‘ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾದ ನನ್ನ ನೌಕರಿಯನ್ನು ಮರಳಿ ದೊರಕಿಸಿಕೊಟ್ಟು ನ್ಯಾಯ ಒದಗಿಸಬೇಕು’ ಎಂಬ ಪ್ರಾರ್ಥನೆಯೊಂದಿಗೆ ಸಲ್ಲಿಸಲಾದ ದೂರನ್ನು ಸಂಪೂರ್ಣವಾಗಿ ಬೆಂಬಲಿಸಿ ಹೋರಾಡುವ ಆಶ್ವಾಸನೆ ಸಂಘದಿಂದ ದೊರಕಿತು. ಆ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಪ್ರತಿಯೂ ಸಿಕ್ಕಿತು.
(ದೂರಿನಲ್ಲಿ ಬಯಸಿದ ಪರಿಹಾರ ಸಿಗುವ ಯಾವುದೇ ಸಾಧ್ಯತೆಗಳಿಲ್ಲ- ದೂರಿನ ವಿಚಾರಣೆ ಕೂಡಾ ನಡೆಯದಂತೆ ಪತ್ರಿಕೆಯ ಆಡಳಿತವು ಸೂಕ್ತ ವ್ಯವಸ್ಥೆ ಮಾಡಿತ್ತು ಎಂದು ನಾನು ಅರಿತುಕೊಳ್ಳಲು ಏಳು ವರ್ಷಗಳು ಬೇಕಾದವು. ಅದು ಬೇರೆ ಮಾತು.)
ಸಲ್ಲಿಸಿದ ದೂರಿನ ಶೀಘ್ರನ್ಯಾಯ ದೊರಕುವುದೆಂಬ ಭರವಸೆಯ ಹುಮ್ಮಸ್ಸಿನ ಅವಧಿಯಲ್ಲೇ ‘ಶಕ್ತಿ’ ಪತ್ರಿಕೆಯ ಪ್ರಾತಿನಿಧ್ಯದ ಪ್ರಚಾರವನ್ನು ಪೂರ್ಣಪ್ರಮಾಣದಲ್ಲಿ ನಡೆಸಲು ತೊಡಗಿದೆ. ಸರಕಾರಿ ಕಾರ್ಯಕ್ರಮಗಳಿಗೂ, ರಾಜಕೀಯ ಸಂಘ-ಸಂಸ್ಥೆಗಳ ಕೂಟಗಳಿಗೂ ಆಹ್ವಾನಿತನಾಗುವ ಅವಕಾಶ ದೊರಕಿಸಿಕೊಂಡೆ. ಪತ್ರಿಕಾ ಸಂಸ್ಥೆಗಳು – ಪ್ರೆಸ್ ರೂಮ್ ಇತ್ಯಾದಿ ಸ್ಥಳಗಳ ಭೇಟಿಯೂ ಮುಂದುವರಿದಿತ್ತು.
ಹಾಗೊಂದು ದಿನ, ಪ್ರಜಾವಾಣಿ ಕಚೇರಿಯಲ್ಲಿ ಕಾಲಕಳೆಯುತ್ತಿದ್ದಾಗ, ಅಕಸ್ಮಾತ್ತಾಗಿ ನನ್ನನ್ನು ಕಂಡ ಎಸ್.ವಿ.ಜಯಶೀಲರಾವ್ “ಬರ್ತೀರಾ ? ಕಾಫಿಗೆ ಹೋಗೋಣ” ಎಂದರು. ಸಮೀಪದ ಕಾಫಿ ಹೌಸಿಗೆ ಕರೆದೊಯ್ದು “ಒಂದು ಅಸೈನ್ ಮೆಂಟ್ ಇದೆ. ಮಾಡ್ತೀರಾ?” ಎಂದರು. ಒಂದೇ ಒಂದು ಬಾರಿಗೆ ಮುಗಿದುಹೋಗುವ ಯಾವುದೋ ಅವಕಾಶವಿರಬೇಕು. ಸಂಭಾವನೆಯಂತೂ ಹೇಗೂ ಸಿಗುತ್ತದೆ ಎಂದೆನ್ನಿಸಿತು ‘ಹೂಂ’ ಎಂದೆ. “ಹಾಗಾದರೆ ರಾತ್ರೆ ಕಾಂಗ್ರೆಸ್ ಹೌಸ್ ಕಡೆ ಬನ್ನಿ” ಎಂದು ಅಲ್ಲಿಂದಲೇ ಬೀಳ್ಕೊಟ್ಟರು.
ಆ ರಾತ್ರೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಿಜಲಿಂಗಪ್ಪ ಸಚಿವ ಸಂಪುಟದ ಮಾಜಿ ಯೋಜನಾ ಉಪಮಂತ್ರಿ ಮತ್ತು (ಅಂದಿನ) ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ದೊಡ್ಮನೆ ಅವರಿಗೆ ಜಯಶೀಲರಾಯರು ನನ್ನ ಪರಿಚಯ ಮಾಡಿಸುವವರೆಗೂ, ಸಿಗಲಿರುವ ಅಸೈನ್ ಮೆಂಟಿನ ಕಲ್ಪನೆಯೇ ನನಗಿರಲಿಲ್ಲ. ಆದರೆ, ಅದು ಅಲ್ಪಾವಧಿಗೆ ಮುಗಿದುಹೋಗುವ ಕೆಲಸವಲ್ಲ – ನಿಯತಕಾಲಿಕ ಉದ್ಯೋಗವೆಂಬ ಸೂಚನೆ ಸ್ವಲ್ಪವೇ ಹೊತ್ತಿನಲ್ಲಿ ದೊರಕಿದಾಗ –
‘ಹೆಗಡೆಯವರ ಕ್ಯಾಬಿನ್ನಿನೊಳಗೆ ಕಾಲಿಡುವಾಗಲೇ ನುಣುಪುನೆಲದಲ್ಲಿ ಕಾಲು ಊರಿದ್ದ’ ನೆನಪು ಒಮ್ಮೆ ಕಾಡಿತು ಮರುದಿನ ಉದ್ಯೋಗದ ಪೂರ್ವಭಾವಿ ಆದೇಶ ಕೊಡಲು ಅವರು ಕರೆಸಿದ್ದಾಗಲೂ ಆ ನೆನಪು ಮರುಕಳಿಸಿತು.
“ಪ್ರದೇಶ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿ ಪ್ರಕಟವಾಗಲಿರುವ ‘ಕಾಂಗ್ರೆಸ್ ಸಂದೇಶ’ ವೆಂಬ ಮಾಸಪತ್ರಿಕೆಯ ಉಪಸಂಪಾದಕನ ಕೆಲಸ ಕೊಡಲಿದ್ದೇನೆ. ಮೊದಲ ಸಂಚಿಕೆ ಅಕ್ಟೋಬರ್ ಎರಡನೇ ತಾರೀಖಿಗೆ ಹೊರಬೀಳಬೇಕು. ಅವಶ್ಯಕ ಸಿದ್ಧತೆಗಳೆಲ್ಲ ನಾಳೆಯಿಂದಲೇ ಆರಂಭವಾಗಲಿ”
(ವೇತನದ ಪ್ರಾಸ್ತಾವಿಕ ಪ್ರಶ್ನೆಗೆ : ಪತ್ರಿಕೋದ್ಯಮಿಯ ಪೂರ್ಣಕಾಲಿಕ ವೇತನ ಕೊಡುವಷ್ಟು ಆರ್ಥಿಕ ಬಲ ಪಕ್ಷಕ್ಕೆ ಇಲ್ಲ, ತಿಂಗಳಿಗೆ 120 ರೂ. ಕೊಡಲು ಸಾಧ್ಯವೆಂಬ ಉತ್ತರ. ಅಂದಿನ ಮಟ್ಟಿಗೆ ನನಗೆ ಅದುವೇ ದೊಡ್ಡ ಮೊತ್ತ! ಕೂಡಲೆ ಸಮ್ಮತಿಸಿದೆ.)
ಆ ಕಾಲದಲ್ಲಿ ಪತ್ರಿಕೆ ಪ್ರಾರಂಭಿಸಲು ದೆಹಲಿಯ ರಿಜಿಸ್ಟಾರರ ಮರ್ಜಿ ಕಾಯಬೇಕಾದ ತೊಡಕಿರಲಿಲ್ಲ. ಜಿಲ್ಲಾಧಿಕಾರಿಯವರನ್ನೇ ನೇರವಾಗಿ ಸಂಪರ್ಕಿಸಿ ಕೆಲಸವಾಗುತ್ತಿತ್ತು. ಕಾಂ.ಸಂ.ಪ್ರಕಾಶಕ (ಮಾಜಿ ಮಂತ್ರಿ) ಎಚ್,ಕೆ,ವೀರಣ್ಣ ಗೌಡರು ಮತ್ತು ಸಂಪಾದಕ ಹೆಗಡೆಯವರು ‘ಡಿಕ್ಲರೇಷನ್’ ನ ಸಹಿಗಾಗಿ ತನ್ನೆದುರು ಹಾಜರಾಗಬೇಕೆಂಬ ನಿಬಂಧನೆಗೂ ವಿನಾಯಿತಿ ನೀಡಿ, ಅಧಿಕಾರಿಯವರು ಪ್ರಕಟಣೆಯ ಅನುಮತಿ ಇತ್ತರು.
‘ಸಂದೇಶ’ದ ಪ್ರಕಟಣೆಯ ಹಿಂದೆ ಹೆಗಡೆಯವರಿಗೆ ಇದ್ದ ಉದ್ಧೇಶ ಘನವಾಗಿತ್ತು. ಅದು ಅಖಿಲ ಭಾರತ ಕಾಂಗ್ರೆಸ್ಸಿನ ‘ಇಕನಾಮಿಕ್ ರಿವ್ಯೂ’ ಪತ್ರಿಕೆಯ ಕನ್ನಡ ಆವೃತ್ತಿ ಎಂಬ ಮಟ್ಟಕ್ಕೆ ಬರಬೇಕೆಂಬ ಆಶಯ ಅವರದು. ಅದರಲ್ಲೂ ಸೈದ್ಧಾಂತಿಕ ಹಿನ್ನೆಲೆಯ ಲೇಖನಗಳ ಅನುವಾದಕ್ಕೆ ಹೆಚ್ಚಿನ ಒತ್ತು. ಲೇಖನಗಳನ್ನು ಗುರುತಿಸಿ ಅನುವಾದಕ್ಕಾಗಿ ನನ್ನೆಡೆಗೆ ತಳ್ಳುತ್ತಿದ್ದರು. ಜೊತೆಗೆ ಸಿದ್ಧವನ ಹಳ್ಳಿ ಕೃಷ್ಣಶರ್ಮ, ಎಂ.ಆರ್.ಲಕ್ಷ್ಮಮ್ಮ, ಅಂಥ ಪಕ್ಷದ ಹಿನ್ನೆಲೆಯುಳ್ಳ ಮತ್ತು ಆ ಹಿನ್ನೆಲೆ ಇಲ್ಲದ ಎಂ.ಎಸ್.ಭಾರದ್ವಾಜರಂಥ ಖ್ಯಾತ ಪತ್ರಿಕೋದ್ಯಮಿಗಳ ಸಂಪಾದಕೀಯ ಮಂಡಳಿಯನ್ನೂ ರಚಿಸಿದ್ದರು. (ಮಂಡಳಿಯ ಸದಸ್ಯರ ಯಾರೂ ಕಾಂ.ಸಂ. ಬಗ್ಗೆ ಆಸಕ್ತಿ ವಹಿಸಿದ್ದುದು ನನ್ನ ಗಮನಕ್ಕೆ ಬಂದಿಲ್ಲ.)
ಅಷ್ಟು ದೊಡ್ಡ ಕಾಂಗ್ರೆಸ್ ಭವನದಲ್ಲಿ, ಕುಳಿತು ಬರೆಯುವ ಸ್ಥಳದ ಸೌಕರ್ಯ ಸಿಕ್ಕಿರಲೇ ಇಲ್ಲ. ಹೊತ್ತಿಗೆ, ಖಾಲಿಯಾಗಿ ಕಂಡುಬರುತ್ತಿದ್ದ ಕುಳಿತು ಕೆಲಸ ನಿರ್ವಹಿಸಬೇಕಾಗಿತ್ತು. ಹಾಗೊಮ್ಮೆ ಸಂಘಟನಾ ಕಾರ್ಯದರ್ಶಿ ವೀರೇಂದ್ರ ಪಾಟೀಲರ ಕ್ಯಾಬಿನ್ನಿನಲ್ಲಿ(ಅವರ ಕುರ್ಚಿಯಲ್ಲೇ!) ಆಸೀನನಾಗಿ ಬರೆಯುತ್ತಾ ಇದ್ದೆ.
“ಯಾರಪ್ಪಾ ನೀನು ?” ಪ್ರಶ್ನೆ ಬಂದಾಗ ತಲೆ ಎತ್ತಿ ನೋಡಿದರೆ ( ಮಾಜಿ ಸಿ.ಎಂ.) ನಿಜಲಿಂಗಪ್ಪನವರು ತನ್ನ ಸಹೋದ್ಯೋಗಿ ಎಂ.ವಿ.ರಾಮರಾಯರೊಂದಿಗೆ ಕೋಣೆ ಬಾಗಿಲಲ್ಲಿ ನಿಂತಿದ್ದುದು ಕಾಣಿಸಿತು. “ನಾನು ಕಾಂಗ್ರೆಸ್ ಸಂದೇಶದ ಕೆಲಸ ಮಾಡ್ತಾ ಇದ್ದೇನೆ ಸಾರ್” ಉತ್ತರ ಮಾತ್ರ. ಕುರ್ಚಿಯಿಂದ ಏಳುವ ಲಕ್ಷಣವೇನೂ ಕಾಣಿಸದ ನಿಜಲಿಂಗಪ್ಪನವರು “ನೀನು ಬೇರೆಲ್ಲಾದರೂ ಹೋಗಿ ಕೂತು ಬರೀತೀಯೇನಪ್ಪಾ” ಎಂದು ನಯವಾಗಿ ಹೇಳಿ, ರಾಮರಾಯರೊಡನೆ ತಮ್ಮ ಸಮಾಲೋಚನೆ ಮುಂದುವರಿಸಿದಾಗ, ಕುರ್ಚಿ ಖಾಲಿ ಮಾಡಲೇ ಬೇಕಾಯಿತು.
ಆ ರೀತಿಯ ಹತ್ತು-ಹಲವು ಹೊಂದಾಣಿಕೆಗಳನ್ನು ಮಾಡಿಕೊಂಡು, ಕಚೇರಿಗೂ ಲಾಲ್ ಬಾಗ್ ರಸ್ತೆಯಲ್ಲಿದ್ದ ಓರಿಯೆಂಟಲ್ ಪ್ರೆಸ್ಸಿಗೂ ಸಾಕಷ್ಟು ಬಾರಿ ಎಡತಾಕಿ, ಪತ್ರಿಕೆಯ ಪ್ರಥಮ ಸಂಚಿಕೆಯನ್ನು ಗಾಂಧಿ ಜಯಂತಿಯ ಮೂರು ದಿನ ಮೊದಲೇ ಹೊರತರಲು ಸಾಧ್ಯವಾಯಿತು. ಕಟ್ಟುಗಳನ್ನು ಕಚೇರಿಗೆ ತಲುಪಿಸಿದ ದಿನವಷ್ಟೇ, ಸಂಚಿಕೆಯ ಬಿಡುಗಡೆ ಸಮಾರಂಭ, ಆ ಮೊದಲೇ ವ್ಯವಸ್ಥೆಯಾಗಿತ್ತೆಂದು ನನಗೆ ಗೊತ್ತಾದುದು.
ಕಟ್ಟುಗಳನ್ನು ಒಂದೆಡೆ ಪೇರಿಸುತ್ತಿದ್ದ ನನ್ನನ್ನು ಕರೆದ ಹೆಗಡೆಯವರು “ಪೇಪರನ್ನು ನಾಡಿದ್ದು ಗಾಂಧಿ ಜಯಂತಿ ದಿನ ಹನುಮಂತಯ್ಯ, ಚಾಮರಾಜಪೇಟೆ ಸಿದ್ಧಾರೂಢ ಮಠದಲ್ಲಿ ರಿಲೀಸ್ ಮಾಡ್ತಾರೆ. ಪ್ರೆಸಿಡೆಂಟ್ (ವೀರಣ್ಣ ಗೌಡ)ರು ಪ್ರಿಸೈಡ್ ಮಾಡುವ ಫಂಕ್ಷನ್, ನಾನು ಊರಲ್ಲಿರೋದಿಲ್ಲ. ಎಲ್ಲಾ ಅರೇಂಜ್ ಮೆಂಟ್ ಮಾಡಿಸ್ಕೊಳ್ಳಿ” ಎಂದು ಹೊಣೆಹೊರಿಸಿ ಆ ಕೂಡಲೆ ಎಲ್ಲಿಗೋ ಹೊರಟು ಹೋದರು.
ವ್ಯಕ್ತಿಪ್ರತಿಷ್ಠೆಯ ರಾಜಕೀಯದಲ್ಲಿ ಮುಳುಗಿದ್ದವರಿಗೆ, ಸೈದ್ಧಾಂತಿಕ ಸಂಬಂಧದ ಘನವಿಚಾರಗಳನ್ನು ಕೂಡಾ ಗಮನಿಸುವಷ್ಟು ವ್ಯವಧಾನವಿರುವುದಿಲ್ಲ ಎಂಬ ಅರಿವನ್ನು ನನ್ನಲ್ಲಿ ಮೂಡಿಸಿದ ಆ ‘ಅನುಪಮ’ ಉದ್ಘಾಟನೆಯನ್ನು ವರ್ಣಿಸುವ ಮೊದಲೇ –
-ಪತ್ರಿಕೆಯ ಪ್ರಥಮ ಸಂಚಿಕೆಯ ಬಗ್ಗೆ, ಸಂಪಾದಕರು ಪ್ರಸ್ತಾಪ ಮಾಡಿದವರೆಲ್ಲ, ‘ಅತ್ಯಗತ್ಯವಾಗಿ ಪ್ರಕಟಿಸಲೇಬೇಕಾಗಿದ್ದ ಲೀಡರ್ ಗಳ ಸಂದೇಶ ಮತ್ತು ಭಾವಚಿತ್ರ’ಗಳ ಪಟ್ಟಿಗೆ ಹೆಸರುಗಳನ್ನು ಸೇರಿಸುತ್ತಾ ಹೋದುದರ ಪರಿಣಾಮ, ಕಾಂ.ಸಂ.ನ 48 ಪುಟಗಳ ಪೈಕಿ 36ರಷ್ಟು ‘ಸಂದೇಶ-ಭಾವಚಿತ್ರ ಪುರವಣಿ’ಯ ಪುಟಗಳಾದವು. ಅದಕ್ಕೆ “ಕಾಂಗ್ರೆಸ್ ಸಂದೇಶದ ಅನ್ವರ್ಥನಾಮ ಮೊದಲ ಸಂಚಿಕೆಯಲ್ಲೇ ವ್ಯಕ್ತವಾಗುತ್ತಿದೆ” ಎಂದು ಚಿತ್ರಗುಪ್ತ ವಾರಪತ್ರಿಕೆಯಲ್ಲಿ ವೆಂಕಟರಾಜ ಪಾನಸೆಯವರ ಪರಿಹಾಸ್ಯ ವಿಮರ್ಶೆ (ಅನಂತರ) ಪ್ರಕಟವಾಗಿತ್ತೆಂದು ಇಲ್ಲೇ ಹೇಳಬೇಕಾಗುವುದು ಅನಿವಾರ್ಯ.
(ಮುಂದಿನ ಭಾಗದಲ್ಲಿ)
(2005ರಲ್ಲಿ ಪುಸ್ತಕವಾಗಿ ಪ್ರಕಟಗೊಂಡ ಪದ್ಯಾಣ ಗೋಪಾಲಕೃಷ್ಣ ಅವರ ಅಂಕಣ ಬರಹಗಳ ಮರುಪ್ರಕಟಣೆ ಇದು.)