ಮಂಗಳವಾರ ವಿಟ್ಲ ಸಮೀಪದ ಮಂಗಿಲಪದವಿನಲ್ಲಿರುವ ಕೊರಗರ ಕಾಲೊನಿಯಲ್ಲಿ ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟ್ ಈದುಲ್ ಫಿತರ್ ಹಬ್ಬವನ್ನು ಮಾಂಕು ಕೊರಗರ ಮನೆಯಂಗಳದಲ್ಲಿ ಆಚರಿಸಲಾಯಿತು. ಆಹಾರ ಸಚಿವ ಯು.ಟಿ.ಖಾದರ್ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು.
ಎಂ.ಫ್ರೆಂಡ್ಸ್ ಗೌರವಾಧ್ಯಕ್ಷರೂ ಆಗಿರುವ ಸಚಿವ ಖಾದರ್, ಅವರಿಗೆ ಪಾಡ್ದನ ಹಾಡಿ ಮುಟ್ಟಾಳೆ ತೊಡಿಸಿ ಸ್ವಾಗತಿಸಲಾಯಿತು. ಪತ್ರಕರ್ತ ಸಂಶುದ್ದೀನ್ ಸಂಪ್ಯ ಕೊರಗ ಜನಾಂಗದ ಅಳಿವು-ಉಳಿವಿನ ಬಗ್ಗೆ ವಿವರಿಸಿ ಈದ್ ಸಂದೇಶ ನೀಡಿದರು. ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್ ಕೊರಗರೊಂದಿಗೆ ಸೇರಿ ಈದ್ ಆಚರಿಸುವುದು ನನ್ನ ಪಾಲಿಗೆ ದೊರೆತ ಸುಯೋಗ ಎಂದರು. ಇಸ್ಲಾಂಗೆ ಜಾತ್ಯಾತೀತ ತತ್ವದಲ್ಲಿದೆ ಎಂಬುತು ಸಾಬೀತಾಗಿದೆ ಎಂದರು.
ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಕಾಲನಿಯ ಮೂಲ ಸೌಕರ್ಯರಹಿತ ಕೊರಗರಿಗೆ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದರು. ಕಾರ್ಯಕ್ರಮದ ಪ್ರಾಯೋಜಕರಾದ ಅಬೂಬಕರ್ ಸಿದ್ದೀಕ್ ಮಸ್ಕತ್, ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಮುಸ್ತಫಾ ಇರುವೈಲು, ತಾ.ಪಂ. ಮಾಜಿ ಸದಸ್ಯೆ ಜೂಲಿಯಾನಾ ಮೇರಿ ಲೋಬೋ, ವೀರಕಂಭ ಗ್ರಾ.ಪಂ. ಸದಸ್ಯರಾದ ಅಬ್ಬಾಸ್ ಕೆಲಿಂಜ, ಉಬೈದ್, ಶೀಲಾ ವೇಗಸ್, ಕೊರಗರ ಕಾಲನಿಯ ಮಾಂಕು, ಸಲೀಂ, ರಫೀಕ್ ಅಂಬ್ಲಮೊಗರು, ಲಿಬ್’ಝತ್, ವಿ.ಎಚ್.ಅಶ್ರಫ್, ಕೆ.ಪಿ.ಸಾದಿಕ್ ಹಾಜಿ ಕುಂಬ್ರ, ಶಾಕಿರ್ ಹಾಜಿ ಪುತ್ತೂರು, ಡಿ.ಎಂ.ರಶೀದ್ ಉಕ್ಕುಡ, ಹನೀಫ್ ಅಲ್ ಫಲಾಹ್, ಅಬ್ಬಾಸ್ ಟಿ.ಎಚ್.ಎಂ.ಎ, ಇರ್ಶಾದ್ ವೇಣೂರು, ಕಲಂದರ್ ಪರ್ತಿಪ್ಪಾಡಿ, ಅನ್ಸಾರ್ ಬೆಳ್ಳಾರೆ, ಇರ್ಶಾದ್ ಮಂಗಳೂರು, ಆರಿಫ್ ಬೆಳ್ಳಾರೆ, ಇಸ್ಮಾಯಿಲ್ ಕೋಲ್ಪೆ, ಅಬೂಬಕರ್ ನೋಟರಿ, ಆಶಿಕ್ ಕುಕ್ಕಾಜೆ, ಅಬೂಬಕರ್ ಅನಿಲಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ರಶೀದ್ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕೊರಗರ ಕಾಲನಿಯ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದ ಕುರಿತು ಸಚಿವರ ಗಮನಕ್ಕೆ ತಂದಾಗ ಕೂಡಲೇ ಮೆಸ್ಕಾಂ ಅಧಿಕಾರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದರು. ಕೊರಗರಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಲು ಆದೇಶಿಸಿದರು.
ಅಂಧರಿಗೆ ಪ್ರೋತ್ಸಾಹ:
ಸೌಹಾರ್ದತೆಯ ಕುರಿತು ತುಳು ಹಾಡು ಹಾಡಿದ ಕುರುಡ ವಿಕಲಾಂಗ ಸೀತಾರಾಮ ಅವರಿಗೆ ಸಚಿವ ಯು.ಟಿ.ಖಾದರ್ ಸಾವಿರ ರೂ. ಮೊತ್ತ ನೀಡಿ ಪ್ರೋತ್ಸಾಹಿಸಿದರು. ಕೊನೆಗೆ ಸಚಿವರು ಮತ್ತು ಎಂ.ಫ್ರೆಂಡ್ಸ್ ಸದಸ್ಯರು ಕೊರಗರು ಮತ್ತು ಆದಿ ದ್ರಾವಿಡ ಸಮುದಾಯದ ಜೊತೆ ಈದ್ ನ ಸಹಭೋಜನ ನಡೆಸಿದರು.