇದ್ದಾರೆ. ಕೆಲವು ಪಿಎಚ್.ಡಿ. ಮತ್ತು ಎಂ.ಫಿಲ್. ಸಂಶೋಧನಾಪ್ರಬಂಧಗಳೂ ಭೈರಪ್ಪನವರ ಕಾದಂಬರಿಗಳ ಬಗ್ಗೆಯೇ ಬಂದಿವೆ. ದೇಶದ ಪ್ರಮುಖ ಭಾಷೆಗಳಿಗೆ ಅವರ ಕೃತಿಗಳು ಅನುವಾದವಾಗಿವೆ. ಇತರ ಭಾಷೆಗಳಲ್ಲಿ ಅವರ ಕಾದಂಬರಿಗಳ ಬಗ್ಗೆ ಸಾಕಷ್ಟು ವಿಮರ್ಶೆಗಳು ಪ್ರಕಟವಾಗಿವೆ. ಈಗಂತೂ ಸಾಮಾಜಿಕ ಜಾಲತಾಣಗಳಲ್ಲೂ ಅವರ ಕಾದಂಬರಿಗಳ ಬಗ್ಗೆ ಗಂಭೀರ ವಿಮಶೆಗಳು ಬರುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಕಳೆದ ಸುಮಾರು ಹತ್ತು ವರ್ಷಗಳಲ್ಲಿ ನೋಡಿದರೆ ಬೆಂಗಳೂರು, ಶಿವಮೊಗ್ಗ, ಧಾರವಾಡ, ಮೈಸೂರು, ಹುಬ್ಬಳ್ಳಿ, ಬಾಗಲಕೋಟೆ, ಮಂಗಳೂರು, ಕಾರ್ಕಳ, ಪುತ್ತೂರು, ಶಿರಸಿ, ಬಂಟ್ವಾಳ- ಹೀಗೆ ಹತ್ತಾರು ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ಭೈರಪ್ಪನವರ ಸಾಹಿತ್ಯದ ಕುರಿತು ಅನೇಕ ವಿಚಾರಸಂಕಿರಣಗಳು ನಡೆದಿವೆ. ಹೊರರಾಜ್ಯಗಳಲ್ಲೂ ಅವರ ಕೃತಿಗಳ ಬಗ್ಗೆ ವಿಚಾರಗೋಷ್ಠಿಗಳು ನಡೆದಿವೆ. ಬೆಂಗಳೂರು, ಧಾರವಾಡ, ಮಂಗಳೂರು, ಕಾರ್ಕಳದಂಥ ಹಲವು ಕಡೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವಿಚಾರಗೋಷ್ಠಿಗಳು ನಡೆದದ್ದುಂಟು. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ವಿಚಾರಸಂಕಿರಣಗಳು ಕನ್ನಡದ ಯಾವ ಸಾಹಿತಿಯ ಬಗ್ಗೆಯೂ ನಡೆದಿರಲಿಕ್ಕಿಲ್ಲ. ಆದರೆ ನನ್ನ ಗಮನಕ್ಕೆ ಬಂದ ಪ್ರಕಾರ ಅಥವಾ ನನ್ನ ನೆನಪಿನ ಪ್ರಕಾರ ಈ ವಿಚಾರಸಂಕಿರಣಗಳಲ್ಲಿ ಬಹುಶಃ ಒಂದೇ ಒಂದನ್ನು ಕೂಡ ಯಾವುದೇ ವಿಶ್ವವಿದ್ಯಾಲಯ ಅಥವಾ ವಿಶ್ವವಿದ್ಯಾನಿಲಯದ ಸಾಹಿತ್ಯ ವಿಭಾಗಗಳು ಆಯೋಜಿಸಲಿಲ್ಲ ಎಂಬುದು ಮುಖ್ಯವಾಗಿ ಉಲ್ಲೇಖಿಸಬೇಕಾದ ಅಂಶ. (ನನ್ನ ನೆನಪು ತಪ್ಪಿದ್ದರೆ ಅಥವಾ ಯಾವುದಾದರೂ ವಿವಿ ಆಯೋಜಿಸಿದ್ದರೆ, ನನ್ನ ಈ ಮಾತನ್ನು ತಿದ್ದಿಕೊಳ್ಳಲು ತಯಾರಿದ್ದೇನೆ). ಅಂದರೆ ಸರಕಾರಿ ಹಣದ ಹೊರತಾಗಿಯೂ ಅತಿಹೆಚ್ಚು ವಿಚಾರಸಂಕಿರಣಗಳು ಆಯೋಜಿತವಾದವು ಎಂಬುದು ನಿಜವಾಗಿ ಭೈರಪ್ಪನವರ ಸಾಹಿತ್ಯದ ಹೆಗ್ಗಳಿಕೆ.

ಹೀಗೆ ಕನ್ನಡದ ಓದುಗರಿಂದ ಮತ್ತು ಸಾಕಷ್ಟು ವಿಮರ್ಶಕರಿಂದ ಮನ್ನಣೆ ಪಡೆದರೂ, ಸಾಹಿತ್ಯದ ಶೈಕ್ಷಣಿಕ ವಲಯದಲ್ಲಿ ಭೈರಪ್ಪನವರನ್ನು ಕಡೆಗಣಿಸಲಾಗಿದೆ ಎನ್ನುವುದು ಅವರನ್ನು ವಿರೋಧಿಸುವವರಿಗೂ ಬಹಳ ಹಿಂದೆಯೇ ಮನವರಿಕೆಯಾದ ಸಂಗತಿ. ಆದ್ದರಿಂದಲೇ ಯಾಕೆ ಅವರು ಕಡೆಗಣನೆಗೆ ಅರ್ಹರು ಎನ್ನುವುದಕ್ಕೆ ಕಾರಣಗಳನ್ನು ಅಥವಾ ನೆಪಗಳನ್ನು ಹುಡುಕಲು ಕನ್ನಡ ಸಾಹಿತ್ಯದ ಪಟ್ಟಭದ್ರರು ಯತ್ನಿಸುತ್ತ ಬಂದುದರ ಚರಿತ್ರೆಯೇ ಇದೆ. ೧೯೬೦-೭೦ರ ದಶಕಗಳಿಂದ ಒಂದೊಂದು ಕಾರಣಗಳನ್ನು ಹೇಳುತ್ತಾ ಬಂದಿದ್ದು ಕಳೆದ ಕೆಲ ವರ್ಷಗಳಲ್ಲಿ, ಅಂದರೆಸಾಮಾಜಿಕ ಜಾಲತಾಣಗಳು ಬಂದ ಬಳಿಕದ ವರ್ಷಗಳಲ್ಲಿ ವಿಮರ್ಶಕರ ಗುರಿ ಭೈರಪ್ಪನವರ ಅಭಿಮಾನಿಗಳ ಕಡೆಗೆ ತಿರುಗಿದೆ!

ಭೈರಪ್ಪನವರ ಬಗ್ಗೆ ಹಿಂದಿನಿಂದಲೂ ಕನ್ನಡ ಶೈಕ್ಷಣಿಕ ವಲಯದಲ್ಲಿ, ಅಂದರೆ ಮುಂಚೂಣಿ ವಿಮರ್ಶಕರ ವಲಯದಲ್ಲಿ ವ್ಯಕ್ತವಾದ ಒಂದೆರಡುಪ್ರಾತಿನಿಧಿಕ ಅಭಿಪ್ರಾಯಗಳನ್ನು ಗಮನಿಸೋಣ: ಗಿರಡ್ಡಿ ಗೋವಿಂದರಾಜರು, ಪ್ರಶಂಸೆ ಬಯಸಿ ನಿರಾಶರಾಗಿರುವ ಸಾಹಿತಿಗಳ ಸಾಲಿನಲ್ಲಿ ಭೈರಪ್ಪನವರನ್ನು ಪರಿಗಣಿಸುತ್ತಾರೆ(ಬಿಕ್ಕಟ್ಟಿನಲ್ಲಿ ಕನ್ನಡ ವಿಮರ್ಶೆ). ಅನಂತಮೂರ್ತಿಯವರು ಭೈರಪ್ಪನವರಿಗೆ ಜಡ ಪ್ರಪಂಚ ಮಾತ್ರ ನಿಜ ಎಂದೂ ಅವರದು ವಂಚಿಸಿ ರಂಜಿಸುವ ಕಲೆ ಎಂದೂ ಹೇಳುತ್ತಾರೆ(ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ). ಸಿ. ಎನ್. ರಾಮಚಂದ್ರನ್ ಅವರು ಭೈರಪ್ಪನವರ ಕಾದಂಬರಿಗಳಲ್ಲಿ ಹೊರರಚನೆ ಮತ್ತು ಒಳರಚನೆಗಳನ್ನು ಗುರುತಿಸುತ್ತಾರೆ. ಹೊರರಚನೆ ಕ್ರಾಂತಿಕಾರಕವಾಗಿದ್ದು ಒಳರಚನೆ ಸಂಪ್ರದಾಯವಾದಿಯಾದುದು ಎನ್ನುತ್ತಾರೆ ಮತ್ತು ಇದುವೇ ಭೈರಪ್ಪನವರ ಜನಪ್ರಿಯತೆಗೆ ಕಾರಣ ಎಂದು ಊಹಿಸುತ್ತಾರೆ(ಭೈರಪ್ಪನವರ ಕಾದಂಬರಿಗಳು ಮತ್ತು ಜನಪ್ರಿಯತೆ). ರಹಮತ್ ತರೀಕೆರೆಯವರ ಪ್ರಕಾರ ಭೈರಪ್ಪನವರ ವೈಚಾರಿಕತೆ ಸಂಪ್ರದಾಯಗಳನ್ನು ವಿಮರ್ಶಿಸಿ ಭಗ್ನಗೊಳಿಸುವ ಸೋಗನ್ನು ಹಾಕುತ್ತದೆ ಮತ್ತು ಅಂತಿಮವಾಗಿ ಜಾಣ್ಮೆಯಿಂದ ಅದನ್ನು ಪಾಸು ಮಾಡಿ ಉಳಿಯಗೊಡುತ್ತದೆ(ಮರದೊಳಗಣ ಕಿಚ್ಚು). ಇವರಾರೂ ಭೈರಪ್ಪನವರ ಕೃತಿಗಳ ಜನಪ್ರಿಯತೆಗೆ ಅವುಗಳಲ್ಲಿರುವ ಕಲಾತ್ಮಕತೆ ಅಥವಾ ಒಟ್ಟಾರೆಯಾಗಿ ಕಲೆಯ ಬಗ್ಗೆ ಮತ್ತು ನಿರ್ದಿಷ್ಟವಾಗಿ ಕಾದಂಬರಿ ರಚನೆಯ ಕಲೆಯ ಬಗ್ಗೆ ಭೈರಪ್ಪನವರು ಪ್ರಜ್ಞಾಪೂರ್ವಕವಾಗಿ ಚಿಂತಿಸಿ ಬರೆದುದು ಕಾರಣ ಎಂದು ಗುರುತಿಸುವಲ್ಲಿ ಸೋಲುತ್ತಾರೆ.

ಆವರಣ ಕಾದಂಬರಿ ಪ್ರಕಟವಾಗಿ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದಾಗ ವಿಮರ್ಶಕರು ಬೈರಪ್ಪನವರ ಅಭಿಮಾನಿಗಳನ್ನು ಗುರಿಯಾಗಿಸಲಾರಂಭಿಸಿದರು. ಈ ಹಿನ್ನೆಲೆಯಲ್ಲಿ ಅರವಿಂದ ಚೊಕ್ಕಾಡಿಯವರು ಮೇಲೆ ಹೇಳಿದ ಲೇಖನದಲ್ಲಿಬರೆದ ಸಾಲುಗಳನ್ನು ವಿವೇಚಿಸಬೇಕಾಗುತ್ತದೆ.

ಚೊಕ್ಕಾಡಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಕೇವಲ ಹೊಗಳಿಕೆ ಅಥವಾ ಬೈಗುಳ ಮಾತ್ರ ಸಾಧ್ಯ: ವಿಮರ್ಶೆ ಸಾಧ್ಯವಿಲ್ಲ ಎನ್ನುವಂಥ ವ್ಯಕ್ತಿತ್ವಗಳು ಮೂರು ಎಂದು ಹೇಳಿ ಮಹಾಕವಿ ಕುವೆಂಪು, ನಟ ರಾಜಕುಮಾರ್ ಮತ್ತು ಭೈರಪ್ಪನವರ ಹೆಸರುಗಳನ್ನು ನೀಡುತ್ತಾರೆ. ಮುಂದುವರಿದು ಕೊಂಚ ರಿಸ್ಕ್ ತೆಗೆದುಕೊಂಡರೆ ಕುವೆಂಪು ಮತ್ತು ರಾಜಕುಮಾರ್ ಇವರಿಬ್ಬರನ್ನೂ ವಿಮರ್ಶಿಸಬಹುದು ಎನ್ನುತ್ತಾರೆ. ಕೇವಲ ಹೊಗಳಿಕೆ ಅಥವಾ ಬೈಗುಳ ಮಾತ್ರ ಸಾಧ್ಯ ಎಂಬ ಪಟ್ಟಿ ಮಾಡಿ ಈ ಮೂವರನ್ನು ಒಂದೇ ಗುಂಪಿನಲ್ಲಿ ಚೊಕ್ಕಾಡಿಯವರು ಪರಿಗಣಿಸಿದ್ದೇ ತಪ್ಪು. ಯಾಕೆಂದರೆ ಭೈರಪ್ಪನವರನ್ನು ಬೈದುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಇನ್ನಿಬ್ಬರ ಬಗ್ಗೆ ಅಂಥ ಉದಾಹರಣೆಗಳು ಎಷ್ಟಿವೆ? ಮುಂದುವರಿದು ಚೊಕ್ಕಾಡಿಯವರು ಹೇಳುತ್ತಾರೆ- ಪ್ರಭುತ್ವದ ನೆರಳಿನಲ್ಲಿರುವ ಅನುಯಾಯಿಗಳನ್ನು ಹೊಂದಿರುವ ಕನ್ನಡದ ಏಕೈಕ ಲೇಖಕ ಭೈರಪ್ಪನವರು….. ಇದರಿಂದಾಗಿ ಭೈರಪ್ಪನವರ ಬಗ್ಗೆ ಮಾತನಾಡುವವರಿಗೆ ಭೈರಪ್ಪನವರು ಕಾಣಿಸುವುದಿಲ್ಲ, ಅವರ ಹಿಂದೆ ನಿಂತವರೇ ಕಾಣಿಸುತ್ತಾರೆ. ಆದ್ದರಿಂದ ಅವರ ಹಿಂದೆ ನಿಂತವರಿಗಿರುವ ಬೈಗುಳಗಳೆಲ್ಲ ಬೀಳುವುದು ಭೈರಪ್ಪನವರ ಮೇಲೆಯೇ. ಅವರ ಸಾಹಿತ್ಯವನ್ನು ಈ ಬೈಗುಳಗಳಿಗೆ ಪೋಣಿಸಿ ಅರ್ಥೈಸುವಲ್ಲಿಗೆ ಭೈರಪ್ಪನವರ ಕೃತಿವಿಮರ್ಶೆ ಮುಗಿದುಬಿಡುತ್ತದೆ. ಬೈಗುಳಗಳಿಗೆ ಪೋಣಿಸಿ ಅರ್ಥೈಸುವಲ್ಲಿಗೆ ಕೃತಿವಿಮರ್ಶೆ ಮುಗಿಯುತ್ತದೆ ಅನ್ನುವುದು ಸರಿ. ಆದರೆ ಅದಕ್ಕೆ ಅನುಯಾಯಿಗಳು/ಅಭಿಮಾನಿಗಳು ಕಾರಣ ಎನ್ನುವ ಧ್ವನಿಯನ್ನು ವಿವೇಚಿಸಬೇಕು. ಮೊದಲನೆಯದಾಗಿ ಭೈರಪ್ಪನವರ ಅನುಯಾಯಿಗಳು ಪ್ರಭುತ್ವದ ನೆರಳಿನಲ್ಲಿರುವವರು ಎಂದರೆ ಏನರ್ಥ? ಸರಕಾರದ ನೆರಳಿನಲ್ಲಿ ಅಥವಾ ಸರಕಾರದ ಪರ ಎಂದೇ? ಕಾಂಗ್ರೆಸಿನ ಪರವೆಂದೇ? ಬಿಜೆಪಿಯ ಪರ ಎಂದೇ? ಬಿಜೆಪಿ ಪ್ರಭುತ್ವದ ಪಕ್ಷವಾಗುವ ಎಷ್ಟೋ ಮೊದಲೇ ಭೈರಪ್ಪನವರಿಗೆ ಅಭಿಮಾನಿಗಳಿದ್ದರು. ತುರ್ತುಪರಿಸ್ಥಿತಿಯ ಕಾಲಕ್ಕೇ ಭೈರ್ರಪ್ಪನವರು ಪ್ರಸಿದ್ಧರಾಗಿದ್ದರು. ಆಗಿನ ಅವರ ಓದುಗರು ಆಗಿನ ಪ್ರಭುತ್ವದ ಪರ ಅಥವಾ ನೆರಳಲ್ಲಿ ಇದ್ದರೇ? ಈಗಲಾದರೂ ಅಷ್ಟೇ. ಕೇಂದ್ರದಲ್ಲಿರುವ ಪ್ರಭುತ್ವದ ಪರ ಇರುವವರು ರಾಜ್ಯದ ಪ್ರಭುತ್ವದ ಪರ ಇರಲಾರರು! ರಾಜ್ಯದಲ್ಲಿರುವ ಪ್ರಭುತ್ವದ ಪರ ಇರುವವರು ಕೇಂದ್ರದ ಪ್ರಭುತ್ವದ ವಿರುದ್ಧ ಇರಬಹುದು.

 ಚೊಕ್ಕಾಡಿಯವರು ಹೇಳುತ್ತಾರೆ- ಇನ್ನೊಂದು ಕಡೆಯಿಂದ ಏನಾಗುತ್ತದೆಯೆಂದರೆ, ಭೈರಪ್ಪನವರ ಅನುಯಾಯಿಗಳಲ್ಲಿ ಒಂದು ದೊಡ್ಡ ತಂಡ ಭೈರಪ್ಪನವರನ್ನು ಹೊಗಳಿದರೆ ಖುಷಿಪಟ್ಟು, ತೆಗಳಿದರೆ ಬೇಸರಿಸಿಕೊಂಡು ಸುಮ್ಮನಿರುವವರಾದರೆ, ಇನ್ನೊಂದು ತಂಡದ ನಂಜಿನ ಉರಿನಾಲಗೆಯ ವಿಷಕಾರುವಿಕೆಗೆ ಹೆದರಿಯೇ ಇವರ ಸಹವಾಸ ಬೇಡ ಎಂದು ಭೈರಪ್ಪನವರ ಕೃತಿಗಳ ವಿಮರ್ಶೆಗೆ ಹೋಗುವುದೇ ಇಲ್ಲ…    ಈ ಉರಿನಾಲಗೆಯ ವಿಷ ಕಾರುವಿಕೆ ಎಂದಿನಿಂದ ಆರಂಭವಾಯಿತು? ಪತ್ರಿಕೆಗಳಲ್ಲಾಗಲೀ ಸಾಮಾಜಿಕ ಜಾಲತಾಣಗಳಲ್ಲಾಗಲೀ ಭೈರಪ್ಪನವರ ಅನುಯಾಯಿಗಳಿಗೆ ಧ್ವನಿ ಸಿಕ್ಕಿದ್ದು ಯಾವಾಗಿನಿಂದ? ಕಳೆದ ಸುಮಾರು ಹತ್ತು ವರ್ಷಗಳ ಹಿಂದೆ ಭೈರಪ್ಪನವರ ಅನುಯಾಯಿಗಳು ಧ್ವನಿಯೆತ್ತಿದ್ದು ಉಂಟೇ? ಅವರ ಅನುಯಾಯಿಗಳಿಗೆ ಯಾವ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅವರನ್ನು ಹೊಗಳಿ ಬರೆಯಲು ಅವಕಾಶವಿತ್ತು? ಇರಲೇ ಇಲ್ಲ! ಹಾಗಿರುವಾಗ ಅವರ ಕೃತಿಯನ್ನು ವಿಶ್ವವಿದ್ಯಾಲಯಗಳ ವಿಮರ್ಶಕರು ಸರಿಯಾದ ರೀತಿಯಲ್ಲಿ ವಿಮರ್ಶೆ ಮಾಡಲು, ಆವರಣಕ್ಕಿಂತ ಮೊದಲಿನ ಅವರ ಮಹಾ ಮಹಾ ಕಾದಂಬರಿಗಳು ಬಂದು ಹತ್ತಿಪ್ಪತ್ತು ವರ್ಷಗಳಾಗುವವರೆಗೂ ಅನುಯಾಯಿಗಳು ಅಡ್ಡಿಯಾಗಿರಲು ಸಾಧ್ಯವಿಲ್ಲ ತಾನೇ? ಇತ್ತೀಚಿನ ಎಂಟು ಹತ್ತು ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಅಭಿಪ್ರಾಯಗಳಿಗೆ ಅವಕಾಶ ದೊರೆಯುತ್ತಿರುವುದರಿಂದ ಮತ್ತು ಇದರಿಂದಾಗಿಯೇ ಪತ್ರಿಕೆಗಳೂ ತಮ್ಮ ಧೋರಣೆಗಳನ್ನು ಸಡಿಲಿಸುವ ಒತ್ತಡಕ್ಕೆ ಒಳಗಾಗುತ್ತಿವೆ. ಹೀಗಾಗಿ ಅನಿವಾರ್ಯವಾಗಿ ವಿಶ್ವವಿದ್ಯಾಲಯಪ್ರಣೀತ ಪಟ್ಟಭದ್ರ ವಿಮರ್ಶಕರ ಏಕಸ್ವಾಮ್ಯಕ್ಕೆ ಹೊಡೆತ ಬಿದ್ದಿದೆ!. ಇದಾವುದನ್ನೂ ಗಮನಿಸದೆ, ಭೈರಪ್ಪನವರ ಕೃತಿಗಳಿಗೆ ನ್ಯಾಯವಾದ ವಿಮರ್ಶೆ ಸಿಗದೆ ಇರಲು ಅವರ ಹಿಂದೆ ನಿಂತಿರುವ, ವಿಷಕಾರುವ ಉರಿನಾಲಗೆಯ ಅನುಯಾಯಿಗಳೇ ಕಾರಣ ಎನ್ನುವುದು ಕುಂಟುನೆಪವಾಗುತ್ತದೆ ಅಷ್ಟೆ.

ಹಾಗಿದ್ದರೆ ಭೈರಪ್ಪನವರ ಕೃತಿಗಳಿಗೆ ಮೊದಲಿನಿಂದಲೂ ಓದುಗರ ವಲಯದಲ್ಲಿ ಮಾನ್ಯತೆ ಸಿಕ್ಕಿದರೂ  ಸಾಹಿತ್ಯದ ಶೈಕ್ಷಣಿಕ ವಲಯದಲ್ಲಿ ಅಂಥ ಮಾನ್ಯತೆ ಸಿಗದೇ ಇರಲು ನಿಜವಾದ ಕಾರಣವೇನು ಎನ್ನುವುದನ್ನು ಯೋಚಿಸಬೇಕು.  ಮುಖ್ಯವಾಗಿ ಈ ಮುಂಚೂಣಿ ವಿಮರ್ಶಕರ ಸಾಹಿತ್ಯ ಮೀಮಾಂಸೆಗೆ ಅನುಗುಣವಾಗಿ ಭೈರಪ್ಪನವರು ಬರೆಯಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಭೈರಪ್ಪನವರು ತಮ್ಮದೇ ಸಾಹಿತ್ಯ ಮೀಮಾಂಸೆಗೆ ಅನುಗುಣವಾಗಿ ಬರೆದರು ಮತ್ತು ಅದೇ ಕಾರಣವಾಗಿ ಅವರ ಕಾದಂಬರಿಗಳು ಜನಪ್ರಿಯವಾದವು. ಭೈರಪ್ಪನವರ ಕಾದಂಬರಿಗಳು ಪ್ರಜ್ಞಾಪೂರ್ವಕವಾಗಿ ವಸ್ತು, ತಂತ್ರ, ಶೈಲಿಗಳಲ್ಲಿ ಕಲಾಮೀಮಾಂಸೆಯ ದೃಷ್ಟಿಯನ್ನು ಹೊಂದಿರುವುದರಿಂದ ಓದುಗರನ್ನು ಅವುಗಳು ಆಕರ್ಷಿಸುತ್ತವೆ. ಮಾನವ ಬದುಕಿನ ಸತ್ಯಗಳ ಬಗ್ಗೆ ಸಾಮಾಜಿಕರ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಕೆಲಸವನ್ನು ಅವರ ಕೃತಿಗಳು ಮಾಡುತ್ತವೆ. ಈ ಬಗೆಯ ದಾರ್ಶನಿಕ ಸತ್ಯಶೋಧನೆಯೇ ಮುಖ್ಯವೆಂದು ಭೈರಪ್ಪನವರು ಭಾವಿಸುವುದರಿಂದ ನೇರವಾಗಿ ಘೋಷಣಾತ್ಮಕವಾಗಿ ಹೇಳಿ ಸಮಾಜದ ಅರೆಕೊರೆಗಳನ್ನು ಲೇಖಕ ಸರಿ ಮಾಡಬೇಕು ಎನ್ನುವ ಅಭಿಪ್ರಾಯ ಅವರದಲ್ಲ.

ಕುವೆಂಪು ಅವರು ದರ್ಶನಾತ್ಮಕತೆ ಬಗ್ಗೆ ಹೇಳಿದ ಮಾತುಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು: ದರ್ಶನಾತ್ಮಕತೆ ಎಷ್ಟರಮಟ್ಟಿಗೆ ಯಾವ ಪ್ರಕಾರದಲ್ಲಿ ಗೋಚರವಾಗುತ್ತದೋ ಅಷ್ಟರಮಟ್ಟಿಗೆ ಆ ಪ್ರಮಾಣದಲ್ಲಿ ವರ್ಣನಾತ್ಮಕ ವಿಮರ್ಶೆಯೂ ಉತ್ತಮ ವರ್ಗಕ್ಕೆ ಸೇರುತ್ತದೆ….. ಈ ಹಿನ್ನೆಲೆಯಲ್ಲಿ ನೋಡಿದಾಗ ಭೈರಪ್ಪನವರು ಬರೆಯಲಾರಂಭಿಸಿದ ನವ್ಯಸಾಹಿತ್ಯದ ಕಾಲದಲ್ಲಿ ಮನುಷ್ಯನ ಮೂಲಭೂತ ಸ್ವಭಾವ ಇತ್ಯಾದಿಗಳ ವಿವೇಚನೆಯು ವಿಮರ್ಶೆಯಲ್ಲಿ ಬರುತ್ತಿತ್ತಾದರೂ ಅನಂತಮೂರ್ತಿಯವರ ನೇತೃತ್ವದ ನವ್ಯರಿಗೆ ಭೈರಪ್ಪನವರ ಸಾಹಿತ್ಯದ ವಸ್ತುಗಳ ಮೇಲೆಯೇ ಅಸಮಾಧಾನವಿದ್ದುದರಿಂದ, ಅಲ್ಲದೆ ನವ್ಯದ ಪರಸ್ಪರ ವಿಮರ್ಶಕರ ಗುಂಪಿನಿಂದ ಭೈರಪ್ಪನವರು ಹೊರಗೇ ಇದ್ದುದರಿಂದ ಅವರ ಸಾಹಿತ್ಯಕ್ಕೆ ದೊರೆಯಬೇಕಾದಷ್ಟು ಮನ್ನಣೆ ಆಗ ಸಿಗಲಿಲ್ಲ. ಆನಂತರದ ನವ್ಯೋತ್ತರದ ಕಾಲದಲ್ಲಿ ಕೃತಿಗಳಲ್ಲಿರುವ ಸಾಮಾಜಿಕ ವಾಸ್ತವಗಳನ್ನು ಅಥವಾ ನೇರ ಸಮಾಜವಿಮರ್ಶೆಯನ್ನು ಪರಿಗಣಿಸಿಯೇ ಕೃತಿಗಳ ಮೌಲ್ಯಮಾಪನ ನಡೆಯುವುದರಿಂದ ದರ್ಶನಾತ್ಮಕ ವಿಮರ್ಶೆಗೆ ಅವಕಾಶವೇ ಇಲ್ಲ. ಹೀಗಿರುವಾಗ ಸಹಜವಾಗಿ ಅಲ್ಲಿ ಭೈರಪ್ಪನವರ ಸಾಹಿತ್ಯಕ್ಕೆ ಮಾನ್ಯತೆ ಸಿಗುವುದು ಕಷ್ಟ.

ಭೈರಪ್ಪನವರ ಕೃತಿಗಳಿಗೆ ವಿಮರ್ಶೆಯ ನ್ಯಾಯ ಸಿಗಬೇಕಾದರೆ, ಅವರ ಕಾದಂಬರಿಗಳನ್ನಷ್ಟೇ ಅಲ್ಲ, ಬದುಕನ್ನು ಕೂಡ ಕೇವಲ ಶೋಷಿತ ಶೋಷಕ ಎಂಬ ವಿಭಾಗಗಳಲ್ಲಷ್ಟೇ ನೋಡದೆ, ಬದುಕಿನ ಸಂಕೀರ್ಣತೆಯನ್ನು ಗ್ರಹಿಸುವ ಯತ್ನ ಮಾಡಬೇಕಾದುದು ಅಗತ್ಯ. ಆ ಸಂಕೀರ್ಣ ಬದುಕಿನ ಸತ್ಯಗಳನ್ನು ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಹೇಗೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದರ ವಿಶ್ಲೇಷಣೆ ನಡೆದರೆ ಅವರ ಕೃತಿಗಳಿಗೆ ವಿಮರ್ಶಾನ್ಯಾಯ ಸಿಕ್ಕಿದಂತಾಗುತ್ತದೆ. (ಈ ಲೇಖನವನ್ನು ದಯವಿಟ್ಟು ಯಾರೂ ಭೈರಪ್ಪನವರ ಅನುಯಾಯಿಯೊಬ್ಬನ ಉರಿನಾಲಗೆಯ ವಿಷಕಾರುವಿಕೆಯೆಂದು ಪರಿಗಣಿಸಬಾರದು.)

 

(ಇಲ್ಲಿ ಪ್ರಕಟವಾದದ್ದು ಲೇಖಕರ ಅಭಿಪ್ರಾಯ)

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Recent Posts