ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮತ್ತು ಮಲ್ಲೂರು ಉದ್ದಬೆಟ್ಟು ಮಸೀದಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿಗಳ ಶೀಘ್ರ ಬಂಧನವಾಗಬೇಕು, ಇದರ ಹಿಂದಿರುವ ಶಕ್ತಿಗಳು ಯಾರೆಂಬುದು ಬಯಲಿಗೆ ಬರಬೇಕು, ತನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೆ ಸದ್ಬುದ್ಧಿ ನೀಡಬೇಕು ಎಂದು ಪ್ರಾರ್ಥಿಸಿದ ರೈ, ಕೋಮುಗಲಭೆಗೆ ಪ್ರಚೋದನೆ ನೀಡುವವರಿಗೆ ತಕ್ಕ ಶಿಕ್ಷೆ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ನೆಲೆಯಾಗುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿಲ್ಲಿ ದೇವಾಲಯಕ್ಕೆ ಸಚಿವನಾಗಿ ಬಂದಿಲ್ಲ ಸಾಮಾನ್ಯ ಭಕ್ತನಾಗಿ ಬಂದಿದ್ದೇನೆ ದೇವಿಯ ಬಳಿ ಪ್ರಾರ್ಥಿಸಿ ಸತ್ಯಕ್ಕೆ ಜಯ ತಂದು ಕೊಡಬೇಕೆಂದು ದೇವಿಯಲ್ಲಿ ಮೊರೆಯಿಟ್ಟಿದ್ದೇನೆ ಗಲಭೆಗಳು ಹಾಗೂ ಅಹಿತಕರ ಘಟನೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ದುರುಳರಿಗೆ ದೇವಿಯು ಶಿಕ್ಷೆಯನ್ನು ನೀಡಲಿ ಎಂದು ಬೇಡಿದ್ದೇನೆ ಎಂದರು.
ಯಾರ ಕಣ್ಣಿಗೆ ಮಣ್ಣೆರಚಿದರೂ ದೇವಿಯ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ . ಘಟನೆಗಳು ತಿಳಿಯಾಗಿ ಜಿಲ್ಲೆಯಲ್ಲಿ ಶಾಂತಿ ಹಾಗೂ ಸಾಮರಸ್ಯ ನೆಲೆವೂರಲಿ ಎಂದು ಪ್ರಾಥಿಸುತ್ತಿದ್ದೇನೆ ಎಂದರು.
ಸಚಿವರೊಂದಿಗೆ ಬಂಟ್ವಾಳ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಧರಣೇಂದ್ರ ಕುಮಾರ್, ಮಂಜುಳಾ ಮಾವೆ, ಪುರಸಭಾಧ್ಯಕ್ಷ ರಾಮಕ್ರಷ್ಣ ಆಳ್ವ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮುಖಂಡರಾದ ಜಿನರಾಜ ಅರಿಗ, ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಪ್ರಭಾಕರ ಪ್ರಭು, ಮುಖಂಡರಾದ ಜನಾರ್ಧನ ಚಂಡ್ತಿಮಾರ್, ಯೂಸುಫ್ ಕರಂದಾಡಿ, ಎ.ಸಿ.ಭಂಡಾರಿ,ವೆಂಕಪ್ಪ ಪೂಜಾರಿ, ರಮಾನಾಥ ವಿಟ್ಲ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.