ಮಕ್ಕಳ ಮಾತು

ನಮ್ಮ ಲೆಕ್ಚರರ್ ಪ್ರಯೋಜನಾ ಇಲ್ಲಾ..?

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಮಕ್ಕಳ ಜೊತೆ ಮಾತನಾಡುವ ಶಿಕ್ಷಕರು ಹೆಚ್ಚು ಜಾಗರೂಕರಾಗಿರಬೇಕು, ಯಾಕೆಂದರೆ ಪ್ರತಿಕ್ಷಣವೂ ಹೊಸಹೊಸ ವಿಚಾರಗಳನ್ನು ಕಲಿಯುವ ತವಕ, ಕುತೂಹಲಗಳನ್ನು  ಹೊಂದಿರುವ ಮಕ್ಕಳು ಶಿಕ್ಷಕರಿಂದ ಏನನ್ನು ನಿರೀಕ್ಷೆ ಮಾಡುತ್ತಾರೋ ಹೇಳಲಾಗದು, ಅವರ ನಿರೀಕ್ಷೆಯ ಮಟ್ಟ ಅಪರಿಮಿತ. ಆದರೆ ತಮ್ಮ ನಿರೀಕ್ಷೆಯ ಸ್ಪಂದನ ಶಿಕ್ಷಕರಲ್ಲಿ ಸಿಗದೇ ಇದ್ದಾಗ ಅದರ ಪರಿಣಾಮ ಬೀರುವುದು ಮಕ್ಕಳ ಕಲಿಕೆಯ ಮೇಲೆ.

ಅಪ್ಪಾ.. ನಮ್ಮ ಲೆಕ್ಚರರ್ ಪ್ರಯೋಜನಾ ಇಲ್ಲಾ..? ಅವರು ಅಪ್‌ಡೇಟ್ ಆಗೋದೇ ಇಲ್ಲ ಎಂದು ಮಗ ಹೇಳಿದಾಗ ಅಪ್ಪನಿಗೆ ಆಶ್ಚರ್ಯ..! ಯಾಕೋ ಏನಾಯ್ತು ಎಂದು ಕೇಳಿದಾಗ ಮಗ ಉತ್ತರಿಸಿದ್ದು ಹೀಗೆ, ಮತೆಂಥ ಅವರಿಗೆ ಸ್ಮಾರ್ಟ್ ಫೋನ್ ಬಗ್ಗೆ ಗೊತ್ತೇ ಇಲ್ಲ..! ಎಂದಾಗ ಮಗನ ಬುದ್ದಿವಂತಿಕೆಗೆ ತಲೆಬಾಗಿದರು ಅಪ್ಪ

 ಸ್ವಾರಸ್ಯಕರವಾದ ಈ ಘಟನೆಯನ್ನು ಹೇಳಿದವರು ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ. ಕಳೆದ ಮೂರು ವರ್ಷದ ಹಿಂದೆ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಕುಂಟಿನಿಯವರು, ಮಕ್ಕಳು ಕ್ರಿಯಾಶೀಲರಾಗಲು  ಶಿಕ್ಷಕರು ಹೆಚ್ಚಿನ ಮುತುವರ್ಜಿವಹಿಸಬೇಕು, ಶಿಕ್ಷಕರು ದಿನಾ ಅಪ್‌ಡೇಟ್ ಆಗಬೇಕು ಎನ್ನುತ್ತಾ ಸ್ವ ಅನುಭವದ ಈ ಘಟನೆಯನ್ನು ಉಲ್ಲೇಖಿಸಿದರು.

ಈ ಒಂದು ಘಟನೆ ಸಾಕು, ವಿದ್ಯಾರ್ಥಿಗಳು ಶಿಕ್ಷಕರಿಂದ ಯಾವ ಬಗೆಯದನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರಿಯಲು. ಮಕ್ಕಳು ಶಾಲೆಯಲ್ಲಿರಲಿ, ಕಾಲೇಜಿನಲ್ಲಿರಲಿ ಶಿಕ್ಷಕರು -ಉಪನ್ಯಾಸಕರಿಂದ ಏನನ್ನೋ ನಿರೀಕ್ಷಿಸುತ್ತಲೇ ಇರುತ್ತಾರೆ, ಅವರ ಬಯಕೆ ಸಾಕಷ್ಟಿರುತ್ತದೆ, ಶಿಕ್ಷಕರ ಆತ್ಮೀಯತೆಯನ್ನು  ಬಯಸುವ ವಿದ್ಯಾರ್ಥಿಗಳಿರುತ್ತಾರೆ,ಶಿಕ್ಷಕರು ನಮ್ಮ ಬಗ್ಗೆ ಗಮನ ಹರಿಸಬೇಕು, ನಮ್ಮ ಜೊತೆ ಹೆಚ್ಚುಮಾತನಾಡಬೇಕು, ನಮಗೆ ಸದಾ ಮಾರ್ಗದರ್ಶನ ನೀಡಬೇಕು ಹೀಗೆ ವಿವಿಧ ಬೇಡಿಕೆಗಳು ಅವರಲ್ಲಿರುತ್ತದೆ.

ತಮ್ಮ ಮಾನಸಿಕ ವೇಗಕ್ಕೆ ಶಿಕ್ಷಕರು-ಉಪನ್ಯಾಸಕರು ಬಂದಿಲ್ಲ ಎಂದಾದರೆ ಕೆಲವು ವಿದ್ಯಾರ್ಥಿಗಳು ಮನೆಮಂದಿಯಲ್ಲಿ  ಹೇಳಿಕೊಳ್ಳುತ್ತಾರೆ. ನಮಗೆ ಶಿಕ್ಷಕರೇ ಮಾರ್ಗದರ್ಶಕರು, ಅವರಿಗೆ ಎಲ್ಲವೂ ಗೊತ್ತಿದೆ ಎಂದು ಭ್ರಮಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕೆಲ ವಿಚಾರದ ಬಗ್ಗೆ ಗೊತ್ತಿಲ್ಲ ಎಂದಾಗ ಬೇಸರವಾಗುತ್ತದೆಇನ್ನೂ ಕೆಲವು ಶಿಕ್ಷಕರು ಈ ಕಾರಣಕ್ಕಾಗಿಯೇ ತಮ್ಮ ಗತ್ತುತನವನ್ನು ಉಳಿಸಿಕೊಳ್ಳುತ್ತಾರೆ, ಮಕ್ಕಳೊಂದಿಗೆ ಮಾತನಾಡುವುದೇ ಇಲ್ಲ, ಮಾತನಾಡಿದರೆ ಅದು ಪಠ್ಯದ ವಿಚಾರವಾಗಿಯೇ ಇರುತ್ತದೆ. ಇನ್ನೂ ಕೆಲ ಶಿಕ್ಷಕರು   ಕೆಲ ವಿಚಾರಕ್ಕೆ ಸಂಬಂಧಿಸಿ ಮಕ್ಕಳಿಗೆ ಸಂಪೂರ್ಣ ಸರಂಡರ್ ಆಗಿರುತ್ತಾರೆ. ಇಂತಹಾ ಸನ್ನಿವೇಶಗಳಲ್ಲಿ ಮಕ್ಕಳು ತಮ್ಮ ಅಹಂಕಾರ ಪ್ರದರ್ಶಿಸಿದರೆ, ಮತ್ತೂ ಕೆಲವರು ಶಿಕ್ಷಕರಿಗೆ ನಾನು ಹೇಳಿಕೊಟ್ಟದ್ದು ಎಂದು ಕೊಂಡು ಹೆಮ್ಮೆಯಿಂದ ಬೀಗುತ್ತಾರೆ.

ಇಂತಹಾ ಸನ್ನಿವೇಶಗಳ ನಡುವೆ ಕುಂಟಿನಿಯವರು ಶಿಕ್ಷಕರನ್ನು ಕುರಿತು ಹೇಳಿದ ಮಾತು ಹೆಚ್ಚು ಅರ್ಥಪೂರ್ಣ ಎಂದೆನ್ನಿಸುತ್ತದೆ. ಮಕ್ಕಳ ಜೊತೆ ಮಾತನಾಡುವ ಶಿಕ್ಷಕರು ಹೆಚ್ಚು ಜಾಗರೂಕರಾಗಿರಬೇಕು, ಯಾಕೆಂದರೆ ಪ್ರತಿಕ್ಷಣವೂ ಹೊಸಹೊಸ ವಿಚಾರಗಳನ್ನು ಕಲಿಯುವ ತವಕ, ಕುತೂಹಲಗಳನ್ನು  ಹೊಂದಿರುವ ಮಕ್ಕಳು ಶಿಕ್ಷಕರಿಂದ ಏನನ್ನು ನಿರೀಕ್ಷೆ ಮಾಡುತ್ತಾರೋ ಹೇಳಲಾಗದು, ಅವರ ನಿರೀಕ್ಷೆಯ ಮಟ್ಟ ಅಪರಿಮಿತ. ಆದರೆ ತಮ್ಮ ನಿರೀಕ್ಷೆಯ ಸ್ಪಂದನ ಶಿಕ್ಷಕರಲ್ಲಿ ಸಿಗದೇ ಇದ್ದಾಗ ಅದರ ಪರಿಣಾಮ ಬೀರುವುದು ಮಕ್ಕಳ ಕಲಿಕೆಯ ಮೇಲೆ.

 ತಾನಾಗಿ ಕಲಿಯಬಹುದು ಎಂಬ ವಾಸ್ತವ ಸ್ಥಿತಿಯನ್ನು ಮರೆತು, ಶಿಕ್ಷಕರೇ ಉಪನ್ಯಾಸಕರೇ ತಮಗೆ ಎಲ್ಲವನ್ನೂ ಕಲಿಸುತ್ತಾರೆ ಎಂದು ನಂಬಿರುವ ಮಕ್ಕಳ ಮನಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕಾದವರು ಶಿಕ್ಷಕರು (ಈ ಹಿಂದಿನ ಲೇಖನಗಳಲ್ಲಿಯೂ ಈ ಬಗ್ಗೆ ನಾನು ಉಲ್ಲೇಖಿಸಿದ್ದೇನೆ) ಇಲ್ಲಿ ಶಿಕ್ಷಕರು ಸ್ವಲ್ಪ ಎಡವಿದರೂ ಆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗಲೂ ಬಹುದು, ಆದರೆ  ಇಂದಿನ ಕಾಲಘಟ್ಟದಲ್ಲಿ ಮಕ್ಕಳು  ದೊಡ್ಡವರಿಗಿಂತ ಹೆಚ್ಚು ವೇಗದಲ್ಲಿ ಮುನ್ನಡೆಯುತ್ತಿದ್ದಾರೆ. ಅವರು ಬೆಳೆಯುವ ವಾತಾವರಣ, ಮನೆಯ ಪರಿಸರ, ಮಾನಸಿಕ ಸ್ಥಿತಿ ಅವರ ಮಾನಸಿಕ ವೇಗವನ್ನು ನಿರ್ಧರಿಸುತ್ತದೆ.  ಹಾಗಾಗಿ ವ್ಯಕ್ತಿತ್ವ ನಿರ್ಮಾಣದ ಕೆಲಸ ಮಾಡುವ ಶಿಕ್ಷಕರ ಜವಬ್ದಾರಿ ಮಹತ್ತರವಾದುದು, ಇದನ್ನು ಎಲ್ಲಾ ಶಿಕ್ಷಕರು ಮನಗಾಣಬೇಕಾಗಿದೆ.  ಪಾಠ ಮಾಡಿದ ಮಾತ್ರಕ್ಕೆ, ವಿದ್ಯಾರ್ಥಿಗಳನ್ನು ನಿಯಂತ್ರಿಸಿದ ಮಾತ್ರಕ್ಕೆ ಶಿಕ್ಷಕರಾಗಲು ಸಾಧ್ಯವಿಲ್ಲ ವಿದ್ಯಾರ್ಥಿಗಳಿಂದ ಗೌರವವನ್ನು ಸ್ವೀಕರಿಸುವ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗುವ ನಿಟ್ಟಿನಲ್ಲಿಯೂ ಶಿಕ್ಷಕರು ಮುನ್ನಡೆಯಬೇಕಾಗಿದೆ.

ಕುಂಟಿನಿಯವರು ತಮ್ಮ ಸಮಯೋಚಿತ ಮಾತುಗಳಿಂದ  ಶಿಕ್ಷಕರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಈ  ಸಂದೇಶ ಪ್ರತೀ ಶಾಲೆಗಳಿಗೂ ತಲುಪಬೇಕು, ಮಕ್ಕಳು ಶೈಕ್ಷಣಿಕವಾಗಿ ಬಯಸ್ಸಿದನ್ನು ಕೊಡುವ ಸಾಮರ್ಥ್ಯ ಎಲ್ಲಾ ಶಿಕ್ಷಕರಲ್ಲೂ ಇದೆ. ಅದು ಪ್ರತಿದಿನವೂ ಅಪ್‌ಡೇಟ್ ಆಗಬೇಕು ಆಗ ಮಾತ್ರ ಮಕ್ಕಳಿಗೆ ಶಿಕ್ಷಕರು ಇಷ್ಟವಾಗುತ್ತಾರೆ. ಶಿಕ್ಷಕರು-ಮಕ್ಕಳ ನಡುವಿನ ಸ್ನೇಹ-ಪ್ರೀತಿಯ ಸಂಬಂಧದ ನಡುವೆ ಶಾಲೆಗಳಲ್ಲಿ ಹೊಸ ಸಮಾಜ ನಿರ್ಮಿಸುವ ಕೆಲಸ ಯಶಸ್ವಿಯಾಗಿ ನಡೆಯುತ್ತದೆ. ಶಿಕ್ಷಕರು ಪ್ರತಿದಿನವೂ ಅಪ್‌ಡೇಟ್ ಆಗಬೇಕು ಎನ್ನುವ ಕುಂಟಿನಿಯವರ ಮಾತುಗಳು ನಿಜಾರ್ಥದಲ್ಲಿ ಅನುಷ್ಠಾನ ಗೊಂಡಾಗ ಈ ಕೆಲಸ ಸುಲಭವಾದೀತು.

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Recent Posts