ನಿಷೇಧಾಜ್ಞೆ ವಿಸ್ತರಣೆ ಆಗಿದೆ. ಜನರಿಗೆ ಸಾಕಪ್ಪಾ ಸಾಕು ಎಂಬ ಭಾವನೆ ಮೂಡಿದರೂ ಮೇಲ್ನೋಟಕ್ಕೆ ಇದು ಅನಿವಾರ್ಯವೂ ಹೌದು ಎಂದೆನಸಿದೆ. ಏಕೆಂದರೆ ಹದಿನೈದು ದಿನ ಯಾವ ಘಟನೆ ನಡೆದೇ ಇಲ್ಲದ ಸಂದರ್ಭವೂ ನಿಷೇಧಾಜ್ಞೆ ವಿಸ್ತರಣೆಯಾದಾಗ ಯಾಕೆ ಬೇಕಿತ್ತಾ, ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡಿತ್ತು. ಆದರೆ ಮತ್ತೆ ಅಹಿತಕರ ಘಟನೆಗಳು ಸಾಲು ಸಾಲಾಗಿ ನಡೆದಿರುವಾಗ ಸೆ.144 ಜಾರಿಯಲ್ಲಿರುವುದು ಸಮಾಜದ ಸ್ವಾಸ್ಥ್ಯ ಕಾಪಾಡಲು ಅನಿವಾರ್ಯವೂ ಹೌದು. ಹೀಗಾಗಿ ಜುಲೈ 21ರವರೆಗೆ ಸಾರ್ವಜನಿಕರೂ ಇದಕ್ಕೆ ಸ್ಪಂದಿಸುವುದು ಅನಿವಾರ್ಯವೂ ಆಗಿದೆ.
ಇದೇ ವೇಳೆ ಪೊಲೀಸರು ಹಲವು ಮನೆಗಳಿಗೆ ದಾಳಿ ಮಾಡಿ ವಶಕ್ಕೆ ತೆಗೆದುಕೊಳ್ಳುವ ಕಾರ್ಯವವನ್ನು ವಿವಿಧ ಪ್ರಕರಣಗಳಡಿ ಮಾಡುತ್ತಾ ಬಂದಿದ್ದಾರೆ. ಈ ಕಾರ್ಯಾಚರಣೆ ಕುರಿತು ಸುದ್ದಿಗಾರರಿಗೂ ಈ ಕುರಿತು ಸ್ಪಷ್ಟ ಮಾಹಿತಿ ನೀಡಲು ಪೊಲೀಸರು ಕಳೆದ ಎರಡು ದಿನಗಳಿಂದ ನಿರಾಕರಿಸುತ್ತಿದ್ದಾರೆ.
ವರ್ಗಾವರ್ಗಿ:
ಕಲ್ಲಡ್ಕ ಘಟನೆ ಬಳಿಕ ಪೊಲೀಸರ ವರ್ಗಾವರ್ಗಿ ನಡೆಯುತ್ತಿದೆ. ವಿಶೇಷವೆಂದರೆ ಇಲ್ಲಿಗೆ ಆಗಮಿಸುವವರ ಹೆಸರು ಬದಲಾಗುತ್ತಲೇ ಇದೆ. ಈ ಹಿಂದೆ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಕೆ.ಮಂಜಯ್ಯ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು. ಅವರ ಬದಲಿಗೆ ಸಂದೇಶ್ ಅವರನ್ನು ನಿಯುಕ್ತಿಗೊಳಿಸಿರುವ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ದಿಢೀರನೆ ಸಂದೇಶ್ ಬದಲಿಗೆ ಮತ್ತೊಬ್ಬರನ್ನು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿಗೊಳಿಸಿ ಸರಕಾರ ಸೂಚನೆ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಎಸಿಬಿಯಲ್ಲಿರುವ ಬ್ರಿಜೇಶ್ ಮ್ಯಾಥ್ಯೂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ಕಾರಣಗಳಿಗಾಗಿ ಬಂಟ್ವಾಳ ವೃತ್ತದಲ್ಲಿ ಖಾಲಿ ಇರುವ ಸಿಪಿಐ ಹುದ್ದೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಹೊಳೆನರಸೀಪುರ ಉಪವಿಭಾಗ ಎಎಸ್ಪಿ ಡಾ.ಅರುಣ್ ಕೆ. ಅವರನ್ನು ಬಂಟ್ವಾಳಕ್ಕೆ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ. ರಾಜಕೀಯವಾಗಿ ತಿರುವು ಪಡೆದುಕೊಂಡಿರುವ ಕಲ್ಲೆಸೆತ ಪ್ರಕರಣದ ತನಿಖೆಯ ಸುದ್ದಿಯೇ ಈಗ ಕೇಳಿಬರುತ್ತಿರುವ ಕಾರಣ, ಶರತ್ ಹತ್ಯೆ ಪ್ರಕರಣದ ತನಿಖಾ ಪ್ರಗತಿ ಕುರಿತು ಪೊಲೀಸರು ಮಾಧ್ಯಮದವರ ಪ್ರಶ್ನೆಗೆ ಮೌನ ಕಾಪಾಡಿಕೊಂಡಿದ್ದಾರೆ.