ತುಳು ರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ನಟರಾದ ಪುರುಷೋತ್ತಮ್ ಉಳ್ಳಾಲ್(60) ಗುರುವಾರದಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಪುರುಷೋತ್ತಮ್ ಅವರು ಮೂಲತ: ಉಳ್ಳಾಲದ ಬಂಡಿಕೊಟ್ಯ ನಿವಾಸಿಯಾಗಿದ್ದು ಇತ್ತೀಚಿಗಷ್ಟೇ ಕುಂಪಲದ ನೂತನ ಮನೆಗೆ ಸ್ಥಳಾಂತರ ಗೊಂಡಿದ್ದರು. ಖಾಸಗಿ ಬಸ್ಸು ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು ವೃತ್ತಿಪರ ಕಲಾವಿದರಲ್ಲದಿದ್ದರೂ ಹವ್ಯಾಸಿ ಕಲಾವಿದರಾಗಿ ಕಳೆದ ಮೂರು ದಶಕಗಳಿಂದಲೂ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ತಂಡದಲ್ಲೂ ಗುರುತಿಸಿಕೊಂಡಿದ್ದರು. ಖಳನಾಯಕ, ಪೊಲೀಸ್ ಅಧಿಕಾರಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ತುಳು ಪೌರಾಣಿಕ ನಾಟಕ”ಅಪ್ಪೆ ಮೂಕಾಂಬಿಕ”ದಲ್ಲಿ ಪರುಷೋತ್ತಮ್ ಅವರು ನಿರ್ವಹಿಸಿದ ಮೂಕಾಸುರನ ಪಾತ್ರ ಜನರ ಮನಸ್ಸಲ್ಲಿ ಇಂದಿಗೂ ಅಚ್ಚಲಿಯದೆ ಉಳಿದಿದೆ. ಉಳಿದಂತೆ ಕೊಡಿಯಾಲ್ ಬೈಲ್ ಅವರ ಮಾಮುಗಾವಂದಿ ಮಾಮಿ, ಅಸಲ್ ಏರು..?, ನಾಟಕಗಳು ಮತ್ತು ಒರಿಯರ್ದೊರಿ ಅಸಲ್,ಕಡಲ ಮಗೆ ಚಲನ ಚಿತ್ರಗಳಲ್ಲಿ ನಟಿಸಿ ಗಮನಸೆಳೆದಿದ್ದರು. ಬಂಡಿಕೊಟ್ಯ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿದ್ದ ಅವರು ಬಂಡಿಕೊಟ್ಯ ಮಲರಾಯ ದೇವಸ್ಥಾನದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರ ಅಗಲಿಕೆಗೆ ಅನೇಕ ಗಣ್ಯರು ,ರಂಗ ಮತ್ತು ಚಲನಚಿತ್ರ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಮೂವರು ಮಕ್ಕಳೂ ವಿವಾಹಿತರಾಗಿದ್ದು ಹಿರಿಯ ಪುತ್ರ ಪ್ರಖ್ಯಾತ್ ವಿದೇಶದಲ್ಲಿದ್ದು ಅವರು ಬಂದ ನಂತರ ಶನಿವಾರ ಮೃತರ ಅಂತ್ಯ ಕ್ರಿಯೆ ನಡೆಯಲಿದೆ.