ಬಂಟ್ವಾಳ

ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ । ಸೌನಿಕನ ಕಟ್ಟೆಯೇಂ?

bantwalnews.com

ಬಂಟ್ವಾಳ, ವಿಟ್ಲ, ಪುತ್ತೂರು ಸಹಿತ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪೊಲೀಸ್ ಇಲಾಖೆಯ ನಾನಾ ಹುದ್ದೆಗಳಲ್ಲಿ ದುಡಿದು ಬಳಿಕ ಬಂಟ್ವಾಳ ಉಪವಿಭಾಗಕ್ಕೆ ಡಿವೈಎಸ್ಪಿಯಾಗಿ ಕಾರ್ಯಭಾರ ನಿರ್ವಹಿಸಿದ ರವೀಶ್ ಸಿ.ಆರ್. ಈಗ ವರ್ಗಾವಣೆಗೊಂಡಿದ್ದಾರೆ.

ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಕನ್ನಡ ಸಾಹಿತ್ಯಾಭ್ಯಾಸಿಯಾದ ಅವರು ಡಿ.ವಿ.ಗುಂಡಪ್ಪ ಅವರ ಕಟ್ಟಾ ಅಭಿಮಾನಿ. ದಿನಕ್ಕೊಂದು ಕಗ್ಗ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ಮಂಕುತಿಮ್ಮನ ಕಗ್ಗದ ವಿವರಣೆಗಳ ಕುರಿತು ಹಲವು ಆಯಾಮಗಳಲ್ಲಿ ವಿಚಾರ ಮಂಥನಗಳೂ ನಡೆಯುತ್ತಿದ್ದವು. ಈಗ ರವೀಶ್ ಅವರು ವರ್ಗಾವಣೆ ಹೊಂದಿ ಬೆಂಗಳೂರಿಗೆ ತೆರಳಲಿದ್ದಾರೆ. ಇಂದಷ್ಟೇ ಅವರು ಕಾರ್ಯಭಾರವನ್ನು ನೂತನ ಎಎಸ್ಪಿ ಡಾ. ಅರುಣ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರವೀಶ್ ಅವರು ಬರೆದ ಡಿ.ವಿ.ಗುಂಡಪ್ಪ ರಚಿತ ಮಂಕುತಿಮ್ಮನ ಕಗ್ಗದ ಸಾಲುಗಳ ವ್ಯಾಖ್ಯಾನವನ್ನು ಬಂಟ್ವಾಳನ್ಯೂಸ್ ಇಲ್ಲಿ ಸಾದರಪಡಿಸಿದೆ.

 

ದಿನಕ್ಕೊಂದು ಕಗ್ಗ

ಮಾನವರೋ ದಾನವರೋ ಭೂಮಾತೆಯ ತಣಿಸೆ ।
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ ।
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ

ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯ ಮಕ್ಕಳಾಗಿ ಪ್ರೀತಿ, ವಿಶ್ವಾಸ, ಭ್ರಾತೃತ್ವ , ಕ್ಷಮೆ ಸಾಧಿಸದೆ ಜಾತಿ, ಧರ್ಮ, ಸ್ವಾರ್ಥ ಸಾಧನೆಗಾಗಿ ಹಲುಬುವರು, ಭೂ ಮಾತೆಯ ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವ ಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆಯಲ್ಲವೆ, ಇಡೀ ಜಗತ್ತೇ ತಮ್ಮ ಖಡ್ಗವನ್ನು ಜಳಪಿಸುವಾಗ ಕೇವಲ ಸೈನಿಕನಿಂದ, ಪೊಲೀಸರಿಂದ, ಸಮವಸ್ತ್ರ ಧಾರಕ ಗಳಿಂದ ಈ ಜಗತ್ತನ್ನು ಕಟ್ಟಲಾದೀತೆ ? ಖಂಡಿತವಾಗಿಯೂ ಅದು ಸಾದ್ಯವಿಲ್ಲ, ಆದುದರಿಂದ ಪ್ರೀತಿ, ದಯೆ, ಕರುಣೆ, ಭಾತೃತ್ವ, ಕ್ಷಮಾ ಮುಂತಾದ ಸದ್ಗುಣಗಳನ್ನು ನಾವು ಬೆಳಸಿಕೊಂಡು ಸಮಾಜದ ಎಲ್ಲರೂ ಸಹ ಸ್ಥಿತ ಪ್ರಜ್ಞ ಪೊಲೀಸರಾದಾಗ ಮಾತ್ರ ಅದು ಸಾದ್ಯವಲ್ಲದೆ, ಕೇವಲ ಸೈನಿಕ ಅಥವಾ ಪೊಲೀಸರಿಂದ ಈ ಸಮಾಜವನ್ನು ಉನ್ನತಿಗೆ ಕೊಂಡೊಯ್ಯಲು ಸಾದ್ಯವಿಲ್ಲ , ಇದರಿಂದ ಜಗದಲ್ಲಿ, ಮನದಲ್ಲಿ ಕ್ಷೋಬೆಯುಂಟಾಗಿ ಹಗೆ, ಹಗೆಯಿಂದ ಧಗೆ, ಕೊನೆಗೆ ಹೊಗೆ ಎಂದು ತಿಮ್ಮಗುರುವು ಸೂಚಿಸುತ್ತಾರೆ.

  • ರವೀಶ್ ಸಿ.ಆರ್, ಡಿವೈಎಸ್ಪಿ

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts