ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ ಎನ್ನುವವರು ಒಬ್ಬರು, ನಿಮ್ಮ ಕಾಲದಲ್ಲೂ ಹಾಗಿತ್ತಲ್ಲವೇ ಎನ್ನುವವರು ಮತ್ತೊಬ್ಬರು. ಒಬ್ಬರ ಆರೋಪ, ಮತ್ತೊಬ್ಬರ ಪ್ರತ್ಯಾರೋಪ.
ಹೀಗೆ ಜೂನ್ ತಿಂಗಳ ಸಾಮಾನ್ಯ ಸಭೆ ಬಂಟ್ವಾಳ ಪುರಸಭೆಯಲ್ಲಿ ಗುರುವಾರ ಮಧ್ಯಾಹ್ನ 11.00ಗಂಟೆಗೆ ಶುಭಾರಂಭಗೊಂಡು, 1.15ರವರೆಗೆ ಸಂಪನ್ನಗೊಂಡಿತು.
ಬಿ.ಸಿ.ರೋಡ್ ಸರ್ವೀಸ್ ರಸ್ತೆ, ಡೋರ್ ನಂಬ್ರ ಮತ್ತು ಕಟ್ಟಡ ಮಾಲೀಕರ ಗೊಂದಲ, ಕಸ ವಿಲೇವಾರಿ, ಅಪೂರ್ಣ ಕಾಮಗಾರಿ, ಲೇಔಟ್ ಸಮಸ್ಯೆ, ಫಲಾನುಭವಿಗಳ ಆಯ್ಕೆ, ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದು, ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ ಇವಿಷ್ಟು ಇಂದಿನ ಸಭೆಯ ಹೈಲೈಟ್ಸ್.
ಎಂದಿನಂತೆಯೇ ಏರಿದ ಧ್ವನಿಯಲ್ಲಿ ಒಬ್ಬರ ಸ್ವರ ಮತ್ತೊಬ್ಬರಿಗೆ ಕೇಳಿಸದಷ್ಟು ದೊಡ್ಡದಾಗಿ ಆರೋಪ, ಪ್ರತ್ಯಾರೋಪ ಮಾಡಿದ್ದು ಹಾಗೂ ಅಲ್ಲೇ ಕೊನೆಗೊಳಿಸಿದ್ದು ಇಂದಿನ ಸಭೆಯಲ್ಲಿ ಕಂಡುಬಂತು.
ಬಿ.ಸಿ.ರೋಡ್ ಸರ್ವೀಸ್ ರಸ್ತೆ ದುರಸ್ತಿಪಡಿಸಲು ಯಾರು ವಶೀಲಿ ಮಾಡಬೇಕು, ಯಾರು ಪ್ರಯತ್ನಿಸುವುದಿಲ್ಲ ಎಂಬುದನ್ನೇ ಚರ್ಚಿಸಿದ ಸಭೆಯಲ್ಲಿ ಎಲ್ಲ ಸದಸ್ಯರೂ ಒಟ್ಟಾಗಿ ಏನು ಮಾಡಬಹುದು ಎಂಬ ಒಮ್ಮತದ ತೀರ್ಮಾನಕ್ಕೆ ಬರಲಿಲ್ಲ.
ಬಂಟ್ವಾಳ ಬೈಪಾಸ್ ಜಂಕ್ಷನ್ ಅವ್ಯವಸ್ಥೆ ಕುರಿತು ಎ.ಗೋವಿಂದ ಪ್ರಭು ಗಮನ ಸೆಳೆದರೆ, ಹಾಳಾದ ರಸ್ತೆಗಳ ದುರಸ್ತಿ ಕುರಿತು ದೇವದಾಸ ಶೆಟ್ಟಿ ಪ್ರಸ್ತಾಪಿಸಿದರು. ಬಯಲು ಶೌಚಾಲಯ ಇನ್ನು ಇದೆ ಎಂದು ನಗರ ಯೋಜನ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಅವರೇ ಹೇಳಿದರೆ, ಬಿ.ಸಿ.ರೋಡ್ ನಲ್ಲಿ ಶೌಚಾಲಯ ಸಮಸ್ಯೆ ಇದೆ ಎಂದು ವಾಸು ಪೂಜಾರಿ ಹೇಳಿದರು. ಭ್ರಷ್ಟಾಚಾರ, ಅವ್ಯವಹಾರ ಕುರಿತು ಆಡಳಿತ, ವಿರೋಧ ಸದಸ್ಯರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದರೆ, ಅಧಿಕಾರಿಗಳೇನಾದರೂ ಅವ್ಯವಹಾರ ಮಾಡಿದರೆ ದಾಖಲೆ ತೋರಿಸಲು ಮುಖ್ಯಾಧಿಕಾರಿ ಮನವಿ ಮಾಡಿದರು. ಡೋರ್ ನಂಬ್ರ ರದ್ದುಗೊಳಿಸುವ ಹಿಂದಿನ ಕತೆ ಏನು ಎಂಬ ಕುರಿತು ದೇವದಾಸ ಶೆಟ್ಟಿ, ಗೋವಿಂದ ಪ್ರಭು ಪ್ರಶ್ನಿಸಿದರು.
ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ, ಬಿ.ಮೋಹನ್, ವಾಸು ಪೂಜಾರಿ, ಪ್ರವೀಣ್, ಗಂಗಾಧರ್, ಚಂಚಲಾಕ್ಷಿ, ಜಗದೀಶ ಕುಂದರ್, ಮಹಮ್ಮದ್ ಶರೀಫ್, ವಸಂತಿ ಚಂದಪ್ಪ, ಸುಗುಣಾ ಕಿಣಿ, ಮೊನೀಶ್ ಆಲಿ ಮೊದಲಾದವರು ಚರ್ಚೆಗಳಲ್ಲಿ ಪಾಲ್ಗೊಂಡರು. ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಉಪಸ್ಥಿತರಿದ್ದರು.
ಪುರಸಭೆ ಮೀಟಿಂಗ್ ಹೇಗಿತ್ತು. ಇಲ್ಲಿದೆ ವಿಡಿಯೋ1 & 2