ಇರಾ ಗ್ರಾಮದ ಕಂಚಿನಡ್ಕಪದವು ಸಮೀಪ ಇರುವ ನೀರು ತುಂಬಿದ ಕಲ್ಲುಕೋರೆಗೆ ಆಟವಾಡಲು ಹೋದ ಬಾಲಕ ಬಿದ್ದು ಸಾವನ್ನಪ್ಪಿದ್ದಾನೆ.
ಸಜಿಪನಡು ಗ್ರಾಮದ ಕಂಚಿನಡ್ಕಪದವು ಗ್ರಾಮದ ಹುಸೈನ್ ಮತ್ತು ಜೀನತ್ ದಂಪತಿಯ ಪುತ್ರ ಇರ್ಫಾನ್ (10) ಮೃತಪಟ್ಟ ಬಾಲಕ. ಶನಿವಾರ ಮಧ್ಯಾಹ್ನದ ಬಳಿಕ ಈ ಘಟನೆ ಸಂಭವಿಸಿದೆ.
ಸಜೀಪನಡುವಿನಲ್ಲಿ ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಇರ್ಫಾನ್ ತಂದೆ, ತಾಯಿ ಆಸ್ಪತ್ರೆಗೆ ಅನಾರೋಗ್ಯ ನಿಮಿತ್ತ ತೆರಳಿದ್ದರು. ಮಧ್ಯಾಹ್ನ ಶಾಲೆಗೆ ಬಿಡುವಿದ್ದ ಕಾರಣ, ಶಾಲೆಯಿಂದ ಮನೆಗೆ ಬಂದು ಇತರ ಸಹಪಾಠಿಗಳೊಂದಿಗೆ ಆಟವಾಡಲು ತೆರಳಿದ್ದ ಸಂದರ್ಭ ದುರಂತ ಸಂಭವಿಸಿದೆ.
ಕೋರೆಯ ಸುತ್ತಲೂ ಮುಳ್ಳು ತಂತಿ ಬೇಲಿ ಅಳವಡಿಸಲಾಗಿತ್ತು. ಆದರೆ ಆಟವಾಡುವ ಸಂದರ್ಭ ಇದನ್ನು ಗಮನಿಸದ ಬಾಲಕರು ಕೋರೆ ಸಮೀಪ ತೆರಳಿದ್ದ ಸಂದರ್ಭ ಘಟನೆ ನಡೆದಿದೆ.
ಹುಸೈನ್ ಮತ್ತು ಜೀನತ್ ದಂಪತಿಗೆ ಆರು ಮಕ್ಕಳು. ಇವರಲ್ಲಿ ಮೂವರು ಪುತ್ರಿಯರು. ಹುಸೈನ್ ಕೂಲಿ ಕಾರ್ಮಿಕರು.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಎ.ಪಿ. ಭಟ್, ಮಮತಾ, ಪಿ ಡಿ ಓ ನಳಿನಿ, ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ರಾಜೀವಿ, ಇರಾ ಗ್ರಾ.ಪಂ. ಅಧ್ಯಕ್ಷ ರಜಾಕ್ ಕುಕ್ಕಾಜೆ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಆಗಮಿಸಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.