ಎನ್.ಎಚ್.ಎ.ಐ. ಸ್ಪಂದಿಸದಿದ್ದರೆ ಕಚೇರಿ ಮುಂದೆ ಧರಣಿ
ತೀವ್ರ ಹದಗೆಟ್ಟಿರುವ ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ. ಕಾಮಗಾರಿಯನ್ನು ರಾಜ್ಯ ಸರಕಾರ ನಿರ್ವಹಿಸುವಂತಿಲ್ಲ. ಆದರೂ ಕ್ಷೇತ್ರ ಶಾಸಕರಾದ ಸಚಿವ ಬಿ.ರಮಾನಾಥ ರೈ ಅವರು ರಸ್ತೆ ಸರಿಪಡಿಸಲಿಲ್ಲ ಎಂದು ಕೆಲವರು ಉದ್ದೇಶಪೂರ್ವಕವಾಗಿ ಆರೋಪಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಮತ್ತು ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಸಿ.ರೋಡ್ ಮೇಲ್ಸೇತುವೆ ನಿರ್ಮಾಣಗೊಂಡಬಳಿಕ ಬಿ.ಸಿ.ರೋಡ್ ಬಸ್ ನಿಲ್ದಾಣಕ್ಕೆ ಬರಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಸರ್ವೀಸ್ ರಸ್ತೆ ತೀರ ಹದಗೆಟ್ಟಿದ್ದು, ಇದರಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ಪಾದಚಾರಿಗಳಿಗೆ ನಡೆದಾಡಲೂ ಅವಕಾಶ ಇಲ್ಲಿಲ್ಲ. ಮಳೆಗಾಲಕ್ಕಿಂತ ಮೊದಲು ಪೂರೈಸಬಹುದಾಗಿದ್ದ ಚರಂಡಿ ಕಾಮಗಾರಿಯನ್ನು ನಿಧಾನಗತಿಯಲ್ಲಿ ಕೈಗೊಂಡಿರುವ ಕಾರಣ, ಇದೀಗ ಸುರಿಯುತ್ತಿರುವ ಭಾರಿ ಮಳೆಗೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ ತುಂಬಾ ಹೊಂಡಗಳಿದ್ದು, ಮಳೆನೀರು, ಕೆಸರು ತುಂಬಿ ಮೃತ್ಯುಕೂಪವಾಗಿದೆ. ಈಗಾಗಲೇ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ. ಮೊನ್ನೆಯಷ್ಟೇ ಆಟೋ ಚಾಲಕರು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಕಡೆ ಸುಳಿಯಲಿಲ್ಲ ಎಂದು ಅವರು ತಿಳಿಸಿದ್ದು, ರಸ್ತೆಯನ್ನು ಸರ್ವಖುತು ಸಂಚಾರು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಪಾದಚಾರಿಗಳಿಗೆ ನಡೆದಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿರುವ ಅವರು, ಇದಕ್ಕೆ ಸ್ಪಂದಿಸದೆ ಜನಸಾಮಾನ್ಯರ ಸಹನೆ ಪರೀಕ್ಷಿಸುತ್ತಾ ವಿಳಂಬ ಮಾಡಿದರೆ, ಪ್ರಾಧಿಕಾರದ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ, ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.